ಭಾರತದ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ಪ್ರತಿಯೊಬ್ಬ ಪ್ರಜೆಗೂ ದೇಶದ ಯಾವುದೇ ರಾಜ್ಯದಲ್ಲಿ ಶಿಕ್ಷಣ ಪಡೆಯುವ ಮತ್ತು ಉದ್ಯೋಗ ಕಂಡುಕೊಳ್ಳುವ ಮುಕ್ತ ಅವಕಾಶವಿದೆ. ಈ ಸಂವಿಧಾನಾತ್ಮಕ ಹಕ್ಕಿನಂತೆ, ನಮ್ಮ ಕರ್ನಾಟಕಕ್ಕೂ—ವಿಶೇಷವಾಗಿ ರಾಜಧಾನಿ ಬೆಂಗಳೂರಿಗೆ—ದೇಶದ ವಿವಿಧ ಮೂಲೆಗಳಿಂದ ಹಾಗೂ ಜಗತ್ತಿನ ಬೇರೆ ಬೇರೆ ಭಾಗಗಳಿಂದ ಲಕ್ಷಾಂತರ ಜನರು ಪ್ರತಿದಿನ ಹರಿದುಬರುತ್ತಿದ್ದಾರೆ. ಬೆಂಗಳೂರು ಇಂದು ಕೇವಲ ಒಂದು ನಗರವಾಗಿ ಉಳಿದಿಲ್ಲ; ಜಾಗತಿಕ ಮಟ್ಟದ ಬೃಹತ್ ಐಟಿ-ಬಿಟಿ ಸಂಸ್ಥೆಗಳು, ಕೈಗಾರಿಕೆಗಳು, ಸಂಶೋಧನಾ ಕೇಂದ್ರಗಳು ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹಬ್ ಆಗಿದೆ. ಇಲ್ಲಿ ಹೂಡಿಕೆ ಮಾಡುವ ಕಂಪನಿಗಳು ದೇಶದ ನಾನಾ ಭಾಗಗಳ ಜನರಿಗೆ ಉದ್ಯೋಗ ನೀಡುತ್ತಿರುವುದು ಹೌದು. ಆದರೆ, ಇಲ್ಲಿಗೆ ಬಂದು ನೆಲೆಸುವ ಹೊರರಾಜ್ಯದ ಜನರು ಇಲ್ಲಿನ ಹವಾಮಾನ, ರಸ್ತೆ, ನೀರು, ವಿದ್ಯುತ್, ಮೂಲಸೌಕರ್ಯ ಹಾಗೂ ಸಾರಿಗೆ ಮುಂತಾದ ಪ್ರತಿಯೊಂದು ಪ್ರಾಕೃತಿಕ ಮತ್ತು ಸಾಮಾಜಿಕ ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಇಷ್ಟೆಲ್ಲಾ ಸೌಲಭ್ಯಗಳನ್ನು ಅನುಭವಿಸುವ ಹೊರರಾಜ್ಯದ ಜನರಿಗೆ, ತಾವು ನೆಲೆಸಿರುವ ನೆಲದ ಭಾಷೆಯಾದ ‘ಕನ್ನಡ’ವನ್ನು ಕಲಿಯಬೇಕು ಎನ್ನುವ ಕನಿಷ್ಠ ಕಾಳಜಿ ಅಥವಾ ಅನಿವಾರ್ಯತೆ ಏಕಿಲ್ಲ ಎಂಬ ಪ್ರಶ್ನೆ ಇಂದು ಗಂಭೀರವಾಗಿ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ, ಇಲ್ಲಿಗೆ ಬರುವವರಿಗೆ ಕನ್ನಡ ಕಲಿಯಲು ಅಥವಾ ಕಲಿಸಲು ಸೂಕ್ತವಾದ ಮತ್ತು ಶಿಸ್ತುಬದ್ಧವಾದ ವ್ಯವಸ್ಥೆಗಳಿಲ್ಲದಿರುವುದು. ಎಲ್ಲಕ್ಕಿಂತ ಮಿಗಿಲಾಗಿ, ಬೆಂಗಳೂರಿನಲ್ಲಿ ಜೀವಿಸಲು ಕನ್ನಡದ ಅವಶ್ಯಕತೆಯೇ ಇಲ್ಲ ಎನ್ನುವ ಉದಾಸೀನತೆಯ ಭಾವನೆ ಹೊರರಾಜ್ಯದವರಲ್ಲಿ ಮೂಡಲು ಹೊರಗಿನವರಿಗಿಂತ ಹೆಚ್ಚಾಗಿ ನಮ್ಮ ಕನ್ನಡಿಗರ ಅತಿರೇಕದ ಔದಾರ್ಯವೇ ಕಾರಣವಾಗಿದೆ.
ನಮ್ಮ ಕನ್ನಡಿಗರು ಹೊರಗಿನವರಿಗೆ ಕನ್ನಡ ಕಲಿಸುವ ಅಥವಾ ಕನ್ನಡದಲ್ಲಿ ಮಾತನಾಡುವಂತೆ ಪ್ರೇರೇಪಿಸುವ ಬದಲು, ತಾವೇ ಮುಂದೆ ಬಿದ್ದು ಅವರ ಭಾಷೆಯನ್ನು (ಹಿಂದಿ ಅಥವಾ ಇಂಗ್ಲಿಷ್) ಕಲಿತು ಅವರೊಂದಿಗೇ ಆ ಭಾಷೆಯಲ್ಲೇ ವ್ಯವಹರಿಸಲು ಪ್ರಾರಂಭಿಸುತ್ತಾರೆ. ಪ್ರತಿಯೊಬ್ಬ ಕನ್ನಡಿಗನೂ ತಾನು ಕನ್ನಡಿಗ ಎನ್ನುವುದನ್ನು ಮರೆತು ಹೊರಗಿನವರ ಭಾಷೆಗೆ ಒಗ್ಗಿಕೊಳ್ಳುವಾಗ, ಎದುರಿಗಿರುವವರಿಗೆ “ಇಲ್ಲಿ ಕನ್ನಡ ಕಲಿಯುವ ಅಗತ್ಯವೇ ಇಲ್ಲ” ಎನ್ನುವ ನಿರಾತಂಕ ಭಾವನೆ ಬರುವುದು ಸ್ವಾಭಾವಿಕ. ಕನ್ನಡಿಗರು ಬೇರೆ ಭಾಷೆಗಳನ್ನು ಕಲಿಯುವುದು, ಬಹುಭಾಷಾ ಜ್ಞಾನ ಹೊಂದುವುದು ತಪ್ಪೇನೂ ಅಲ್ಲ; ಆದರೆ ನಮ್ಮ ಸೌಹಾರ್ದತೆಯೇ ನಮ್ಮ ಭಾಷೆಯ ಉಸಿರು ಕಟ್ಟಿಸುವಂತಾಗಬಾರದು. ಕರ್ನಾಟಕದ ನೆಲದಲ್ಲಿ ಬದುಕಲು ಮತ್ತು ಬೆಳೆಯಲು ಕನ್ನಡದ ಅನಿವಾರ್ಯತೆ ಹಾಗೂ ಅಗತ್ಯತೆಯನ್ನು ನಾವೇ ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಬೇಕಾಗಿದೆ.
ಖಾಸಗಿ ವಲಯದಲ್ಲಿ ಕನ್ನಡ ಕಡ್ಡಾಯ ಮತ್ತು ಆಡಳಿತಾತ್ಮಕ ಹೆಜ್ಜೆಗಳು
ಕರ್ನಾಟಕದಲ್ಲಿ ನೆಲೆಯೂರಿ ಬೆಳೆಯುತ್ತಿರುವ ಪ್ರತಿಯೊಂದು ಖಾಸಗಿ ಕಂಪನಿ, ಐಟಿ ಸಂಸ್ಥೆ ಹಾಗೂ ಕೈಗಾರಿಕೆಯು ಸ್ಥಳೀಯ ಸೌಲಭ್ಯಗಳನ್ನು ಬಳಸಿಕೊಳ್ಳುವಾಗ, ಈ ನೆಲದ ಸಂಸ್ಕೃತಿ ಮತ್ತು ಭಾಷೆಗೆ ಗೌರವ ಕೊಡುವುದು ಕರ್ತವ್ಯವಾಗಬೇಕು. ಹೊರರಾಜ್ಯದಿಂದ ಹೊಸದಾಗಿ ಉದ್ಯೋಗಕ್ಕೆ ಸೇರಿಕೊಳ್ಳುವ ನೌಕರರಿಗೆ ಕನ್ನಡ ಕಲಿಕೆಯನ್ನು ಕಂಪನಿಗಳು ಕಡ್ಡಾಯಗೊಳಿಸಬೇಕು.
ಕನ್ನಡ ಶಿಕ್ಷಕರ ನೇಮಕಾತಿ: ಪ್ರತಿಯೊಂದು ಸಣ್ಣ ಮತ್ತು ಬೃಹತ್ ಕಂಪನಿಯು ತಮ್ಮ ಸಂಸ್ಥೆಯಲ್ಲಿ ಕಡ್ಡಾಯವಾಗಿ ಅರ್ಹ ಕನ್ನಡ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.
ಕೆಲಸದ ವೇಳೆಯಲ್ಲೇ ತರಬೇತಿ: ಹೊಸ ನೌಕರರಿಗೆ ಅವರ ದೈನಂದಿನ ಕೆಲಸದ ಬಿಡುವಿನ ವೇಳೆಯಲ್ಲಿ (Work hours) ವಾರಕ್ಕೆ ಕನಿಷ್ಠ ಅರ್ಧ ಗಂಟೆಯ ಕಾಲ ವ್ಯವಸ್ಥಿತವಾಗಿ ಕನ್ನಡ ಕಲಿಸುವ ತರಬೇತಿಯನ್ನು ನೀಡುವುದು ಕಂಪನಿಗಳ ಜವಾಬ್ದಾರಿಯಾಗಬೇಕು.
ಸರ್ಕಾರದ ಸುತ್ತೋಲೆ ಮತ್ತು ಕಟ್ಟುನಿಟ್ಟಿನ ನಿಯಮ: ಈ ಕುರಿತು ರಾಜ್ಯ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತಕ್ಷಣವೇ ಎಲ್ಲಾ ಖಾಸಗಿ ಸಂಸ್ಥೆಗಳು, ಐಟಿ ಕಂಪನಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸ್ಪಷ್ಟ ಹಾಗೂ ಕಡ್ಡಾಯ ಮಾರ್ಗಸೂಚಿಗಳನ್ನೊಳಗೊಂಡ ಸುತ್ತೋಲೆ ಹೊರಡಿಸಬೇಕು. ಕನ್ನಡ ಕಲಿಕಾ ಕಾರ್ಯಕ್ರಮಗಳನ್ನು ನಡೆಸದ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವ ಸ್ಪಷ್ಟ ಆಡಳಿತಾತ್ಮಕ ನೀತಿ ಜಾರಿಯಾಗಬೇಕು.
ಕನ್ನಡಿಗರಿಗೆ ಉದ್ಯೋಗ ಆದ್ಯತೆ (ಸ್ಥಳೀಯ ಮೀಸಲಾತಿ)
ಬರೀ ಕನ್ನಡ ಕಲಿಕೆ ಮಾತ್ರವಲ್ಲದೆ, ಈ ನೆಲದ ಮಕ್ಕಳಿಗೆ ಉದ್ಯೋಗ ಭದ್ರತೆ ಸಿಕ್ಕಾಗ ಮಾತ್ರ ಭಾಷೆಯು ಆರ್ಥಿಕವಾಗಿ ಬಲಗೊಳ್ಳುತ್ತದೆ. ಸರೋಜಿನಿ ಮಹಿಷಿ ವರದಿ ಹಾಗೂ ರಾಜ್ಯದ ಸ್ಥಳೀಯ ಉದ್ಯೋಗ ನೀತಿಯನ್ವಯ, ಕರ್ನಾಟಕದಲ್ಲಿ ಕಾರ್ಯಾಚರಿಸುವ ಪ್ರತಿಯೊಂದು ಕಂಪನಿಯಲ್ಲೂ ಸಿ ಮತ್ತು ಡಿ ದರ್ಜೆಯ ಉದ್ಯೋಗಗಳು ಶೇ. 100ರಷ್ಟು ಕನ್ನಡಿಗರಿಗೇ ಸಿಗಬೇಕು. ಜೊತೆಗೆ ಎ ಮತ್ತು ಬಿ ದರ್ಜೆಯ ತಾಂತ್ರಿಕ ಹಾಗೂ ನಿರ್ವಹಣಾ ಹುದ್ದೆಗಳಲ್ಲೂ ಸ್ಥಳೀಯ ಕನ್ನಡಿಗರಿಗೆ ಆದ್ಯತೆಯ ಮೇರೆಗೆ ಸೂಕ್ತ ಪ್ರಮಾಣದ ಮೀಸಲಾತಿ ಸಿಗುವಂತಾಗಬೇಕು. ಕನ್ನಡಿಗರಿಗೆ ಉದ್ಯೋಗ ಸಿಕ್ಕಾಗ, ಆಡಳಿತ ಮತ್ತು ಕೆಲಸದ ವಾತಾವರಣದಲ್ಲೂ ಕನ್ನಡ ಸಹಜವಾಗಿ ಉಸಿರಾಡಲು ಸಾಧ್ಯವಾಗುತ್ತದೆ.
ಸಾರ್ವಜನಿಕ ವಲಯದಲ್ಲಿ ಕನ್ನಡದ ಸ್ಪಂದನೆ ಮತ್ತು ವಾತಾವರಣ
ಭಾಷೆ ಎನ್ನುವುದು ಕೇವಲ ಕಚೇರಿಯ ಕಡತಗಳಿಗೆ ಸೀಮಿತವಾಗದೆ ದೈನಂದಿನ ಜೀವನದ ಭಾಗವಾಗಬೇಕು. ಪ್ರತಿಯೊಬ್ಬ ಕನ್ನಡೇತರನಿಗೂ ಕ್ಯಾಬ್, ಆಟೋ, ಹೋಟೆಲ್, ಸೂಪರ್ ಮಾರ್ಕೆಟ್, ಮಾಲ್, ಪಾರ್ಕಿಂಗ್ ಹಾಗೂ ಚಿತ್ರಮಂದಿರಗಳಂತಹ ಪ್ರತಿಯೊಂದು ಸಾರ್ವಜನಿಕ ಸ್ಥಳದಲ್ಲೂ “ಕನ್ನಡ ಬರದಿದ್ದರೆ ದೈನಂದಿನ ವ್ಯವಹರಿಸುವುದು ಕಷ್ಟ” ಎನಿಸುವಂತಹ ವಾತಾವರಣ ನಿರ್ಮಾಣವಾಗಬೇಕು.
ಆಟೋ ಮತ್ತು ಕ್ಯಾಬ್ ಚಾಲಕರು: ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುವ ನಮ್ಮ ಚಾಲಕ ಮಿತ್ರರು ಹೊರರಾಜ್ಯದ ಪ್ರಯಾಣಿಕರ ಜೊತೆ ಕನ್ನಡದಲ್ಲೇ ವ್ಯವಹರಿಸಲು ಪ್ರಾರಂಭಿಸಬೇಕು. ಅಗತ್ಯಬಿದ್ದಾಗ ಅವರಿಗೆ ಸರಳ ಕನ್ನಡ ಪದಗಳನ್ನು ಹೇಳಿಕೊಡಬೇಕು.
ಹೋಟೆಲ್ ಮತ್ತು ವ್ಯಾಪಾರ ಮಳಿಗೆಗಳು: ಗ್ರಾಹಕರ ಸೇವಾ ಕ್ಷೇತ್ರದಲ್ಲಿರುವ ಸಿಬ್ಬಂದಿ ಕನ್ನಡದಲ್ಲೇ ಮಾತನಾಡಬೇಕು. ಮೆನು ಕಾರ್ಡ್ಗಳು, ರಶೀದಿಗಳು ಹಾಗೂ ನಾಮಫಲಕಗಳು ಸಂಪೂರ್ಣವಾಗಿ ಕನ್ನಡದಲ್ಲೇ ಇರಬೇಕು.
ನಮ್ಮ ಉದಾರತೆ ನಾಡಿನ ಭಾಷೆಗೆ ಮಾರಕವಾಗಬಾರದು. ನಾವು ಇತರ ಭಾಷಿಕರನ್ನು ಪ್ರೀತಿಯಿಂದ ಬರಮಾಡಿಕೊಳ್ಳೋಣ, ಆದರೆ ಆ ಪ್ರೀತಿಯ ಜೊತೆಗೆ ನಮ್ಮ ಭಾಷೆಯ ಅನಿವಾರ್ಯತೆಯನ್ನೂ ಅವರಿಗೆ ಮನವರಿಕೆ ಮಾಡಿಕೊಡೋಣ. ಸರ್ಕಾರ, ಖಾಸಗಿ ಸಂಸ್ಥೆಗಳು ಹಾಗೂ ಸಾರ್ವಜನಿಕರ ಹಂತದಲ್ಲಿ ಈ ಬದಲಾವಣೆ ತಕ್ಷಣವೇ ತರಲಾದರೆ ಮಾತ್ರ, ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮತ್ವ ಮತ್ತು ನಮ್ಮ ಯುವಜನತೆಗೆ ಉದ್ಯೋಗ ಭದ್ರತೆ ಸಾಕಾರಗೊಳ್ಳಲು ಸಾಧ್ಯ.
- ಅಗ್ನಿಹೋತ್ರಿ ಲೋಕೇಶ್ ಶರ್ಮಾ
ಲೇಖಕರು ಹಾಗೂ ಪತ್ರಕರ್ತ
ಬೆಂಗಳೂರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
