ಸಂಸ್ಥಾಪಕರು: ಶ್ರೀ ಅಮ್ಮೇಂಬಳ್ ಸುಬ್ಬರಾವ್ ಪೈ
ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಬ್ಯಾಂಕರ್, ಹೃದಯದಲ್ಲಿ ಮಾನವತಾವಾದಿ, ಸೇವೆಯಲ್ಲಿ ದಾನಶೂರರು, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಸುಧಾರಣೆಯಲ್ಲಿ ಮುಂಚೂಣಿಯಲ್ಲಿದ್ದ ಮಹಾನ್ ವ್ಯಕ್ತಿತ್ವವೇ ಕೆನರಾ ಬ್ಯಾಂಕಿನ ಸಂಸ್ಥಾಪಕರಾದ ಶ್ರೀ ಅಮ್ಮೇಂಬಳ್ ಸುಬ್ಬರಾವ್ ಪೈ.
1852ರ ನವೆಂಬರ್ 19ರಂದು ಮಂಗಳೂರಿನ ಸಮೀಪದ ಮುಲ್ಕಿಯಲ್ಲಿ ಜನಿಸಿದ ಸುಬ್ಬರಾವ್ ಪೈ ಅವರು ಸ್ವಾತಂತ್ರ್ಯಪೂರ್ವ ಭಾರತದ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಭದ್ರ ಬುನಾದಿ ಹಾಕಿದ ದಾರ್ಶನಿಕರಲ್ಲಿ ಒಬ್ಬರು. ಬಾಲ್ಯದಲ್ಲಿ ಆಟೋಟಗಳಲ್ಲಿ ಆಸಕ್ತಿ ಹೊಂದಿದ್ದ, ತುಂಟತನದ ಸ್ವಭಾವದವರಾಗಿದ್ದ ಅವರು ಹಿರಿಯರ ಬಗ್ಗೆ ಅಪಾರ ಗೌರವ ಮತ್ತು ತಂದೆಯ ಬಗ್ಗೆ ಭಕ್ತಿಭಾವ ಹೊಂದಿದ್ದರು. ಸರಳ ಜೀವನ, ಉನ್ನತ ಚಿಂತನೆ ಅವರ ಬದುಕಿನ ಆದರ್ಶವಾಗಿತ್ತು. ಕನ್ನಡ, ಕೊಂಕಣಿ, ತುಳು, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯ ಹೊಂದಿದ್ದ ಅವರು, ಕಾನೂನು ವೃತ್ತಿಯಲ್ಲಿ ತರ್ಕಬದ್ಧವಾದ ವಾದ ಮಂಡನೆ ಹಾಗೂ ವಿಷಯದ ಆಳವಾದ ತಿಳಿವಳಿಕೆಯಿಂದ ನ್ಯಾಯಾಧೀಶರು ಮತ್ತು ಕಕ್ಷಿದಾರರ ಮೆಚ್ಚುಗೆ ಗಳಿಸಿದ್ದರು.
ರೋಮನ್ ವಿದ್ವಾಂಸ ಸಿಸೆರೋ, “ಮೃತರ ಜೀವನವು ಜೀವಂತ ಜನರ ನೆನಪುಗಳಲ್ಲಿ ನೆಲೆಸಿರುತ್ತದೆ” ಎಂದು ಹೇಳಿದ್ದಾರೆ. ಶ್ರೀ ಅಮ್ಮೇಂಬಳ್ ಸುಬ್ಬರಾವ್ ಪೈ ಅವರ ಸಾಧನೆಗಳು ಬ್ಯಾಂಕಿನ ಇತಿಹಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಬಿತ್ತಿದ ಬೀಜ ಇಂದು ಬೃಹತ್ ವೃಕ್ಷವಾಗಿ ಬೆಳೆದು ಶಿಕ್ಷಣ, ಉದ್ಯೋಗ, ಆರ್ಥಿಕ ನೆರವು ಹಾಗೂ ಗ್ರಾಮೀಣ ಮತ್ತು ಸಮುದಾಯ ಅಭಿವೃದ್ಧಿಯ ಮೂಲಕ ಕೋಟ್ಯಂತರ ಜನರಿಗೆ ನೆರಳಾಗಿದೆ. “ಕೆನರಾ ಬ್ಯಾಂಕ್ ಜನರ ಬ್ಯಾಂಕ್” ಎಂಬ ಸಂಸ್ಥಾಪಕರ ಆಶಯವನ್ನು ಸಾಕಾರಗೊಳಿಸುತ್ತಾ, ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಬ್ಯಾಂಕ್ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದೆ.
ತೀವ್ರವಾದ ಗೌಟ್ ಕಾಯಿಲೆಯಿಂದ ಬಳಲುತ್ತಿದ್ದರೂ ಸಮಾಜಸೇವೆಯ ಸಂಕಲ್ಪದಿಂದ ಹಿಂದೆ ಸರಿಯದ ಅವರು 1909ರ ಜುಲೈ 25ರಂದು ಇಹಲೋಕ ತ್ಯಜಿಸಿದರು. ಅವರ ಆಪ್ತ ಸಹವರ್ತಿ ಕಸ್ತೂರಿ ಸುಬ್ಬರಾವ್ ಪೈ ಅವರು ಸಂತಾಪ ಸಂದೇಶದಲ್ಲಿ, “ಅವರು ನಿಮ್ಮ ಕುಟುಂಬಕ್ಕೆ ಮಾತ್ರ ಸೇರಿದವರಲ್ಲ; ನಮ್ಮೆಲ್ಲರಿಗೂ ಸೇರಿದವರು” ಎಂದು ಹೇಳಿದ್ದು ಅವರ ವ್ಯಕ್ತಿತ್ವದ ಮಹತ್ವವನ್ನು ಸಾರುತ್ತದೆ.
ಅವರ ಚಿಂತನೆ ಕೇವಲ ವೃತ್ತಿ ಮತ್ತು ವೈಯಕ್ತಿಕ ಸಾಧನೆಗಳಿಗೆ ಸೀಮಿತವಾಗಿರಲಿಲ್ಲ. ಸಮಾಜದ ಜನರಲ್ಲಿ ಶಿಕ್ಷಣದ ಬಗ್ಗೆ ಇದ್ದ ನಿರಾಸಕ್ತಿ ಮತ್ತು ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಅಂದಿನ ಸಮಾಜದಲ್ಲಿದ್ದ ಹಿಂಜರಿಕೆಯನ್ನು ಕಂಡು ಅವರು ಕಳವಳಗೊಂಡಿದ್ದರು. ಶಿಕ್ಷಣವೇ ಸಮಾಜದ ಪ್ರಗತಿಯ ಮೂಲಮಂತ್ರವೆಂದು ಅರಿತ ಅವರು, ತಮ್ಮ ವೃತ್ತಿಯ ಜೊತೆಗೆ ಸಂಜೆಯ ಸಮಯವನ್ನು ಸಂಪೂರ್ಣವಾಗಿ ಸಮಾಜಸೇವೆಗೆ ಮೀಸಲಿಟ್ಟರು. ಇದರ ಫಲವಾಗಿ 1891ರಲ್ಲಿ ಮಂಗಳೂರಿನಲ್ಲಿ ಕೆನರಾ ಹೈಸ್ಕೂಲ್ ಸ್ಥಾಪಿಸಿದರು. 1894ರಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೆನರಾ ಗರ್ಲ್ಸ್ ಹೈಸ್ಕೂಲ್ ಆರಂಭಿಸಿದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಮಾಜದಲ್ಲಿ ಹೆಚ್ಚಿನ ಮಾನ್ಯತೆ ಇಲ್ಲದಿದ್ದ ಕಾಲದಲ್ಲಿ ಇದು ಅತ್ಯಂತ ಕ್ರಾಂತಿಕಾರಕ ಹೆಜ್ಜೆಯಾಗಿತ್ತು.
ಜನರ ಉಳಿತಾಯಕ್ಕೆ ಸುರಕ್ಷತೆ ಒದಗಿಸುವುದರ ಜೊತೆಗೆ, ಅವರ ಆರ್ಥಿಕ ಸ್ವಾವಲಂಬನೆಗೆ ನೆರವಾಗುವ ಸ್ವದೇಶಿ ಬ್ಯಾಂಕಿಂಗ್ ಸಂಸ್ಥೆಯ ಅಗತ್ಯವನ್ನು ಮನಗಂಡರು. ಅಂದು ಲೇವಾದೇವಿದಾರರು ರೈತರು, ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಜನರಿಂದ ಶೇ.50ಕ್ಕಿಂತಲೂ ಅಧಿಕ ಬಡ್ಡಿ ವಸೂಲಿ ಮಾಡಿ ಶೋಷಿಸುತ್ತಿದ್ದುದನ್ನು ಅವರು ಗಮನಿಸಿದರು. ಸಮಸ್ಯೆಗೆ ಸಮಾಧಾನರೂಪದಲ್ಲಿ 1906ರ ಜುಲೈನಲ್ಲಿ ಮಂಗಳೂರಿನಲ್ಲಿ ಕೆನರಾ ಹಿಂದೂ ಪರ್ಮನೆಂಟ್ ಫಂಡ್ ಲಿಮಿಟೆಡ್ ಸ್ಥಾಪಿಸಿದರು. ಮುಂದೆ ಇದೇ ಸಂಸ್ಥೆ ಕೆನರಾ ಬ್ಯಾಂಕ್ ಆಗಿ ಬೆಳೆದು ರಾಷ್ಟ್ರಮಟ್ಟದ ಪ್ರಮುಖ ಬ್ಯಾಂಕ್ ಆಗಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವರ ದೂರದೃಷ್ಟಿಯನ್ನು ನೆನಪಿಸುತ್ತದೆ.
ಸಮುದಾಯದ ಸಂಪನ್ಮೂಲಗಳನ್ನು ಸಮುದಾಯದ ಅಭಿವೃದ್ಧಿಗಾಗಿಯೇ ಬಳಸುವ ಮೂಲಕ ಸ್ವಾವಲಂಬನೆಯ ಹೊಸ ಮಾರ್ಗವನ್ನು ಅವರು ತೆರೆದರು. ಇದು ಕೇವಲ ಬ್ಯಾಂಕಿನ ಸ್ಥಾಪನೆಯಲ್ಲ; ಭಾರತದ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾನ್ಯ ಜನರ ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ಇಟ್ಟ ಧೀಮಂತ ಹೆಜ್ಜೆಯಾಗಿತ್ತು. ಇಂದು ಶತಮಾನಕ್ಕೂ ಮೀರಿದ ಇತಿಹಾಸದಲ್ಲಿ ಅನೇಕ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ವಿಲೀನಗೊಂಡಿದ್ದರೂ, ಕರ್ನಾಟಕದಲ್ಲಿ ತನ್ನ ಮೂಲ ಹೆಸರನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವ ಕೆನರಾ ಬ್ಯಾಂಕಿನ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡಬಹುದು. ಕವಿ ಚೆನ್ನವೀರ ಕಣವಿ ಅವರ “ವಿಶ್ವಭಾರತಿಗೆ ಕನ್ನಡದ ಆರತಿ” ಎಂಬ ಕಾವ್ಯಭಾವದಂತೆ, ಕನ್ನಡಿಗರ ಕೊಡುಗೆ ಭಾರತವನ್ನು ವಿಶ್ವಮಟ್ಟದಲ್ಲಿ ಬೆಳಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕೆನರಾ ಬ್ಯಾಂಕಿನ ಸಾಧನೆಯೂ ಅಂತಹದ್ದೇ ಒಂದು ಕೊಡುಗೆ.
ಸಶಕ್ತ, ಸ್ವಾವಲಂಬಿ, ಸ್ವಾಭಿಮಾನಿ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಕೆನರಾ ಬ್ಯಾಂಕ್ ಇನ್ನಷ್ಟು ಮಹತ್ವದ ಪಾತ್ರ ವಹಿಸಲಿ ಎಂದು ಹಾರೈಸುತ್ತ, ಸಂಸ್ಥಾಪಕರ ಆದರ್ಶ ಮತ್ತು ಮೌಲ್ಯಗಳನ್ನು ಸ್ಮರಿಸುತ್ತಾ, ಸಂಸ್ಥಾಪಕರ ದಿನದ ಶುಭ ಸಂದರ್ಭದಲ್ಲಿ ನಾವೆಲ್ಲರೂ ಅವರಿಗೆ ನಮ್ಮ ಶ್ರದ್ಧಾ ಸುಮನ ಸಲ್ಲಿಸೋಣ.
ಭಾರತ ಮಾತೆಗೆ ಜಯವಾಗಲಿ!
- ಮಹಾದೇವಯ್ಯ ಕರದಳ್ಳಿ.
ಓಂ ನಗರ, ಕಲಬುರಗಿ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
