ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ‘6ನೇ ಕನ್ನಡ ಪುಸ್ತಕ ಹಬ್ಬ–2026’ರ ಅಂಗವಾಗಿ, ಲೇಖಕ ನಾರಾಯಣ ಶೇವಿರೆ ಅವರ ‘ಉನ್ಮೇಷ’, ‘ಸುವ್ಯಕ್ತ’ ಹಾಗೂ ‘ಎಲೆಮರೆಯ ಹೂ’ ಎಂಬ ಮೂರು ಹೊಸ ಕೃತಿಗಳು ಮತ್ತು ಡಾ. ಸೋಂದಾ ನಾರಾಯಣ ಭಟ್ಟರ ‘ಅಕ್ಷಿಪಥ’ ಕೃತಿಗಳು ಇದೇ ವಾರಾಂತ್ಯದಲ್ಲಿ ಲೋಕಾರ್ಪಣೆಗೊಳ್ಳಲಿವೆ.
ನಗರದ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ನ ‘ಕೇಶವಶಿಲ್ಪ’ ಸಭಾಂಗಣದಲ್ಲಿ ನವೆಂಬರ್ 28ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ನಾರಾಯಣ ಶೇವಿರೆ ಅವರ ಮೂರು ಕೃತಿಗಳು ಬಿಡುಗಡೆಯಾಗಲಿವೆ. ಆರ್ಎಸ್ಎಸ್ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಲೇಖಕ ಹಾಗೂ ತಾಳಮದ್ದಲೆ ಕಲಾವಿದ ದಿವಾಕರ ಹೆಗಡೆ ಕೃತಿಗಳ ಕುರಿತು ಮಾತನಾಡಲಿದ್ದು, ರಾಷ್ಟ್ರೋತ್ಥಾನ ಪರಿಷತ್ನ ಕೋಶಾಧ್ಯಕ್ಷ ಕೆ.ಎಸ್. ನಾರಾಯಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಭಾನುವಾರ ‘ಅಕ್ಷಿಪಥ’ ಬಿಡುಗಡೆ
ನವೆಂಬರ್ 29ರ ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ, ‘ಅಸೀಮಾ’ ಸಂಪಾದಕೀಯಗಳ ಸಂಗ್ರಹವಾದ ಡಾ. ಸೋಂದಾ ನಾರಾಯಣ ಭಟ್ಟರ ‘ಅಕ್ಷಿಪಥ’ ಕೃತಿ ಬಿಡುಗಡೆಯಾಗಲಿದೆ. ಹಿರಿಯ ವಿದ್ವಾಂಸರು ಹಾಗೂ ಸಂಸ್ಕೃತ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಕೃತಿ ಲೋಕಾರ್ಪಣೆಯಾಗಲಿದ್ದು, ಲೇಖಕ ಮತ್ತು ಅಂಕಣಕಾರ ನಾರಾಯಣ ಶೇವಿರೆ ಕೃತಿ ಪರಿಚಯ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಲಾಸಿನಿ ಭಟ್ ಹಾಗೂ ಕೆ.ಎಸ್. ನಾರಾಯಣ ಪಾಲ್ಗೊಳ್ಳಲಿದ್ದಾರೆ.
ಡಿ. 6ರವರೆಗೆ ಪುಸ್ತಕ ಹಬ್ಬ; ಶೇ 60ರವರೆಗೆ ರಿಯಾಯಿತಿ
ಒಟ್ಟು 37 ದಿನಗಳ ಕಾಲ ನಡೆಯುತ್ತಿರುವ ಈ ಪುಸ್ತಕ ಹಬ್ಬವು ಡಿಸೆಂಬರ್ 6ರ ಭಾನುವಾರದವರೆಗೆ ಮುಂದುವರಿಯಲಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪುಸ್ತಕ ಪ್ರೇಮಿಗಳಿಗೆ ಪ್ರವೇಶವಿರಲಿದ್ದು, ಈ ಪುಸ್ತಕ ಹಬ್ಬದಲ್ಲಿ ಶೇ 10ರಿಂದ ಶೇ 60ರವರೆಗೆ ವಿಶೇಷ ರಿಯಾಯಿತಿ ದೊರೆಯಲಿದೆ. ಡಿಸೆಂಬರ್ 6ರ ಸಂಜೆ ನಡೆಯುವ ಸಮಾರೋಪ ಸಮಾರಂಭದೊಂದಿಗೆ ಪುಸ್ತಕ ಹಬ್ಬಕ್ಕೆ ತೆರೆ ಬೀಳಲಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
