ಅಂಕಣ – ಸಂಘ ಸೌರಭ 46
- ಎಸ್.ಎಸ್. ನರೇಂದ್ರಕುಮಾರ್, ಲೇಖಕ
ಪಂಡಿತ ದೀನದಯಾಳ ಉಪಾಧ್ಯಾಯರು ಉತ್ತರ ಪ್ರದೇಶದ ಪ್ರಾಂತ ಪ್ರಚಾರಕರಾಗಿದ್ದರು. 1951ರಲ್ಲಿ ಜನಸಂಘ ಪ್ರಾರಂಭವಾದಾಗ, ದೀನದಯಾಳರನ್ನು ಜನಸಂಘದ ಕಾರ್ಯಕ್ಕಾಗಿ ನಿಯೋಜಿಸಲಾಯಿತು. ಸಂಘಕಾರ್ಯದಲ್ಲಿ ರುಚಿಯನ್ನು ಕಂಡಿದ್ದ ದೀನದಯಾಳರಿಗೆ ರಾಜಕೀಯ ಕಾರ್ಯ ರುಚಿಸಲಿಲ್ಲ. ಅವರನ್ನು ಜನಸಂಘಕ್ಕೆ ನಿಯೋಜಿಸಿದ ಕೆಲದಿನಗಳ ನಂತರದಲ್ಲಿ ಅವರು ಗುರೂಜಿಯವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದಾಗ, “ನನಗೆ ರಾಜಕೀಯ ಖಂಡಿತ ರುಚಿಸುತ್ತಿಲ್ಲ. ಏತಕ್ಕಾಗಿ ನನ್ನನ್ನು ಈ ಜಂಜಾಟಕ್ಕೆ ತಳ್ಳಿರುವಿರಿ? ನನಗಂತೂ ಸಂಘಕಾರ್ಯವೇ ಮಾಡಬೇಕು ಎಂದಿಷ್ಟ” ಎಂದು ಗುರೂಜಿಯವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಆಗ ಗುರೂಜಿಯವರು, “ನಿಮ್ಮ ಮನಸ್ಸಿನಲ್ಲಿ ರಾಜಕೀಯದ ಬಗ್ಗೆ ಸ್ವಲ್ಪವೂ ಒಲವಿಲ್ಲ. ಅದಕ್ಕಾಗಿಯೇ ಆ ಕ್ಷೇತ್ರಕ್ಕೆ ನಿಮ್ಮನ್ನು ನಿಯುಕ್ತಿ ಮಾಡಿದ್ದೇವೆ. ಆದರೆ, ಆ ಕ್ಷೇತ್ರದ ಬಗ್ಗೆ ನಿಮಗೆ ಯಾವಾಗ ಮೋಹ ಹುಟ್ಟುತ್ತದೆಯೋ ಆ ಕ್ಷಣವೇ ನಿಮ್ಮನ್ನು ಆ ಕ್ಷೇತ್ರದಿಂದ ವಾಪಸ್ ಕರೆಸುತ್ತೇವೆ” ಎಂದುತ್ತರಿಸಿದರು. ಸಂಘದಲ್ಲಿ ಸ್ಥಾನ ಪಡೆಯುವ ಇಚ್ಚೆ ಇಲ್ಲದವನಿಗೇ ಜವಾಬ್ದಾರಿ ನೀಡುವುದನ್ನು ನಾವು ಅನೇಕ ಬಾರಿ ಕಾಣುತ್ತೇವೆ.
ಸಂಘದಲ್ಲಿ ಜವಾಬ್ದಾರಿಯನ್ನು ನೀಡುವಾಗ, ಅದು ಪದವಿಯೆಂದೋ ಅಥವಾ ಪ್ರತಿಷ್ಠೆಯ ಸ್ಥಾನವೆಂದೋ ಅರ್ಥ ಬರದಂತೆ ಎಚ್ಚರ ವಹಿಸಲಾಗುತ್ತದೆ, ಎಲ್ಲ ಸಂದರ್ಭದಲ್ಲಿಯೂ ಅದನ್ನು ‘ಜವಾಬ್ದಾರಿ, ಅಧಿಕಾರವಲ್ಲ’ ಎಂದೇ ಒತ್ತಿ ಹೇಳಲಾಗುತ್ತದೆ, ಇಲ್ಲಿ ಪದವಿಯು ಪ್ರತಿಷ್ಠೆಯ ಬದಲು ಜವಾಬ್ದಾರಿಯ ರೂಪದಲ್ಲಿರುತ್ತದೆ. ಆದರೆ ಯಾವುದೇ ಕಾರ್ಯಕರ್ತನಲ್ಲಿ ಎಷ್ಟೇ ಯೋಗ್ಯತೆ ಇದ್ದರೂ ಅವನಿಗೆ ಜವಾಬ್ದಾರಿ ಪಡೆಯುವ ಆಸೆ ಇದ್ದಲ್ಲಿ ಅದನ್ನು ನೀಡಬಾರದೆಂಬ ಸೂತ್ರವನ್ನು ಸಂಘದಲ್ಲಿ ಪರಿಪಾಲಿಸಲಾಗುತ್ತದೆ. ಇದೇ ರೀತಿ ಸಂಘಟನೆಯಲ್ಲಿ ತನ್ನ ಸ್ಥಾನ ಯಾವುದು ಎಂಬ ಬಗ್ಗೆ ಯಾರೂ ಚಿಂತಿಸುವ ಆವಶ್ಯಕತೆ ಇರುವುದಿಲ್ಲ. ಸ್ಥಾನವನ್ನು ನಿಶ್ಚಯಿಸುವ ಹೊಣೆ ಉಳಿದ ಕಾರ್ಯಕರ್ತರದು, ನನ್ನದಲ್ಲ. ಕಾರ್ಯದ ದೃಷ್ಟಿಯಿಂದ ನನ್ನ ಸ್ವಯಂ ಜವಾಬ್ದಾರಿ ಮತ್ತು ಸ್ಥಾನದ ಚಿಂತೆಯನ್ನು ಅನ್ಯ ಕಾರ್ಯಕರ್ತರು ವಸ್ತುನಿಷ್ಠ ಆಧಾರದ ಮೇಲೆ ಮಾಡುವುದು ಅವಶ್ಯವಾಗಿದೆ.
ಸಂಘವು ತನ್ನ ಕಾರ್ಯದಲ್ಲಿ ಅಳವಡಿಸಿಕೊಂಡಿರುವ ನೇತೃತ್ವದ ಕಲ್ಪನೆಯು ನಮ್ಮ ಪರಂಪರೆಯ ಆಧಾರದಲ್ಲಿ ವಿಕಸಿತವಾಗಿರುವುದು. ನಮ್ಮ ಸಂಸ್ಕೃತಿಯ ಸಂದೇಶವೆಂದರೆ, ಜೀವನದಲ್ಲಿ ನಮಗೆ ಪ್ರಾಪ್ತವಾಗುವ ಸ್ಥಾನ ಪದವಿಗಳಿಂದ ನಮ್ಮ ಹಿರಿಮೆ ನಿರ್ಧಾರವಾಗದು; ಹಿರಿಮೆಯು ನಿರಂತರ ತಪಸ್ಸಿನಿಂದ ಪ್ರಾಪ್ತವಾಗುವುದು. ಚಿನ್ನವನ್ನು ಬೆಂಕಿಯಲ್ಲಿ ಸುಟ್ಟಾಗಲೇ ಶುದ್ಧ ಅಪರಂಜಿಯಾಗುವುದು. ಕಾರ್ಯಕರ್ತನು ಕೂಡ ಯಾವಾಗ ತನ್ನ ಕಾರ್ಯದ ಒತ್ತಡವನ್ನು ನಿಭಾಯಿಸುತ್ತಾನೋ ಆಗಲೇ ಅವನಲ್ಲಿರುವ ಅಹಂಕಾರವು ಮಾಯವಾಗಿ ಅವನು ನಾಯಕತ್ವಕ್ಕೆ ಯೋಗ್ಯನಾಗುತ್ತಾನೆ.
ಸಂಘದ ಸರಕಾರ್ಯವಾಹರಾಗಿದ್ದ ಮಾನ್ಯ ಹೊ.ವೆ. ಶೇಷಾದ್ರಿಯವರು ಆರೋಗ್ಯ ಹಾಗೂ ವಯಸ್ಸಿನ ಕಾರಣದಿಂದ ಆ ಜವಾಬ್ದಾರಿಯಿಂದ ಮುಕ್ತರಾಗಿ ಅಖಿಲ ಭಾರತ ಪ್ರಚಾರ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಸಂದರ್ಭ. ಆಗ ಸರಕಾರ್ಯವಾಹರಾಗಿದ್ದವರು ಮಾನ್ಯ ಮೋಹನ ಭಾಗವತರು. ಬೈಠಕ್ಗಳಲ್ಲಿ ಮಹತ್ವದ ಚರ್ಚೆಗಳಾದಾಗ, ಪ್ರಮುಖ ನಿರ್ಣಯ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ, ಮೋಹನ ಭಾಗವತರು ಶೇಷಾದ್ರಿಯವರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದರು. ಶೇಷಾದ್ರಿಯವರು ಸರಕಾರ್ಯವಾಹರಾಗಿ ಇಲ್ಲದಿದ್ದಾಗಲೂ ಅವರ ಮಹತ್ವ ಕಡಿಮೆಯಾಗಲಿಲ್ಲ. ಅವರ ತಪಸ್ಸು ಮತ್ತು ಹಿರಿತನದ ಕಾರಣದಿಂದಾಗಿ ಸರಕಾರ್ಯವಾಹರೂ ಅವರ ಅಭಿಪ್ರಾಯವನ್ನು ಗೌರವಿಸುತ್ತಿದ್ದರು
ಗುಣೈರುತ್ತಮತಾಂ ಯಾತಿ ನೊಚ್ಚೈರಾಸನಸಂಸ್ಥಿತಃ |
ಪ್ರಾಸಾದಶಿಖರಸ್ಥೋಽಪಿ ಕಾಕಃ ಕಿಂ ಗರುಡಾಯತೇ ||
ಈ ಸುಭಾಷಿತವು ನಮ್ಮ ಸಂಸ್ಕೃತಿಯಲ್ಲಿ ಸ್ಥಾನದ ಕುರಿತು ಇರುವ ಚಿಂತನೆಯನ್ನು ತಿಳಿಸುತ್ತದೆ. ಗರುಡ ಗರುಡನೇ, ಕಾಗೆ ಕಾಗೆಯೇ, ಸ್ಥಾನ ಬದಲಾದರೂ ಕಾಗೆ ಗರುಡನಾಗುವುದಿಲ್ಲ, ಗರುಡ ಕಾಗೆಯಾಗುವುದಿಲ್ಲ. ಒಂದು ವೇಳೆ ಗರುಡ ನೆಲದಲ್ಲಿದ್ದು ಕಾಗೆಯು ಅರಮನೆಯ ಶಿಖರದ ಮೇಲೆ ಕುಳಿತಿದ್ದರೂ ಕಾಗೆ ಕಾಗೆಯೇ ಆಗಿರುತ್ತದೆ. ಉನ್ನತ ಸ್ಥಾನದಲ್ಲಿರುವ ಕಾರಣ ಅದು ಗರುಡನಾಗುವುದಿಲ್ಲ. ಕೇವಲ ಪದವಿ ಅಥವಾ ಸ್ಥಾನದಿಂದ ಗೌರವ ಬರುವುದಿಲ್ಲ. ಗೌರವವು ಯಥಾರ್ಥ ಮೌಲ್ಯಗಳಿಂದ ಬರುತ್ತದೆ ಎಂಬುದು ನಮ್ಮ ನಂಬಿಕೆ.
ಸಂಘವು ಕಾರ್ಯಕರ್ತನ ಕುರಿತು ನಿಶ್ಚಯಿಸಿರುವ ಮಾನದಂಡ ಆತನ ವಿಶ್ವಾಸಾರ್ಹತೆ. ವ್ಯಕ್ತಿಯ ಕ್ಷಮತೆ, ಕುಶಲತೆ, ಕಾರ್ಯತತ್ಪರತೆ ಎಷ್ಟೇ ಉತ್ತಮವಾಗಿದ್ದರೂ, ಅವನಲ್ಲಿ ದೃಢತೆಯ ಆಧಾರದಲ್ಲಿ ಕಾರ್ಯದ ಬಗ್ಗೆ ನಿಃಸ್ವಾರ್ಥ ಬದ್ಧತೆ ಇಲ್ಲದಿದ್ದಲ್ಲಿ ಅವನನ್ನು ಕಾರ್ಯಕರ್ತನೆಂದು ಪರಿಗಣಿಸುವುದಿಲ್ಲ. ಕ್ಷಮತೆ, ಕಾರ್ಯಕುಶಲತೆ ಹಾಗೂ ತತ್ಪರತೆ ಒಂದೆಡೆ ಮತ್ತು ಇನ್ನೊಂದೆಡೆ ವಿಶ್ವಾಸಾರ್ಹತೆ ಹಾಗೂ ಸೈದ್ಧಾಂತಿಕ ಬದ್ಧತೆ ಇವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಆರಿಸಬೇಕಾದ ಸಂದರ್ಭದಲ್ಲಿ ಕಡಿಮೆ ಕ್ಷಮತೆ ಮೊದಲಾದ ಗುಣಗಳಿರುವ, ಆದರೆ ಸಂಪೂರ್ಣ ಸಮರ್ಪಣೆ, ಬದ್ಧತೆ ಮತ್ತು ವಿಶ್ವಾಸಾರ್ಹತೆ ಇರುವ ಕಾರ್ಯಕರ್ತನನ್ನೇ ಆರಿಸಿಕೊಳ್ಳುವುದು ಸಂಘದ ರೀತಿಯಾಗಿದೆ. ಅಸಮರ್ಪಿತ, ಕರ್ತೃತ್ವಶಾಲಿ ವ್ಯಕ್ತಿಗಿಂತ ಆತ್ಮಸಮರ್ಪಿತ, ಕಡಿಮೆ ಕರ್ತೃತ್ವಶಾಲಿ ವ್ಯಕ್ತಿಯು ನಮ್ಮ ಕಾರ್ಯದ ದೃಷ್ಟಿಯಿಂದ ನಮಗೆ ಸ್ವೀಕಾರಾರ್ಹ.
ಸಾರ್ವಜನಿಕ ಕ್ಷೇತ್ರಗಳಲ್ಲಿ ವೃತ್ತಿಪರತೆ ಮತ್ತು ದೃಢನಿಶ್ಚಯ ಇವುಗಳ ನಡುವೆ ಸ್ಪರ್ಧೆ ಯಾವಾಗಲೂ ಕಾಣುತ್ತದೆ. ಆದರೆ ಸಂಘದಲ್ಲಿ ಧ್ಯೇಯಕ್ಕೆ ಬದ್ಧತೆ, ಸಮರ್ಪಣಾಭಾವ ಮತ್ತು ವಿಶ್ವಸನೀಯತೆಗೆ ಹೆಚ್ಚು ಮಹತ್ವವಿದೆ.
