ವೈದಿಕ ಮಂತ್ರಗಳ ಪಠಣದೊಂದಿಗೆ ನಡೆದ ಘರ್ ವಾಪಸಿ ಕಾರ್ಯಕ್ರಮದಲ್ಲಿ ಕುಟುಂಬಗಳ ಸದಸ್ಯರ ಪಾದ ತೊಳೆದು ಸ್ವಾಗತಿಸಿದ ಬಿಜೆಪಿ ನಾಯಕ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್.
ಕೊರ್ಬಾ, ನವೆಂಬರ್ 25: ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದ ಘರ್ ವಾಪಸಿ ಕಾರ್ಯಕ್ರಮದಲ್ಲಿ ಸುಮಾರು 500 ಕುಟುಂಬಗಳು ಮತ್ತೆ ಸನಾತನ ಧರ್ಮಕ್ಕೆ ಮರಳಿವೆ ಎಂದು ಆಯೋಜಕರು ತಿಳಿಸಿದ್ದಾರೆ. ನವೆಂಬರ್ 22ರಂದು ನಡೆದ ಈ ಕಾರ್ಯಕ್ರಮದಲ್ಲಿ ವೈದಿಕ ಮಂತ್ರಗಳ ಪಠಣ ಮತ್ತು ಧಾರ್ಮಿಕ ವಿಧಿವಿಧಾನಗಳು ನಡೆದವು. ಹಲವು ಸಂತರು ಕೂಡ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಛತ್ತೀಸ್ಗಢ ಬಿಜೆಪಿ ಉಪಾಧ್ಯಕ್ಷ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ಸನಾತನ ಧರ್ಮಕ್ಕೆ ಮರಳಿದ ಕುಟುಂಬಗಳ ಸದಸ್ಯರ ಪಾದ ತೊಳೆದು ಸ್ವಾಗತಿಸಿದರು. ಇದು ಅವರನ್ನು ಗೌರವದಿಂದ ಮತ್ತೆ ಧರ್ಮಕ್ಕೆ ಬರಮಾಡಿಕೊಳ್ಳುವ ಸಂಪ್ರದಾಯದ ಭಾಗವಾಗಿತ್ತು.
ಕಾರ್ಯಕ್ರಮದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್, 500 ಕುಟುಂಬಗಳು ತಮ್ಮ ಪೂರ್ವಜರ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಮತ್ತೆ ಬೆಸೆದುಕೊಂಡಿರುವುದು ಸಂತಸದ ಸಂಗತಿ ಎಂದು ತಿಳಿಸಿದ್ದಾರೆ.
“500 ಕುಟುಂಬಗಳ ಘರ್ ವಾಪಸಿ, ತಮ್ಮ ಸನಾತನ ಬೇರುಗಳು, ಪೂರ್ವಜರ ಪರಂಪರೆ ಮತ್ತು ಸಾಂಸ್ಕೃತಿಕ ಗುರುತಿನೊಂದಿಗೆ ಮತ್ತೆ ಬೆಸೆದುಕೊಂಡಿರುವ ಹೆಮ್ಮೆಯ ಅಧ್ಯಾಯವಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ಸನಾತನ ಧರ್ಮ ಮತ್ತು ಭಾರತದ ನಾಗರಿಕತೆಯ ನಡುವಿನ ಸಂಬಂಧವನ್ನು ಪ್ರಸ್ತಾಪಿಸಿದ ಅವರು, ತಮ್ಮ ತಂದೆ ಆರಂಭಿಸಿದ್ದ ಘರ್ ವಾಪಸಿ ಅಭಿಯಾನವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ತಂದೆ ಆರಂಭಿಸಿದ್ದ ಅಭಿಯಾನ ಮುಂದುವರಿಕೆ
ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರ ತಂದೆ ದಿವಂಗತ ದಿಲೀಪ್ ಸಿಂಗ್ ಜುದೇವ್ ಅವರು 1980ರ ದಶಕದಿಂದಲೇ ಛತ್ತೀಸ್ಗಢ ಮತ್ತು ನೆರೆಯ ಮಧ್ಯಪ್ರದೇಶದ ಬುಡಕಟ್ಟು ಸಮುದಾಯಗಳಲ್ಲಿ ಘರ್ ವಾಪಸಿ ಕಾರ್ಯಕ್ರಮಗಳನ್ನು ನಡೆಸಿದ್ದರು.
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುವ ಪ್ರಯತ್ನಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈಗ ಅವರ ಪುತ್ರ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಈ ಅಭಿಯಾನವನ್ನು ಮುಂದುವರಿಸುತ್ತಿದ್ದಾರೆ.
ಜನರು ತಮ್ಮ ಪೂರ್ವಜರ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಮತ್ತೆ ಬೆಸೆದುಕೊಳ್ಳಬೇಕು ಎಂಬುದು ಈ ಅಭಿಯಾನದ ಉದ್ದೇಶವಾಗಿದೆ.
ಕೊರ್ಬಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬಗಳ ಸದಸ್ಯರ ಪಾದ ತೊಳೆಯುವ ಮೂಲಕ ಅವರನ್ನು ಸ್ವಾಗತಿಸಲಾಯಿತು. ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು.
ಹಲವು ಸಂಘಟನೆಗಳ ಸಹಕಾರ
ಈ ಘರ್ ವಾಪಸಿ ಕಾರ್ಯಕ್ರಮವನ್ನು ಹಲವು ಸಂಘಟನೆಗಳು ಒಟ್ಟಾಗಿ ಆಯೋಜಿಸಿದ್ದವು. ಧರ್ಮ ಸೇನಾ, ಅದರ ಮಹಿಳಾ ಘಟಕ, ದಿಲೀಪ್ ಸಿಂಗ್ ಜುದೇವ್ ಸನಾತನ ಫೌಂಡೇಶನ್ ಮತ್ತು ಸೇವಾ ನ್ಯಾಯ ಉತ್ಥಾನ್ ಫೌಂಡೇಶನ್ ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದ ಸ್ವಯಂಸೇವಕರು, ಮಹಿಳೆಯರು ಮತ್ತು ಬೆಂಬಲಿಗರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ತಮ್ಮ ತಂದೆ ಆರಂಭಿಸಿದ ಕಾರ್ಯವನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದ ಅವರು, ದಿಲೀಪ್ ಸಿಂಗ್ ಜುದೇವ್ ಅವರು ಆರಂಭಿಸಿದ ಘರ್ ವಾಪಸಿ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
