ಇದು ಕೇವಲ ಒಂದು ಘೋಷಣೆಯಲ್ಲ, ಇದು ಒಂದು ನಿರ್ಮಾಣದ ಸೂತ್ರ. ದೇಶವನ್ನು ಕಟ್ಟುವುದು ಎಂದರೆ ಏನು ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸುವುದಾ, ಸಂಸತ್ತಿನಲ್ಲಿ ಕಾನೂನು ಮಾಡುವುದಾ ಬಜೆಟ್ ನಲ್ಲಿ ಸಾವಿರಾರು ಕೋಟಿ ಘೋಷಿಸುವುದಾ.ಅಲ್ಲ. ದೇಶ ಎಂದರೆ ಮಣ್ಣಲ್ಲ, ದೇಶ ಎಂದರೆ ಮನುಷ್ಯ. ಮನುಷ್ಯರನ್ನು ಕಟ್ಟಿದರೆ ದೇಶ ತಾನಾಗಿಯೇ ಕಟ್ಟಲ್ಪಡುತ್ತದೆ. ಮನುಷ್ಯರನ್ನು ಕಟ್ಟುವುದು ಎಂದರೆ ಕಟ್ಟಡ ಕಟ್ಟಿದಂತೆ ಇಟ್ಟಿಗೆ ಜೋಡಿಸುವುದಲ್ಲ, ಅದು ಮೌಲ್ಯದಿಂದ ಹೃದಯವನ್ನು ಕಟ್ಟುವುದು.
ಮೌಲ್ಯದಿಂದ ಮನುಷ್ಯ ಹೇಗೆ ಕಟ್ಟಲ್ಪಡುತ್ತಾನೆ. ಒಬ್ಬ ಮನುಷ್ಯನಿಗೆ ಎರಡು ಜನ್ಮಗಳಿವೆ. ಒಂದು ತಾಯಿಯ ಹೊಟ್ಟೆಯಿಂದ ಹೊರಬರುವ ಜನ್ಮ. ಇನ್ನೊಂದು ಮೌಲ್ಯದಿಂದ ಮನುಷ್ಯನಾಗುವ ಜನ್ಮ. ಮೊದಲ ಜನ್ಮ ಪ್ರಾಣಿ ಮಾಡುತ್ತದೆ, ಎರಡನೇ ಜನ್ಮ ಮೌಲ್ಯ ಮಾಡುತ್ತದೆ.ಮೌಲ್ಯವಿಲ್ಲದ ಮನುಷ್ಯ ಹೇಗೆ, ಎಂಜಿನ್ ಇಲ್ಲದ ಕಾರಿನಂತೆ. ನೋಡಲು ಕಾರು, ಆದರೆ ಓಡುವುದಿಲ್ಲ. ಡಿಗ್ರಿ ಇದೆ, ಹಣ ಇದೆ, ಅಧಿಕಾರ ಇದೆ, ಆದರೆ ಮನುಷ್ಯತ್ವ ಇಲ್ಲ. ಮೌಲ್ಯದಿಂದ ಮನುಷ್ಯ ಕಟ್ಟುವುದು ಎಂದರೆ ಅಡಿಪಾಯದಲ್ಲಿ ಸತ್ಯ ಇಡುವುದು ಸತ್ಯವಿಲ್ಲದ ಮನುಷ್ಯ ಮರಳಿನ ಮೇಲೆ ಕಟ್ಟಿದ ಮನೆಯಂತೆ. ಸ್ವಲ್ಪ ಗಾಳಿ ಬಂದರೆ ಬೀಳುತ್ತದೆ. ಸತ್ಯವಂತ ಮನುಷ್ಯನ ಮಾತಿಗೆ ಬೆಲೆ ಇರುತ್ತದೆ, ಅವನ ಮೌನಕ್ಕೂ ಬೆಲೆ ಇರುತ್ತದೆ. ಗೋಡೆಗಳಾಗಿ ಶಿಸ್ತು ಕಟ್ಟುವುದು ಶಿಸ್ತು ಎಂದರೆ ಮಿಲಿಟರಿ ಶಿಸ್ತು ಅಲ್ಲ. ಬೆಳಿಗ್ಗೆ ಏಳುವ ಶಿಸ್ತು, ಮಾತು ಉಳಿಸಿಕೊಳ್ಳುವ ಶಿಸ್ತು, ಸಮಯಕ್ಕೆ ಬರುವ ಶಿಸ್ತು. ಶಿಸ್ತು ಇರುವ ಮನುಷ್ಯನನ್ನು ನಂಬಬಹುದು. ಮೇಲ್ಛಾವಣಿಯಾಗಿ ಕರುಣೆ ಹಾಕುವುದು ಕರುಣೆ ಇಲ್ಲದ ಮನುಷ್ಯನ ಬದುಕು ಎಸಿ ಇಲ್ಲದ ಮನೆಯಂತೆ. ಎಲ್ಲ ಐಷಾರಾಮಿ ಇದೆ, ಆದರೆ ಬದುಕಲು ಆಗುವುದಿಲ್ಲ. ಹಸಿದವನನ್ನು ನೋಡಿ ಕರಗುವ ಹೃದಯ, ಬಿದ್ದವನನ್ನು ಎತ್ತುವ ಕೈ – ಇದೇ ಕರುಣೆ. ಕಿಟಕಿಯಾಗಿ ಪ್ರಾಮಾಣಿಕತೆ ಇಡುವುದು ಪ್ರಾಮಾಣಿಕ ಮನುಷ್ಯನ ಮನೆಯಲ್ಲಿ ಗಾಳಿ, ಬೆಳಕು ಚೆನ್ನಾಗಿ ಬರುತ್ತದೆ. ಅವನಿಗೆ ಯಾರಿಗೂ ಹೆದರಬೇಕಿಲ್ಲ, ಯಾರ ಮುಂದೆಯೂ ತಲೆ ತಗ್ಗಿಸಬೇಕಿಲ್ಲ.ಇಂತಹ ಮನುಷ್ಯನನ್ನು ಮೌಲ್ಯ ಕಟ್ಟುತ್ತದೆ. ಅಂತಹ ಮನುಷ್ಯನಿಂದ ದೇಶ ಕಟ್ಟಲ್ಪಡುತ್ತದೆ.
ಮನುಷ್ಯರಿಂದ ದೇಶ ಹೇಗೆ ಕಟ್ಟಲ್ಪಡುತ್ತದೆ. ನಾವು ತಪ್ಪು ಲೆಕ್ಕ ಹಾಕುತ್ತೇವೆ. ದೇಶ ಕಟ್ಟಲು ದೊಡ್ಡ ಯೋಜನೆ ಬೇಕು ಎಂದು. ಇಲ್ಲ, ದೇಶ ಕಟ್ಟಲು ದೊಡ್ಡ ಮನುಷ್ಯರು ಬೇಕು. ಒಬ್ಬ ಪ್ರಾಮಾಣಿಕ ಶಿಕ್ಷಕ ಒಂದು ತರಗತಿಯನ್ನು ಕಟ್ಟುತ್ತಾನೆ. ಆ ತರಗತಿಯಿಂದ ನೂರು ಪ್ರಾಮಾಣಿಕ ನಾಗರಿಕರು ಹುಟ್ಟುತ್ತಾರೆ. ಒಬ್ಬ ಪ್ರಾಮಾಣಿಕ ಡಾಕ್ಟರ್ ಒಂದು ಆಸ್ಪತ್ರೆಯನ್ನು ಕಟ್ಟುತ್ತಾನೆ. ಆ ಆಸ್ಪತ್ರೆಯಿಂದ ಸಾವಿರಾರು ಜೀವಗಳು ಉಳಿಯುತ್ತವೆ.
ಒಬ್ಬ ಪ್ರಾಮಾಣಿಕ ರೈತ ಒಂದು ಹೊಲವನ್ನು ಕಟ್ಟುತ್ತಾನೆ. ಆ ಹೊಲದಿಂದ ಲಕ್ಷಾಂತರ ಹೊಟ್ಟೆಗಳು ತುಂಬುತ್ತವೆ. ಒಬ್ಬ ಪ್ರಾಮಾಣಿಕ ಯೋಧ ಒಂದು ಗಡಿಯನ್ನು ಕಟ್ಟುತ್ತಾನೆ. ಆ ಗಡಿಯಿಂದ ಇಡೀ ದೇಶ ಸುರಕ್ಷಿತವಾಗಿರುತ್ತದೆ.ಒಬ್ಬ ಪ್ರಾಮಾಣಿಕ ತಾಯಿ ಒಂದು ಮನೆಯನ್ನು ಕಟ್ಟುತ್ತಾಳೆ. ಆ ಮನೆಯಿಂದ ಇಡೀ ಸಂಸ್ಕೃತಿ ಉಳಿಯುತ್ತದೆ. ದೊಡ್ಡ ದೊಡ್ಡ ಕಟ್ಟಡಗಳಲ್ಲ, ದೊಡ್ಡ ದೊಡ್ಡ ಮನುಷ್ಯರು.ಇಂದು ದೇಶದಲ್ಲಿ ಏನು ಕೊರತೆ ಇದೆ, ರಸ್ತೆ ಇಲ್ಲವೇ, ಬಿಲ್ಡಿಂಗ್ ಇಲ್ಲವೇ, ಟೆಕ್ನಾಲಜಿ ಇಲ್ಲವೇ, ಎಲ್ಲ ಇದೆ. ಕೊರತೆ ಇರುವುದು ಮನುಷ್ಯರಲ್ಲಿ. ಕಾಂಟ್ರಾಕ್ಟರ್ ರಸ್ತೆಯಲ್ಲಿ ಮಣ್ಣು ಬೆರೆಸುತ್ತಾನೆ, ಅಧಿಕಾರಿ ಫೈಲ್ ಗೆ ಲಂಚ ಕೇಳುತ್ತಾನೆ, ವ್ಯಾಪಾರಿ ಹಾಲಿಗೆ ನೀರು ಬೆರೆಸುತ್ತಾನೆ. ಇಲ್ಲಿ ರಸ್ತೆ ಸಮಸ್ಯೆಯಲ್ಲ, ಮನುಷ್ಯನ ಮೌಲ್ಯ ಸಮಸ್ಯೆ.ಮೌಲ್ಯವಂತ ಮನುಷ್ಯನಿಗೆ ಕಾನೂನು ಬೇಕಿಲ್ಲ. ಅವನು ಕಾನೂನು ಇಲ್ಲದಿದ್ದರೂ ಸರಿಯಾಗಿ ನಡೆಯುತ್ತಾನೆ. ಮೌಲ್ಯವಿಲ್ಲದ ಮನುಷ್ಯನಿಗೆ ಸಾವಿರ ಕಾನೂನು ಮಾಡಿದರೂ ಪ್ರಯೋಜನವಿಲ್ಲ. ಅವನು ಕಾನೂನಿನಲ್ಲೇ ರಂಧ್ರ ಹುಡುಕುತ್ತಾನೆ.ಅದಕ್ಕೆ ದೇಶವನ್ನು ಪಾರ್ಲಿಮೆಂಟ್ ನಲ್ಲಿ ಕಟ್ಟಲು ಆಗುವುದಿಲ್ಲ, ತರಗತಿಯಲ್ಲಿ, ಮನೆಯಲ್ಲಿ, ಮನಸ್ಸಿನಲ್ಲಿ ಕಟ್ಟಬೇಕು.
ನಾವು ಮಾಡಬಹುದಾ ಮೂರು ಪ್ರತಿಜ್ಞೆ. ಈ ಘೋಷಣೆಯನ್ನು ಬರೀ ಗೋಡೆಯ ಮೇಲೆ ಬರೆಯಬಾರದು, ಬದುಕಿನಲ್ಲಿ ಬರೆಯಬೇಕು.
- ನಾನು ಮೊದಲು ಮನುಷ್ಯನಾಗುತ್ತೇನೆ.
ನಾನು ಡಾಕ್ಟರ್, ಇಂಜಿನಿಯರ್, ಐಎಎಸ್, ರೈತ, ಏನೇ ಆಗಿರಲಿ, ಮೊದಲು ಒಳ್ಳೆಯ ಮನುಷ್ಯನಾಗುತ್ತೇನೆ. ದಿನಕ್ಕೆ ಒಂದು ಸತ್ಯ, ದಿನಕ್ಕೆ ಒಂದು ಸಹಾಯ, ದಿನಕ್ಕೆ ಒಂದು ಕ್ಷಮೆ. ಇದರಿಂದ ನಾನು ಕಟ್ಟಲ್ಪಡುತ್ತೇನೆ. - ನನ್ನ ಮುಂದಿನ ಪೀಳಿಗೆಯನ್ನು ಮೌಲ್ಯದಿಂದ ಕಟ್ಟುತ್ತೇನೆ.ನನ್ನ ಮಗುವಿಗೆ ನಾನು ಬೈಕ್ ಕೊಡುವ ಮೊದಲು ನಡತೆ ಕೊಡುತ್ತೇನೆ, ಮೊಬೈಲ್ ಕೊಡುವ ಮೊದಲು ಮೌಲ್ಯ ಕೊಡುತ್ತೇನೆ. “ಎಷ್ಟು ಮಾರ್ಕ್ಸ್ ತೆಗೆದ್ದೆ?” ಎಂದು ಕೇಳುವ ಮೊದಲು “ಇಂದು ಯಾರಿಗೆ ಸಹಾಯ ಮಾಡಿದೆ?” ಎಂದು ಕೇಳುತ್ತೇನೆ.
3 .ನನ್ನ ಕೆಲಸವೇ ದೇಶಸೇವೆ ಎಂದು ತಿಳಿಯುತ್ತೇನೆ.
ದೇಶಸೇವೆ ಎಂದರೆ ಗಡಿಗೆ ಹೋಗುವುದು ಮಾತ್ರವಲ್ಲ. ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದೇ ದೇಶಸೇವೆ. ಶಿಕ್ಷಕನಾಗಿ ಮಕ್ಕಳಿಗೆ ಮೋಸ ಮಾಡದೆ ಪಾಠ ಮಾಡಿದರೆ ಅದು ದೇಶಸೇವೆ. ರೈತನಾಗಿ ವಿಷ ಬೆರೆಸದೆ ಬೆಳೆ ಬೆಳೆದರೆ ಅದು ದೇಶಸೇವೆ. ಅಂಗಡಿಯವನಾಗಿ ಕಡಿಮೆ ತೂಕ ಮಾಡದೆ ವ್ಯಾಪಾರ ಮಾಡಿದರೆ ಅದು ದೇಶಸೇವೆ.
ಒಂದು ಇಟ್ಟಿಗೆಗೆ ಮೌಲ್ಯವಿಲ್ಲ, ಆದರೆ ಆ ಇಟ್ಟಿಗೆಗಳಿಂದಲೇ ದೇವಸ್ಥಾನ ಕಟ್ಟಲ್ಪಡುತ್ತದೆ. ಒಬ್ಬ ಮನುಷ್ಯ ಚಿಕ್ಕವನು ಎಂದುಕೊಳ್ಳಬೇಡ. ಒಬ್ಬ ಮೌಲ್ಯವಂತ ಮನುಷ್ಯನಿಂದಲೇ ಇತಿಹಾಸ ಬದಲಾಗುತ್ತದೆ.ಬುದ್ಧ ಒಬ್ಬ ಮನುಷ್ಯ, ಬಸವಣ್ಣ ಒಬ್ಬ ಮನುಷ್ಯ, ಗಾಂಧಿ ಒಬ್ಬ ಮನುಷ್ಯ, ಅಂಬೇಡ್ಕರ್ ಒಬ್ಬ ಮನುಷ್ಯ, ದೀಪೆಂದ್ರ ಸಿಂಗ್ ಸೆನಗರ್ ಒಬ್ಬ ಮನುಷ್ಯ, ಸಾನಿಯಾ ಸೀರ್ವಿ ಒಬ್ಬ ಮನುಷ್ಯ. ಅವರು ದೇಶವನ್ನು ಕಟ್ಟಿದರು, ಏಕೆಂದರೆ ಅವರು ಮೊದಲು ಮೌಲ್ಯದಿಂದ ತಮ್ಮನ್ನು ಕಟ್ಟಿಕೊಂಡಿದ್ದರು.ನಾವು ಇಟ್ಟಿಗೆಯನ್ನು ದೂರುತ್ತಾ ಕೂರಬಾರದು, ನಾವು ದೇವಸ್ಥಾನವನ್ನು ಕಟ್ಟಲು ಶುರು ಮಾಡಬೇಕು. ಇಂದಿನಿಂದ ಶುರು ಮಾಡೋಣ.ನನ್ನಿಂದಲೇ ಶುರು, ಇಂದಿನಿಂದಲೇ ಶುರು.ಮೌಲ್ಯದಿಂದ ಮನುಷ್ಯರನ್ನು ಕಟ್ಟೋಣ, ಮನುಷ್ಯರಿಂದ ದೇಶವನ್ನು ಕಟ್ಟೋಣ.
- ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
