ನವದೆಹಲಿ: ಹೊಸದಾಗಿ ಬಿಡುಗಡೆ ಮಾಡಲಾದ NCERTಯ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು, ಮೊಘಲ್ ಸಾಮ್ರಾಜ್ಯವು ಸಿಖ್ ಗುರುಗಳಾದ ಗುರು ಅರ್ಜುನ್ ದೇವ್, ಗುರು ತೇಗ್ ಬಹದ್ದೂರ್ ಮತ್ತು ಗುರು ಗೋಬಿಂದ್ ಸಿಂಗ್ ಅವರೊಂದಿಗೆ ನಡೆದುಕೊಂಡ ಕ್ರೂರ ಧೋರಣೆಗೆ ಇತಿಹಾಸದಲ್ಲಿ “ಸರಿಸಾಟಿ ಇಲ್ಲ” ಎಂದು ಬಣ್ಣಿಸಿದೆ.
NCERTಯ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಎರಡನೇ ಭಾಗದಲ್ಲಿ ಮೊಘಲ್ ಸಾಮ್ರಾಜ್ಯ ಹಾಗೂ ಸಿಖ್ ಗುರುಗಳ ನಡುವಿನ ಬಾಂಧವ್ಯದ ಕುರಿತು ವಿವರವಾದ ಮಾಹಿತಿಯಿದೆ. ಈ ಪೈಕಿ ಕೆಲವು ಗುರುಗಳ ಮೇಲೆ ನಡೆಸಲಾದ ದಬ್ಬಾಳಿಕೆ ಅತ್ಯಂತ ತೀವ್ರ ಸ್ವರೂಪದ್ದಾಗಿತ್ತು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಗುರು ಅರ್ಜುನ್ ದೇವ್, ಗುರು ತೇಗ್ ಬಹದ್ದೂರ್ ಹಾಗೂ ಗುರು ಗೋಬಿಂದ್ ಸಿಂಗ್ ಅವರ ಮೇಲೆ ಮೊಘಲ್ ಆಡಳಿತವು ಎಸಗಿದ ದೌರ್ಜನ್ಯಕ್ಕೆ ಇತಿಹಾಸದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಉದಾಹರಣೆಗಳಿವೆ ಎಂದು ಈ ಅಧ್ಯಾಯದಲ್ಲಿ ತಿಳಿಸಲಾಗಿದೆ. ಅಲ್ಲದೆ, ಸಿಖ್ ಗುರುಗಳ ಬಲಿದಾನವು ಆ ಸಮುದಾಯದಲ್ಲಿ ಅಚಲ ಪ್ರತಿರೋಧ ಹಾಗೂ ಸ್ಥೈರ್ಯವನ್ನು ಬೆಳೆಸಲು ಹೇಗೆ ಪ್ರೇರಣೆಯಾಯಿತು ಎಂಬುದನ್ನು ಇದು ವಿವರಿಸುತ್ತದೆ.
ಪಠ್ಯಪುಸ್ತಕದ ಪ್ರಕಾರ, ಹದಿನೇಳನೇ ಶತಮಾನದ ಆರಂಭದಿಂದಲೇ ಸಿಖ್ ಗುರುಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಭಾವವು ವಿಸ್ತಾರಗೊಂಡಂತೆ, ಮೊಘಲ್ ಆಡಳಿತಗಾರರು ಸಿಖ್ ಧರ್ಮದ ಆಂತರಿಕ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ಹೆಚ್ಚಿಸಿದರು. ಮೊಘಲ್ ಚಕ್ರವರ್ತಿಗಳಾದ ಜಹಾಂಗೀರ್ ಮತ್ತು ಔರಂಗಜೇಬರ ಆಳ್ವಿಕೆಯ ಕಾಲದಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಅಧ್ಯಾಯವನ್ನು ರಚಿಸಲಾಗಿದ್ದು, ಮೊಘಲ್ ಸಾಮ್ರಾಜ್ಯ ಹಾಗೂ ಸಿಖ್ ಸಮುದಾಯದ ನಡುವಿನ ಬದಲಾಗುತ್ತಿದ್ದ ಸಂಬಂಧಗಳನ್ನು ಇದು ಬಿಂಬಿಸುತ್ತದೆ. ಸಿಖ್ ಗುರುಗಳು ತಮ್ಮ ಧರ್ಮಕ್ಕಾಗಿ ಮೆರೆದ “ಶೌರ್ಯ ಮತ್ತು ತ್ಯಾಗ”ವೇ ಸಿಖ್ ಧರ್ಮದ ಪ್ರಮುಖ ಹೆಗ್ಗುರುತುಗಳಾಗಿ ರೂಪುಗೊಂಡವು ಎಂದು ಅದು ತಿಳಿಸುತ್ತದೆ.
ಗುರು ಅರ್ಜುನ್ ದೇವ್ ಅವರ ಬಲಿದಾನ
ಐದನೇ ಸಿಖ್ ಗುರುಗಳಾದ ಗುರು ಅರ್ಜುನ್ ದೇವ್ ಅವರನ್ನು ಗಲ್ಲಿಗೇರಿಸುವಂತೆ ಮೊಘಲ್ ಚಕ್ರವರ್ತಿ ಜಹಾಂಗೀರ್ ಆದೇಶ ಹೊರಡಿಸಿದ್ದ ಎಂದು ಪಠ್ಯಪುಸ್ತಕದಲ್ಲಿ ದಾಖಲಿಸಲಾಗಿದೆ. ಜಹಾಂಗೀರ್ನ ವಿರುದ್ಧ ದಂಗೆಯೆದ್ದಿದ್ದ ಅವನ ಮಗ ಕುಸ್ರು ಮಿರ್ಜಾಗೆ ಗುರು ಅರ್ಜುನ್ ದೇವ್ ಬೆಂಬಲ ನೀಡಿದ್ದರು ಎಂಬ ಆರೋಪವೇ ಈ ಶಿಕ್ಷೆಗೆ ಕಾರಣವಾಗಿತ್ತು ಎಂದು ಈ ವರದಿಯಲ್ಲಿ ವಿವರಿಸಲಾಗಿದೆ. ಗುರು ಅರ್ಜುನ್ ದೇವ್ ಅವರ ಈ ಹುತಾತ್ಮತೆಯು ಸಿಖ್ ಇತಿಹಾಸದಲ್ಲಿ ಒಂದು “ನಿರ್ಣಾಯಕ ತಿರುವು” ಎಂದು ಬಣ್ಣಿಸಲಾಗಿದ್ದು, ಇದು ಸಿಖ್ ಸಮುದಾಯದ ಸಾಂಸ್ಥಿಕ ಹಾಗೂ ರಾಜಕೀಯ ಸ್ವರೂಪದಲ್ಲಿ ಕ್ರಮೇಣ ಬದಲಾವಣೆÜಯಾಗಲು ಕಾರಣವಾಯಿತು ಎಂದು ತಿಳಿಸಲಾಗಿದೆ.
ಗ್ವಾಲಿಯರ್ ಕೋಟೆಯಲ್ಲಿ ಗುರು ಹರಗೋಬಿಂದ್ ಅವರ ಬಂಧನ
ಆರನೇ ಸಿಖ್ ಗುರುಗಳಾದ ಗುರು ಹರಗೋಬಿಂದ್ ಅವರನ್ನು ಜಹಾಂಗೀರ್ ಗ್ವಾಲಿಯರ್ ಕೋಟೆಯಲ್ಲಿ ಬಂಧಿಸಿರಿಸಿದ್ದ ಸಂಗತಿಯನ್ನೂ ಈ ಅಧ್ಯಾಯದಲ್ಲಿ ದಾಖಲಿಸಲಾಗಿದೆ. ಆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಿಖ್ ಭಕ್ತರು ಆ ಕೋಟೆಯ ಬಳಿಗೆ ತೆರಳಿ, ಹೊರಗಿನಿಂದಲೇ ಗುರುವಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸುತ್ತಿದ್ದರು ಎಂದು ಇದು ತಿಳಿಸುತ್ತದೆ. ಸಿಖ್ ಸಮುದಾಯದ ರಾಜಕೀಯ ಮತ್ತು ಮಿಲಿಟರಿ ಸಂಘಟನೆಯು ಮುಂದಿನ ದಿನಗಳಲ್ಲಿ ವಿಕಸನಗೊಳ್ಳಲು ಈ ಬೆಳವಣಿಗೆಗಳು ಕಾರಣವಾದವು ಎಂದು ಪಠ್ಯಪುಸ್ತಕವು ಹೇಳುತ್ತದೆ.
ಮಿರಿ-ಪಿರಿ ಮತ್ತು ಅಕಾಲ್ ತಖ್ತ್
ಲೌಕಿಕ ಅಧಿಕಾರದ ಕೇಂದ್ರವಾಗಿ ಗುರು ಹರಗೋಬಿಂದ್ ಅವರು ‘ಅಕಾಲ್ ತಖ್ತ್’ ಅನ್ನು ಸ್ಥಾಪಿಸಿದ ಕುರಿತು NCERT ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಇದು ಅಧಿಕಾರದ ಆಧ್ಯಾತ್ಮಿಕ ಹಾಗೂ ಲೌಕಿಕ ಆಯಾಮಗಳನ್ನು ಪ್ರತಿನಿಧಿಸುವ ‘ಮಿರಿ-ಪಿರಿ’ ಪರಿಕಲ್ಪನೆಯನ್ನು ಕೂಡ ವಿವರಿಸುತ್ತದೆ. ಅತಿಯಾದ ರಾಜಕೀಯ ಒತ್ತಡ ಹಾಗೂ ಕಿರುಕುಳವು ಸಾಂಘಿಕ ಹೋರಾಟದ ಅಗತ್ಯತೆಯನ್ನು ತಂದೊಡ್ಡಿತು ಮತ್ತು ಅಗತ್ಯಬಂದಾಗ ಸಶಸ್ತ್ರ ಪ್ರತಿರೋಧವನ್ನು ತೋರಲು ಇದು ಪ್ರೇರೇಪಿಸಿತು ಎಂದು ಪಠ್ಯಪುಸ್ತಕವು ತಿಳಿಸುತ್ತದೆ.
ಹುತಾತ್ಮತೆ ಹಾಗೂ ಸಿಖ್ ಪ್ರತಿರೋಧ
ಸಿಖ್ ಗುರುಗಳ ಬಲಿದಾನಗಳನ್ನು ಸಂಘಟಿತ ಪ್ರತಿರೋಧದ ಹುಟ್ಟಿನೊಂದಿಗೆ ಈ ಅಧ್ಯಾಯವು ಜೋಡಿಸುತ್ತದೆ. ಮೊಘಲರ ದಬ್ಬಾಳಿಕೆಯನ್ನು “ದೃಢವಾದ ಪ್ರತಿರೋಧ ಹಾಗೂ ಸ್ಥೈರ್ಯದಿಂದ” ಎದುರಿಸಬೇಕು ಎಂಬ ಅಚಲ ನಂಬಿಕೆಯನ್ನು ಗುರುಗಳ ತ್ಯಾಗವು ಸಿಖ್Jರಲ್ಲಿ ಮೂಡಿಸಿತು ಎಂದು ಇದು ವ್ಯಕ್ತಪಡಿಸುತ್ತದೆ. ಸಿಖ್ ಸಂಸ್ಥೆಗಳು ಹಾಗೂ ನಾಯಕತ್ವದ ಮುಖೇನ ನಡೆದ ಮುಂದಿನ ಪ್ರತಿರೋಧಗಳ ಬಗ್ಗೆಯೂ ಪಠ್ಯಪುಸ್ತಕದಲ್ಲಿ ಚರ್ಚಿಸಲಾಗಿದೆ.
ಇದಲ್ಲದೆ ಈ ಅಧ್ಯಾಯವು ಕೇವಲ ಸಿಖ್ ಇತಿಹಾಸಕ್ಕೆ ಮಾತ್ರ ಸೀಮಿತವಾಗದೆ, ಮೊಘಲ್ ಆಳ್ವಿಕೆಯ ವಿರುದ್ಧ ಗಂಗಾ-ಯಮುನಾ ದೋಆಬ್ ಪ್ರದೇಶದ ಜಾಟ್ ರೈತರು ನಡೆಸಿದ ಹೋರಾಟವನ್ನೂ ಪ್ರಸ್ತಾಪಿಸುತ್ತದೆ. ಪಠ್ಯಪುಸ್ತಕದ ಪ್ರಕಾರ, ಮೊಘಲ್ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಜಾಟ್ ಸಮುದಾಯದವರು ವಿಪರೀತ ತೆರಿಗೆ ಹಾಗೂ ಆರ್ಥಿಕ ಶೋಷಣೆಯನ್ನು ಎದುರಿಸಬೇಕಾಯಿತು. ಈ ಆರ್ಥಿಕ ಸಂಕಷ್ಟಗಳು ಮತ್ತು ಔರಂಗಜೇಬನ ಧರ್ಮ-ಪಕ್ಷಪಾತದ ನೀತಿಗಳು ಜನರಲ್ಲಿ ತೀವ್ರ ಅಸಮಾಧಾನ ಮೂಡಲು ಕಾರಣವಾಗಿ, ಹದಿನೇಳನೇ ಶತಮಾನದಲ್ಲಿ ಎರಡು ದೊಡ್ಡ ದಂಗೆಗಳು ಏಳಲು ನಾಂದಿಯಾದವು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.
ವಿಳಂಬದ ಬಳಿಕ ಬಿಡುಗಡೆಗೊಂಡ ಹೊಸ ಪಠ್ಯಪುಸ್ತಕ:
ಮಾರ್ಪಾಡುಗೊಂಡ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು ಪ್ರಸಕ್ತ ಶೈಕ್ಷಣಿಕ ವರ್ಷವು ಈಗಾಗಲೇ ಪ್ರಾರಂಭವಾದ ಬಳಿಕ ಬಿಡುಗಡೆಯಾಯಿತು. ಈ ವಿಳಂಬ ಧೋರಣೆಯಿಂದಾಗಿ ವಿದ್ಯಾರ್ಥಿಗಳಿಗೆ ಪುಸ್ತಕಗಳು ಸಮಯಕ್ಕೆ ಸಿಗದೆ ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ, ಮೊಘಲ್ ಆಳ್ವಿಕೆ, ಸಿಖ್ ಇತಿಹಾಸ ಹಾಗೂ ಸ್ಥಳೀಯ ಪ್ರತಿರೋಧದ ಚರಿತ್ರೆಗಳನ್ನು ಹೊಸದಾಗಿ ಪರಿಷ್ಕರಿಸಲಾದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
