ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ನೈರುತ್ಯ ರೈಲ್ವೆ ಅಸ್ತು
ನವದೆಹಲಿ : ದೀಪಾವಳಿ ಹಬ್ಬದ ನಿಮಿತ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಕಲ್ಪಿಸಲಾಗಿದೆ. ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರ ವಿಶೇಷ ಮನವಿಗೆ ತಕ್ಷಣ ಸ್ಪಂದಿಸಿರುವ ನೈರುತ್ಯ ರೈಲ್ವೆಯು ಈ ಹಬ್ಬದ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಬೆಳಗಾವಿ ಮಾರ್ಗವಾಗಿ ಊರುಗಳಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಶೇಷ ರೈಲು ಒದಗಿಸುವಂತೆ ಸಚಿವ ಪ್ರಲ್ಹಾದ್ ಜೋಶಿ ಅವರು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ಹಾಗೂ ಬೆಳಗಾವಿ ನಿಲ್ದಾಣಗಳ ನಡುವೆ ತಲಾ ಎರಡು ಟ್ರಿಪ್ಗಳಂತೆ ವಿಶೇಷ ರೈಲುಗಳು ಸಂಚರಿಸಲಿವೆ.
ರೈಲು ಸಂಚಾರದ ವೇಳಾಪಟ್ಟಿ ಮತ್ತು ವಿವರಗಳು
ರೈಲು ಸಂಖ್ಯೆ 06551 (SMVT ಬೆಂಗಳೂರು – ಬೆಳಗಾವಿ ವಿಶೇಷ ಎಕ್ಸ್ಪ್ರೆಸ್)
ನವೆಂಬರ್ 7 ಮತ್ತು 9 ರಂದು ಸಂಜೆ 7:00 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 06552 (ಬೆಳಗಾವಿ – SMVT ಬೆಂಗಳೂರು ವಿಶೇಷ ಎಕ್ಸ್ಪ್ರೆಸ್)
ನವೆಂಬರ್ 8 ಮತ್ತು 10 ರಂದು ಸಂಜೆ 5:30 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ SMVT ಬೆಂಗಳೂರು ತಲುಪಲಿದೆ.
ಪ್ರಮುಖ ನಿಲುಗಡೆಗಳು:
ಈ ವಿಶೇಷ ರೈಲುಗಳು ಪ್ರಯಾಣಿಕರ ಅನುಕೂಲಕ್ಕಾಗಿ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೊಂಡಾ ಹಾಗೂ ಖಾನಾಪುರ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.
ಹಬ್ಬದ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ಸಾರ್ವಜನಿಕರು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು. ಎಲ್ಲರ ದೀಪಾವಳಿ ಹಬ್ಬದ ಪ್ರಯಾಣವು ಸುಖಕರ ಮತ್ತು ಸಂತಸದಾಯಕವಾಗಿರಲಿ ಎಂದು ಸಚಿವರು ಹಾರೈಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
