ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಚಾರ; ಅದರಲ್ಲಿ ಹಸ್ತಕ್ಷೇಪಿಸಲು ಒಐಸಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ ಭಾರತ
ನ್ಯೂಯಾರ್ಕ್: ವಿಶ್ವಸಂಸ್ಥೆ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ನಡುವಿನ ಸಹಕಾರಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಮಹಾಸಭೆಯ ನಿರ್ಣಯದ ವಿರುದ್ಧ ಭಾರತ ಮತ ಚಲಾಯಿಸಿದೆ. ನಿರ್ಣಯದ ಕುರಿತು ನಡೆದ ಸಮಾಲೋಚನೆಗಳಿಂದ ಭಾರತ ಮತ್ತು ಇತರ ಕೆಲವು ಸದಸ್ಯ ರಾಷ್ಟ್ರಗಳನ್ನು ಟರ್ಕಿ ಉದ್ದೇಶಪೂರ್ವಕವಾಗಿ ಹೊರಗಿಟ್ಟಿರುವುದನ್ನು ಭಾರತ ಖಂಡಿಸಿದೆ.
ನಿರ್ಣಯದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ಕೊರತೆಯ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ತನ್ನ ಪಾತ್ರವನ್ನು ವಿಸ್ತರಿಸಲು ಒಐಸಿ ನಡೆಸುತ್ತಿರುವ ಪ್ರಯತ್ನವನ್ನೂ ಪ್ರಶ್ನಿಸಿದೆ. ಜಮ್ಮು-ಕಾಶ್ಮೀರ ಸೇರಿದಂತೆ ಭಾರತದ ಆಂತರಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಒಐಸಿಗೆ ಯಾವುದೇ ಅಧಿಕಾರವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
‘ವಿಶ್ವಸಂಸ್ಥೆ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯ ನಡುವಿನ ಸಹಕಾರ’ ಎಂಬ ಶೀರ್ಷಿಕೆಯ ಕರಡು ನಿರ್ಣಯವನ್ನು ಇರಾಕ್ ಮಂಡಿಸಿತ್ತು. ಟರ್ಕಿ ಈ ನಿರ್ಣಯದ ಪ್ರಕ್ರಿಯೆಯನ್ನು ಮುನ್ನಡೆಸಿತ್ತು. ನವೆಂಬರ್ 16ರಂದು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ನಿರ್ಣಯ ಅಂಗೀಕಾರಗೊಂಡಿತು. ಭಾರತ, ಅರ್ಮೇನಿಯಾ, ಸೈಪ್ರಸ್, ಗ್ರೀಸ್, ಇಸ್ರೇಲ್ ಮತ್ತು ಅಮೆರಿಕ ನಿರ್ಣಯದ ವಿರುದ್ಧ ಮತ ಚಲಾಯಿಸಿದವು. ಸಮಾಲೋಚನೆಗಳಲ್ಲಿ ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ಕೊರತೆಯ ಬಗ್ಗೆ ಸೈಪ್ರಸ್ ಮತ್ತು ಗ್ರೀಸ್ ಸೇರಿದಂತೆ ಹಲವು ದೇಶಗಳೂ ಆಕ್ಷೇಪ ವ್ಯಕ್ತಪಡಿಸಿದವು.
ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ ರಾಯಭಾರಿ ಯೋಜನಾ ಪಟೇಲ್ ಅವರು ಈ ಕುರಿತು ಹೇಳಿಕೆ ನೀಡಿದರು. ನಿರ್ಣಯದ ಪ್ರಕ್ರಿಯೆಯಲ್ಲಿನ ಲೋಪಗಳು ಮತ್ತು ಅದರ ಉದ್ದೇಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಟರ್ಕಿಯ ಪಕ್ಷಪಾತದ ಧೋರಣೆಯನ್ನು ಟೀಕಿಸಿದರು.
ಸಮಾಲೋಚನೆಯಿಂದ ಭಾರತವನ್ನು ಹೊರಗಿಟ್ಟ ಟರ್ಕಿ: ತನಿಖೆಗೆ ಆಗ್ರಹ
ಭಾರತ ನಿರ್ಣಯದ ವಿರುದ್ಧ ಮತ ಚಲಾಯಿಸಲು ಅದರಲ್ಲಿರುವ ಅಂಶಗಳಷ್ಟೇ ಕಾರಣವಲ್ಲ; ಮಾತುಕತೆ ವೇಳೆ ನಿರ್ಣಯದ ಪ್ರಕ್ರಿಯೆಯನ್ನು ನಿರ್ವಹಿಸಿದ ರೀತಿಯೂ ಕಾರಣವಾಗಿದೆ ಎಂದು ಯೋಜನಾ ಪಟೇಲ್ ಹೇಳಿದರು.
ಟರ್ಕಿಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ನಿರ್ಣಯದ ಕರಡು ಪ್ರತಿಗಳನ್ನು ಹಂತ ಹಂತವಾಗಿ ಹಂಚುವಾಗ ಒಐಸಿಯ ಖಾಯಂ ವೀಕ್ಷಕ ನಿಯೋಗವು ಭಾರತದ ಪ್ರತಿನಿಧಿಗಳು ಸೇರಿದಂತೆ ಹಲವು ದೇಶಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿದೆ ಎಂದು ತಿಳಿಸಿದರು.
ಈ ಕ್ರಮವನ್ನು ಆಘಾತಕಾರಿ ಎಂದು ಬಣ್ಣಿಸಿದ ಅವರು, ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಕೆಲವು ಸದಸ್ಯ ರಾಷ್ಟ್ರಗಳನ್ನು ಸಮಾಲೋಚನೆಯಿಂದ ಹೊರಗಿಡಲು ಅವಕಾಶ ನೀಡಿದರೆ, ಬಹುಪಕ್ಷೀಯ ರಾಜತಾಂತ್ರಿಕತೆಯಲ್ಲಿ ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ ಎಂದು ಎಚ್ಚರಿಸಿದರು.
ನಂತರದ ಮಾತುಕತೆಗಳಲ್ಲಿಯೂ ಹಲವು ದೇಶಗಳು ಆಕ್ಷೇಪ ವ್ಯಕ್ತಪಡಿಸಿದರೂ, ನಿರ್ಣಯದ ಪ್ರಕ್ರಿಯೆಯನ್ನು ಮುನ್ನಡೆಸಿದವರು ಕೆಲವು ರಾಷ್ಟ್ರಗಳನ್ನು ಹೊರಗಿಡುವುದನ್ನು ಮುಂದುವರಿಸಿದರು ಎಂದು ಪಟೇಲ್ ಹೇಳಿದರು.
ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಾರತವು ವಿಶ್ವಸಂಸ್ಥೆಯ ಮಹಾಸಭೆಯ ಅಧ್ಯಕ್ಷರನ್ನು ಒತ್ತಾಯಿಸಿತು.
ಟರ್ಕಿಯ ದ್ವಂದ್ವ ನೀತಿಗೆ ಭಾರತದ ಟೀಕೆ
“ನಮ್ಮ ಆಕ್ಷೇಪಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದು ತಪ್ಪಾಗಿ ನಡೆದದ್ದಲ್ಲ, ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂಬುದನ್ನು ಸೂಚಿಸುತ್ತದೆ” ಎಂದು ಭಾರತೀಯ ರಾಜತಾಂತ್ರಿಕ ಅಧಿಕಾರಿ ಹೇಳಿದರು.
ಬಹುಪಕ್ಷೀಯ ಸಹಕಾರಕ್ಕೆ ಬದ್ಧತೆ ಇದೆ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುವ ಟರ್ಕಿ, ಮಾತುಕತೆಗಳ ಸಂದರ್ಭದಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಭಾರತ ಟೀಕಿಸಿತು.
ವಿಶ್ವಸಂಸ್ಥೆಯು ಸಾರ್ವಭೌಮ ಸಮಾನತೆ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಬಹುಪಕ್ಷೀಯ ಸಹಕಾರದ ತತ್ವಗಳ ಆಧಾರದ ಮೇಲೆ ಸ್ಥಾಪನೆಯಾಗಿದೆ ಎಂದು ಪಟೇಲ್ ಹೇಳಿದರು. ಸದಸ್ಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಸಹಜ ಭಾಗವಾಗಿವೆ. ಆದರೆ, ಈ ಭಿನ್ನಾಭಿಪ್ರಾಯಗಳನ್ನು ನೆಪವಾಗಿಟ್ಟುಕೊಂಡು ಮಹಾಸಭೆಯ ವಿಚಾರಗಳ ಕುರಿತ ಸಮಾಲೋಚನೆಯಿಂದ ಕೆಲವು ರಾಷ್ಟ್ರಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಡಬಾರದು ಎಂದು ಅವರು ಹೇಳಿದರು.
ಜಮ್ಮು-ಕಾಶ್ಮೀರ ವಿಚಾರದಲ್ಲಿ ಒಐಸಿ ಹಸ್ತಕ್ಷೇಪಕ್ಕೆ ಭಾರತದ ವಿರೋಧ
ಅಂತಾರಾಷ್ಟ್ರೀಯ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಒಐಸಿಯ ಪಾತ್ರವನ್ನು ವಿಸ್ತರಿಸುವ ನಿರ್ಣಯದ ಉದ್ದೇಶವನ್ನೂ ಭಾರತ ಪ್ರಶ್ನಿಸಿತು. ಒಐಸಿ ಪ್ರಾದೇಶಿಕ ಸಂಘಟನೆಯಲ್ಲದಿರುವಾಗ ಅದರ ಅಧಿಕಾರ ವ್ಯಾಪ್ತಿಯನ್ನು ಈ ರೀತಿ ವಿಸ್ತರಿಸುವ ಅಗತ್ಯವೇನು ಎಂದು ಪಟೇಲ್ ಪ್ರಶ್ನಿಸಿದರು.
ಜುಲೈ ತಿಂಗಳಲ್ಲಿ ಇಸ್ಲಾಮಾಬಾದ್ನಲ್ಲಿ ನಡೆದ ಒಐಸಿ ವಿದೇಶಾಂಗ ಸಚಿವರ ಸಮ್ಮೇಳನದ ಮಹಿಳಾ ಸಮಾವೇಶದ ಉಲ್ಲೇಖಗಳ ಬಗ್ಗೆಯೂ ಭಾರತ ಕಳವಳ ವ್ಯಕ್ತಪಡಿಸಿತು. ಆ ಸಮಾವೇಶದಲ್ಲಿ ಅಂಗೀಕರಿಸಲಾದ ಘೋಷಣೆಯಲ್ಲಿ ಜಮ್ಮು-ಕಾಶ್ಮೀರದ ಉಲ್ಲೇಖಗಳಿದ್ದವು. ಆ ಘೋಷಣೆಯನ್ನು ಭಾರತ ಬಲವಾಗಿ ವಿರೋಧಿಸಿತ್ತು.
ವಿಶ್ವಸಂಸ್ಥೆಯ ನಿರ್ಣಯದಲ್ಲಿ ಭಾರತದ ಬಗ್ಗೆ ಅನಗತ್ಯ ಮತ್ತು ವಾಸ್ತವಾಂಶಗಳಿಗೆ ವಿರುದ್ಧವಾದ ಹೇಳಿಕೆಗಳಿವೆ ಎಂದು ಪಟೇಲ್ ಹೇಳಿದರು. ಸೀಮಿತ ರಾಜಕೀಯ ಉದ್ದೇಶಗಳಿಗಾಗಿ ಒಐಸಿ ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಅವರು ತಿಳಿಸಿದರು.
“ಭಾರತದ ಆಂತರಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಒಐಸಿಗೆ ಯಾವುದೇ ಅಧಿಕಾರವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಭಾರತದ ವಿರುದ್ಧ ಒಐಸಿ ನಿರ್ಣಯಗಳ ಬಳಕೆಗೆ ಆಕ್ಷೇಪ
ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಭಾರತ, ತನ್ನ ವಿರುದ್ಧ ಒಐಸಿ ನಿರ್ಣಯಗಳನ್ನು ಪದೇಪದೇ ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಟೀಕಿಸಿತು. ಈ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಹೇಳಿತು.
“ಸುಳ್ಳು ಮತ್ತು ಆಧಾರರಹಿತ ಆರೋಪಗಳ ಮೂಲಕ ಭಾರತದ ವಿರುದ್ಧ ಒಐಸಿ ನಿರ್ಣಯಗಳು ಮತ್ತು ಘೋಷಣೆಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಒಂದು ಸದಸ್ಯ ರಾಷ್ಟ್ರವು ಒಐಸಿಯನ್ನು ಮತ್ತೊಮ್ಮೆ ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಿರುವುದಕ್ಕೆ ಭಾರತ ವಿಷಾದಿಸುತ್ತದೆ” ಎಂದು ಪಟೇಲ್ ಹೇಳಿದರು.
ವಸ್ತುನಿಷ್ಠತೆ, ರಚನಾತ್ಮಕ ಸಂವಾದ ಮತ್ತು ಪರಸ್ಪರ ಗೌರವವನ್ನು ಪಾಲಿಸುವಂತೆ ಒಐಸಿಗೆ ಕರೆ ನೀಡಿದ ಅವರು, ಅದರ ನಿರ್ಣಯಗಳು ಸೀಮಿತ ರಾಜಕೀಯ ಉದ್ದೇಶಗಳನ್ನು ಈಡೇರಿಸುವ ಸಾಧನಗಳಾಗಬಾರದು ಎಂದು ಎಚ್ಚರಿಸಿದರು.
ನಿರ್ದಿಷ್ಟ ಧಾರ್ಮಿಕ ಗುರುತನ್ನು ಹೊಂದಿರುವ ದೇಶಗಳೇ ಆ ಧರ್ಮದ ಅನುಯಾಯಿಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸಬೇಕು ಅಥವಾ ರಕ್ಷಿಸಬೇಕು ಎಂಬ ವಾದವನ್ನೂ ಭಾರತ ತಿರಸ್ಕರಿಸಿತು.
“ಧರ್ಮವನ್ನು ಲೆಕ್ಕಿಸದೆ ಸಾರ್ವಭೌಮ ರಾಷ್ಟ್ರಗಳು ತಮ್ಮ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುತ್ತವೆ ಎಂಬುದು ಭಾರತದ ನಿಲುವು. ಒಂದು ಧರ್ಮದ ಅನುಯಾಯಿಗಳ ಹಿತಾಸಕ್ತಿಗಳನ್ನು ಅದೇ ಧರ್ಮದವರು ಮಾತ್ರ ರಕ್ಷಿಸಬಲ್ಲರು ಎಂಬುದನ್ನು ನಾವು ಒಪ್ಪುವುದಿಲ್ಲ” ಎಂದು ಪಟೇಲ್ ಹೇಳಿದರು. ಇಂತಹ ಹಿಂದುಳಿದ ವಿಚಾರಗಳಿಗೆ ಸಮಕಾಲೀನ ಜಗತ್ತಿನಲ್ಲಿ ಸ್ಥಾನವಿಲ್ಲ ಎಂದೂ ಅವರು ತಿಳಿಸಿದರು.
ಇದೇ ವೇಳೆ, ಟರ್ಕಿಯ ಪಾರದರ್ಶಕತೆಯ ಕೊರತೆಯ ಬಗ್ಗೆ ಸೈಪ್ರಸ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಮಾಲೋಚನೆಗಳಲ್ಲಿ ಭಾಗವಹಿಸಲು ಹಲವು ಬಾರಿ ಮನವಿ ಮಾಡಿದರೂ ತಮ್ಮನ್ನು ಹೊರಗಿಡಲಾಗಿದೆ ಎಂದು ಅದು ತಿಳಿಸಿತು. ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳ ಭಾಗವಹಿಸುವಿಕೆ ವಿಶ್ವಸಂಸ್ಥೆಯ ಸನ್ನದು (UN Charter)ಯಲ್ಲಿ ಇರುವ ತತ್ವವೇ ಹೊರತು, ರಾಜಕೀಯ ನಿರ್ಧಾರಕ್ಕೆ ಬಿಟ್ಟ ವಿಚಾರವಲ್ಲ ಎಂದು ಸೈಪ್ರಸ್ ಹೇಳಿತು.
ಯುರೋಪಿಯನ್ ಒಕ್ಕೂಟವು ಸದ್ಭಾವನೆಯಿಂದ ಸಲ್ಲಿಸಿದ್ದ ಅಭಿಪ್ರಾಯಗಳನ್ನು ಅರ್ಥಪೂರ್ಣವಾಗಿ ಪರಿಗಣಿಸಿಲ್ಲ. ಅವುಗಳನ್ನು ತಿರಸ್ಕರಿಸಿದ್ದಕ್ಕೆ ಸೂಕ್ತ ವಿವರಣೆಯನ್ನೂ ನೀಡಿಲ್ಲ ಎಂದು ಗ್ರೀಸ್ ಕಳವಳ ವ್ಯಕ್ತಪಡಿಸಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
