ಜನನ: 13.12.1938 ಅಸ್ತಂಗತ: 13.07.2026
ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ|
ಅಜಾ ಪುತ್ರಂ ಬಲಿಂ ದದ್ಯಾತ್ ದೇವೋ ದುರ್ಬಲ ಘಾತಕಃ||
ವೇದಿಕೆಯಿಂದ ಹೀಗೆ ಕಂಚಿನ ಕಂಠದಿಂದ ಸುಭಾಷಿತ ಮೊಳಗುತ್ತಿದ್ದರೆ, ದೂರದಲ್ಲಿದ್ದವರಿಗೂ ತಿಳಿಯುತ್ತಿತ್ತು ಅದು ಯಾರ ವಾಗ್ವೈಖರಿ ಎಂದು! ಅಂದಿನ ಜನಸಂಘದಿಂದ ಇಂದಿನ ಭಾಜಪಾ ವರೆಗೆ, ಬೆಳವಣಿಗೆಯ ಎಲ್ಲ ಹಂತಗಳಲ್ಲೂ ಪಕ್ಷವನ್ನು ಕಂಡವರಿಗೆ, ಮಹಾನಗರದ ಪ್ರಮುಖರ ಪಟ್ಟಿಯಲ್ಲಿ ಮುಖ್ಯವಾಗಿ ಹೊಳೆಯುತ್ತಿದ್ದ ಹೆಸರು ರಾಮಚಂದ್ರಗೌಡರು. ಅವರ ಉಪಸ್ಥಿತಿಯಿಲ್ಲದೆ ಪಕ್ಷದ ಯಾವುದೇ ಕಾರ್ಯಕ್ರಮವನ್ನು ಊಹಿಸಲೂ ಆಗದ ದಿನಗಳಿದ್ದವು. ರಾ.ಸ್ವ.ಸಂಘದ ಕಾರ್ಯಕರ್ತರಿಗೆ, ಪಕ್ಷದ ಕಾರ್ಯಕರ್ತರಿಗೆ ಅವರ ಮನೆ ಸದಾಕಾಲ ತೆರೆದ ಬಾಗಿಲು. ಅಯೋಧ್ಯಾ ಆಂದೋಲನದ ಆರಂಭದ ದಿನಗಳಿಂದ ಸಂಪೂರ್ಣ ತೊಡಗಿಕೊಂಡು, ಕಾರಸೇವಕರಾಗಿ ಅಯೋಧ್ಯೆಗೆ ಹೋಗಿ ಪೋಲೀಸರ ಆತಿಥ್ಯ ಪಡೆದು, 32 ವರ್ಷಗಳ ನಂತರ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಮಹೋತ್ಸವವನ್ನು ವಸತಿ ವಸತಿಗಳಲ್ಲೂ ಆಚರಿಸಿದಾಗ- ದೇಹದಲ್ಲಿ ನಿಶ್ಯಕ್ತಿಯಿದ್ದರೂ – ಉತ್ಸಾಹದಿಂದ ಪಾಲ್ಗೊಂಡ ಧನ್ಯಜೀವಿ ರಾಮಚಂದ್ರಗೌಡರು. ಬೆಂಗಳೂರು ನಗರಸಭೆಗೆ ಜನಸಂಘದಿಂದ ಸ್ಪರ್ಧಿಸಿ ಆಯ್ಕೆಯಾದ ಮೊದಲ ಮೂವರ ಪೈಕಿ ಇವರೂ ಒಬ್ಬರು. (ಇನ್ನಿಬ್ಬರು ಶ್ರೀ ಶ್ರೀನಿವಾಸ ಅಯ್ಯಂಗಾರರು ಹಾಗೂ ಕೃಷ್ಣಯ್ಯನವರು). ನಂತರ ಭಾಜಪದಿಂದ ಸ್ಪರ್ಧಿಸಿ ಆಯ್ಕೆಯಾದ ಮೊದಲ ನಾಲ್ವರಲ್ಲಿ ಇವರೂ ಒಬ್ಬರು.
ಕೆಲವು ವರ್ಷಗಳ ಬಳಿಕ ವಿಧಾನ ಮಂಡಲಕ್ಕೆ ಪದವೀಧರ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಆಯ್ಕೆಯಾಗಿ, ಒಂದು ಬಾರಿ ಮಂತ್ರಿಗಳೂ ಆಗಿ, ತಮ್ಮ ಅಪಾರ ಅನುಭವವನ್ನು ಆ ಎಲ್ಲ ಕ್ಷೇತ್ರಗಳಿಗೂ ಧಾರೆಯೆರೆದು ಜನತೆಯ ಅಭಿಮಾನಗಳಿಸಿದರು. ರಾ.ಸ್ವ. ಸಂಘದ ಶತಮಾನೋತ್ಸವ ಆಚರಣೆಯ ಅಂಗವಾಗಿ ಹಿರಿಯ ಸ್ವಯಂಸೇವಕರ ಸಂಪರ್ಕ ಕಾರ್ಯಗಳು ವ್ಯಾಪಕವಾಗಿ ನಡೆದಾಗ ತಮ್ಮ ಮನೆಯಲ್ಲೇ ಅನೇಕ ಹಿರಿಯರನ್ನು (90 ವರ್ಷ ಮೀರಿದ ಅತ್ಯಂತ ಹಿರಿಯ ಸ್ವಯಂಸೇವಕರೂ ಇದ್ದರು) ಸೇರಿಸಿ ಜ್ಯೇಷ್ಠ ಪ್ರಚಾರಕ ಮಾನ್ಯ ಶ್ರೀ ಸು.ರಾಮಣ್ಣನವರ ಉಪಸ್ಥಿತಿಯಲ್ಲಿ ಸುಂದರ ಮಿಲನ ಕಾರ್ಯಕ್ರಮ ಮಾಡಿದ್ದರು. ಇತ್ತೀಚೆಗೆ ಅವರನ್ನು ಕಾಣಲು ಕೆಲವು ಸ್ವಯಂಸೇವಕರು ಹೋಗಿದ್ದಾಗ, ಹಾಸಿಗೆ ಹಿಡಿದು ಆ ನಿತ್ರಾಣ ಪರಿಸ್ಥಿತಿಯಲ್ಲೂ ಶ್ರೀ ರಾಮಣ್ಣನವರ ಕಾರ್ಯಕ್ರಮವನ್ನು ನೆನೆಸಿಕೊಂಡಿದ್ದರು.
ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಸ್ಥೈರ್ಯದಿಂದ ಮುನ್ನುಗ್ಗಿ ಸಂಘಟನೆಗೆ ನೆರವಾಗುತ್ತಿದ್ದ, ತಾವೇ ಹೇಳುತ್ತಿದ್ದ ಮೇಲಿನ ಸೂಕ್ತಿಗೆ ಅನುಗುಣವಾಗಿ ಪ್ರಬಲ ಶಕ್ತಿಯಾಗಿ ಬೆಳೆದು ಅನೇಕರಿಗೆ ಪ್ರೇರಣೆಯಾಗಿದ್ದ ಮಾಗಿದ ಜೀವವೊಂದು, ತಮ್ಮ ಮಡದಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ತೊರೆದು ಚಿರಶಾಂತಿಗೆ ತೆರಳಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಸರ್ವಶಕ್ತನಲ್ಲಿ ವಿನಮ್ರ ಪ್ರಾರ್ಥನೆ.
- ಸು. ನಾಗರಾಜ್, ಬೆಂಗಳೂರು
