ಕಲಬುರಗಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನವನ್ನು ನವೆಂಬರ್ 25ರಂದು ಎಲ್ಲೆಡೆ ‘ಸೇವಾ ದಿನ’ವನ್ನಾಗಿ ಆಚರಿಸುವ ಮೂಲಕ ಅರ್ಥಪೂರ್ಣಗೊಳಿಸಲಾಗಿದೆ. ಮನುಷ್ಯನ ಬದುಕಿನ ಸಾರ್ಥಕತೆ ಸೇವೆಯ ಬಾಳಿನಲ್ಲಿ ನೆಲೆಗೊಂಡಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.
ಕಲಬುರಗಿಯ ಕೋಟನೂರ ಡಿ ಗ್ರಾಮದ ಯಲ್ಲಾಲಿಂಗ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಯಲ್ಲಾಲಿಂಗ ನಿರ್ಗತಿಕ ಮಕ್ಕಳ ಕುಟೀರದಲ್ಲಿ ನವೆಂಬರ್ 25ರಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಹಣ್ಣುಹಂಪಲು ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಸದಾನಂದ ಪೆರ್ಲ, ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬದುಕನ್ನು ಸೇವೆಗಾಗಿ ಮೀಸಲಿಟ್ಟಿದ್ದಾರೆ. ಪ್ರಧಾನಮಂತ್ರಿ ಕಚೇರಿಯನ್ನು ‘ಸೇವಾ ತೀರ್ಥ’ ಎಂದು ಕರೆದಿರುವ ಅವರು, ರಾಷ್ಟ್ರಕ್ಕಾಗಿ ದಿನಕ್ಕೆ 20 ಗಂಟೆಗಳಷ್ಟು ಸೇವೆ ಸಲ್ಲಿಸುತ್ತಿದ್ದು ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನೇಕ ಸೇವಾ ಯೋಜನೆಗಳನ್ನು ಆರಂಭಿಸಿದ್ದಾರೆ. ಇಡೀ ರಾಜ್ಯದಲ್ಲಿ ‘ಜನಸೇವೆಯೇ ಜನಾರ್ದನ ಸೇವೆ’ ಎಂಬ ಧ್ಯೇಯದೊಂದಿಗೆ ಶೋಷಿತರು, ದೀನದಲಿತರು, ಬಡವರು ಹಾಗೂ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಮತ್ತು ಅವರಿಗೆ ನೆರವು ನೀಡುವ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಜನ್ಮದಿನವನ್ನು ಸೇವಾ ದಿನವಾಗಿ ಘೋಷಿಸಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಡಾ. ಪೆರ್ಲ ಹೇಳಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ದಿನೇಶ್ ಪೂಜಾರಿ, ಜನಜಾಗೃತಿಯ ಜಿಲ್ಲಾಧ್ಯಕ್ಷರಾದ ಸಿ.ಎನ್. ಬಾಬಳಗಾಂವ್, ಯೋಜನೆಯ ಜಿಲ್ಲಾ ನಿರ್ದೇಶಕರಾದ ಗಣಪತಿ ಮಳಿಂಜೆ, ಯೋಜನಾಧಿಕಾರಿ ಸಂಗಪ್ಪ ಸಂಗಳದ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸರೋಜಾ ಶಂಕರಯ್ಯ ಹಿರೇಮಠ, ಶಾಲೆಯ ಅಧ್ಯಕ್ಷ ಶರಣಪ್ಪ ಕೆ. ಗೋಟೂರ ಹಾಗೂ ಶಿಕ್ಷಕರಾದ ಭಾಗ್ಯಶ್ರೀ, ಅಶ್ವಿನಿ, ಪದ್ಮಾವತಿ ಮತ್ತು ಸ್ವಾತಿ ಶರಣಪ್ಪ ಉಪಸ್ಥಿತರಿದ್ದರು.
ಸೇವಾ ದಿನದ ಅಂಗವಾಗಿ ಕಲಬುರಗಿ ನಗರದ ವಿವಿಧೆಡೆ ಇರುವ ವೃದ್ಧಾಶ್ರಮಗಳು ಮತ್ತು ನಿರ್ಗತಿಕರ ಕೇಂದ್ರಗಳಲ್ಲಿ ಹಣ್ಣುಹಂಪಲು ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
