ಸೆ. 5 ರಂದು ವಿಜ್ಞಾನ ಭವನದಲ್ಲಿ ಪ್ರದಾನ ಮಾಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026 ರ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 5 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ 48 ಶಾಲಾ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಇವರು ಶಾಲಾ ಶಿಕ್ಷಣವನ್ನು ಸುಧಾರಿಸುವಲ್ಲಿ ಮತ್ತು ವಿದ್ಯಾರ್ಥಿಗಳ ಜೀವನವನ್ನು ಸಮೃದ್ಧಗೊಳಿಸುವಲ್ಲಿ ನೀಡಿರುವ ಅತ್ಯುತ್ತಮ ಕೊಡುಗೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಕಾರ್ಯಕ್ರಮದ ಸಮಯದಲ್ಲಿ ಪ್ರತಿಯೊಬ್ಬ ಪ್ರಶಸ್ತಿ ವಿಜೇತರ ಮಾದರಿ ಕೆಲಸ ಮತ್ತು ಕೊಡುಗೆಗಳನ್ನು ಎತ್ತಿಹಿಡಿಯುವ ಕಿರು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಠಿಣ, ಪಾರದರ್ಶಕ ಮತ್ತು ಆನ್ಲೈನ್ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಶಿಕ್ಷಕರನ್ನು ಗೌರವಿಸಲು ಪ್ರತಿವರ್ಷ ಶಿಕ್ಷಕರ ದಿನದಂದು ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುತ್ತದೆ.
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯು ದೇಶದ ಅತ್ಯುತ್ತಮ ಶಿಕ್ಷಕರ ಕೊಡುಗೆಯನ್ನು ಗುರುತಿಸುತ್ತದೆ ಮತ್ತು ತಮ್ಮ ಬದ್ಧತೆ ಹಾಗೂ ಸಮರ್ಪಣೆಯ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ವಿದ್ಯಾರ್ಥಿಗಳ ಜೀವನವನ್ನು ಸಫಲಗೊಳಿಸಲು ಕೊಡುಗೆ ನೀಡಿದವರನ್ನು ಗೌರವಿಸುತ್ತದೆ. 2026 ರ ಪ್ರಶಸ್ತಿಗಳಿಗಾಗಿ ಅರ್ಹ ಶಿಕ್ಷಕರಿಂದ ಶಿಕ್ಷಣ ಸಚಿವಾಲಯದ ಪೋರ್ಟಲ್ ಮೂಲಕ ಜೂನ್ 15 ರಿಂದ ಜುಲೈ 20 ರವರೆಗೆ ಆನ್ಲೈನ್ ಸ್ವಯಂ-ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಮೂರು ಹಂತಗಳ ಆಯ್ಕೆ ಪ್ರಕ್ರಿಯೆಯ ಮೂಲಕ ಈ ವರ್ಷ ಒಟ್ಟು 48 ಶಾಲಾ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ವಿಜೇತರಲ್ಲಿ 27 ರಾಜ್ಯಗಳು, ಏಳು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರದ ಆರು ಸಂಸ್ಥೆಗಳ ಶಿಕ್ಷಕರು ಸೇರಿದ್ದಾರೆ. ಆಯ್ಕೆಯಾದ 48 ಶಿಕ್ಷಕರಲ್ಲಿ 26 ಪುರುಷರು ಮತ್ತು 22 ಮಹಿಳೆಯರಿದ್ದಾರೆ.
ಈ ಕಾರ್ಯಕ್ರಮವನ್ನು ದೂರದರ್ಶನ ಮತ್ತು ಶಿಕ್ಷಣ ಸಚಿವಾಲಯದ ಸ್ವಯಂ ಪ್ರಭಾ (SWAYAM PRABHA) ಚಾನೆಲ್ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸಚಿವಾಲಯದ ಅಧಿಕೃತ ವೆಬ್ಕಾಸ್ಟ್ ಪ್ಲಾಟ್ಫಾರ್ಮ್ ಮತ್ತು ಅದರ ಸಾಮಾಜಿಕ ಮಾಧ್ಯಮ ಚಾನೆಲ್ಗಳ ಮೂಲಕವೂ ಇದನ್ನು ನೇರವಾಗಿ ವೀಕ್ಷಿಸಬಹುದು. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದ್ದು, ಅದನ್ನು ಯಾವುದೇ ನಿರ್ದಿಷ್ಟ ಅರ್ಹತೆಯ ಆದ್ಯತೆಯ ಕ್ರಮದಲ್ಲಿ ಜೋಡಿಸಲಾಗಿಲ್ಲ.
