ಕಲ್ಯಾಣದ ಧರ್ಮ ಸಮನ್ವಯದ ಅಮೃತಸ್ಯ ಪುತ್ರ ಸಂತ ಹಾರಕೂಡಶ್ರೀ
ತಾಯಿ ಭಾರತಾಂಬೆಯು ತನ್ನ ಮಡಿಲಿನಿಂದ ಅಮೃತಸ್ಯ ಪುತ್ರರನ್ನು ನಿಸರ್ಗಕ್ಕೆ ದಯಪಾಲಿಸುತ್ತಾ ಬಂದ ಪುಣ್ಯವತಿ. ಎಲ್ಲ ಮಹಾಪುರುಷರು ಸಕಲ ಜೀವಕೋಶಗಳಿಗೆ ಕಲ್ಯಾಣವನ್ನು ಬಯಸಿ ಅರ್ಪಣೆಯ ಬದುಕು ಮಾಡಿ ಸಮರ್ಪಿತರಾಗುತ್ತಾರೆ. ಕೆಲವರು ವಿಜ್ಞಾನಿಗಳು ತತ್ವಜ್ಞಾನಿಗಳು ಸಾಹಿತಿಗಳು, ಆಡಳಿತಗಾರರು, ವೈದ್ಯರು, ಧರ್ಮ ಗುರುಗಳು, ದಾರ್ಶನಿಕರು, ಚಿಂತಕರು ಹೀಗೆ ಅನೇಕ ಆಯಾಮಗಳಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತಾರೆ. ಅಂಥವರ ಪಂಕ್ತಿಯಲ್ಲಿ ನವಕಲ್ಯಾಣದ ಸಂಕಲ್ಪದೊಂದಿಗೆ ಬಸವ ಕರ್ಮ ಭೂಮಿಯಿಂದ ಅಮೃತಸ್ಯ ಪುತ್ರರಾಗಿ ಜನಿಸಿ ವಿಶ್ವಾಸಸಾತ್ಮಕ ಭಾವ ಪಸರಿಸಿದ ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಯತಿಕುಲತಿಲಕರಾಗಿ ವಿರಾಜಮಾನರಾಗಿದ್ದಾರೆ. ಅವರಿಗೆ ಈಗ 64ರ ಜನ್ಮೋತ್ಸವದ ಶುಭ ಸಂಭ್ರಮ. ಮಾತೃ ಹೃದಯಿ,ಧಾರ್ಮಿಕ ಸಮನ್ವಯದ ಸಂತನಾಗಿ ಮಗುವಿನ ಮನಸ್ಸು ಹೊಂದಿ, ದೃಢ ನಿಲುವು, ಸವಿಮಾತು, ನಗು ತುಂಬಿದ ಮೊಗದ ಸಂತರಾಗಿ ಎಲ್ಲರ ಹೃದಯ ಸಮ್ರಾಟನಾಗಿ ಆಕರ್ಷಿಸುವವರು.
ಭಕ್ತಿ- ಭಕ್ತ , ಮಠಮಾನ್ಯ, ಸಂತ ಪರಂಪರೆ ಹೊಸ ಭಾಷ್ಯವನ್ನು ಬರೆದು ಭಕ್ತಿ- ಜ್ಞಾನ – ವೈರಾಗ್ಯಗಳ ಸಂಗಮವಾಗಿ ಹಾರಕೂಡ ಮಠವನ್ನು ಕಲ್ಯಾಣ ಕರ್ನಾಟಕದ ಮಠಗಳ ಪರಂಪರೆಯಲ್ಲಿ ವಿಶಿಷ್ಟ ಸ್ಥಾನಕ್ಕೇರಿಸಿದವರು. ಶ್ರೀಗಳ ಕ್ರಿಯಾಶೀಲ ವ್ಯಕ್ತಿತ್ವ, ಕಾರ್ಯ ಶೈಲಿ, ಸಮಾಜಮುಖಿ ಚಿಂತನೆ, ಭಕ್ತರ ಹಿತಚಿಂತನೆ, ವೈಜ್ಞಾನಿಕ ದೃಷ್ಟಿಕೋನ, ದಾಸೋಹ ಸಂಸ್ಕೃತಿ, ಜಾತ್ಯಾತೀತ ಮನೋಧರ್ಮ, ಸಾಹಿತ್ಯಕ ಮನೋಭೂಮಿಕೆ ಮುಂತಾದ ಗುಣ ವಿಶೇಷಗಳಿಂದ ಭಕ್ತರ ನಡುವೆ ಪ್ರೇಮ ಮತ್ತು ಭಕ್ತಿಯ ಸಾಮ್ರಾಜ್ಯ ಕಟ್ಟಿ ಸಂಮೋಹನಗೊಳಿಸಿದ ಸಮನ್ವಯದ ಸಂತರೆಂದೇ ಖ್ಯಾತರಾಗಿದ್ದಾರೆ.
“ಸರ್ವೇ ಜನಃ ಸುಖಿನೋ ಭವಂತು”- ಎಂಬ ಆರ್ಷೇಯ ಪರಂಪರೆಯನ್ನು ಪಾಲಿಸುತ್ತಾ “ಸಕಲ ಜೀವಾತ್ಮರಿಗೆ ಲೇಸನು ಬಯಸುವವನೇ ಕುಲಜನು” ಎಂಬ ಬಸವ ನುಡಿಯ ಪಥದಲ್ಲಿ ಮುನ್ನಡೆದು ” ನುಡಿದಂತೆ ನಡೆ, ಇದೇ ಜನ್ಮ ಕಡೆ” ಎಂಬ ತತ್ವಪಥಿಕ ಯತಿವರ್ಯನಾಗಿ ಎಲ್ಲರೊಳು ಒಂದಾಗಿ ಕ್ರಾಂತಿಕಾರಿ ರಾಷ್ಟ್ರಸಂತನಾಗಿ ಭಕ್ತರ ಹೃದಯ ಸಾಮ್ರಾಜ್ಯದಲ್ಲಿ ಸ್ಥಾನ ಪಡೆದ ನಿಜ ಶರಣ ರಾಗಿದ್ದಾರೆ.
“ಯೋಗಿಗಳು, ದಾರ್ಶನಿಕರು, ಸಂತರು, ಮಹಾಂತರು, ಭರತ ಭೂಮಿಯ ಪುಣ್ಯದ ಫಲಗಳು” ಎಂಬಂತೆ ಹಾರಕೂಡ ಶ್ರೀಗಳು ಕನ್ನಡನಾಡನ್ನು,ಆಧ್ಯಾತ್ಮ ಪರಂಪರೆಯನ್ನು ಬೆಳಗಿದ ಆಧ್ಯಾತ್ಮ ಚೇತನರಾಗಿದ್ದಾರೆ.
ಪೂಜ್ಯಶ್ರೀಗಳು ಮಾತೃ ಹೃದಯಿಗಳು.ನೊಂದವರ ಮತ್ತು ಬೆಂದವರ ಕಣ್ಣೀರು ಒರೆಸುವ ಹೃದಯ ವೈಶಾಲ್ಯತೆಯನ್ನು ಹೊಂದಿದವರು. ಸ್ವಾಮೀಜಿಯವರು ಜಾತಿ, ಮತ,ಪಂಥಗಳೆಂಬ ಕಟ್ಟುಪಾಡುಗಳನ್ನು ಮೀರಿ ನಿಂತ ನಿಜಾರ್ಥದ ಸ್ವಾಮೀಜಿ. ಕೇವಲ ಪೂಜೆ, ಪುನಸ್ಕಾರಗಳು ಮಾತ್ರ ಮಠಕ್ಕೆ ಸೀಮಿತವಲ್ಲ. ಅದರ ಆಚೆಗೆ ಇರುವ ಮಾನವೀಯ ಸೇವೆ ಬಹಳ ಮುಖ್ಯ ಎಂಬುದನ್ನು ಇತರ ಮಠಗಳಿಗೂ ಮಾದರಿಯಾಗುವಂತೆ ತೋರಿಸಿಕೊಟ್ಟ ಒಬ್ಬ ಮಹಾತ್ಮ. ಹಾರಕೂಡ ಸ್ವಾಮೀಜಿಯವರು ಅಗಾಧ ಪಾಂಡಿತ್ಯ ಹೊಂದಿದವರು. ಕನ್ನಡ ಸ್ನಾತಕೊತ್ತರ ಪದವಿಯನ್ನು ಪಡೆದ ಒಬ್ಬ ವಿದ್ವಾಂಸರು. ತತ್ವಶಾಸ್ತ್ರ ಆಗಮ, ಶಾಸ್ತ್ರ,ವೇದ, ಪುರಾಣ, ವಚನ ವಾಂಗ್ಮಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಪರಿಣತಿಯನ್ನು ಹೊಂದಿದ ಮೇರು ಪಂಡಿತರು. ಅವರ ಮಾತು ಮಾತಲ್ಲ,ನುಡಿ ವಚನಗಳು.ಅವರ ದೃಷ್ಟಿಗೆ ಬಿದ್ದರೆ ಬದುಕು ಪಾವನವಾಗುತ್ತದೆ ಎನ್ನುವುದು ಕೂಡ ಅಷ್ಟೇ ಸತ್ಯ.
ಕಷ್ಟದಲ್ಲಿದ್ದವರನ್ನು ಮೇಲೆತ್ತಬೇಕು, ಧ್ವನಿ ಇಲ್ಲದವರಿಗೆ ಧ್ವನಿ ಯಾಗಬೇಕು, ಬೇಡಿ ಬಂದವರಿಗೆ ಸಾಂತ್ವನ ನೀಡಬೇಕು, ಹಸಿದು ಬಂದವರಿಗೆ ತುತ್ತು ನೀಡಬೇಕು ಎಂಬುದು ಮಠದ ಧ್ಯೇಯವನ್ನಾಗಿ ರೂಪಿಸಿಕೊಂಡವರು. ಹಾರಕೂಡ ನಿಜಕ್ಕೂ “ಹರ” ಕೂಡುವ ಜಾಗವನ್ನಾಗಿ ಮಾಡಿ ಭಕ್ತರಿಗೆ ಇಂಬು ಕೊಡುವ, ಇತರ ಮಠಗಳಿಗೆ ಆದರ್ಶವಾಗುವ ಹಾಗೆ ಶ್ರೇಷ್ಠತೆಯನ್ನು ಕಟ್ಟಿಕೊಟ್ಟ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅಲ್ಲಿನ ಶಿವಾನುಭವ ಗೋಷ್ಠಿ, ರಥೋತ್ಸವ,ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ಉತ್ಸವ ದಸರಾ ಹಬ್ಬ ಹೀಗೆ ಅನೇಕ ಕಾರ್ಯಕ್ರಮಗಳು ನಾಡಿನ ಧಾರ್ಮಿಕ, ಸಾಹಿತ್ತಿಕ,ಸಾಂಸ್ಕೃತಿಕ ಪರಂಪರೆಗೆ ಒಂದು ಹೆಗ್ಗುರುತನ್ನು ದಾಖಲಿಸುವಂತೆ ಮುಂದುವರಿದಿದೆ. ಪೂಜ್ಯರು ಉತ್ತಮ ವಾಗ್ಮಿಗಳು,ಚಿಂತಕರು ಮತ್ತು ಬರಹಗಾರರು ಆಗಿರುವುದರಿಂದ ಅವರ ಭಾಷಣ, ಲೇಖನ, ಆಕಾಶವಾಣಿಯ ಅವರ ಚಿಂತನ ಕೇಳುವುದೇ ಒಂದು ಪುಣ್ಯದ ಕ್ಷಣ. ಅವರ ಕೈಯಿಂದ ರಚಿತ ಕೃತಿಗಳು ಅತ್ಯಂತ ಅದ್ಭುತವಾದದ್ದು ಮತ್ತು ಶ್ರೇಷ್ಠ ಸ್ಥಾನದಲ್ಲಿ ನಿಲ್ಲುವಂಥದ್ದು. ಪೂಜ್ಯರ ಆಲೋಚನೆಗಳು ಭವಿಷ್ಯದ ಜಗತ್ತಿನಲ್ಲಿ ಜನಮಾನಸವನ್ನು ಅದ್ಭುತ ಚೈತನ್ಯದೊಂದಿಗೆ ಎದ್ದು ನಿಲ್ಲುವಂತೆ ಮಾಡುವ ದಿವ್ಯಶಕ್ತಿಯನ್ನು ಹೊಂದಿದೆ. ಗುರುಗಳು ಮಠದಲ್ಲಿ ಇರಲಿ, ಸಂಚಾರದಲ್ಲಿ ಇರಲಿ,ಅವರಲ್ಲಿ ಜನರು ತೋರುವ ಭಕ್ತಿ ಮತ್ತು ವಿಶ್ವಾಸ ನಿಜಕ್ಕೂ ಅಚ್ಚರಿ ಪಡುವಂತದ್ದು.
ಸಮ ಸಮಾಜವನ್ನು ಕಟ್ಟಿ ಬೆಳೆಸುವ ದೊಡ್ಡ ಕಾರ್ಯಕ್ರಮವನ್ನು ಅವರು ನಿತ್ಯ ಮಾಡುತ್ತಿದ್ದಾರೆ. ಮಠವನ್ನು ಕೇವಲ ವೀರಶೈವರಿಗೆ ಮಾತ್ರ ಸೀಮಿತವಾಗದೆ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಎಲ್ಲರೂ ಭಕ್ತಿಯ ಸಮರ್ಪಣೆಗೈಯು ವುದನ್ನು ನಾವು ಕಾಣುತ್ತೇವೆ. ಹಿಂದೂ ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ್ ಹೀಗೆ ಅನೇಕ ಧರ್ಮಗಳ ಜನರು ಪೂಜ್ಯರಲ್ಲಿ ಭಕ್ತಿ, ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದಾರೆ. ಹಾರಕೂಡ ಮಠ ಏಕತಾ ಮನೋಭಾವದ ದೊಡ್ಡ ಸಂಕೇತವಾಗಿದೆ. ವಿಶ್ವ ಭ್ರಾತೃತ್ವವನ್ನು ಪಸರಿಸುವ ಮೂಲಕ “ಏಕ್ ಭಾರತ ಶ್ರೇಷ್ಠ ಭಾರತ್ ” ಎಲ್ಲಿದೆ ಎಂಬುದನ್ನು ನೋಡಲು ಹಾರಕೂಡ ಮಠಕ್ಕೆ ಭೇಟಿ ಕೊಡಬೇಕು. ಎಲ್ಲ ಮಠಮಾನ್ಯಗಳ ಪೂಜ್ಯರುಗಳು ಹಾರಕೂಡ ಮಠದ ಕಾರ್ಯ ಶೈಲಿಗೆ ಮೆಚ್ಚಿ ಶ್ಲಾಘಿಸುವುದನ್ನು ನೋಡಿದಾಗ ಅವರೊಬ್ಬ ನಿಜಾರ್ಥದ ಶರಣರು ಎಂಬುದು ಖಚಿತವಾಗುತ್ತದೆ. ಆದರ್ಶ ಬದುಕಿನ ಸಮಾಜಕ್ಕಾಗಿ ಏನಾದರೂ ಒಳ್ಳೆಯ ಕೆಲಸಗಳನ್ನು ಮಠದಿಂದ ಮಾಡಿ ಸಮಾಜದಲ್ಲಿ ಮಠಗಳ ಕಾಯಕದ ಬಗ್ಗೆ ಎಚ್ಚರಿಕೆಯನ್ನು ಮತ್ತು ಜಾಗೃತಿಯನ್ನು ಮೂಡಿಸುವಂತೆ ತಮ್ಮ ದಿವ್ಯಶಕ್ತಿಯನ್ನು ಪೂಜ್ಯಶ್ರೀಗಳು ಪಸರಿಸುತ್ತಿರುವುದು ಭುವನದ ಭಾಗ್ಯವಾಗಿದೆ.
ಧರಿನಾಡು ಬೀದರ್ ಜಿಲ್ಲೆಯ ಅಣ್ಣ ಬಸವಣ್ಣನವರ ಕರ್ಮ ಭೂಮಿ ಯಾದ ಬಸವಕಲ್ಯಾಣ ತಾಲೂಕಿನ ಹಾರಕೂಡ ಒಂದು ಸಣ್ಣ ಹಳ್ಳಿ , ಆ ಹಳ್ಳಿಯನ್ನು ಇಂದು ಮಾದರಿ ಹಳ್ಳಿಯಾಗಿ, ಅಧ್ಯಾತ್ಮದ ಕೇಂದ್ರವಾಗಿ, ಸರ್ವಧರ್ಮದ ಭೂಮಿಯಾಗಿ ಕಟ್ಟುವಲ್ಲಿ ಸಮನ್ವಯ ಸಂತನಾಗಿ ಶ್ರೀಗಳಾಗಿ ಕರ್ಣಧಾರತ್ವವನ್ನು ಹಿಡಿದಿದ್ದಾರೆ. ಅಗಾಧ ಕಾರ್ಯ ಶೀಲತೆ, ಮೌಲಿಕ ಗ್ರಂಥಗಳ ಪ್ರಕಟಣೆ, ಅನೇಕ ಶ್ರೇಷ್ಠ ಪ್ರಶಸ್ತಿಗಳನ್ನು ದಯಪಾಲಿಸುವ ಬಗ್ಗೆ, ಸಾಹಿತಿ ಕಲಾವಿದರನ್ನು ಪ್ರೋತ್ಸಾಹಿಸುವುದು, ವಿಚಾರ ಸಂಕಿರಣ, ಸಮ್ಮೇಳನ ನಡೆಸುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಹಾರಕೂಡವನ್ನು ನಿತ್ಯ ದಾಸೋಹದ ಮಠವಾಗಿ ಬೆಳೆಸಿದ್ದಾರೆ. ಒಂದು ಸೌಹಾರ್ದಪೂರ್ಣ ಸಮಾಜ ಕಟ್ಟುವ ಬಸವಾದಿ ಪ್ರಮಥರ ಕನಸಿನ ಆದರ್ಶನವನ್ನು ಬಿತ್ತುತ್ತಿದ್ದಾರೆ. ಒಂದು ಆದರ್ಶ ಸಮಾಜದ ನಿರ್ಮಾಣ ಮತ್ತು ಆದರ್ಶದ ಮಠ ಹೇಗೆ ಮಾಡಬೇಕೆಂಬ ಪ್ರಶ್ನೆಗೆ ಉತ್ತರವಾಗಿ ಹಾರಕೂಡ ಗ್ರಾಮದ ಸುಕ್ಷೇತ್ರ ಹಾರಕೂಡ ಸಾಕ್ಷಿಪ್ರಜ್ಞೆಯಾಗಿ ಇವತ್ತು ಕಾರ್ಯ ನಡೆಸುತ್ತಿದೆ. ನಿರಂತರ ಪಾದರಸದಂತೆ ಓಡಾಡುವ ಪೂಜ್ಯಶ್ರೀಗಳು ಪ್ರೀತಿ, ಕರುಣೆ ಅದಮ್ಯ ಉತ್ಸಾಹ ಪ್ರವೃತ್ತಿಯಿಂದ ಮಠವನ್ನು ವೈಭವಯುತವಾಗಿ ಬೆಳೆಸಿ ಹಾರಕೂಡ ಇಂದು ಆಧ್ಯಾತ್ಮದ ಕಣ್ಣು ಎಂಬಂತೆ ಬೆಳೆದು ನಿಂತಿದೆ. ಇವರ ಸಮಾಜೋ ಧಾರ್ಮಿಕ ಸೇವಾ ಕೈಂಕರ್ಯಕ್ಕಾಗಿ ಗುಲ್ಬರ್ಗ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಹಾಗೂ ಕರ್ನಾಟಕ ಸರಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ದೆ.
ಪೂಜ್ಯಶ್ರೀಗಳಿಗೆ 2026 ನವಂಬರ್ 21ಕ್ಕೆ 64 ವಸಂತಗಳು ತುಂಬುತ್ತಿರುವ ಶುಭ ಸಂದರ್ಭದಲ್ಲಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಮಾಜಿ ಲೋಕಸಭಾಸದಸ್ಯರಾದ ಡಾ ಉಮೇಶ್ ಜಾಧವ್ ಅವರ ನೇತೃತ್ವದಲ್ಲಿ ದೆಹಲಿಯ ಸಂತ ಸೇವಾಲಾಲ್ ಮಹಾರಾಜ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಕ್ತ ಸಂಕುಲದ ನಡುವೆ ಜನ್ಮೋತ್ಸವದ ಆಚರಣೆ ನಿಜಕ್ಕೂ ಸಂಭ್ರಮ ಹಾಗೂ ಸಂತಸದ ಸಂಗತಿ.
” ನಾ ಗುರೋರಧಿಕಂ ತಪ:/ತತ್ವ ಜ್ಞಾನಾತ್ ಪರಂ ನಾಸ್ತಿ ತಸ್ಮೈ ಶ್ರೀ ಗುರುವೇ ನಮಃ // – ಗುರುವಿಗಿಂತಲೂ ಅಧಿಕವಾದ ತತ್ವವಿಲ್ಲ ಮತ್ತು ಅಧಿಕವಾದ ತಪಸ್ಸಿಲ್ಲ. ತತ್ವಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಆದ್ದರಿಂದ ಶ್ರೀ ಗುರುವನ್ನು ನಮಿಸುತ್ತೇನೆ – ಇಂತಹ ಅದ್ಭುತವಾದ ಗುರುತಿಗೆ ಹಾರಕೂಡ ಶ್ರೀಗಳು ಭಾಜನರಾಗುತ್ತಾರೆ. ಹಾರಕೂಡ ಗುರುಗಳು ಶ್ರೇಷ್ಠ ಗುರುಗಳು ದೇವರ ಸ್ವರೂಪಿ ಎಂಬುದಕ್ಕೆ ಅನ್ವರ್ಥವಾಗಿ ಅವರು ನಮ್ಮೊಡನೆ ಇದ್ದಾರೆ. ಬದುಕಿನ ಚುಕ್ಕಾಣಿಯನ್ನು ನಡೆಸಲು ನಮ್ಮೊಂದಿಗೆ ಗುರು ನಿತ್ಯ ಸಂಚರಿಸುತ್ತಾನೆ ಎಂಬ ಹಾಗೆ ಧರ್ಮದ ಪ್ರತಿನಿಧಿಯಾಗಿ ಗುರು ಕೃಪಾಕಟಾಕ್ಷದಿಂದ ನಮ್ಮೊಂದಿಗೆ ದಿವ್ಯ ಶಕ್ತಿಯಾಗಿ ಅವರು ಸದಾ ನಡೆಯುತ್ತಿರುತ್ತಾರೆ. ಅಂತಹ ಗುರುಶಕ್ತಿಯ ಕಾರ್ಯದಲ್ಲಿ ಜೀವನವನ್ನು ತೊಡಗಿಸಿಕೊಂಡರೆ ನಿತ್ಯ ನಿರಂತರವಾಗಿ ಗುರು ಹರಸುತ್ತಿರುವುದು ನಮ್ಮ ಪುಣ್ಯ. ಅಂತಹ ಗುರುಗಳು ಹಾರಕೂಡ ಶ್ರೀಗಳು. ಹಾರಕೂಡ ಶ್ರೀಗಳು ಕುಳಿತಲ್ಲಿ ನಿಂತಲ್ಲಿ ಪೂಜೆಯಲ್ಲಿ ಪ್ರಸಾದದಲ್ಲಿ ಪ್ರವಚನದಲ್ಲಿ ಪ್ರಯಾಣದಲ್ಲಿ ಕೇವಲ ದೈವೀ ಸ್ವರೂಪದ ಭಕ್ತ ಸಂದೋಹವನ್ನು ಸದಾ ಕಾಣುತ್ತಾರೆ ಅವರ ಧ್ಯಾನ ಮತ್ತು ಮೌನಗಳಲ್ಲಿ ಇರುವುದು ಕೇವಲ ಆಧ್ಯಾತ್ಮ ಸಾಹಿತ್ಯ ಸಂಸ್ಕೃತಿ ಚಿಂತನ ಮತ್ತು ಸಮಾಜಮುಖಿ ಅಭಿವೃದ್ಧಿ ಮಾತ್ರ.
ಒಬ್ಬ ವ್ಯಕ್ತಿಯಲ್ಲಿ ಸದ್ವಿಚಾರಗಳನ್ನು ತುಂಬಿ “ನಿನಗೆ ನೀನೇ ಬೆಳಕಾಗು”- ಎಂಬ ಸಂದೇಶವನ್ನು ತುಂಬುವ ಮಹತ್ಕಾರ್ಯವನ್ನು ಗುರು ನಿತ್ಯ ಮಾಡುತ್ತಲೇ ಇರುತ್ತಾರೆ. ಇದಕ್ಕಾಗಿ ಗುರು ಹಾಗೂ ಗೋವಿಂದರಲ್ಲಿ ನಾನು ಮೊದಲು ವಂದಿಸುವುದು ಗುರುವನ್ನು ಎಂದಿದ್ದಾರೆ ಕಬೀರದಾಸರು. ಶಿವ ಪಥವ ನರಿ ವಡೆ ಗುರುಪಥವೆ ಮೊದಲು ಎಂದವರು ಶಿವಶರಣರು. ಅಲೆಕ್ಸಾಂಡರ್ ಚಕ್ರವರ್ತಿ ತನ್ನ ಗುರುವನ್ನು ಬದುಕಿನ ಉದ್ಧಾರಕ ಎಂದು ಕರೆದಿದ್ದಾನೆ ಹರ ಮುನಿದರೆ ಗುರು ಕಾಯ್ವನು, ಗುರು ಮುನಿದರೆ ಕಾವರಾರು ಎಂದಿದ್ದಾರೆ ಸಾಧಕರು. ಹಿಂದೂ ಧರ್ಮದ ದಯೆ ಬುದ್ಧನ ಕರುಣೆ ಯೇಸು ಸ್ವಾಮಿಯ ತಾಳ್ಮೆ ಪ್ರವಾದಿ ಮಹಮ್ಮದ್ ಪೈಗಂಬರರ ಜೀವ ಕಾರುಣ್ಯ, ಬಸವಣ್ಣನವರ ಸಕಲ ಜೀವಾತ್ಮರಿಗೆ ಲೇಸ ಬಯಸುವ ಗುಣ ಬ್ರಹ್ಮಶ್ರೀ ನಾರಾಯಣ ಗುರುಗಳ “ಒಂದೇ ಜಾತಿ- ಒಂದೇ ಮತ- ಒಬ್ಬನೇ ದೇವರು” ಎಂಬ ಎಲ್ಲ ಗುಣ ಧರ್ಮಗಳನ್ನು ಅಳವಡಿಸಿಕೊಂಡ ಹಾರಕೂಡ ಗುರುವರ್ಯರು ನಮಗೆಲ್ಲ ಆಧ್ಯಾತ್ಮದ ಬೆಳಕು. ಅದಕ್ಕಾಗಿ ಅವರು ಪ್ರಾತಸ್ಮರಣೀಯರು ಭಗವಂತನು ಯುಗಯುಗಗಳಲ್ಲಿಯೂ ಗುರುವಿನ ರೂಪದಲ್ಲಿ ಅವತೀರ್ಣನಾಗುತ್ತಾನೆ ಸಚ್ಚಿದಾನಂದನೆ ಗುರು ಅಂತ ಗುರುವಿನಲ್ಲಿ ನಿಷ್ಕಾಮ ಭಾವನೆಯಿಂದ ಕಾರ್ಯ ಮಾಡುವುದರಿಂದ ಚಿತ್ತ ಶುದ್ದಿಯಾಗುವುದಲ್ಲದೆ ಭಗವಂತನಲ್ಲಿ ಅನುರಾಗ ವೃದ್ಧಿಸಿ ಆತನ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ ಅದಕ್ಕಾಗಿ ಗುರುದೇವರು, ದೇವರೇ ಗುರುವಾಗಿ ನಮ್ಮ ಬಾಳಿನಲ್ಲಿ ಶಕ್ತಿಯಾಗಿ ನಿಲ್ಲುತ್ತಾರೆ ಅಂತಹ ಶಕ್ತಿಯೇ ಹಾರಕೂಡದ ಯತಿವರ್ಯರು. ಪೂಜ್ಯರ 64ರ ಜನ್ಮೋತ್ಸವದ ಅರಿವು ನಮ್ಮೆಲ್ಲರ ಅರಿವು ಆಗಿ ಜ್ಞಾನದ ಮತ್ತು ಭಕ್ತಿಯ ವಿಸ್ತಾರದ ಅನುಭೂತಿಯನ್ನು ತಂದುಕೊಡುವ ಮಹಾನ್ ಗಳಿಗೆಯಾಗಿದೆ.
” ಭಾವೈಕ್ಯದಾ ತೈಲವನೆರೆದೊಡೆ ಚೆನ್ನವೀರ ಶ್ರೀ ಜ್ಯೋತಿ ಬೆಳಗಿದರು ನೋಡಾ ಎಂಬಂತೆ ಹಾರಕೂಡದ ಆಧ್ಯಾತ್ಮದ ಬೆಳಕು ಎಲ್ಲೆಡೆ ಪಸರಿಸಿ ಲೋಕಕಲ್ಯಾಣವಾಗಲಿ. ಭಕ್ತ ಸಮುದಾಯದ ಮಾನಸಿಕ ಹರಕೆಗಳನ್ನು ಪರಿಹರಿಸಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರನ್ನು ಕ್ರಿಯಾಶೀಲಗೊಳಿಸಿ, ರಾಷ್ಟ್ರಪುರುಷರಾಗಿಸುವ ಗುರು ಕಾರುಣ್ಯ ಸದಾ ನಮ್ಮದಾಗಲಿ ಎಂಬುದೇ ನಮ್ಮೆಲ್ಲರ ಮನದ ಅಭೀಷ್ಟೆ.

– ಡಾ. ಸದಾನಂದ ಪೆರ್ಲ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
