ನೈಕ್ನ ಪ್ರಸಿದ್ಧ ‘ಸ್ವೂಷ್’ ಚಿಹ್ನೆಯು ಪ್ರಾಚೀನ ಗ್ರೀಕ್ ವಿಜಯದೇವತೆ ನೈಕ್ನಿಂದ ಪ್ರೇರಿತವಾಗಿದೆ ಎಂಬ ಕಾರಣಕ್ಕೆ ಫತ್ವಾ; ಇಸ್ರೇಲ್ಗೆ ಬೆಂಬಲ ನೀಡುವ ಕಂಪನಿಗಳ ವಿರುದ್ಧ ಬಹಿಷ್ಕಾರಕ್ಕೂ ಕರೆ
ಲಿಬಿಯಾದ ಅತ್ಯುನ್ನತ ಧಾರ್ಮಿಕ ಪ್ರಾಧಿಕಾರವು ಅಮೆರಿಕದ ಕ್ರೀಡಾ ಉಡುಪುಗಳ ಬ್ರ್ಯಾಂಡ್ ನೈಕ್ (Nike) ಉತ್ಪನ್ನಗಳನ್ನು ಖರೀದಿಸುವುದು, ಮಾರಾಟ ಮಾಡುವುದು ಮತ್ತು ಧರಿಸುವುದನ್ನು ಮುಸ್ಲಿಮರಿಗೆ ನಿಷೇಧಿಸಿ ಫತ್ವಾ ಹೊರಡಿಸಿದೆ. ನೈಕ್ನ ಪ್ರಸಿದ್ಧ ‘ಸ್ವೂಷ್’ (Swoosh) ಚಿಹ್ನೆಯು ಬಹುದೇವತಾ ಆರಾಧನೆಯನ್ನು ಉತ್ತೇಜಿಸುತ್ತದೆ ಎಂಬ ಆರೋಪದ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಚಿಹ್ನೆಯು ಪ್ರಾಚೀನ ಗ್ರೀಕ್ ವಿಜಯದೇವತೆ ನೈಕ್ನಿಂದ ಪ್ರೇರಿತವಾಗಿದೆ ಎಂದು ಧಾರ್ಮಿಕ ಪ್ರಾಧಿಕಾರ ವಾದಿಸಿದೆ.
ಲಿಬಿಯಾದ ದಾರ್ ಅಲ್-ಇಫ್ತಾ (Dar al-Ifta) ಹೊರಡಿಸಿರುವ ಈ ಧಾರ್ಮಿಕ ಆದೇಶವು ಅಮೆರಿಕದ ಕ್ರೀಡಾ ಉಡುಪುಗಳ ಕಂಪನಿಯನ್ನು ಇಸ್ಲಾಮಿಕ್ ಧಾರ್ಮಿಕ ಪರಿಶೀಲನೆಗೆ ಒಳಪಡಿಸಿದೆ. ಇದರ ಜತೆಗೆ, ನೈಕ್ ಇಸ್ರೇಲ್ಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿರುವ ಪ್ರಾಧಿಕಾರವು ಆ ದೇಶದೊಂದಿಗೆ ಸಂಬಂಧ ಹೊಂದಿರುವ ಕಂಪನಿಗಳ ವಿರುದ್ಧ ಬಹಿಷ್ಕಾರಕ್ಕೂ ಕರೆ ನೀಡಿದೆ.
ನೈಕ್ನ ಸ್ವೂಷ್ ಚಿಹ್ನೆ ಪ್ರಾಚೀನ ಗ್ರೀಕ್ ದೇವತೆ ನೈಕ್ನ ರೆಕ್ಕೆಯ ವಿನ್ಯಾಸವನ್ನು ಹೋಲುತ್ತದೆ ಎಂದು ಧಾರ್ಮಿಕ ಪ್ರಾಧಿಕಾರ ಹೇಳಿದೆ. ಇಸ್ಲಾಂ ಪೂರ್ವದ ದೇವತೆಯೊಂದಿಗಿನ ಈ ಸಂಬಂಧವು ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಮುಸ್ಲಿಮರು ಇಂತಹ ಚಿಹ್ನೆಯನ್ನು ತಿರಸ್ಕರಿಸಬೇಕು ಎಂಬುದು ಅದರ ವಾದವಾಗಿದೆ.
ಈ ನಿಷೇಧವು ನೈಕ್ ಉತ್ಪನ್ನಗಳನ್ನು ಧರಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಕಂಪನಿಯ ಗುರುತಿನ ಚಿಹ್ನೆ ಹೊಂದಿರುವ ಉಡುಪುಗಳನ್ನು ಖರೀದಿಸುವುದು, ಮಾರಾಟ ಮಾಡುವುದು ಅಥವಾ ಬಳಸುವುದನ್ನೂ ಫತ್ವಾ ನಿಷೇಧಿಸಿದೆ. ಧಾರ್ಮಿಕ ಆಚರಣೆಗಳು ಅಥವಾ ರಾಜಕೀಯ ನಿಲುವುಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿವೆ ಎಂದು ತಾನು ಪರಿಗಣಿಸುವ ಕಂಪನಿಗಳ ವಿರುದ್ಧದ ವಿಶಾಲ ಆಕ್ಷೇಪಣೆಯ ಭಾಗವಾಗಿ ಈ ನಿರ್ಧಾರ ಹೊರಬಿದ್ದಿದೆ.
ಇಸ್ರೇಲ್ ಬಹಿಷ್ಕಾರ ಮತ್ತು ಹಿಂದಿನ ಫತ್ವಾ
ಇಸ್ರೇಲ್ಗೆ ನೈಕ್ ಬೆಂಬಲ ನೀಡುತ್ತಿದೆ ಎಂಬ ಆರೋಪವನ್ನೂ ದಾರ್ ಅಲ್-ಇಫ್ತಾ ಮಾಡಿದೆ. ಈ ಸಂಬಂಧ 2023ರಲ್ಲಿ ತನ್ನ ಸಂಶೋಧನೆ ಮತ್ತು ಶರಿಯಾ ಅಧ್ಯಯನ ಮಂಡಳಿ ನೀಡಿದ್ದ ನಿರ್ಧಾರವನ್ನು ಪ್ರಾಧಿಕಾರ ಉಲ್ಲೇಖಿಸಿದೆ. ಆ ಮಂಡಳಿಯು ಇಸ್ರೇಲ್ ಮತ್ತು ಅದಕ್ಕೆ ಬೆಂಬಲ ನೀಡುವ ಕಂಪನಿಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿತ್ತು. ಈ ಅಭಿಯಾನದ ಭಾಗವಾಗಿ ನೈಕ್ ಕಂಪನಿಯನ್ನೂ ಸೇರಿಸಲಾಗಿತ್ತು.
ಫತ್ವಾ ಎಂದರೆ ಧಾರ್ಮಿಕ ಆಚರಣೆಗಳು ಮತ್ತು ದೈನಂದಿನ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಇಸ್ಲಾಮಿಕ್ ಧಾರ್ಮಿಕ ಪ್ರಾಧಿಕಾರ ನೀಡುವ ಧಾರ್ಮಿಕ ತೀರ್ಪು ಅಥವಾ ಆದೇಶ. ಇಂತಹ ಆದೇಶಗಳು ಅನುಯಾಯಿಗಳ ಮೇಲೆ ಗಣನೀಯ ಪ್ರಭಾವ ಬೀರಬಹುದಾದರೂ, ಅವು ಕಾನೂನುಬದ್ಧವಾಗಿ ಕಡ್ಡಾಯವಲ್ಲ. ಈ ಪ್ರಕರಣದಲ್ಲಿ ನೈಕ್ ಉತ್ಪನ್ನಗಳನ್ನು ಖರೀದಿಸದಂತೆ, ಮಾರಾಟ ಮಾಡದಂತೆ ಮತ್ತು ಧರಿಸದಂತೆ ಮುಸ್ಲಿಮರಿಗೆ ಸೂಚಿಸುವ ಮೂಲಕ ಗ್ರಾಹಕರ ವರ್ತನೆಯ ಮೇಲೆ ಪ್ರಭಾವ ಬೀರಲು ಈ ನಿರ್ಧಾರ ಪ್ರಯತ್ನಿಸುತ್ತದೆ.
ನೈಕ್ ಕಂಪನಿಯು ಲಿಬಿಯಾದಲ್ಲಿ ನೇರವಾಗಿ ನಿರ್ವಹಿಸುವ ಯಾವುದೇ ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿಲ್ಲ. ಆದರೂ, ದೇಶದ ಇತರ ಮಾರಾಟಗಾರರ ಮೂಲಕ ಅದರ ಉತ್ಪನ್ನಗಳು ಲಭ್ಯವಿವೆ. ನೈಕ್ ಸೇರಿದಂತೆ ಅಡಿಡಾಸ್ನಂತಹ ಅಂತರರಾಷ್ಟ್ರೀಯ ಬ್ರ್ಯಾಂಡ್ಗಳ ನಕಲಿ ಉತ್ಪನ್ನಗಳೂ ಲಿಬಿಯಾದ ಸ್ಥಳೀಯ ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಮಾರಾಟವಾಗುತ್ತವೆ.
ಇದಕ್ಕೂ ಮೊದಲು, 2025ರಲ್ಲಿ ಲಿಬಿಯಾದ ಧಾರ್ಮಿಕ ಪ್ರಾಧಿಕಾರವು ಫ್ರಾನ್ಸ್ನ ಐಷಾರಾಮಿ ಆಭರಣ ಬ್ರ್ಯಾಂಡ್ ವ್ಯಾನ್ ಕ್ಲೀಫ್ ಆಂಡ್ ಆರ್ಪೆಲ್ಸ್ (Van Cleef & Arpels) ವಿರುದ್ಧ ಇದೇ ರೀತಿಯ ಧಾರ್ಮಿಕ ಆದೇಶ ಹೊರಡಿಸಿತ್ತು. ಕಂಪನಿಯ ನಾಲ್ಕು ಎಲೆಗಳ ಕ್ಲೋವರ್ ವಿನ್ಯಾಸವು ಕ್ರೈಸ್ತ ಧರ್ಮದಲ್ಲಿನ ಅದೃಷ್ಟ ಮತ್ತು ಶುಭದ ನಂಬಿಕೆಗಳೊಂದಿಗೆ ಸಂಬಂಧ ಹೊಂದಿದೆ ಎಂಬ ಕಾರಣಕ್ಕೆ ಅದು ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವಾಗಿದೆ ಎಂದು ಪ್ರಾಧಿಕಾರ ಆಕ್ಷೇಪಿಸಿತ್ತು.
ಲಿಬಿಯಾದ ಅಧಿಕಾರಿಗಳು ಸಾಂಸ್ಕೃತಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೆ ಧಾರ್ಮಿಕ ನಿರ್ಬಂಧಗಳನ್ನು ವಿಧಿಸುತ್ತಿರುವ ವಿಶಾಲ ಪ್ರವೃತ್ತಿಯ ಭಾಗವಾಗಿ ಇತ್ತೀಚಿನ ಫತ್ವಾವನ್ನು ನೋಡಲಾಗುತ್ತಿದೆ. 2025ರಲ್ಲಿ ರಾಪ್ ಸಂಗೀತ, ರಂಗಭೂಮಿ ಮತ್ತು ನೃತ್ಯದ ಮೇಲೂ ಅಧಿಕಾರಿಗಳು ನಿರ್ಬಂಧಗಳನ್ನು ಘೋಷಿಸಿದ್ದರು. ಕೆಲವು ಹಾಡುಗಳ ಸಾಹಿತ್ಯ ಮತ್ತು ಸಾರ್ವಜನಿಕ ಪ್ರದರ್ಶನಗಳು ಇಸ್ಲಾಮಿಕ್ ಮೌಲ್ಯಗಳನ್ನು ಉಲ್ಲಂಘಿಸುತ್ತವೆ ಎಂಬುದು ಆಗ ನೀಡಲಾಗಿದ್ದ ಕಾರಣವಾಗಿತ್ತು.
ಈ ವಿವಾದವು 1989ರಲ್ಲಿ ಇರಾನ್ನ ಅಂದಿನ ಸರ್ವೋಚ್ಚ ನಾಯಕ ಆಯತೊಲ್ಲಾ ರುಹೊಲ್ಲಾ ಖೊಮೇನಿ ಅವರು ಲೇಖಕ ಸಲ್ಮಾನ್ ರಶ್ದಿ ವಿರುದ್ಧ ಹೊರಡಿಸಿದ್ದ ಫತ್ವಾವನ್ನೂ ನೆನಪಿಸುತ್ತದೆ. ಆ ಧಾರ್ಮಿಕ ಆದೇಶದ ಬಳಿಕ ರಶ್ದಿ ತಲೆಮರೆಸಿಕೊಂಡಿದ್ದರು. 2022ರಲ್ಲಿ ಹಾದಿ ಮತರ್ ಎಂಬಾತ ಕಾದಂಬರಿಕಾರನ ಮೇಲೆ ದಾಳಿ ನಡೆಸಿದ್ದ. ಆ ಫತ್ವಾದ ಹಿನ್ನೆಲೆಯಲ್ಲಿ ತಾನು ಈ ಕೃತ್ಯ ಎಸಗಿದ್ದಾಗಿ ಆತ ನಂತರ ಹೇಳಿಕೊಂಡಿದ್ದ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
