ಕಾಸರಗೋಡು: ಕೇರಳದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ವಂದೇ ಮಾತರಂ ಗೀತೆ ಹಾಡುತ್ತಿದ್ದ ಸಂದರ್ಭದಲ್ಲಿ ಆರೋಗ್ಯ ಸಚಿವ ಕೆ. ಮುರಳೀಧರನ್, ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತನ್, ಐಯುಎಂಎಲ್ ಶಾಸಕ ಕಲ್ಲಾತ್ರ ಮಹಿನ್ ಮತ್ತು ಜಿಲ್ಲಾಧಿಕಾರಿ ಶ್ರೀಧನ್ಯ ಅವರು ಕುಳಿತುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ವರ್ತನೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ನವೆಂಬರ್ 9ರಂದು ಕಾಸರಗೋಡು ಜಿಲ್ಲೆಯ ಮುಲ್ಲೇರಿಯಾದ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ವಂದೇ ಮಾತರಂನ ಆರು ಚರಣಗಳನ್ನು ಹಾಡಲಾಯಿತು. ಮೊದಲ ಎರಡು ಚರಣಗಳ ಬಳಿಕ ಸಚಿವರು, ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿ ತಮ್ಮ ಆಸನಗಳಲ್ಲಿ ಕುಳಿತುಕೊಂಡರು. ಉಳಿದ ಚರಣಗಳನ್ನು ಹಾಡುತ್ತಿದ್ದಾಗ ವೇದಿಕೆಯಲ್ಲಿದ್ದ ಕೆಲವರು ಪರಸ್ಪರ ಮಾತನಾಡುತ್ತಿರುವ ದೃಶ್ಯಗಳೂ ಬಹಿರಂಗವಾಗಿವೆ.
ಆದರೆ ಶಾಸಕ ಕೆ. ನೀಲಕಂಠನ್ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಕೆ. ಫೈಝಲ್ ಗೀತೆ ಮುಗಿಯುವವರೆಗೂ ಎದ್ದು ನಿಂತಿದ್ದರು.
ರಾಜ್ಯಪಾಲರಿಗೆ ದೂರು
ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಅರುಣ್ ಮೋಹನ್ ಅವರು ಸಚಿವರು, ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿಯ ವಿರುದ್ಧ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರಿಗೆ ದೂರು ಸಲ್ಲಿಸಿದ್ದಾರೆ. ವಂದೇ ಮಾತರಂಗೆ ಸಂಬಂಧಿಸಿದ ಶಿಷ್ಟಾಚಾರ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ, ಸಂಬಂಧಪಟ್ಟವರಿಂದ ವಿವರಣೆ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅವರು ಈ ವರ್ತನೆಯನ್ನು ರಾಷ್ಟ್ರೀಯ ಗೀತೆಗೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ. ಸಚಿವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದ್ದು, ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದೆ. ಈ ಸಂಬಂಧ ಪೊಲೀಸರಿಗೂ ದೂರು ನೀಡಲಾಗಿದೆ.
ದೇಶಭಕ್ತಿಯನ್ನು ಯಾರೂ ಕಲಿಸಬೇಕಿಲ್ಲ: ಸಚಿವ
ಆರೋಪಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ. ಮುರಳೀಧರನ್, ತಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ತಮಗೆ ದೇಶಭಕ್ತಿಯನ್ನು ಯಾರೂ ಕಲಿಸಬೇಕಾಗಿಲ್ಲ ಎಂದು ಹೇಳಿದ್ದಾರೆ. ಕಾರ್ಯಕ್ರಮದ ಅಧಿಕೃತ ಪಟ್ಟಿಯಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿ ಇರಲಿಲ್ಲ; ಪ್ರಾರ್ಥನೆ ಮಾತ್ರ ನಿಗದಿಯಾಗಿತ್ತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಪದ್ಧತಿ ಅನುಸರಿಸಲಾಗುವುದು ಎಂದೂ ಸಚಿವರು ತಿಳಿಸಿದ್ದಾರೆ. ಬಿಜೆಪಿಯ ಕಾರ್ಯಸೂಚಿಯನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
