ಬೆಂಗಳೂರು: ಯೋಗವು ಇಂದು ಭಾರತವನ್ನು ಜಗತ್ತಿಗೆ ಪರಿಚಯಿಸುವ ಪ್ರಮುಖ ಮಾಧ್ಯಮವಾಗಿದೆ. ವಿಶ್ವದ ವಿವಿಧ ದೇಶಗಳು ಭಾರತೀಯ ಜ್ಞಾನ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೆಚ್ಚಾಗಿ ಸ್ವೀಕರಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವೆಂಬರ್ 13ರಂದು ಬೆಂಗಳೂರಿನ ಪ್ರಶಾಂತಿ ಕುಟೀರಂನಲ್ಲಿ ನಡೆದ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆ (ಎಸ್-ವ್ಯಾಸ)ಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕ ವಿಜ್ಞಾನವನ್ನು ಭಾರತದ ಆಧ್ಯಾತ್ಮಿಕ ಜ್ಞಾನ ಸಂಪತ್ತಿನೊಂದಿಗೆ ಸಂಯೋಜಿಸುವ ಸಂಸ್ಥೆಯ ಪ್ರಯತ್ನಗಳನ್ನು ಶ್ಲಾಘಿಸಿದರು.
ಯೋಗವು ಭಾರತವನ್ನು ಅರಿಯುವ ಹೆಬ್ಬಾಗಿಲಾಗಿ ಪರಿಣಮಿಸಿದೆ. ಆಯುರ್ವೇದಕ್ಕೂ ಜಗತ್ತಿನಲ್ಲಿ ವೇಗವಾಗಿ ಮನ್ನಣೆ ದೊರೆಯುತ್ತಿದೆ. ವಿವಿಧ ದೇಶಗಳಲ್ಲಿ ಈಗ 150ಕ್ಕೂ ಹೆಚ್ಚು ಆಯುರ್ವೇದ ತರಬೇತಿ ಕೋರ್ಸ್ಗಳಿಗೆ ಮಾನ್ಯತೆ ದೊರೆತಿದೆ. ಕರ್ನಾಟಕವು ಶತಮಾನಗಳಿಂದ ಯೋಗದ ಕೇಂದ್ರವಾಗಿದ್ದು, ಇಲ್ಲಿನ ಅನೇಕ ಯೋಗಾಚಾರ್ಯರು ಮತ್ತು ವಿದ್ವಾಂಸರು ಈ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಚಿಂತಕ ಹಾಗೂ ಮಾಜಿ ಸರಕಾರ್ಯವಾಹ ಎಚ್.ವಿ. ಶೇಷಾದ್ರಿ ಅವರ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಿದರು. ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮುಂದುವರಿಸಲು ಶೇಷಾದ್ರಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.
ದೇಶವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಬೇಕಾದರೆ ಸಮರ್ಪಿತ, ಸಮರ್ಥ ಮತ್ತು ಶಿಸ್ತಿನ ನಾಗರಿಕರು ಅಗತ್ಯ ಎಂಬುದನ್ನು ಶೇಷಾದ್ರಿ ಅವರು ಅರಿತಿದ್ದರು. ಅಂತಹ ವ್ಯಕ್ತಿಗಳನ್ನು ರೂಪಿಸುವ ಕಾರ್ಯದಲ್ಲೇ ತಮ್ಮ ಜೀವನವನ್ನು ಸವೆಸಿದರು. ಆರೆಸ್ಸೆಸ್ನಲ್ಲಿ ಅವರು ರೂಪಿಸಿದ ಗುರಿಗಳು ಇಂದಿಗೂ ಕೋಟ್ಯಂತರ ಸ್ವಯಂಸೇವಕರಿಗೆ ಪ್ರೇರಣೆ ನೀಡುತ್ತಿವೆ ಎಂದರು.
ಸಮಾಜಸೇವೆಯು ತಾಯಿಯ ನಿಸ್ವಾರ್ಥ ಸೇವೆಯಂತಿರಬೇಕು
ಶೇಷಾದ್ರಿ ಅವರ ವ್ಯಕ್ತಿತ್ವ ಮತ್ತು ಕಾರ್ಯಶೈಲಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅಪಾರ ಅನುಭವ ಮತ್ತು ದೊಡ್ಡ ವ್ಯಕ್ತಿತ್ವ ಹೊಂದಿದ್ದರೂ ಅವರ ನಡವಳಿಕೆಯಲ್ಲಿ ಗಮನಾರ್ಹ ವಿನಯವಿತ್ತು ಎಂದು ಹೇಳಿದರು. ತಾವು ಹಿನ್ನೆಲೆಯಲ್ಲಿದ್ದುಕೊಂಡು ಇತರರನ್ನು ಮುನ್ನಡೆಸುವುದು, ಜನರನ್ನು ಒಗ್ಗೂಡಿಸುವುದು ಮತ್ತು ಅವರನ್ನು ದೇಶದ ಸೇವೆಗೆ ಸಿದ್ಧಗೊಳಿಸುವುದೇ ಅವರ ಜೀವನದ ಮಹತ್ವದ ಸಾಧನೆಯಾಗಿತ್ತು.
ತಾಯಿಯ ನಡವಳಿಕೆಯನ್ನು ಅವರು ಆಗಾಗ ಉದಾಹರಣೆಯಾಗಿ ನೀಡುತ್ತಿದ್ದರು. ತಾಯಿ ತನ್ನ ಮಗುವಿನ ಆರೈಕೆಗಾಗಿ ಇಡೀ ರಾತ್ರಿ ಎಚ್ಚರವಾಗಿದ್ದು, ಯಾವುದೇ ಸ್ವಾರ್ಥವಿಲ್ಲದೆ ಮಗುವಿನ ಬಗ್ಗೆ ಕಾಳಜಿ ವಹಿಸುತ್ತಾಳೆ. ಇದೇ ಮನೋಭಾವ ಸಮಾಜಸೇವೆಯಲ್ಲಿಯೂ ಇರಬೇಕು ಎಂದು ಶೇಷಾದ್ರಿ ಹೇಳುತ್ತಿದ್ದರು. ಅವರೂ ಇದೇ ನಿಸ್ವಾರ್ಥ ಭಾವನೆಯೊಂದಿಗೆ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು ಎಂದು ಪ್ರಧಾನಿ ಸ್ಮರಿಸಿದರು.
ಶೇಷಾದ್ರಿ ಅವರೊಂದಿಗಿನ ತಮ್ಮ ಆತ್ಮೀಯ ವೈಯಕ್ತಿಕ ಸಂಬಂಧವನ್ನು ನೆನಪಿಸಿಕೊಂಡ ಪ್ರಧಾನಿ, ಅವರಿಂದ ನಿರಂತರವಾಗಿ ಪ್ರೀತಿ ಮತ್ತು ಮಾರ್ಗದರ್ಶನ ದೊರೆಯುತ್ತಿತ್ತು ಎಂದರು. ಅವರೊಂದಿಗೆ ಕಳೆದ ಕ್ಷಣಗಳು ಮತ್ತು ಅವರು ಆಡಿದ ಮಾತುಗಳು ಇಂದಿಗೂ ತಮ್ಮ ಪಾಲಿಗೆ ಅಮೂಲ್ಯವಾಗಿವೆ ಎಂದು ಹೇಳಿದರು.
ಶೇಷಾದ್ರಿ ಅವರ ಒಂದು ವಿಚಾರವನ್ನು ಹಂಚಿಕೊಂಡ ಪ್ರಧಾನಿ, “ನಾವು ಸಮಾಜಕ್ಕೆ ಎರಡೂ ಕೈಗಳಿಂದ ಕೊಟ್ಟರೆ, ಸಮಾಜವು ನಮಗೆ ಲಕ್ಷ ಕೈಗಳಿಂದ ಹಿಂದಿರುಗಿಸುತ್ತದೆ” ಎಂದು ಅವರು ಹೇಳುತ್ತಿದ್ದರು ಎಂದು ಸ್ಮರಿಸಿದರು. ಈ ಮಾತು ತಮ್ಮ ಜೀವನದಲ್ಲಿ ಮತ್ತೆ ಮತ್ತೆ ನಿಜವಾಗಿರುವುದನ್ನು ಕಂಡಿದ್ದೇನೆ ಎಂದರು. ಜನತಾ ಜನಾರ್ದನನ ಸೇವೆಯಲ್ಲಿ ತೊಡಗಿರುವಾಗ ಜನರ ಆಶೀರ್ವಾದ ಸದಾ ದೊರೆತಿದೆ ಎಂದು ಹೇಳಿದರು.
ದಾಸ್ಯದ ಕಾಲದಲ್ಲೇ ಯುವಕರಿಗೆ ಯೋಗದ ಮಾರ್ಗ ತೋರಿದ ಸ್ವಾಮಿ ವಿವೇಕಾನಂದರು
ಭಾರತೀಯ ಯೋಗ ಪರಂಪರೆಯ ಐತಿಹಾಸಿಕ ಮಹತ್ವವನ್ನು ಒತ್ತಿಹೇಳಿದ ಪ್ರಧಾನಿ ಮೋದಿ, ದೇಶವು ಬ್ರಿಟಿಷರ ದಾಸ್ಯದಲ್ಲಿದ್ದಾಗ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಸಂದರ್ಭದಲ್ಲಿ, ಸ್ವಾಮಿ ವಿವೇಕಾನಂದರಂತಹ ರಾಷ್ಟ್ರಋಷಿಯೊಬ್ಬರು ಭಾರತದ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಹಾಗೂ ಯುವಕರಿಗೆ ಯೋಗದ ಮಾರ್ಗವನ್ನು ತೋರಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದು ಹೇಳಿದರು. ಸ್ವಾಮಿ ವಿವೇಕಾನಂದರಿಂದ ದೊರೆತ ಪ್ರೇರಣೆಯೇ ಪ್ರಶಾಂತಿ ಕುಟೀರಂನಂತಹ ಸಂಸ್ಥೆಗಳ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತು ಎಂದರು.
ಪ್ರಶಾಂತಿ ಕುಟೀರಂನಲ್ಲಿ ಯೋಗವನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ, ಆಧುನಿಕ ವಿಜ್ಞಾನದ ಮಾನದಂಡಗಳ ಆಧಾರದಲ್ಲಿ ಹೊಸ ಸಂಶೋಧನೆಗಳನ್ನೂ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಇಲ್ಲಿ ಯೋಗ ಬೋಧಕರು, ಶಿಕ್ಷಕರು, ವೈದ್ಯರು ಮತ್ತು ಸಂಶೋಧಕರ ಒಂದು ಪೀಳಿಗೆಯನ್ನೇ ರೂಪಿಸಲಾಗಿದೆ. ಇವರು ಭಾರತ ಮತ್ತು ಜಗತ್ತಿನಾದ್ಯಂತ ಯೋಗದ ಮೂಲಕ ಜನರ ಸೇವೆ ಮಾಡುತ್ತಿದ್ದಾರೆ. ಪ್ರಶಾಂತಿ ಕುಟೀರಂನಿಂದ ಬೆಳೆದು ಬಂದ ಎಸ್-ವ್ಯಾಸ ಸಂಸ್ಥೆಯು ಯೋಗ ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಮತ್ತು ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದರು.
ಸಂಸ್ಥೆಯ ಸಮಗ್ರ ಆರೋಗ್ಯ ಉಪಕ್ರಮವನ್ನು ಶ್ಲಾಘಿಸಿದ ಪ್ರಧಾನಿ, ಇಲ್ಲಿ ಯೋಗದೊಂದಿಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಆಧುನಿಕ ವೈದ್ಯಕೀಯ ವಿಜ್ಞಾನದ ಸೌಲಭ್ಯಗಳನ್ನು ಸಂಯೋಜಿಸಿ ಸಮಗ್ರ ಆರೋಗ್ಯದ ಪರಿಕಲ್ಪನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು. ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಚಿಕಿತ್ಸಾ ಕ್ಷೇತ್ರಗಳಲ್ಲಿಯೂ ಸಂಸ್ಥೆ ಮಹತ್ವದ ಕೆಲಸ ಮಾಡಿದೆ ಎಂದರು.
ವಿಶ್ವ ನಾಯಕರ ಕುಟುಂಬಗಳಲ್ಲಿಯೂ ಯೋಗದ ಜನಪ್ರಿಯತೆ ಹೆಚ್ಚಳ
ಜಾಗತಿಕ ಮಟ್ಟದಲ್ಲಿ ಯೋಗದ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ವಿದೇಶಿ ಗಣ್ಯರು ಮತ್ತು ವಿಶ್ವ ನಾಯಕರೊಂದಿಗೆ ಮಧ್ಯಾಹ್ನ ಅಥವಾ ರಾತ್ರಿ ಭೋಜನದ ವೇಳೆ ಮಾತನಾಡುವಾಗ ಯೋಗದ ವಿಷಯ ಪ್ರಸ್ತಾಪವಾಗುವುದು ಸಾಮಾನ್ಯವಾಗಿದೆ ಎಂದು ಹೇಳಿದರು. ಅನೇಕ ಪ್ರಮುಖ ವಿಶ್ವ ನಾಯಕರ ಕುಟುಂಬಗಳ ಸದಸ್ಯರು ಯೋಗವನ್ನು ಕಲಿಯುತ್ತಿದ್ದಾರೆ ಮತ್ತು ಅಭ್ಯಾಸ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ಯೋಗವನ್ನು ತಮ್ಮ ಜೀವನದ ಪ್ರಮುಖ ಭಾಗವಾಗಿಸಿಕೊಂಡಿರುವವರಲ್ಲಿ ಕತಾರ್ನ ರಾಜಮನೆತನದ ಸದಸ್ಯರೂ ಸೇರಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಇಂತಹ ಅನೇಕ ವಿದೇಶಿ ವ್ಯಕ್ತಿಗಳಿಗೆ ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ ಎಂದರು.
ಜಗತ್ತಿನ ಜನರಿಗೆ ಯೋಗದ ಪರಿಚಯ ಹೆಚ್ಚಾದಂತೆ ಭಾರತವನ್ನು ತಿಳಿದುಕೊಳ್ಳುವ ಕುತೂಹಲವೂ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಜ್ಞಾನ ಪರಂಪರೆಯ ಬಗ್ಗೆ ಹೊಸ ಆಕರ್ಷಣೆ ಮೂಡುತ್ತಿದೆ. ಇದರಿಂದ ಭಾರತ ಮತ್ತು ಜಗತ್ತಿನ ನಡುವಿನ ಸಂಬಂಧಕ್ಕೆ ಹೊಸ ಮಾರ್ಗ ತೆರೆದಿದೆ. ಇದೆಲ್ಲವೂ ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದು ಅವರು ತಿಳಿಸಿದರು.
ಆಯುರ್ವೇದಕ್ಕೆ ಜಾಗತಿಕ ಮನ್ನಣೆ
ಆಯುರ್ವೇದಕ್ಕೆ ಜಾಗತಿಕವಾಗಿ ದೊರೆಯುತ್ತಿರುವ ಸ್ವೀಕಾರಾರ್ಹತೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ವಿವಿಧ ದೇಶಗಳಲ್ಲಿ 150ಕ್ಕೂ ಹೆಚ್ಚು ಆಯುರ್ವೇದ ತರಬೇತಿ ಕೋರ್ಸ್ಗಳಿಗೆ ಮಾನ್ಯತೆ ದೊರೆತಿದೆ ಎಂದು ಹೇಳಿದರು. ಇಂದು ಜಗತ್ತಿನಲ್ಲಿ ಆಯುರ್ವೇದ ಚಿಕಿತ್ಸೆಯು ಒಂದು ಆಂದೋಲನದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದು ಭಾರತದ ಸಾಂಪ್ರದಾಯಿಕ ವೈದ್ಯ ಪದ್ಧತಿಗಳು ಮತ್ತು ಜ್ಞಾನ ಪರಂಪರೆಯ ಮೇಲೆ ಜಾಗತಿಕವಾಗಿ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದರು.
ಎಸ್-ವ್ಯಾಸ ಕುಟುಂಬಕ್ಕೆ ಸುವರ್ಣ ಮಹೋತ್ಸವದ ಶುಭಾಶಯ
ಪ್ರಶಾಂತಿ ಕುಟೀರಂನ 50 ವರ್ಷಗಳ ಪಯಣವನ್ನು ಸೇವೆ ಮತ್ತು ಸಮರ್ಪಣೆಯ ಮಹತ್ವದ ಗಾಥೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಸಾಮಾನ್ಯ ಯೋಗ ಕೇಂದ್ರವೊಂದು ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆದಿರುವುದು ಸ್ವತಃ ಪ್ರೇರಣಾದಾಯಕ ಸಂಗತಿ ಎಂದರು.
ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಹಾಗೂ ಜಗತ್ತಿನಾದ್ಯಂತ ಇರುವ ಲಕ್ಷಾಂತರ ಸಾಧಕರಿಗೆ ಸುವರ್ಣ ಮಹೋತ್ಸವದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಆರಂಭಿಸಲಾದ ಹೊಸ ಸೌಲಭ್ಯಗಳು ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಎಸ್-ವ್ಯಾಸ ಕುಟುಂಬವನ್ನು ಅಭಿನಂದಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಎಚ್.ಆರ್. ನಾಗೇಂದ್ರ ಮತ್ತು ಇತರ ಪದಾಧಿಕಾರಿಗಳ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಶೇಷಾದ್ರಿ ಅವರ ಕಾರ್ಯವನ್ನು ಮುಂದುವರಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು. ಅವರ ಕೊಡುಗೆಗಾಗಿ ಅಭಿನಂದನೆ ಸಲ್ಲಿಸಿದರು.
ಈ ಸಮಾರಂಭದಲ್ಲಿ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಣ ತಜ್ಞರು, ಯೋಗ ಸಾಧಕರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
