ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಲಿರುವ ಪ್ರಮುಖ ಆರೋಪಿ
ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಬೆಟ್ಟಿಂಗ್ ಜಾಲದ ವಿರುದ್ಧದ ಕ್ರಮದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಹಾದೇವ್ ಬೆಟ್ಟಿಂಗ್ ಆ್ಯಪ್ನ ಪ್ರವರ್ತಕ ಸೌರಭ್ ಚಂದ್ರಾಕರ್ನನ್ನು ಒಮಾನ್ನಿಂದ ಭಾರತಕ್ಕೆ ಹಸ್ತಾಂತರಿಸಿಕೊಳ್ಳುವಲ್ಲಿ ಸಿಬಿಐ ಯಶಸ್ವಿಯಾಗಿದೆ.
ನವದೆಹಲಿ: ಮಹಾದೇವ್ ಆ್ಯಪ್ ಅಕ್ರಮ ಬೆಟ್ಟಿಂಗ್ ಜಾಲದ ಪ್ರವರ್ತಕ ಸೌರಭ್ ಚಂದ್ರಾಕರ್ನನ್ನು ಕೇಂದ್ರ ತನಿಖಾ ದಳ (CBI), ಇತರ ಕೇಂದ್ರ ತನಿಖಾ ಸಂಸ್ಥೆಗಳ ಸಹಕಾರದೊಂದಿಗೆ ಒಮಾನ್ನಿಂದ ಭಾರತಕ್ಕೆ ಹಸ್ತಾಂತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಒಮಾನ್ಗೆ ವಿಶೇಷವಾಗಿ ನಿಯೋಜಿಸಲಾಗಿದ್ದ ಸಿಬಿಐ ತಂಡವು ಸೌರಭ್ ಚಂದ್ರಾಕರ್ನನ್ನು ಭಾರತಕ್ಕೆ ಕರೆತಂದಿದೆ. ಇದೀಗ ಆತನನ್ನು ರಾಯ್ಪುರದ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿರುವ ಸಿಬಿಐನ ಎರಡು ಪ್ರಕರಣಗಳು ಮತ್ತು ವಿಚಾರಣಾ ದೂರು ಸಲ್ಲಿಕೆಯಾಗಿರುವ ಜಾರಿ ನಿರ್ದೇಶನಾಲಯದ (ED) ಒಂದು ಪ್ರಕರಣದಲ್ಲಿ ಆತ ವಿಚಾರಣೆ ಎದುರಿಸಬೇಕಾಗಿದೆ.
ಭಾರತೀಯ ನಾಗರಿಕರ ವಿರುದ್ಧ ವಿದೇಶದಿಂದ ಕಾರ್ಯನಿರ್ವಹಿಸುವ ಅಂತಾರಾಷ್ಟ್ರೀಯ ಅಪರಾಧ ಜಾಲಗಳಲ್ಲಿರುವ ಪರಾರಿಯಾದ ಆರೋಪಿಗಳನ್ನು ದೇಶಕ್ಕೆ ಮರಳಿ ಕರೆತಂದು ಭಾರತೀಯ ಕಾನೂನಿನ ಪ್ರಕಾರ ವಿಚಾರಣೆ ಎದುರಿಸುವಂತೆ ಮಾಡುವ ಭಾರತದ ನಿರಂತರ ಪ್ರಯತ್ನದಲ್ಲಿ ಈ ಹಸ್ತಾಂತರ ಮಹತ್ವದ ಮೈಲಿಗಲ್ಲಾಗಿದೆ.
ಛತ್ತೀಸ್ಗಢ ಸರ್ಕಾರದ ಕೋರಿಕೆಯ ಮೇರೆಗೆ ಮಹಾದೇವ್ ಆನ್ಲೈನ್ ಬುಕ್ ಪ್ರಕರಣಗಳ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು.
ತನಿಖೆಯ ವೇಳೆ, ಮಹಾದೇವ್ ಆನ್ಲೈನ್ ಬುಕ್ ದೇಶದ ಅತಿದೊಡ್ಡ ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲಗಳಲ್ಲೊಂದು ಎಂಬುದು ಬೆಳಕಿಗೆ ಬಂದಿದೆ. ಈ ಜಾಲವು ಭಾರತದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿತ್ತು. ದೇಶಾದ್ಯಂತ ಹರಡಿದ್ದ ಫ್ರಾಂಚೈಸಿ ಮಾದರಿಯ ‘ಪ್ಯಾನೆಲ್’ಗಳು ಮತ್ತು ‘ಶಾಖೆ’ಗಳ ಮೂಲಕ ಕ್ರಿಕೆಟ್, ಫುಟ್ಬಾಲ್, ಇಸ್ಪೀಟ್ ಆಟಗಳು ಹಾಗೂ ಇತರ ಘಟನೆಗಳ ಮೇಲೆ ಅಕ್ರಮ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಈ ಜಾಲವು ಬಳಕೆದಾರರನ್ನು ನೋಂದಾಯಿಸಿಕೊಂಡು ಅವರಿಂದ ಬೆಟ್ಟಿಂಗ್ ಹಣವನ್ನು ಸಂಗ್ರಹಿಸುತ್ತಿತ್ತು.
ಅಕ್ರಮ ಬೆಟ್ಟಿಂಗ್ನಿಂದ ಬಂದ ಹಣವನ್ನು ಹೆಚ್ಚಿನ ಸಂಖ್ಯೆಯ ಮಧ್ಯವರ್ತಿ ಬ್ಯಾಂಕ್ ಖಾತೆಗಳ (Mule Bank Accounts) ಮೂಲಕ ವರ್ಗಾಯಿಸಲಾಗುತ್ತಿತ್ತು. ಹಲವು ವಹಿವಾಟುಗಳ ಮೂಲಕ ಹಣದ ಮೂಲವನ್ನು ಮರೆಮಾಚಿ, ಹವಾಲಾ ಮಾರ್ಗಗಳ ಮೂಲಕ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು. ಈ ಜಾಲವು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಸಾರ್ವಜನಿಕ ಅಧಿಕಾರಿಗಳಿಗೆ ಅಕ್ರಮವಾಗಿ ಹಣ ಪಾವತಿಸಲು ಕೂಡ ಈ ಹಣದ ಒಂದು ಭಾಗವನ್ನು ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಸಿಬಿಐ 1988ರ ಭ್ರಷ್ಟಾಚಾರ ತಡೆ ಕಾಯ್ದೆ, ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದ ವಿಧಿಗಳು ಹಾಗೂ ಛತ್ತೀಸ್ಗಢ ಜೂಜಾಟ (ನಿಷೇಧ) ಕಾಯ್ದೆಯ ಅಡಿಯಲ್ಲಿ ಆರೋಪಪಟ್ಟಿಗಳನ್ನು ಸಲ್ಲಿಸಿದೆ. ಈ ಆರೋಪಪಟ್ಟಿಗಳಲ್ಲಿ ಸೌರಭ್ ಚಂದ್ರಾಕರ್ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಇತ್ತ, ಜಾರಿ ನಿರ್ದೇಶನಾಲಯವು ಭಾರತ ಮತ್ತು ವಿದೇಶಗಳಲ್ಲಿರುವ ಆತನಿಗೆ ಸಂಬಂಧಿಸಿದ ಹಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಚಂದ್ರಾಕರ್ ವಿರುದ್ಧ ಹೊರಡಿಸಲಾಗಿದ್ದ ರೆಡ್ ಕಾರ್ನರ್ ನೋಟಿಸ್ ಆಧರಿಸಿ ಆತನನ್ನು ಪತ್ತೆಹಚ್ಚಿದ ರಾಯಲ್ ಒಮಾನ್ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಆರೋಪಿಯ ವಿರುದ್ಧ ಸಂಗ್ರಹಿಸಿದ್ದ ಎಲ್ಲ ಸಾಕ್ಷ್ಯಾಧಾರಗಳೊಂದಿಗೆ ಒಮಾನ್ಗೆ ಅಧಿಕೃತ ಹಸ್ತಾಂತರ ಪ್ರಸ್ತಾವನೆಗಳನ್ನು ತಕ್ಷಣವೇ ಕಳುಹಿಸಿಕೊಟ್ಟಿದ್ದವು.
ಭಾರತ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳು ಮತ್ತು ಇಂಟರ್ಪೋಲ್ನ ರಾಷ್ಟ್ರೀಯ ಕೇಂದ್ರ ಬ್ಯೂರೋದೊಂದಿಗೆ ನಿಕಟ ಸಮನ್ವಯ ಸಾಧಿಸುವ ಮೂಲಕ ಹಸ್ತಾಂತರ ಪ್ರಕ್ರಿಯೆಯನ್ನು ಮುಂದುವರಿಸಲಾಯಿತು. ಒಮಾನ್ನ ಸಂಬಂಧಪಟ್ಟ ಅಧಿಕಾರಿಗಳ ಸಹಕಾರವನ್ನೂ ಪಡೆಯಲಾಯಿತು. ಹಸ್ತಾಂತರಕ್ಕೆ ಅನುಮತಿ ದೊರೆತ ಬಳಿಕ ಸಿಬಿಐ ತಂಡವು ಮಸ್ಕತ್ಗೆ ತೆರಳಿ ಆರೋಪಿಯನ್ನು ಭಾರತಕ್ಕೆ ಕರೆತಂದಿದೆ.
ಭಾರತ ಮತ್ತು ಒಮಾನ್ ನಡುವಿನ ನಿಕಟ ಹಾಗೂ ಸ್ನೇಹಪರ ಸಂಬಂಧಗಳನ್ನು ಪ್ರತಿಬಿಂಬಿಸುವ ಮತ್ತು ಅಂತಾರಾಷ್ಟ್ರೀಯ ಸಂಘಟಿತ ಅಪರಾಧಗಳನ್ನು ಎದುರಿಸುವ ಎರಡೂ ದೇಶಗಳ ಬದ್ಧತೆಯನ್ನು ತೋರಿಸುವ ಸಹಕಾರಕ್ಕಾಗಿ ಒಮಾನ್ ಸುಲ್ತಾನೇಟ್ ಸರ್ಕಾರ ಮತ್ತು ರಾಯಲ್ ಒಮಾನ್ ಪೊಲೀಸರಿಗೆ ಸಿಬಿಐ ಕೃತಜ್ಞತೆ ಸಲ್ಲಿಸಿದೆ.
ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಟ್ರಾನ್ಸಿಟ್ ರಿಮ್ಯಾಂಡ್ (Transit Remand) ಪಡೆದು ರಾಯ್ಪುರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
