“ಅಲ್ಲಾಹನಿಗಾಗಿ ಕೊಲ್ಲುತ್ತೇನೆ” ಎಂದಿದ್ದ 13 ವರ್ಷದ ಬಾಲಕ; ಉಗ್ರ ಸಂಘಟನೆಗಳ ಪ್ರಭಾವವಿತ್ತು ಎಂಬ ಆರೋಪ
ಬ್ರಿಟನ್: ಲಂಡನ್ನ ವಾಯವ್ಯ ಭಾಗದಲ್ಲಿರುವ ಕಿಂಗ್ಸ್ಬರಿ ಹೈಸ್ಕೂಲ್ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದಿದ್ದ 13 ವರ್ಷದ ಬಾಲಕನ ವಿಚಾರಣೆ ನವೆಂಬರ್ 24ರಂದು ಓಲ್ಡ್ ಬೈಲಿ ನ್ಯಾಯಾಲಯದಲ್ಲಿ ಆರಂಭವಾಗಿದೆ. ದಾಳಿ ನಡೆಸಿದ ಬಳಿಕ ಮೊಬೈಲ್ ಕ್ಯಾಮೆರಾ ಮುಂದೆ “ನಾನು ಅಲ್ಲಾಹನಿಗಾಗಿ ಕೊಲ್ಲುತ್ತೇನೆ” ಎಂದು ಬಾಲಕ ಹೇಳಿದ್ದ ಎಂದು ನ್ಯಾಯಾಲಯದಲ್ಲಿ ತಿಳಿಸಲಾಗಿದೆ.
ಈಗ 14 ವರ್ಷದವನಾಗಿರುವ ಬಾಲಕನ ಹೆಸರನ್ನು ಕಾನೂನಿನ ಕಾರಣದಿಂದ ಬಹಿರಂಗಪಡಿಸುವಂತಿಲ್ಲ. ತನ್ನ ಮೇಲಿರುವ ಕೊಲೆ ಯತ್ನದ ಎರಡು ಆರೋಪಗಳನ್ನು ಆತ ನಿರಾಕರಿಸಿದ್ದಾನೆ. ಆದರೆ, ಇಬ್ಬರು ವಿದ್ಯಾರ್ಥಿಗಳ ಮೇಲೆ ಭಯೋತ್ಪಾದಕ ಉದ್ದೇಶದಿಂದ ದಾಳಿ ನಡೆಸಿದ್ದಾನೆ ಎಂದು ಸರ್ಕಾರಿ ಅಭಿಯೋಜಕರು ಆರೋಪಿಸಿದ್ದಾರೆ.
ಈ ಘಟನೆ ಫೆಬ್ರವರಿ 10ರಂದು ಬ್ರೆಂಟ್ನಲ್ಲಿರುವ ಶಾಲೆಯಲ್ಲಿ ನಡೆದಿತ್ತು. ದುರ್ವರ್ತನೆಯ ಕಾರಣದಿಂದ ಬಾಲಕನನ್ನು ಅದಕ್ಕೂ ಮುನ್ನವೇ ಶಾಲೆಯಿಂದ ಹೊರಹಾಕಲಾಗಿತ್ತು. ಹೀಗಾಗಿ, ದಾಳಿ ನಡೆದ ದಿನ ಆತ ಆ ಶಾಲೆಯ ವಿದ್ಯಾರ್ಥಿಯಾಗಿರಲಿಲ್ಲ.
ಶಾಲೆಯ ತರಗತಿಯೊಳಗೆ ದಾಳಿ
ಬಾಲಕ ಚಾಕು ಮತ್ತು ಕೀಟಗಳನ್ನು ಓಡಿಸುವ ಸ್ಪ್ರೇ ಬಾಟಲಿಯನ್ನು ತೆಗೆದುಕೊಂಡು ಶಾಲೆಯೊಳಗೆ ಬಂದಿದ್ದ ಎಂದು ಸರ್ಕಾರಿ ಅಭಿಯೋಜಕಿ ಅಲಿಸನ್ ಮೋರ್ಗನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆ ಸಮಯದಲ್ಲಿ ತರಗತಿಯಲ್ಲಿ ಪಾಠ ನಡೆಯುತ್ತಿತ್ತು. ಬಾಲಕ ತರಗತಿಯ ಬಾಗಿಲಿನ ಬಳಿ ನಿಂತು ಪದೇಪದೇ ಬಾಗಿಲು ಬಡಿದಿದ್ದಾನೆ. ಒಬ್ಬ ವಿದ್ಯಾರ್ಥಿ ಬಾಗಿಲು ತೆರೆದಾಗ ಆತನ ಮುಖಕ್ಕೆ ಸ್ಪ್ರೇ ಸಿಂಪಡಿಸಿ ಒಳಗೆ ನುಗ್ಗಿದ್ದಾನೆ ಎಂದು ಅಭಿಯೋಜಕರು ಹೇಳಿದ್ದಾರೆ.
ಬಾಲಕನಿಗೆ ಪರಿಚಯವಿದ್ದ ಮತ್ತೊಬ್ಬ ವಿದ್ಯಾರ್ಥಿಯನ್ನು ಹುಡುಕುತ್ತಿದ್ದ ಆತ, “ನೀನು ಎಲ್ಲಿದ್ದೀಯಾ?” ಎಂದು ಕೇಳಿದ್ದಾನೆ. ಬಳಿಕ ಆ ವಿದ್ಯಾರ್ಥಿಯ ಹಿಂದೆ ನಿಂತು ಆತನನ್ನು ಹಿಡಿದು ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ವಿದ್ಯಾರ್ಥಿಯ ತಲೆ, ಕುತ್ತಿಗೆ ಮತ್ತು ಭುಜದ ಭಾಗಕ್ಕೆ ಗಾಯಗಳಾಗಿದ್ದವು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ನಂತರ ಬಾಲಕ “ಅಲ್ಲಾಹು ಅಕ್ಬರ್” ಎಂದು ಎರಡು ಬಾರಿ ಕೂಗಿದ್ದಾನೆ. ಮಕ್ಕಳು ಭಯದಿಂದ ಕಿರುಚುತ್ತಿದ್ದಾಗ, “ನೀನು ಸಾಯಲು ಬಯಸುತ್ತೀಯಾ? ಇಲ್ಲಿಗೆ ಬಾ!” ಎಂದು ಕೂಗಿದ್ದಾನೆ. ಮತ್ತೆ “ಅಲ್ಲಾಹು ಅಕ್ಬರ್” ಎಂದು ಹೇಳುತ್ತಾ ಮಕ್ಕಳತ್ತ ಹೋಗಿದ್ದಾನೆ. ಇದರಿಂದ ಮಕ್ಕಳು ಅಲ್ಲಿಂದ ಓಡಿಹೋಗಿದ್ದಾರೆ ಎಂದು ಅಭಿಯೋಜಕರು ತಿಳಿಸಿದ್ದಾರೆ.
ಆಟದ ಮೈದಾನದಲ್ಲೂ ಮತ್ತೊಬ್ಬ ವಿದ್ಯಾರ್ಥಿಗೆ ಇರಿತ
ಬಳಿಕ ಬಾಲಕ ತರಗತಿಯಿಂದ ಹೊರಬಂದು ಮೆಟ್ಟಿಲುಗಳ ಮೂಲಕ ಆಟದ ಮೈದಾನಕ್ಕೆ ಹೋಗಿದ್ದಾನೆ. ಆ ಸಮಯದಲ್ಲಿ ವಿರಾಮದ ಅವಧಿಯಾಗಿದ್ದರಿಂದ ಮಕ್ಕಳು ಮೈದಾನದಲ್ಲಿದ್ದರು.
ಅಲ್ಲಿ ತನಗೆ ಪರಿಚಯವಿಲ್ಲದ ಮತ್ತೊಬ್ಬ ವಿದ್ಯಾರ್ಥಿಯ ಬಳಿ ಹೋಗಿ ಆತನ ಕುತ್ತಿಗೆಯನ್ನು ಹಿಡಿದಿದ್ದಾನೆ. ಬಳಿಕ ತಲೆಯನ್ನು ತಿರುಗಿಸಿ ಕುತ್ತಿಗೆಗೆ ಚಾಕುವಿನಿಂದ ಇರಿಸಿದ್ದಾನೆ. ನಂತರ ಶಾಲೆಯ ಕಟ್ಟಡದೊಳಗೆ ಮರಳಿದ್ದಾನೆ ಎಂದು ಅಭಿಯೋಜಕರು ಆರೋಪಿಸಿದ್ದಾರೆ.
ಬಾಲಕ ತನ್ನ ಬ್ಲೇಜರ್ಗೆ ಮೊಬೈಲ್ ಫೋನ್ ಅಳವಡಿಸಿಕೊಂಡಿದ್ದ. ಅದರ ಮೂಲಕ ದಾಳಿಯ ದೃಶ್ಯಗಳು ಚಿತ್ರೀಕರಣಗೊಂಡಿದ್ದವು. ನ್ಯಾಯಾಲಯದಲ್ಲಿ ಈ ವಿಡಿಯೊವನ್ನು ಪ್ರದರ್ಶಿಸಲಾಯಿತು. ಅದರಲ್ಲಿ ಮೊದಲ ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ದೃಶ್ಯ ಮತ್ತು ಮಕ್ಕಳು ಕಿರುಚುತ್ತಿರುವುದು ದಾಖಲಾಗಿತ್ತು.
ದಾಳಿಯ ಬಳಿಕ ಬಾಲಕ ಮಾತನಾಡಿರುವ ದೃಶ್ಯವೂ ವಿಡಿಯೊದಲ್ಲಿತ್ತು. “ಅಲ್ಲಾಹನು ನನ್ನನ್ನು ತನ್ನ ಸೈನಿಕನಾಗಿ ಸ್ವೀಕರಿಸಲಿ. ನಾನು ಅಲ್ಲಾಹನಿಗಾಗಿ ಸಾಯುತ್ತೇನೆ. ಅಲ್ಲಾಹನಿಗಾಗಿ ಕೊಲ್ಲುತ್ತೇನೆ. ಅಲ್ಲಾಹು ಅಕ್ಬರ್” ಎಂದು ಆತ ಹೇಳಿದ್ದಾನೆ. ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲಲು ಬಯಸುವುದಾಗಿಯೂ, ತಾನು ಅಲ್ಲಾಹನ ಸೈನಿಕನೆಂದೂ ಹೇಳಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಅಲ್ಲಾಹನ ಹೆಸರಿನಲ್ಲಿ ತಾನು ಭಯೋತ್ಪಾದಕ ದಾಳಿ ನಡೆಸಿದ್ದೇನೆ ಎಂಬುದನ್ನು ಇತರರಿಗೆ ತೋರಿಸುವ ಉದ್ದೇಶದಿಂದಲೇ ಈ ವಿಡಿಯೊ ಚಿತ್ರೀಕರಿಸಿದ್ದಾನೆ ಎಂದು ಅಭಿಯೋಜಕರು ಆರೋಪಿಸಿದ್ದಾರೆ.
ಮೊಬೈಲ್ನಲ್ಲಿ ಐಎಸ್ ಧ್ವಜದ ಚಿತ್ರ ಪತ್ತೆ
ಚಾಕು ದಾಳಿ ನಡೆಯುವುದಕ್ಕೆ ಐದು ತಿಂಗಳ ಮೊದಲು, ಅಂದರೆ 2025ರ ಸೆಪ್ಟೆಂಬರ್ 10ರಂದು, ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ನಡೆದ ಘಟನೆಯ ವೇಳೆ ಬಾಲಕ “ಅಫ್ಘಾನಿಸ್ತಾನ ಸದಾ ಇರಲಿ” ಎಂದು ಕೂಗಿದ್ದನೆಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ನಂತರ ಶಿಕ್ಷಕರೊಬ್ಬರೊಂದಿಗೆ ಮಾತನಾಡುವಾಗ, ತಾನು ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿ ತಾಲಿಬಾನ್ ಜೊತೆ ಸಮಯ ಕಳೆದಿದ್ದಾಗಿ ಹೇಳಿದ್ದಾನೆ. ತಾಲಿಬಾನ್ ಬಗ್ಗೆ ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ ಎಂದೂ ಹೇಳಿದ್ದನೆಂದು ಅಭಿಯೋಜಕರು ತಿಳಿಸಿದ್ದಾರೆ.
ರಜೆಯ ಸಮಯದಲ್ಲಿ ಬಂದೂಕು ಹಿಡಿದಿದ್ದ ಯುವಕನ ಚಿತ್ರವೊಂದನ್ನು ಶಿಕ್ಷಕರಿಗೆ ತೋರಿಸಿದ್ದ ಬಾಲಕ, ಆ ಚಿತ್ರದಲ್ಲಿರುವುದು ತಾನೇ ಎಂದು ಹೇಳಿದ್ದಾನೆ ಎಂದು ನ್ಯಾಯಾಲಯದಲ್ಲಿ ತಿಳಿಸಲಾಗಿದೆ.
ಬಾಲಕನ ಮೊಬೈಲ್ನಿಂದ ಸಿಕ್ಕ ಚಿತ್ರಗಳಲ್ಲಿ 2025ರ ಡಿಸೆಂಬರ್ 11ರಂದು ಸಿದ್ಧಪಡಿಸಲಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಯ ಧ್ವಜದ ಚಿತ್ರವೂ ಇತ್ತು. ದಾಳಿಯ ಬಳಿಕ ಆತ ತನ್ನ ಮೊಬೈಲ್ನಿಂದ ಹಲವು ಆ್ಯಪ್ಗಳನ್ನು ಅಳಿಸಿದ್ದನೆಂದೂ ಅಭಿಯೋಜಕರು ತಿಳಿಸಿದ್ದಾರೆ.
ದಾಳಿ ನಡೆದ ಸುಮಾರು ಮೂರು ಗಂಟೆಗಳ ಬಳಿಕ ಬಾಲಕ ಮಸೀದಿಯೊಂದಕ್ಕೆ ಹೋಗಿದ್ದಾನೆ. ಅಲ್ಲಿನ ಇಮಾಮ್ಗೆ “ನಾನು ಒಬ್ಬ ಬಾಲಕನಿಗೆ ಚಾಕುವಿನಿಂದ ಇರಿದಿದ್ದೇನೆ” ಎಂದು ಹೇಳಿದ್ದಾನೆ. ಇಮಾಮ್ ತುರ್ತು ಸೇವೆಗಳಿಗೆ ಕರೆ ಮಾಡಲು ಮುಂದಾದಾಗ ಅದಕ್ಕೆ ಒಪ್ಪಿಕೊಂಡಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ದಾಳಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಬಾಲಕನಿಗೆ ಉಗ್ರ ಸಂಘಟನೆಗಳ ವಿಚಾರಗಳ ಪ್ರಭಾವ ಇತ್ತು ಮತ್ತು ಭಯೋತ್ಪಾದಕ ಉದ್ದೇಶದಿಂದಲೇ ದಾಳಿ ನಡೆಸಿದ್ದಾನೆ ಎಂದು ಸರ್ಕಾರಿ ಅಭಿಯೋಜಕರು ಆರೋಪಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಬದುಕುಳಿದಿದ್ದಾರೆ. ಓಲ್ಡ್ ಬೈಲಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಂದುವರಿದಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
