ಕರ್ನಾಟಕ ಹಿರಿಯ ನಾಗರಿಕರ ವೇದಿಕೆಗಳ ಒಕ್ಕೂಟದಿಂದ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಂದ ಅತಿಥಿಗಳು ಈ ಕೆಳಕಂಡಂತೆ ಮಾತನಾಡಿದರು.
ಪರಿಸರವಾದಿ ಡಾ. ಎ ಎಂ ಎಲ್ಲಪ್ಪ ರೆಡ್ಡಿಯವರು ಮಾತನಾಡುತ್ತಾ ಸಹಜ ಅರಣ್ಯದಲ್ಲಿ ಜೈವಿಕ, ಪರಿಸರೀಯ, ಆಧ್ಯಾತ್ಮಿಕ ಶಕ್ತಿಗಳು ಇರುತ್ತವೆ. ಅರಣ್ಯ ಅದನ್ನು ಸಹಜವಾಗಿ ಎಲ್ಲರೊಡನೆ ಹಂಚಿಕೊಳ್ಳುತ್ತದೆ. ಆದರೆ ನಾವಿಂದು ಗಣಿಗಾರಿಕೆ, ಅಣೆಕಟ್ಟು ಮುಂತಾದ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಕಾಡನ್ನು ಕತ್ತರಿಸಿ ಬೆತ್ತಲೆ ಮಾಡುತ್ತಿದ್ದೇವೆ, ವಿಷ ಹಾಕಿ ಬಂಜೆ ಮಾಡುತ್ತಿದ್ದೇವೆ. ಸಹ್ಯಾದ್ರಿ ಹಿಮಾಲಯಕ್ಕಿಂತ ಪುರಾತನವಾದದ್ದು. ಹಲವಾರು ಜೀವನದಿಗಳು ಇಲ್ಲಿಂದಲೇ ಹುಟ್ಟಿ ಹರಿಯುತ್ತವೆ. ಇಂದು ಆ ಸಹ್ಯಾದ್ರಿಯ ಗೋಳು ಕೇಳುವವರಿಲ್ಲ. ವೃಕ್ಷಗಳು, ಕಡವೆ, ಜಿಂಕೆ ಮುಂತಾದ ಈ ಮೂಕ ಜನಾಂಗಕ್ಕೆ ಧ್ವನಿಯಾಗಬೇಕೆಂಬ ಅಭಿಲಾಷೆ ನನಗಿದೆ ಎಂದು ತಿಳಿಸಿದರು
ಸಂಗೀತ ಸಾಮ್ರಾಟ ಗಾನಕಲಾಭೂಷಣ ವಿದ್ವಾನ್ ಆರ್ ಕೆ ಪದ್ಮನಾಭರವರು ಮಾತನಾಡುತ್ತಾ -“ಸಂಗೀತದ ವೈಶಾಲ್ಯ, ಸೌಂದರ್ಯ, ಆಧ್ಯಾತ್ಮಿಕತೆಗಳು ನನಗೆ ಅರ್ಥವಾದದ್ದು ನನ್ನ ಎಪ್ಪತ್ತರ ವಯಸ್ಸಿನಲ್ಲಿ. ಯಾರಿಗೆ ಜ್ಞಾನ, ಸಂತೋಷ, ಆತ್ಮೀಯತೆಗಳು ಬೇಕೋ ಅವರು 70 ವರ್ಷ ಬಾಳಲೇಬೇಕು” ಎಂದು ಹಿತವಚನ ನೀಡಿದರು. 79ರ ವಯಸ್ಸಿನಲ್ಲೂ ನಿರಂತರ ನಾಲ್ಕು ಗಂಟೆಗಳವರೆಗೆ ಗಾಯನ ಮಾಡುವ ಸಾಮರ್ಥ್ಯವುಳ್ಳ ಕರ್ನಾಟಕದ ಉನ್ನತ ಗಾಯಕರಾದ, ಸಂಗೀತವೇ ಸರ್ವಸ್ವವಾದ, ಶ್ರೀಪದ್ಮನಾಭರವರು ತಮ್ಮ ಸಿರಿಕಂಠದಿಂದ ತ್ಯಾಗರಾಜರ ಕೃತಿಯೊಂದನ್ನು ಮತ್ತು ಶ್ರೀ ಶಾರದಾಂಬೆಯ ಸ್ತೋತ್ರವೊಂದನ್ನು ಹಾಡಿದಾಗ ಇಡೀ ಶ್ರೋತೃವರ್ಗ ಮಂತ್ರಮುಗ್ಧವಾಗಿ ಕೇಳುತ್ತಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೃದಯವಂತ ಹೃದಯತಜ್ಞ ಡಾಕ್ಟರ್ ಸಿ ಎನ್ ಮಂಜುನಾಥ ರವರು ಹಿರಿಯ ನಾಗರಿಕರಿಗೆ ಎಬಿಸಿಡಿ ಪಾಠ ಹೇಳಿದರು. ಎ ಎಂದರೆ ಆರ್ಥರ್ ಬಿ ಎಂದರೆ ಬ್ಲಡ್ ಪ್ರೆಷರ್, ಸಿ ಎಂದರೆ ಕೊಲೆಸ್ಟ್ರಾಲ್, ಡಿ ಎಂದರೆ ಡಯಾಬಿಟಿಸ್ ಮತ್ತು ಈ ಎಂದರೆ ಎಮರ್ಜೆನ್ಸಿ. ಹಿರಿಯ ನಾಗರಿಕರಾದ ನಾವು ನಿಂತ ನೀರಾಗದೆ ಹರಿವ ನೀರಾಗಬೇಕು. ಆಗ ದೈಹಿಕ, ಮಾನಸಿಕ, ಸಾಮಾಜಿಕ, ಆರೋಗ್ಯ ಚೆನ್ನಾಗಿರುತ್ತದೆ ಎಂದರು. ಕೂಡು ಕುಟುಂಬದ ಬಗ್ಗೆ ಮಾತನಾಡುತ್ತಾ ಕೂಡಿ ಬಾಳಿದರೆ ಸ್ವರ್ಗ ಸುಖ. ಒಂದು ಸಣ್ಣ ನಗು ಸ್ನೇಹವನ್ನು ಹುಟ್ಟು ಹಾಕುತ್ತದೆ, ಒಂದು ಒಳ್ಳೆಯ ಮಾತು ದ್ವೇಷವನ್ನು ದೂರ ಮಾಡುತ್ತದೆ, ಒಂದು ಒಳ್ಳೆಯ ಮನಸ್ಸು ಸಂಬಂಧವನ್ನು ವೃದ್ಧಿ ಮಾಡುತ್ತದೆ, ಒಂದು ಒಳ್ಳೆಯ ವ್ಯಕ್ತಿತ್ವ ನಮ್ಮ ಬದುಕನ್ನೇ ಬದಲಾಯಿಸುತ್ತದೆ. ನಾವು ಬೇರೊಬ್ಬರಿಗೆ ತೊಂದರೆ ಕೊಡದೆ ಹತ್ತು ಹಲವು ಬದಲಾವಣೆಗಳನ್ನು ಮಾಡಿಕೊಂಡು, ಯಾರನ್ನು ದೂಷಿಸದೆ ಬಾಳಬೇಕು ಎಂದು ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರು ಶ್ರೀ ರಘೋತ್ತಮ ರಾವ್ ಮತ್ತು ಅಧ್ಯಕ್ಷರಾದ ಸಿ. ವಿ ವೆಂಕಟ ಕೃಷ್ಣ ರವರು ಉಪಸ್ಥಿತಿರಿದ್ದರು
ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಬಾಬು ರವರು ವಂದನಾರ್ಪಣೆ ಯನ್ನು ಕೋರಿದರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ ಪಿ ಕುಮಾರ್ ರವರು ನಿರೂಪಣೆಯನ್ನು ಮಾಡಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
