ಎತ್ತಿನ ಗಾಡಿಯಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ, ಡೊಳ್ಳು ಕುಣಿತದ ಮೆರುಗು
“ಹಳ್ಳಿ, ನೆಲ, ಜಲ ಮತ್ತು ಪರಿಸರದ ಬೇರುಗಳನ್ನು ಅರಿತು ನಮ್ಮ ನಾಡಿನ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು” – ಪರಿಸರ ತಜ್ಞ ಶಿವಾನಂದ ಕಳವೆ
“ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಂಶೋಧನೆ ಆಧಾರಿತ ವರದಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು” – ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕರ್ನಾಟಕ ರಾಜ್ಯೋತ್ಸವ ಆಚರಣಾ ಸಮಿತಿಯ ವತಿಯಿಂದ ‘ಅಭ್ಯುದಯ-2026’ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎತ್ತಿನ ಗಾಡಿಯಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ, ವಿವಿಧ ಕಲಾ ತಂಡಗಳಿಂದ ಡೊಳ್ಳು ಕುಣಿತ ಹಾಗೂ ನೃತ್ಯ ಪ್ರದರ್ಶನಗಳು ಮತ್ತು ನೂರಾರು ಮೀಟರ್ ಉದ್ದದ ಕನ್ನಡದ ಭಾವುಟದೊಂದಿಗೆ ನಡೆದ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕನ್ನಡದ ಅಭಿಮಾನ ಮತ್ತು ಸಂಭ್ರಮದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸಿ, ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂದಿನ ಯುವಜನತೆ ನಮ್ಮ ರಾಜ್ಯದ ಉದಯದ ಇತಿಹಾಸ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಏಕೀಕರಣಕ್ಕಾಗಿ ನಡೆದ ಹೋರಾಟಗಳು ಹಾಗೂ ಅಂದು ಹೋರಾಟಗಾರರು ಮಾಡಿದ ತ್ಯಾಗ ಮತ್ತು ಪರಿಶ್ರಮದ ಕುರಿತು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದ ಅವರು, ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು. ಈ ಭಾಗದ ಯಾವ ಕ್ಷೇತ್ರಗಳು ಹಿಂದುಳಿದಿವೆ, ಯಾವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ಜನರ ಜೀವನಮಟ್ಟ ಸುಧಾರಿಸಬಹುದು ಎಂಬುದರ ಕುರಿತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಧ್ಯಯನ ನಡೆಸಿ ಸಮಗ್ರ ವರದಿಗಳನ್ನು ಸಿದ್ಧಪಡಿಸಬೇಕು. ಅಂತಹ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಅವು ಸರ್ಕಾರದ ನೀತಿ ಮತ್ತು ಯೋಜನೆಗಳ ರೂಪಿಸುವಿಕೆಗೆ ಆಧಾರವಾದಾಗ ಮಾತ್ರ ನಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಪ್ರಯತ್ನಗಳು ನಿಜವಾದ ಅರ್ಥದಲ್ಲಿ ಸಾರ್ಥಕವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದ ನಾಡಿನ ಹಿರಿಯ ಪತ್ರಕರ್ತರು, ಪರಿಸರ ತಜ್ಞರು ಹಾಗೂ ಪರಿಸರ ಕಾರ್ಯಕರ್ತರಾದ ಶ್ರೀ ಶಿವಾನಂದ ಕಳವೆ ಅವರು ಮಾತನಾಡಿ, “ನೀರು ಮತ್ತು ಪರಿಸರವೇ ಆರೋಗ್ಯದ ಗುಟ್ಟು. ನಮ್ಮ ಹಳ್ಳಿಗಳ ಜನಪದ ಜೀವನದಲ್ಲಿಯೇ ಅಪಾರವಾದ ವಿಜ್ಞಾನ ಮತ್ತು ಜ್ಞಾನ ಅಡಗಿದೆ. ಗ್ರಾಮೀಣ ಭಾಷೆ, ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ವೈವಿಧ್ಯಮಯ ಅನುಭವಗಳಿವೆ. ಹಿಂದೆ ನದಿಗಳೇ ಪ್ರದೇಶಗಳ ಗಡಿಗಳಾಗಿದ್ದವು. ಕಾಲುದಾರಿಗಳಲ್ಲಿ ಸಂಚರಿಸುತ್ತಲೇ ನಮ್ಮ ಹಿರಿಯರು ಅನೇಕ ವಿಷಯಗಳನ್ನು ಕಲಿತಿದ್ದಾರೆ. ಇಂದು ತಂತ್ರಜ್ಞಾನ ಮತ್ತು ಆಧುನಿಕ ಸೌಲಭ್ಯಗಳಿಂದ ನಾವು ಸಾಕಷ್ಟು ಬೆಳೆದಿದ್ದೇವೆ. ಆದರೆ ನೆರೆಮನೆಯವರೊಂದಿಗೆ ಮಾನವೀಯ ಸಂಬಂಧ ಬೆಳೆಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ” ಎಂದು ಅಭಿಪ್ರಾಯಪಟ್ಟರು.

ನಮ್ಮ ನಾಡಿನಲ್ಲಿ ಹಿಂದೆ ನಿರ್ಮಿಸಲಾದ ಕೆರೆಕಟ್ಟೆಗಳು, ವಾಡೆಗಳು, ಜಲಸಂರಕ್ಷಣಾ ವ್ಯವಸ್ಥೆಗಳು ಮತ್ತು ವಾಸ್ತುಶಿಲ್ಪದ ವೈಶಿಷ್ಟ್ಯಗಳು ಇಂದಿನ ಇಂಜಿನಿಯರಿಂಗ್ ಜ್ಞಾನಕ್ಕೂ ಸವಾಲಾಗುವಂತಿವೆ. ನಾವು ಬದಲಾವಣೆಯನ್ನು ಕಂಡಿದ್ದೇವೆ; ಆದರೆ ನಿಜವಾದ ಸುಧಾರಣೆಯತ್ತ ಇನ್ನಷ್ಟು ಗಮನ ಹರಿಸಬೇಕಾಗಿದೆ. ನಮ್ಮ ಪೂರ್ವಜರು ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ತಮ್ಮ ಬದುಕಿನ ಅನುಭವ, ಆದರ್ಶ ಮತ್ತು ಸಾಧನೆಗಳ ಮೂಲಕ ಸಮಾಜಕ್ಕೆ ಮಾದರಿಯಾದ ಅನೇಕ ಗ್ರಾಮೀಣ ಸಾಧಕರಿದ್ದಾರೆ. ಅವರ ಜೀವನ ನಮಗೆ ಪ್ರೇರಣೆಯಾಗಬೇಕು. ಆದ್ದರಿಂದ ನಾವು ನಮ್ಮ ಹಳ್ಳಿಗಳ ಬೇರುಗಳತ್ತ ಮರಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಬರಗಾಲದ ತೀವ್ರತೆ ಹೆಚ್ಚುತ್ತಿದ್ದು, ಲಕ್ಷಾಂತರ ಕೊಳವೆಬಾವಿಗಳು ಬತ್ತಿಹೋಗಿರುವುದು ಆತಂಕಕಾರಿ ಸಂಗತಿಯಾಗಿದೆ. ಹಿಂದೆಯೂ ಹಲವು ಬಾರಿ ಬರಗಾಲ ಎದುರಾದಾಗ ನಮ್ಮ ರೈತರು ತಮ್ಮ ಅನುಭವ ಮತ್ತು ಸ್ಥಳೀಯ ಜ್ಞಾನದಿಂದ ಅದನ್ನು ಎದುರಿಸಿದ್ದಾರೆ. ಇಂದಿಗೂ ಕೃಷಿ ಕ್ಷೇತ್ರದಲ್ಲಿ ಅನೇಕ ಸವಾಲುಗಳ ನಡುವೆಯೂ ರೈತರು ಕೃಷಿಯನ್ನು ಮುಂದುವರಿಸುತ್ತಿದ್ದಾರೆ. ನಮ್ಮ ನಾಡು ಮತ್ತು ಕಾಡು ನಶಿಸುತ್ತಿರುವ ಈ ಸಂದರ್ಭದಲ್ಲಿ, ಹಿಂದಿನ ತಲೆಮಾರುಗಳಿಂದ ನಮಗೆ ಬಂದಿರುವ ನೈಸರ್ಗಿಕ ಸಂಪನ್ಮೂಲಗಳು, ಸಾಂಪ್ರದಾಯಿಕ ಜ್ಞಾನ ಮತ್ತು ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕಾಗಿದೆ. ಆಧುನಿಕ ಕೃಷಿ ತಂತ್ರಜ್ಞಾನದ ಹೆಸರಿನಲ್ಲಿ ಏಕಬೆಳೆ ಪದ್ಧತಿಗೆ ಹೆಚ್ಚು ಒತ್ತು ನೀಡುವುದರಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದರು.
“ನಮಗೆ ಕೃಷಿ ಬೇಕು, ನದಿಗಳ ನೀರು ಬೇಕು. ನಮ್ಮ ಕಾಲ ಬುಡದಲ್ಲಿರುವ ಇತಿಹಾಸವನ್ನು ಹುಡುಕಬೇಕು. ನಮ್ಮತನವನ್ನು ಉಳಿಸಿಕೊಂಡು ನಾಡಿನ ಬದುಕನ್ನು ಕಟ್ಟಬೇಕಾಗಿದೆ. ಹಿರಿಯರ ಜೀವನಶೈಲಿ ಮತ್ತು ಅನುಭವಗಳು ನಮಗೆ ಪ್ರೇರಣೆಯಾಗಬೇಕು. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ನಾಡಿನ ನದಿ, ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಬೇಕು” ಎಂದು ಹೇಳಿದರು.
ಈ ರಾಜ್ಯೋತ್ಸವದ ಸಂದರ್ಭದಲ್ಲಿ ನಾವೆಲ್ಲರೂ ಹೊಸ ಸಂಕಲ್ಪ ಮಾಡಿಕೊಳ್ಳಬೇಕು. ನಮ್ಮ ಹಳ್ಳಿಗಳನ್ನು ಸರಿಯಾಗಿ ಅರಿಯದೆ ಅಭಿವೃದ್ಧಿಯತ್ತ ಸಾಗುವುದು ಸೂಕ್ತವಲ್ಲ. ಪ್ರತಿಯೊಬ್ಬರೂ ತಮ್ಮ ಊರಿನ ಇತಿಹಾಸ, ಸಂಸ್ಕೃತಿ, ಭಾಷೆ ಮತ್ತು ವಿಶೇಷತೆಗಳನ್ನು ತಿಳಿದುಕೊಂಡು ಊರಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಲ್ಯಾಣ ಕರ್ನಾಟಕವು ಅನ್ನ ನೀಡುವ ನಾಡು, ಅಕ್ಷರದ ಅರಿವು ಮೂಡಿಸುವ ನೆಲ ಹಾಗೂ ಅನೇಕ ಸಾಧಕರನ್ನು ರೂಪಿಸಿದ ಪ್ರದೇಶವಾಗಿದೆ. “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಆಶಯದೊಂದಿಗೆ ನಾವೆಲ್ಲರೂ ಕನ್ನಡದ ಪುಸ್ತಕಗಳು ಮತ್ತು ಸಾಹಿತ್ಯವನ್ನು ಓದಬೇಕು, ಇತರರಿಗೂ ಓದಿಸಬೇಕು. ಮರೆತುಹೋಗುತ್ತಿರುವ ಕನ್ನಡದ ಪದಗಳು, ಭಾಷಾ ಸೊಗಡು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಮತ್ತೆ ಜೀವಂತಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಭಾರ ಕುಲಸಚಿವರಾದ ಪ್ರೊ. ಚನ್ನವೀರ ಆರ್.ಎಂ. ಹಾಗೂ ಕಾನೂನು ಅಧ್ಯಯನ ವಿಭಾಗದ ಡೀನ್ ಮತ್ತು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಡಾ. ಗಣಪತಿ ಬಿ. ಸಿನ್ನೂರು ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿದ್ಯಾರ್ಥಿನಿ ಕು. ಲೀನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ,ಪಾಂಡುರಂಗ ಪತ್ತಿ ಅವರು ವಂದನಾರ್ಪಣೆ ಸಲ್ಲಿಸಿದರು. ಶ್ರೀ ಮುತ್ತಣ್ಣ ನಿರೂಪಣೆ ಮಾಡಿದರು.
ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟಗಳು, ಭಾಷಣ, ಕ್ವೀಜ್, ಪ್ರಬಂಧ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮವು ವಂದೇ ಮಾತರಂ ಹಾಗೂ ಕನ್ನಡ ನಾಡಗೀತೆಯೊಂದಿಗೆ ಪ್ರಾರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲೆ ವಿಭಾಗದ ವಿದ್ಯಾರ್ಥಿಗಳು ಈ ಗಾಯನ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಕಾಯಕ್ರಮದಲ್ಲಿ ವಿ.ವಿ.ಯ ವಿದ್ಯಾರ್ಥಿಗಳಾ ಅಮರೇಶ್, ಅಶೋಕ, ಅನ್ವೀರ್, ಸಚಿನ್, ಕಿರಣ್, ಪವನ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
