ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀರಾಮಲಲ್ಲಾನ ದರ್ಶನವನ್ನು ಭಕ್ತರಿಗೆ ಇನ್ನಷ್ಟು ಸುಲಭ ಹಾಗೂ ಪಾರದರ್ಶಕವಾಗಿಸಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆನ್ಲೈನ್ ಸುಗಮ ದರ್ಶನ ಪಾಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಅಕ್ಟೋಬರ್ 18ರಂದು ಸಾಮಾನ್ಯ ಭಕ್ತರಿಗೆ ಆನ್ಲೈನ್ನಲ್ಲಿ ಲಭ್ಯವಿರುವ ಪಾಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಮುಂಚಿತ ಬುಕ್ಕಿಂಗ್ ಅವಧಿಯನ್ನು ಪ್ರಸ್ತುತ 15 ದಿನಗಳಿಂದ 90 ದಿನಗಳಿಗೆ ವಿಸ್ತರಿಸುವ ಯೋಜನೆಯನ್ನು ಟ್ರಸ್ಟ್ ಪ್ರಕಟಿಸಿದೆ.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಪೂಜ್ಯ ಸ್ವಾಮಿ ಗೋವಿಂದದೇವ ಗಿರಿ ಜೀ ಮಹಾರಾಜ್ ಅವರ ಅನುಮೋದನೆಯೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ, ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ಹಾಗೂ ಟ್ರಸ್ಟ್ನ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
ಪ್ರತಿದಿನದ ಪಾಸ್ಗಳ ಸಂಖ್ಯೆ 975ರಿಂದ 2,000ಕ್ಕೆ ಹೆಚ್ಚಳ
ಸಾಮಾನ್ಯ ಭಕ್ತರಿಗೆ ಪ್ರತಿದಿನ ಆನ್ಲೈನ್ನಲ್ಲಿ ನೀಡಲಾಗುವ ಸುಗಮ ದರ್ಶನ ಪಾಸ್ಗಳ ಸಂಖ್ಯೆಯನ್ನು 975ರಿಂದ 2,000ಕ್ಕೆ ಹೆಚ್ಚಿಸಲಾಗಿದೆ. ಭಕ್ತರ ಬೇಡಿಕೆ ಮತ್ತು ವ್ಯವಸ್ಥೆಯ ಸಾಮರ್ಥ್ಯವನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಪಾಸ್ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯೂ ಇದೆ ಎಂದು ಟ್ರಸ್ಟ್ ತಿಳಿಸಿದೆ.
ಏಳು ಹಂತಗಳಲ್ಲಿ ಮುಂಚಿತ ಪಾಸ್ ಬಿಡುಗಡೆ
ಹೊಸ ವ್ಯವಸ್ಥೆಯಡಿ ದರ್ಶನದ ನಿಗದಿತ ದಿನಕ್ಕೆ 90, 62, 30, 14, 7, 3 ಮತ್ತು ಒಂದು ದಿನ ಮುಂಚಿತವಾಗಿ ಪಾಸ್ಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಯೋಜನೆಯಿದೆ. ಈ ಏಳು ಹಂತಗಳ ಜೊತೆಗೆ, ದರ್ಶನದ ದಿನವೇ ಪಡೆಯಬಹುದಾದ ತತ್ಕಾಲ್ ಪಾಸ್ಗಳಿಗೂ ಅವಕಾಶ ನೀಡಲಾಗುತ್ತದೆ.
ಈ ವ್ಯವಸ್ಥೆಯಿಂದ ದೂರದ ಊರುಗಳಿಂದ ಅಯೋಧ್ಯೆಗೆ ಆಗಮಿಸುವ ಭಕ್ತರು ತಮ್ಮ ಪ್ರಯಾಣ, ರೈಲು ಟಿಕೆಟ್ ಮತ್ತು ವಸತಿ ವ್ಯವಸ್ಥೆಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಲು ಅನುಕೂಲವಾಗಲಿದೆ. ಒಂದೇ ಸಮಯದಲ್ಲಿ ಎಲ್ಲರೂ ಪಾಸ್ ಪಡೆಯಲು ಪ್ರಯತ್ನಿಸುವ ಬದಲು, ವಿವಿಧ ಹಂತಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ.
ಪಾಸ್ಗಳ ದೃಢೀಕರಣಕ್ಕೆ ಪರಿಶೀಲನಾ ವ್ಯವಸ್ಥೆ
ಸ್ವಯಂಚಾಲಿತ ತಂತ್ರಾಂಶಗಳ ಮೂಲಕ ನಡೆಯುವ ಅನಧಿಕೃತ ಬುಕ್ಕಿಂಗ್ ಮತ್ತು ಪಾಸ್ಗಳ ದುರುಪಯೋಗವನ್ನು ತಡೆಯಲು ಟ್ರಸ್ಟ್ ಪರಿಶೀಲನೆ ಆಧಾರಿತ ಬುಕ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಮುಂಚಿತ ಪಾಸ್ಗಳಿಗೆ ಅರ್ಜಿ ಸಲ್ಲಿಸಿದ ತಕ್ಷಣವೇ ದೃಢೀಕರಣ ದೊರೆಯುವುದಿಲ್ಲ. ತಾಂತ್ರಿಕ ಪರಿಶೀಲನೆಯ ಬಳಿಕ ಸಾಮಾನ್ಯವಾಗಿ 24ರಿಂದ 48 ಗಂಟೆಗಳೊಳಗೆ ಅರ್ಜಿಯ ಬಗ್ಗೆ ನಿರ್ಧಾರ ತಿಳಿಸಲಾಗುತ್ತದೆ. ಅರ್ಜಿ ಸಲ್ಲಿಸಿರುವುದನ್ನೇ ಪಾಸ್ ದೃಢೀಕರಣ ಎಂದು ಪರಿಗಣಿಸಲಾಗುವುದಿಲ್ಲ. ಈ ಕ್ರಮದಿಂದ ಅನುಮಾನಾಸ್ಪದ ಬುಕ್ಕಿಂಗ್ ಚಟುವಟಿಕೆಗಳನ್ನು ಗುರುತಿಸಲು ಮತ್ತು ನಿಜವಾದ ಭಕ್ತರಿಗೆ ನ್ಯಾಯಯುತವಾಗಿ ಪಾಸ್ಗಳು ಲಭ್ಯವಾಗುವಂತೆ ಮಾಡಲು ಸಾಧ್ಯವಾಗಲಿದೆ.
ದರ್ಶನದ ದಿನವೇ ಪಡೆಯುವ ತತ್ಕಾಲ್ ಪಾಸ್ಗಳನ್ನು ತಕ್ಷಣವೇ ದೃಢೀಕರಿಸಲಾಗುತ್ತದೆ. ಈ ಪಾಸ್ಗಳಿಗೆ 24ರಿಂದ 48 ಗಂಟೆಗಳ ಕಾಯುವ ಅವಧಿ ಅನ್ವಯಿಸುವುದಿಲ್ಲ.
ಸುಗಮ ದರ್ಶನ ಪಾಸ್ಗಳು ಸಂಪೂರ್ಣ ಉಚಿತ
ಸುಗಮ ದರ್ಶನ ಪಾಸ್ಗಳು ಸಂಪೂರ್ಣ ಉಚಿತವಾಗಿವೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಪಾಸ್ ಪಡೆಯಲು ಯಾರಿಗೂ ಹಣ ಪಾವತಿಸುವ ಅಗತ್ಯವಿಲ್ಲ. ಪಾಸ್ ಕೊಡಿಸುವುದಾಗಿ ಹಣ ಕೇಳುವವರ ವಿರುದ್ಧ ದೂರು ನೀಡಲು ಪ್ರತ್ಯೇಕ ದೂರವಾಣಿ ಸಹಾಯವಾಣಿ ಮತ್ತು ಇ-ಮೇಲ್ ವ್ಯವಸ್ಥೆಯನ್ನು ಆರಂಭಿಸಲು ಟ್ರಸ್ಟ್ ಯೋಜಿಸಿದೆ.
ಭಕ್ತರು ಅಧಿಕೃತ ವೆಬ್ಸೈಟ್ ಮೂಲಕವೇ ಪಾಸ್ಗಳನ್ನು ಕಾಯ್ದಿರಿಸಬೇಕು ಎಂದು ಟ್ರಸ್ಟ್ ಸಲಹೆ ನೀಡಿದೆ.
ಅಧಿಕೃತ ವೆಬ್ಸೈಟ್: https://online.srjbtkshetra.org
ಅನಧಿಕೃತ ಬುಕ್ಕಿಂಗ್, ತಾಂತ್ರಿಕ ದುರುಪಯೋಗ ಮತ್ತು ಇತರ ಅಕ್ರಮಗಳನ್ನು ತಡೆಯಲು ಬುಕ್ಕಿಂಗ್ ವ್ಯವಸ್ಥೆಯಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಟ್ರಸ್ಟ್ ತಿಳಿಸಿದೆ.
ಆನ್ಲೈನ್ನಲ್ಲಿ ಲಭ್ಯವಿರುವ ಪಾಸ್ಗಳ ಸಂಖ್ಯೆಯನ್ನು ಹೆಚ್ಚಿಸಿರುವ ಕ್ರಮ ಈಗಾಗಲೇ ಜಾರಿಗೆ ಬಂದಿದೆ. ಆದರೆ, ಹಂತ ಹಂತವಾಗಿ ಪಾಸ್ ಬಿಡುಗಡೆ ಮಾಡುವ ವ್ಯವಸ್ಥೆ ಮತ್ತು ಪರಿಶೀಲನೆ ಆಧಾರಿತ ದೃಢೀಕರಣ ಪ್ರಕ್ರಿಯೆಯನ್ನು ಅಗತ್ಯ ಸಾಫ್ಟ್ವೇರ್ ಬದಲಾವಣೆಗಳು ಹಾಗೂ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಹಂತ ಹಂತವಾಗಿ ಜಾರಿಗೆ ತರಲಾಗುತ್ತದೆ.
ಭಕ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು, ಪಾರದರ್ಶಕತೆ ಹೆಚ್ಚಿಸುವುದು ಮತ್ತು ಶಿಫಾರಸು ಅಥವಾ ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಪಾಸ್ ಪಡೆಯಲು ಅವಕಾಶ ಕಲ್ಪಿಸುವುದು ಈ ಬದಲಾವಣೆಗಳ ಮುಖ್ಯ ಉದ್ದೇಶವಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
