ನವೆಂಬರ್ 1 ಬಂದರೆ ನಮಗೆಲ್ಲಾ ಕನ್ನಡ ರಾಜ್ಯೋತ್ಸವದ ಸಂಭ್ರಮ. ಕೆಂಪು-ಹಳದಿ ಬಾವುಟ, ಕನ್ನಡದ ಹಾಡು, ರಾಜ್ಯೋತ್ಸವ ಪ್ರಶಸ್ತಿ. ಆದರೆ ಈ ನವೆಂಬರ್ 1ರಂದೇ ಜನಿಸಿ, ಕನ್ನಡಕ್ಕಾಗಿ ನಂಬರ್ 1 ಕೆಲಸ ಮಾಡಿದ ಒಬ್ಬ ಮಹಾನ್ ಚೇತನವನ್ನು ನಾವು ಮರೆತಿದ್ದೇವೆ. ಅವರೇ ರಾವ್ ಬಹದ್ದೂರ್ ಡೆಪ್ಯುಟಿ ಚನ್ನಬಸಪ್ಪನವರು. ಕನ್ನಡದ ಮೊದಲ ಶಿಕ್ಷಣಾಧಿಕಾರಿ, ಕನ್ನಡ ನಾಡಿನಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು ಎಂದು ಹೇಳಿದ ಮೊದಲ ಕನ್ನಡಿಗ, ಶ್ರೇಷ್ಠ ಗಣಿತ ತಜ್ಞ, DSERT ನ ನಿರ್ಮಾತೃ, ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ವಾತಾವರಣದ ಆದ್ಯಪುರುಷ, ದಕ್ಷಿಣ ಮಹಾರಾಷ್ಟ್ರವೆಂದು ಕರೆಯುತ್ತಿದ್ದ ಇಂದಿನ ಕಿತ್ತೂರು ಕರ್ನಾಟಕವನ್ನು ಬ್ರಿಟಿಷರಿಗೆ ಇದು ಮುಂಬೈ ಕರ್ನಾಟಕ, ಇಲ್ಲಿನ ಭಾಷೆ ಕನ್ನಡ ಎಂದು ತಿಳಿಸಿ, ಉಳಿಸಿದ ಶಿಕ್ಷಣಾಧಿಕಾರಿ.ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮೂಲ ಕಾರಣೀಭೂತರಲ್ಲಿ ಮೊದಲಿಗರಾದ ಡೆಪ್ಯುಟಿ ಚನ್ನಬಸಪ್ಪನವರ ಜನ್ಮದಿನವೂ ನವೆಂಬರ್ 1. ಕರ್ನಾಟಕವೆಂದು ನಾಮಕರಣಗೊಂಡು 53 ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಇಂದಿನ ಕನ್ನಡದ ಹಬ್ಬದ ವಾತಾವರಣಕ್ಕೆ ಕಾರಣೀಭೂತರಾದ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ.
ಗೋಕಾಕದಿಂದ ಪೂನಾದವರೆಗೆ – ಮೂರು ರೂಪಾಯಿ ಹತ್ತು ಪೈಸೆಯ ಸಾಹಸ. ಚನ್ನಬಸಪ್ಪನವರ ಮೂಲ ಊರು ಬೆಳಗಾವಿ ಜಿಲ್ಲೆಯ ಗೋಕಾಕ. ತಂದೆ ಬಸಲಿಂಗಪ್ಪ, ತಾಯಿ ತಿಪ್ಪವ್ವ. ಬಸಲಿಂಗಪ್ಪನವರು ವ್ಯಾಪಾರಕ್ಕಾಗಿ ಧಾರವಾಡಕ್ಕೆ ಬಂದು ನೆಲೆಸಿದರು. ಧಾರವಾಡದ ಅಡಿಕೆ ಓಣಿಯಲ್ಲಿ ಅವರ ಮನೆ ಇತ್ತು. ಚನ್ನಬಸಪ್ಪನವರಿಗೆ ಆರು ವರ್ಷವಿದ್ದಾಗಲೇ ತಂದೆ ತೀರಿಕೊಂಡರು. ಬಡತನ, ಅನಾಥಪ್ರಜ್ಞೆ. ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಆಗ ಧಾರವಾಡದ ಆಡಳಿತ ಭಾಷೆ ಮರಾಠಿ. ಆದರೆ ಈ ಹುಡುಗನಿಗೆ ಇಂಗ್ಲಿಷ್ ನಲ್ಲಿ ಪ್ರೌಢ ಶಿಕ್ಷಣ ಕಲಿಯುವ ಹಂಬಲ.ಜೇಬಿನಲ್ಲಿ ಇದ್ದದ್ದು ಕೇವಲ ಮೂರು ರೂಪಾಯಿ ಹತ್ತು ಪೈಸೆ. ಗೋಕಾಕ ಮಾರ್ಗವಾಗಿ ಪೂನಾಕ್ಕೆ ಹೊರಟರು. ಗೋಕಾಕದಲ್ಲಿ ತಮ್ಮ ಕುಟುಂಬದ ಸ್ನೇಹಿತರಾದ ನಾಗಪ್ಪ ಗಿರಾಪೂರ ಅವರು ಈ ಹುಡುಗನ ಛಲವನ್ನು ನೋಡಿ ಐವತ್ತು ರೂಪಾಯಿಗಳ ನೆರವು ನೀಡಿದರು.ಮುಂದೆ 420 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಪೂನಾ ತಲುಪಿದರು. ಇಂದು ಬೆಂಗಳೂರಿನಿಂದ ಬೆಳಗಾವಿಗೆ ಬಸ್ ನಲ್ಲಿ ಹೋಗಲು ನಾವು ಹತ್ತು ಬಾರಿ ಯೋಚಿಸುತ್ತೇವೆ, ಆಗ 15-16 ವರ್ಷದ ಹುಡುಗ 420 ಕಿ.ಮೀ ನಡೆದು ಪೂನಾ ಸೇರಿದ. ಈ ಸಾಹಸವೇ ಅವರ ಬದುಕಿನ ಮುನ್ನುಡಿ.ಪೂನಾದಲ್ಲಿ ಹೈಸ್ಕೂಲ್ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಪಾಸಾದರು. ಆಗಷ್ಟೇ ಪ್ರಾರಂಭವಾದ ಪೂನಾ ಇಂಜಿನಿಯರಿಂಗ್ ಕ್ಲಾಸ್ ಗೆ ಸೇರಿದರು. ಪೂನಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಿಂಗಳಿಗೆ ಹತ್ತು ರೂಪಾಯಿ ವಿದ್ಯಾರ್ಥಿ ವೇತನ ದೊರೆಯಿತು.
ಇದೇ ಸಮಯದಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭವಾದ ಕೂಪರ್ಸ್ ಹಿಲ್ ಎಂಬ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿಗೆ ಭಾರತದಿಂದ ಐದು ಜನ ಪ್ರತಿಭಾವಂತರನ್ನು ತರಬೇತಿಗೆ ಕಳುಹಿಸುವ ಯೋಜನೆಯನ್ನು ದಾದಾಭಾಯಿ ನವರೋಜಿ ಅವರು ಹಾಕಿಕೊಂಡಾಗ, ಅದರಲ್ಲಿ ಮೊದಲ ಹೆಸರು ಚನ್ನಬಸಪ್ಪನವರದ್ದು ಇತ್ತು. ಇದರಿಂದಲೇ ಅವರ ವಿದ್ವತ್ತು ಎಂತಹದ್ದು ಎಂದು ಅರ್ಥವಾಗುತ್ತದೆ. ಕಾರಣಾಂತರಗಳಿಂದ ಆ ಯೋಜನೆ ನಿಂತು ಹೋದಾಗ, ಮುಂಬೈ ಸರ್ಕಾರವೇ ಇವರಿಗೆ ಸರ್ಕಾರದಲ್ಲಿ ಕಾರ್ಯನಿರ್ವಾಹಕ ಅಭಿಯಂತರ (Executive Engineer) ಹುದ್ದೆಗೆ ಆಹ್ವಾನ ನೀಡಿತು.ಎಂತಹ ಅವಕಾಶ ಇಂಗ್ಲೆಂಡ್, ದೊಡ್ಡ ಸಂಬಳದ ಇಂಜಿನಿಯರ್ ಹುದ್ದೆ. ಆದರೆ ಚನ್ನಬಸಪ್ಪನವರ ಮನಸ್ಸಿನಲ್ಲಿ ಬೇರೆಯೇ ಕನಸು.
“ನನ್ನ ಕನ್ನಡ ಭೂಮಿಯ ಸೇವೆ ಮಾಡಬೇಕು” ಎಂಬ ಬಯಕೆಯೊಂದಿಗೆ 1855ರಲ್ಲಿ ಎಲ್ಲವನ್ನೂ ತೊರೆದು ಮರಳಿ ಧಾರವಾಡಕ್ಕೆ ಬಂದು ನೆಲೆ ನಿಂತರು.
ಕನ್ನಡ ಕಟ್ಟುವ ಕೆಲಸಕ್ಕೆ ಅಡಿಪಾಯ ಹಾಕಿದ ಡೆಪ್ಯುಟಿ. ಮೊದಲು ಕೆಲಕಾಲ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿದರು. ನಂತರ ಧಾರವಾಡದಲ್ಲಿ ಬ್ರಿಟಿಷ್ ಅಧಿಕಾರಿ ರೆಸೆಲ್ (Russell) ಎಂಬುವವರು ಹೊಸದಾಗಿ ಪ್ರಾರಂಭಿಸಿದ “ನಾರ್ಮಲ್ ಸ್ಕೂಲ್” (ಗಂಡು ಮಕ್ಕಳ ತರಬೇತಿ ಶಾಲೆ) ಯ ಮುಖ್ಯ ಅಧ್ಯಾಪಕ ಹುದ್ದೆಯನ್ನು ಅಲಂಕರಿಸಿದರು. ಅಲ್ಲಿಂದ ಅವರ ಬದುಕು ಪೂರ್ತಿ ಕನ್ನಡ ಕಟ್ಟುವ ಕೆಲಸಕ್ಕೆ ಮೀಸಲಾಯಿತು.ಇವರ ಸಾಧನೆ ತಿಳಿಯಬೇಕಾದರೆ ಅಂದಿನ ವಾತಾವರಣ ಅರಿಯಬೇಕು. ಅಂದಿನ ಬೆಳಗಾವಿ, ಬಿಜಾಪುರ, ಕಾರವಾರ, ಧಾರವಾಡದ ಪ್ರದೇಶವೆಲ್ಲ ದಕ್ಷಿಣ ಮಹಾರಾಷ್ಟ್ರ ವಾಗಿತ್ತು. ಜನರ ಭಾಷೆ ಕನ್ನಡವಾಗಿದ್ದರೂ ಆಡಳಿತ ಮಾತ್ರ ಮರಾಠಿಯಾಗಿತ್ತು. ಶಾಲೆಗಳಲ್ಲಿ ಮರಾಠಿ ಪಾಠ, ಕಚೇರಿಗಳಲ್ಲಿ ಮರಾಠಿ ಪತ್ರ.1836ರಲ್ಲಿ ಬ್ರಿಟಿಷ್ ಸರ್ಕಾರವೇ ದಕ್ಷಿಣ ಮಹಾರಾಷ್ಟ್ರ ಪ್ರದೇಶದ ಭಾಷೆ ಕನ್ನಡ ಎಂದು ಘೋಷಿಸಿತು. ಆದರೆ ಎಲ್ಲ ಶಿಕ್ಷಕರು ಮರಾಠಿಯಿಂದ ಕನ್ನಡಕ್ಕೆ ಹೊರಳಲು ಆಯಾಸಪಡುತ್ತಿದ್ದರು. ಕನ್ನಡಕ್ಕೆ ಪಠ್ಯಪುಸ್ತಕಗಳಿಲ್ಲ, ಶಿಕ್ಷಕರಿಗೆ ತರಬೇತಿ ಇಲ್ಲ, ಕನ್ನಡದಲ್ಲಿ ಆಡಳಿತ ಹೇಗೆ ಮಾಡಬೇಕೆಂದು ಗೊತ್ತಿಲ್ಲ.ಈ ಗೊಂದಲದ ಸಮಯದಲ್ಲಿ ಚನ್ನಬಸಪ್ಪನವರ ಆಗಮನವಾಯಿತು. ಹೊಸ ಪಠ್ಯಪುಸ್ತಕ ರಚನೆ, ಶಿಕ್ಷಕರ ತರಬೇತಿ, ಶಿಕ್ಷಕರ ನೇಮಕ, ಪರೀಕ್ಷಾ ಪದ್ಧತಿ – ಇವೆಲ್ಲವೂ ಕ್ರಮಬದ್ಧವಾಗಿ ಕನ್ನಡ ಶಿಕ್ಷಣದ ಹಳಿ ಹಿಡಿಯಲು ಪ್ರಾರಂಭಿಸಿತು. ಅದರ ಪ್ರೇರಕ ಶಕ್ತಿ ಡೆಪ್ಯುಟಿ ಚನ್ನಬಸಪ್ಪನವರು. ಅವರ ಘೋಷವಾಕ್ಯ “ನಮ್ಮ ಭಾಷೆಯ ಮೂಲಕವೇ ನಮ್ಮ ಬೆಳವಣಿಗೆ ಸಾಧ್ಯ”. ಇದೇ ವಾಕ್ಯವನ್ನು ಅವರು ಕನ್ನಡ ಶಿಕ್ಷಣ ಇಲಾಖೆಯ ಅಧಿಕೃತ ಘೋಷವಾಕ್ಯವನ್ನಾಗಿ ಮಾಡಿದರು. ಮುಂದೆ ಇದೇ ತತ್ವ TTI, DIET, DSERT ಗೆ ಅಡಿಪಾಯವಾಯಿತು. ಇಂದು DSERT ಯ ನಿರ್ಮಾತೃ ಎಂದು ಅವರನ್ನು ಕರೆಯುವುದು ಇದೇ ಕಾರಣಕ್ಕೆ. 1865ರಲ್ಲಿ ಅವರು ಶಿಕ್ಷಣ ಇಲಾಖೆಯ ಮುಖವಾಣಿಯಾಗಿ “ಮಠ ಪತ್ರಿಕೆ” ಯನ್ನು ಪ್ರಾರಂಭಿಸಿದರು. ಶಿಕ್ಷಕರಿಗೆ ಹೊಸ ವಿಷಯ ತಿಳಿಸುವ, ಶಿಕ್ಷಣದ ಚರ್ಚೆ ಮಾಡುವ ಪತ್ರಿಕೆ ಇದು. ಈ ಮಠ ಪತ್ರಿಕೆ ಇಂದು “ಜೀವನ ಶಿಕ್ಷಣ” ಹೆಸರಿನಿಂದ ಬರುತ್ತಿದ್ದು, ದೇಶದ ಇತಿಹಾಸದಲ್ಲೇ ಅತಿ ದೀರ್ಘಕಾಲದಿಂದ ನಡೆದು ಬಂದ ಶೈಕ್ಷಣಿಕ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಕನ್ನಡದ ಹೆಮ್ಮೆಯ ಕವಿ ಶೇಷಗಿರಿರಾಯರು ತಮ್ಮ ಅಭಿಜ್ಞಾನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ, ಅದನ್ನು ಚನ್ನಬಸಪ್ಪನವರಿಗೆ ಅರ್ಪಿಸುತ್ತಾ ಹೀಗೆ ಬರೆದರು “ಬಡವರ ವಿದ್ಯೆಗಾಗಿ ತನು ಮನ ಧನದಿಂದ ಸಾಹಸಂಬಡುತಿಹ ಚನ್ನಬಸವೇಶನ ದಿವ್ಯ ಪಾದಕ್ಕೆ ಭೂಷಣಕ್ಕೆ ಕಡುಗುರುಭಕ್ತಿಯಿಂದ”
ಈ ಒಂದು ಸಾಲು ಡೆಪ್ಯುಟಿ ಅವರ ವ್ಯಕ್ತಿತ್ವವನ್ನು ಹೇಳುತ್ತದೆ – ಬಡವರ ವಿದ್ಯೆಗಾಗಿ ತನು-ಮನ-ಧನದಿಂದ ದುಡಿದವರು.
48ರಿಂದ 341 ಶಾಲೆಗಳ ಕ್ರಾಂತಿ – ಡೆಪ್ಯುಟಿ ಪದದ ನಿಜವಾದ ಅರ್ಥ. 1866ರಲ್ಲಿ ಅವರಿಗೆ Deputy Educational Inspector, ಬೆಳಗಾವಿ ಹುದ್ದೆಗೆ ನೇಮಕವಾಯಿತು. 1869ರಲ್ಲಿ ಅದೇ ಹುದ್ದೆಗೆ ಧಾರವಾಡಕ್ಕೆ ವರ್ಗವಾಗಿ ಬಂದರು. ತಮಗೆ ಸಿಕ್ಕ ಹುದ್ದೆಯನ್ನು ಕನ್ನಡ ಕಟ್ಟಲು ಬಳಸಿಕೊಂಡರೇ ಹೊರತು ಅದನ್ನೊಂದು ವೃತ್ತಿ ಎಂದು ಪರಿಗಣಿಸಲಿಲ್ಲ ಆಗ ಅವರ ಮೊದಲ ಕಾರ್ಯ – ಆಡಳಿತದಲ್ಲಿ ಕನ್ನಡ ಅನುಷ್ಠಾನ. ಶಿಕ್ಷಣ ಇಲಾಖೆಯಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು ಎಂದು ಅಹರ್ನಿಶಿ ದುಡಿದರು. ಕನ್ನಡದಲ್ಲಿ ಅರ್ಜಿ ಬರೆಯುವುದು, ಕನ್ನಡದಲ್ಲಿ ದಾಖಲೆ ಇಡುವುದು, ಕನ್ನಡದಲ್ಲೇ ಪಾಠ ಮಾಡುವುದು – ಇದನ್ನು ಕಡ್ಡಾಯ ಮಾಡಿದರು.
ಈ ಹುದ್ದೆಯನ್ನು ಅಲಂಕರಿಸಿದಾಗಲೇ “ಡೆಪ್ಯುಟಿ” ಎಂಬ ಪದ ಅವರ ಹೆಸರಿಗೆ ಶಾಶ್ವತವಾಗಿ ಅಂಟಿಕೊಂಡಿತು. ಆದರೆ ಅವರು ಡೆಪ್ಯುಟಿಗಳಂತೆ ಅಧಿಕಾರಿಗಳಾಗಿ ಶಾಲೆ ಸಂದರ್ಶಿಸಲಿಲ್ಲ. ಶಿಕ್ಷಕರ ಸುಖ-ದುಃಖಗಳನ್ನು ಸಹಾನುಭೂತಿಯಿಂದ ಆಲಿಸುತ್ತಿದ್ದರು. ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಶಾಲೆ ತೆರೆಯಿರಿ ಎಂದು ಜನರನ್ನು ಬೇಡಿಕೊಳ್ಳುತ್ತಿದ್ದರು.
ಡೆಪ್ಯುಟಿ ಹುದ್ದೆಯನ್ನು ಅಲಂಕರಿಸಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಯೂ ಅವರದ್ದೇ. 1876ರಲ್ಲಿ ಮುಂಬೈ ಸರ್ಕಾರದ ದಕ್ಷಿಣ ಮುಂಬೈ ಪ್ರಾಂತ್ಯದ Educational Inspector ಆಗಿ ಕಾರ್ಯನಿರ್ವಹಿಸುತ್ತಿದ್ದ ರಸೆಲ್ ರವರು ಮೂರು ತಿಂಗಳು ರಜೆ ಮೇಲೆ ತೆರಳಿದಾಗ, ಪ್ರಭಾರವಾಗಿ ದಕ್ಷಿಣ ಮುಂಬೈ ಪ್ರಾಂತ್ಯದ Educational Inspector ಹುದ್ದೆಯನ್ನು ಅಲಂಕರಿಸುವ ಮೂಲಕ ಕನ್ನಡಿಗನೊಬ್ಬ ಮುಂಬೈ ಸರ್ಕಾರದಲ್ಲಿ ಅತಿ ಉನ್ನತ ಹುದ್ದೆ ಹೊಂದಿದ ಮೊದಲಿಗರು ಎಂಬ ಕೀರ್ತಿಯನ್ನು ಡೆಪ್ಯುಟಿ ಚನ್ನಬಸಪ್ಪನವರು ಗಳಿಸಿದರು. ಅವರ ಸಾಧನೆಯ ಅಂಕಿ-ಅಂಶವೇ ಅವರ ಕನ್ನಡ ಬದ್ಧತೆಗೆ ಸಾಕ್ಷಿ. ಬೆಳಗಾವಿಯಿಂದ ಧಾರವಾಡಕ್ಕೆ ವರ್ಗಾವಣೆಯಾಗಿ ಬಂದಾಗ ಮೊದಲು ಧಾರವಾಡ ಜಿಲ್ಲೆಯಲ್ಲಿ ಕೇವಲ 48 ಕನ್ನಡ ಶಾಲೆಗಳಿದ್ದವು. ಅವರ ಅಧಿಕಾರದ ಅವಧಿಯ ಕೊನೆಯಲ್ಲಿ ಕನ್ನಡ ಶಾಲೆಗಳ ಸಂಖ್ಯೆ 341ಕ್ಕೆ ಏರಿತು. ಇದು ಕೇವಲ ಸಂಖ್ಯೆಯಲ್ಲ, 293 ಹಳ್ಳಿಗಳಲ್ಲಿ ಕನ್ನಡದ ಬೆಳಕು ಮೂಡಿಸಿದ ಕ್ರಾಂತಿ.ಡೀಪ್ಯುಟಿ ಚನ್ನಬಸಪ್ಪನವರು ಕನ್ನಡ ಕಟ್ಟುವ ಕೆಲಸ ಮಾಡದಿದ್ದರೆ ಇಂದು ನಾವೆಲ್ಲ ಮಹಾರಾಷ್ಟ್ರದ ಭಾಗವಾಗಿರುತ್ತಿದ್ದೆವೇನೋ ಎಂದು ಯೋಚಿಸಿದರೆ ಮನಸ್ಸು ಭಾರವಾಗುತ್ತದೆ.
ಕೇವಲ 47 ವರ್ಷದ ಬದುಕು, 500 ವರ್ಷಗಳ ಕೆಲಸ. ಅವರು ಬದುಕಿದ್ದು ಕೇವಲ 47 ವರ್ಷಗಳು ಮಾತ್ರ – 1833ರ ನವೆಂಬರ್ 1ರಿಂದ 1881ರ ಜನವರಿ 4ರವರೆಗೆ.ಅರ್ಧ ಶತಮಾನವೂ ಬದುಕಲಿಲ್ಲ. ಆದರೆ ಕನ್ನಡ ಸಾಹಿತ್ಯ ಪರಿಷತ್ತು (1915), ಕರ್ನಾಟಕ ವಿದ್ಯಾವರ್ಧಕ ಸಂಘ (1890) ಕ್ಕಿಂತ ಅರ್ಧ ಶತಮಾನದಷ್ಟು ಮುಂಚೆಯೇ ಗಂಡು ಮಕ್ಕಳ ತರಬೇತಿ ಶಾಲೆಯ ಮೂಲಕ ಕನ್ನಡ ನಾಡಿನ ಸಂಸ್ಕೃತಿ, ಇತಿಹಾಸದ ಹಿರಿಮೆಯನ್ನು ಉಳಿಸಿದ ಕೀರ್ತಿ ಅವರದ್ದು.ಅವರು ಶ್ರೇಷ್ಠ ಗಣಿತ ತಜ್ಞರೂ ಹೌದು. ಕನ್ನಡದಲ್ಲಿ ಗಣಿತದ ಪಠ್ಯಪುಸ್ತಕಗಳನ್ನು ಬರೆದರು. “ಕನ್ನಡದಲ್ಲಿ ಗಣಿತ ಕಲಿಯಲು ಸಾಧ್ಯವಿಲ್ಲ” ಎಂಬ ಮಿಥ್ಯೆಯನ್ನು ಒಡೆದು ಹಾಕಿದರು.ಕನ್ನಡ ಸಂಸ್ಕೃತಿ, ಭಾಷೆ, ಕನ್ನಡಿಗರ ಬದುಕು ಕಳೆದುಕೊಳ್ಳುವ ಕಾಲಘಟ್ಟದಲ್ಲಿ ಹುಟ್ಟಿ, ಕನ್ನಡ ಭಾಷೆ, ಸಂಸ್ಕೃತಿ, ಭಾವನೆಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ಕಟ್ಟಿಕೊಟ್ಟ ಮಹಾನ್ ಚೇತನ ಅವರು.ಇಂದು ನವೆಂಬರ್ 1ರಂದು ನಾವು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತೇವೆ ಎಂದರೆ, ಅದಕ್ಕೆ 100 ವರ್ಷಗಳ ಹಿಂದೆ ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡವನ್ನು ಆಡಳಿತ ಭಾಷೆ ಮಾಡಿ, “ಇದು ಕನ್ನಡ ನಾಡು” ಎಂದು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟ ಡೆಪ್ಯುಟಿ ಚನ್ನಬಸಪ್ಪನವರಂತಹವರ ತ್ಯಾಗವೇ ಕಾರಣ.ಆದ್ದರಿಂದ ಈ ಬಾರಿಯ ರಾಜ್ಯೋತ್ಸವದಲ್ಲಿ ಕನ್ನಡದ ಬಾವುಟದ ಜೊತೆಗೆ ಡೆಪ್ಯುಟಿ ಚನ್ನಬಸಪ್ಪನವರ ಭಾವಚಿತ್ರವನ್ನೂ ಇಟ್ಟು ನಮಿಸೋಣ. ನವೆಂಬರ್ 1 ರಂದು ಜನಿಸಿ, ಕನ್ನಡಕ್ಕಾಗಿ ನಂಬರ್ 1 ಕೆಲಸ ಮಾಡಿದ ಆ ಮಹಾನ್ ಶಿಕ್ಷಕನಿಗೆ ನಾವು ಕೊಡುವ ನಿಜವಾದ ಗೌರವ ಅದೇ.
ಶಿವನಗೌಡ ಪೊಲೀಸ್ ಪಾಟೀಲ್, ನವಲಹಳ್ಳಿ
ಉಪನ್ಯಾಸಕರು, ಕೊಪ್ಪಳ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
