ಅಂಕಣ – ನಗಾರಿ
- ಹರ್ಷ ಹೆಗಡೆ ಕೊಂಡದಕುಳಿ, ಲೇಖಕ
ಜಗತ್ತು ಆರಂಭವಾದಾಗಿನಿಂದ ಇಲ್ಲಿಯವರೆಗೆ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕೆಲವು ಬದಲಾವಣೆಗಳು ಸುಧಾರಣೆಗಳಾಗಿ ಮಾನವ ಕುಲವನ್ನು ಮತ್ತಷ್ಟು ಆಧುನಿಕ ಬದುಕಿನತ್ತ ಕೊಂಡೊಯ್ದಿದೆ. ಈ ಬದಲಾವಣೆಗಳ ನಡುವೆ ಮನುಷ್ಯ ಒಂದಷ್ಟು ನಂಬಿಕೆಗಳನ್ನು ಹಾದಿಯುದ್ದಕ್ಕೂ ತನ್ನದಾಗಿಸಿಕೊಳ್ಳುತ್ತ ಬಂದಿದ್ದಾನೆ. ಬಹುಶಃ ಅದು ಬುದ್ಧಿಜೀವಿ ಎನಿಸಿಕೊಂಡಿದ್ದಕ್ಕಾಗಿ ಇರಲೇಬೇಕಾದ ಸಂಗತಿ. ಈ ನಂಬಿಕೆಗಳು ಕೂಡ ರೂಪಾಂತರಗೊಂಡು ಕಾಲಾಂತರದಲ್ಲಿ ಹೊಸ ಹೊಸ ಚರ್ಯೆಯೊಂದಿಗೆ ಸಾಗುವಳಿ ಆಗುತ್ತಲೇ ಬಂದಿದೆ. ನಾಗರಿಕತೆ ಬೆಳೆದು, ನಂಬಿಕೆಗಳು ಗಟ್ಟಿಯಾಗಿ, ಸಿದ್ಧಾಂತಗಳು ಉದ್ಭವಿಸಿ, ಧರ್ಮ ಮತಗಳು ಚಿಗುರೊಡೆದು ಇಂದಿಗೆ ವ್ಯಕ್ತಿಯೊಬ್ಬ ಯಾವುದಾದರೂ ಒಂದು ಧರ್ಮಕ್ಕೆ, ಪಂಗಡಕ್ಕೆ, ಮತಕ್ಕೆ ಸೇರಿರಲೇಬೇಕು ಎಂಬ ಸ್ಥಿತಿಗೆ ಬಂದು ತಲುಪಿದೆ. ಆಗಲೇ ಹೇಳಿದಂತೆ ಇದು ಮನುಷ್ಯ ಸಮಾಜ ಸಮಾಜವಾಗಿ, ಸಾಂಸ್ಕೃತಿಕವಾಗಿ ಒಂದುಗೂಡಲು ಬೇಕಾಗಿರುವ ಪ್ರಮುಖ ಅಂಶ. ಅಂತೆಯೇ ಕಾಲ ಸರಿದಂತೆ ಈ ಧರ್ಮ ಮತಗಳು, ಜೀವನ ಪದ್ಧತಿಗಳು ಜಗತ್ತಿನಾದ್ಯಂತ ಹರಡಿ ಉಳಿಕೆಯವರನ್ನು ಪ್ರಭಾವಿಸಿ ತನ್ನ ಪ್ರಭಾವಲಯಕ್ಕೆ ತೆಗೆದುಕೊಂಡು ಬೆಳೆದಿರುವುದೂ, ಬೆಳೆಯುತ್ತಿರುವುದೂ ವೇದ್ಯವಾದ ವಿಚಾರವೇ.
ಈ ಹಾದಿಯಲ್ಲಿ ಅದೆಷ್ಟೋ ಮತ ಪಂಥಗಳು ಹೇಳ ಹೆಸರಿಲ್ಲದೆ ಮಾಯವಾಗಿಯೂ ಹೋಗಿವೆ. ಕಾರಣ ಮತ್ತೊಂದು ನಂಬಿಕೆಯ ಹೇರಿಕೆ – ಪ್ರಭಾವ ಎಲ್ಲವೂ. ಅದೆಷ್ಟೋ ರಾಜಮನೆತನಗಳು, ಸಾಮ್ರಾಜ್ಯಗಳು ಕೇವಲ ಈ ಧರ್ಮ ಸ್ಥಾಪನೆಯನ್ನೇ ಮಹದುದ್ದೇಶವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿವೆ. ಬಹಳ ಹಿಂದೆ ಏನಲ್ಲ, ಈಗೊಂದು ಮೂರ್ನಾಲ್ಕು ಶತಮಾನದ ಹಿಂದೆ ಸರಿದರೂ ಸಾಮ್ರಾಜ್ಯಶಾಹಿಗಳ ಅಧಿಕಾರ ವಿಸ್ತರಣೆಯ ಲಾಲಸೆಯ ಬೆನ್ನಹಿಂದೆ ಧರ್ಮ ವಿಸ್ತರಣೆಯ ಕರಿಛಾಯೆಯೂ ಇತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮಧ್ಯಪ್ರಾಚ್ಯ ದೇಶದಿಂದ ದಂಡೆತ್ತಿ ಹೊರಟ ಬಹುತೇಕ ಎಲ್ಲರೂ ತಮ್ಮ ತಮ್ಮ ನಂಬುಗೆಯ ಧರ್ಮವನ್ನೇ ಸ್ಥಾಪಿಸಹೊರಟವರೇ. ಮಹಮ್ಮದ್ ಘಜನಿ, ಮಹಮ್ಮದ್ ಘೋರಿ, ಅಲೆಕ್ಸಾಂಡರ್ ಇವರೆಲ್ಲರೂ ತಮ್ಮ ಮತವನ್ನು ಅನುಸರಿಸಬೇಕೆಂದು ಹೇರುವ ಸರ್ವ ಪ್ರಯತ್ನವನ್ನೂ ಮಾಡಿದರು. ಮತಾಂತರವಾಗದವರನ್ನು ಕತ್ತಿ ಮೊನೆಯ ಅಡಿಯಲ್ಲಿ ಬಲವಂತವಾಗಿ ಮತಾಂತರಿಸಿದರು. ಧರ್ಮದ ಅಮಲಿನಲ್ಲಿ ಕಂಡ ಕಂಡವರನ್ನೆಲ್ಲ ಕಾಫಿರರೆಂದು ಕರೆದು ಕ್ರೌರ್ಯದ ನೆರಳಿನಲ್ಲಿ ಬಲಾತ್ಕರಿಸಿ ಧರ್ಮಸಾಮ್ರಾಜ್ಯಕ್ಕೆ ಕೈಯಿಕ್ಕರು.
ಕಾಲ ಪರಿಭ್ರಮಣೆಯಲ್ಲಿ ಅದರಿಂದ ಸ್ವಲ್ಪ ಮುಂದಕ್ಕೆ ಬಂದರೆ ಯುರೋಪಿಯನ್ ಸಾಮ್ರಾಜ್ಯಗಳು ಮಾಡಿದ್ದೂ ಇದನ್ನೇ. ನೌಕೆಯೇರಿ ಹೊರಟ ನಾವಿಕರ ಜೊತೆ ಚರ್ಚ್ ನ ಪಾದ್ರಿಗಳೂ, ಧರ್ಮ ಪ್ರಚಾರಕರೂ ಸಾಗರಯಾನವನ್ನು ಕೈಗೊಂಡರು. ಇವರೂ ಇತರ ಧರ್ಮಗಳನ್ನು ತುಚ್ಚವಾಗಿ ಕಂಡು, ಅದರ ಆಚರಣೆಗಳನ್ನು ಹಂಗಿಸಿ, ನಿಂದಿಸಿ, ಮೂಢನಂಬಿಕೆಗಳೆಂದು ಜರೆದು ತಮ್ಮ ಕಿರಿಸ್ತಾನ ಧರ್ಮವನ್ನೇ ಶ್ರೇಷ್ಠ ಎಂದು ಬಿಂಬಿಸಿದರು. ಆಸೆ – ಆಮಿಷಗಳನ್ನು ಒಡ್ಡಿ ಮತಾಂತರದ ಮಹಾ ಅಭಿಯಾನವನ್ನೇ ನಡೆಸಿದರು. ಪರಿಣಾಮವಾಗಿ ಬಹುತೇಕ ಎಲ್ಲಾ ಯುರೋಪಿಯನ್ ವಸಾಹತುಗಳನ್ನು ಕ್ರಿಶ್ಚಿಯನ್ಮಯವಾಗಿಸುವಲ್ಲಿ ಯಶಸ್ವಿಯಾದರು. ಹೀಗೆ ಒಬ್ಬರು ಹಿಂಸಾಮಾರ್ಗದಲ್ಲಿ ಧರ್ಮ ವಿಸ್ತರಣೆಗೆ ಮುಂದಡಿ ಇಟ್ಟರೆ ಮತ್ತೊಬ್ಬರು ಬೌದ್ಧಿಕ- ವೈಚಾರಿಕ ದಾಳಿ ನಡೆಸಿದರು. ತತ್ಪರಿಣಾಮವಾಗಿ ಇಂದಿನ ಪ್ರಸ್ತುತ ಜಗತ್ತು ಅರ್ಧ ಇಸ್ಲಾಂಮಯವಾಗಿಯೂ, ಅರ್ಧ ಕ್ರಿಶ್ಚಿಯನ್ ಗಾಢವಾಗಿಯೂ, ಮಿಕ್ಕುಳಿದಂತೆ ಅಲ್ಲಲ್ಲಿ ಸಣ್ಣಪುಟ್ಟ ಧರ್ಮಗಳ ಹಾದಿಯಲ್ಲಿಯೂ ಸಾಗುತ್ತಿದೆ. ಆದರೆ ಅಂದಿನಿಂದಲೂ ಯಾವುದೇ ಪ್ರಚಾರವಿಲ್ಲದೆ, ಒತ್ತಡ – ಹೇರಿಕೆಗಳಿಲ್ಲದೆ, ಕ್ರೌರ್ಯ – ಆಮಿಷಗಳಿಲ್ಲದೇ ನೂರಾರು ಕೋಟಿ ಜನರ ಜೀವನಯಾನವಾಗಿ ಸನಾತನ ಧರ್ಮ ಉಳಿದುಕೊಂಡಿದೆ. ಮೇಲೆ ಉದಾಹರಿಸಿದ ಎರಡು ಪ್ರಬಲ ಧರ್ಮಗಳ ವಿಸ್ತರಣೆಯ ಕರಿನೆರಳಿಗೆ ತುತ್ತಾಗಿದ್ದು ಭಾರತ. ಆದಾಗ್ಯೂ ಅಂಥ ಯಾವುದೇ ಆಡಳಿತಾತ್ಮಕ, ಕಾನೂನಾತ್ಮಕ ಪ್ರತಿರೋಧ ಒಡ್ಡದೆ ಇಂದಿಗೂ ಬಂದ ಧರ್ಮಗಳಿಗೆಲ್ಲ ಬಾಗಿಲು ತೆರೆದು ನಿಂತಿದೆ.
ಯಾಕೆ ಈ ಎಲ್ಲ ಕಂತೆ ಪುರಾಣ ಎಂದರೆ ಈ ಧಾರ್ಮಿಕ ಸಮೀಕರಣ ಹಾಗೂ ಪಾರುಪತ್ಯ ಅಂದಿಗೆ ಮಾತ್ರ ಸೀಮಿತವಾಗಿಲ್ಲ ಅಥವಾ ಅಲ್ಲಿ ಕೊನೆಗೊಂಡಿಲ್ಲ. ಇವತ್ತಿಗೂ ಅದು ನಡೆಯುತ್ತಲೇ ಇದೆ. ಸ್ವರೂಪಗಳು ಬದಲಾಗಿವೆ, ಇನ್ನೂ ಸೊಫಸ್ಟಿಕೇಟೆಡ್ ಆಗಿದೆ. ವಲಸೆಯ ಭಾಷ್ಯ ಬದಲಾಗಿ, ಪ್ರಪಂಚ ಜಾಗತಿಕರಣಕ್ಕೆ ತೆರೆದುಕೊಂಡ ಮೇಲೆ ಧರ್ಮದ ವಲಸೆಯೂ ತನ್ನ ಚಹರೆಯನ್ನು ಬದಲಾಯಿಸಿದೆ. ಆದರೆ ಹೀಗೆ ಬದಲಾದ ಸನ್ನಿವೇಶದಲ್ಲಿ ಪ್ರತಿರೋಧಗಳು, ಪ್ರತ್ಯಾಕ್ರಮಣಗಳೂ ಕಡಿಮೆಯಾಗಿಲ್ಲ. ಜಗತ್ತಿನ ಎರಡು ದೊಡ್ಡ ಸಂಖ್ಯಾಬಲ ಹೊಂದಿರುವ ಧರ್ಮಗಳು ತಮ್ಮ ಧರ್ಮವನ್ನು ಮೆರೆಸುವುದಕ್ಕಾಗಿ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿವೆ. ಕೇವಲ ತನ್ನ ಧರ್ಮವನ್ನು ಮೆರೆಸುವುದು ಮಾತ್ರವಲ್ಲದೆ ಮತ್ತೊಂದು ಧರ್ಮವನ್ನು ಅಳಿಸುವುದು ಕೂಡ ಈ ಧರ್ಮ ವಿಸ್ತರಣೆಯ ಭಾಗವಾಗಿದೆ. ಇಸ್ಲಾಂ ಧರ್ಮ/ಮತ ಹಾಗೂ ಕ್ರಿಶ್ಚಿಯನ್ ಧರ್ಮ/ಮತ – ಇವುಗಳು ಮೂಲ ಅಬ್ರಹಾಮಿಕ್ ಧರ್ಮಗಳೇ ಆದರೂ ಅವು ಮುಂದೆ ಕವಲಾಗಿ, ದಾಯಾದಿ ಮತ್ಸರದಂತೆ ಕಚ್ಚಾಡುವ ಮಟ್ಟಕ್ಕೆ ಬೆಳೆದಿವೆ. ಜಗತ್ತಿಗೆ ಅಲ್ಲಾಹು ಒಬ್ಬನೇ ದೇವರು, ಆತನೇ ಸರ್ವಶ್ರೇಷ್ಠ ಎಂದು ಒಂದುಕಡೆಯ ವಾದವಾದರೆ, ಮತ್ತೊಂದಡೆಯಲ್ಲಿ ಕ್ರಿಸ್ತನೊಬ್ಬನೇ ಜಗದ ಪ್ರಭು ಎನ್ನುವ ವಾದ. ಇದರ ನಡುವೆ ಸಣ್ಣಪುಟ್ಟ ಧರ್ಮಗಳನ್ನು ಇವು ಈಗಾಗಲೇ ಆಪೋಷನ ತೆಗೆದುಕೊಂಡಾಗಿದೆ. ಅದರಲ್ಲೂ ಇತ್ತೀಚಿನ ದಶಕಗಳಲ್ಲಿ ಮೂಲಭೂತವಾದ ಸ್ವಲ್ಪ ಹೆಚ್ಚಿಗೆ ಇರುವ ಇಸ್ಲಾಂ, ಜಗತ್ತಿನ ಅತಿದೊಡ್ಡ ಸಮುದಾಯ ಆಚರಿಸುವ ಕ್ರಿಶ್ಚಿಯನ್ ಧರ್ಮವನ್ನು ಒಪ್ಪಿರುವ ದೇಶಗಳ ಮೇಲೆ ಕಣ್ಣಿಟ್ಟಿದೆ.
ಕ್ರಿಶ್ಚಿಯನ್ ದೇಶದಲ್ಲಿ ವಲಸಿಗರಾಗಿ ಸೇರಿ ಅಲ್ಲಿ ಇಸ್ಲಾಂ ಧರ್ಮವನ್ನು ಸ್ಥಾಪಿಸುವುದು ಈ ಒಟ್ಟಾರೆ ಧರ್ಮವಿಸ್ತರಣೆಯ ಹೊಸ ಮಗ್ಗುಲು. ಇಂದಿಗೆ ಜಗತ್ತಿನಲ್ಲಿ ಸುಮಾರು 120 ದೇಶಗಳ 2.3 ಬಿಲಿಯನ್ ಮಂದಿ ಯೇಸುಕ್ರಿಸ್ತನನ್ನು ದೇವರು ಎಂದು ಭಾವಿಸುತ್ತಾರೆ. ಅದೇ ಇನ್ನೊಂದು ಕಡೆಯಲ್ಲಿ ಜಾಗತಿಕವಾಗಿ ಸುಮಾರು ಎರಡು ಬಿಲಿಯನ್ ನಂಬಿಗಸ್ತರನ್ನು ವಿವಿಧ 50 ರಾಷ್ಟ್ರಗಳಲ್ಲಿ ಹೊಂದಿರುವ ಇಸ್ಲಾಂ, ಸತತವಾಗಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹೀಗಾಗಿ ಈ ಎರಡು ಧರ್ಮವನ್ನು ಅಧಿಕೃತವಾಗಿ ಒಪ್ಪಿರುವ ದೇಶಗಳ ನಡುವೆ ತಿಕ್ಕಾಟ ಸಾಮಾನ್ಯ. ಅಕಸ್ಮಾತ್ ಜಗತ್ತಿನಲ್ಲೆಲ್ಲಾ ಒಂದೇ ಧರ್ಮವೇ ಇದ್ದರೆ ಏನಾಗಬಹುದು, ಆಗ ಈ ಧರ್ಮ ಸಂಘರ್ಷಗಳೆಲ್ಲ ನಡೆಯುತ್ತಲೇ ಇರುತ್ತಿರಲಿಲ್ಲ ಎಂದು ಭಾವಿಸಬಹುದು. ಯಾಕೆಂದರೆ ಎಲ್ಲರೂ ಒಂದೇ ನಂಬಿಕೆಗಳ ಹಿಂದೆಯೇ ಬದುಕುತ್ತಿರುತ್ತಾರೆ. ಯಾರಲ್ಲಿಯೂ ತಮ್ಮ ಧರ್ಮವೇ ಶ್ರೇಷ್ಠ ಎನ್ನುವ ಭಾವನೆ ಇರುವುದಿಲ್ಲ. ಎಲ್ಲಿಯೂ ಧರ್ಮ ಸಂಘರ್ಷವೇ ಇರುವುದಿಲ್ಲ. ಕೇವಲ ಮಾನವಕುಲದ ಉದ್ಧಾರವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬಹುದು. ಹೀಗಂದುಕೊಂಡಿದ್ದರೆ ನಮ್ಮಷ್ಟು ಶತಮೂರ್ಖರು ಯಾರೂ ಇಲ್ಲ.
ಒಂದೇ ಧರ್ಮ ಇಡೀ ಜಗತ್ತನ್ನು ಆವರಿಸಿದರೆ ಮಾನವ ನಾಗರಿಕತೆಗೆ ಎದುರಾಗುವ ಸವಾಲುಗಳು ಅತ್ಯಂತ ಆಳವಾದವು ಮತ್ತು ಕಳವಳಕಾರಿಯಾದವು. ಮೊದಲನೆಯದಾಗಿ, ಇದು ಜಗತ್ತಿನ ಸೌಂದರ್ಯವಾಗಿರುವ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಧರ್ಮ ಎನ್ನುವುದು ಕೇವಲ ಪ್ರಾರ್ಥನೆಯ ವಿಧಾನವಲ್ಲ, ಅದು ಜನರ ಆಹಾರ ಪದ್ಧತಿ, ವಸ್ತ್ರವಿನ್ಯಾಸ, ಭಾಷೆ ಮತ್ತು ಸಾವಿರಾರು ವರ್ಷಗಳಿಂದ ನಡೆದುಬಂದ ಸ್ಥಳೀಯ ಹಬ್ಬ ಹರಿದಿನಗಳೊಂದಿಗೆ ಬೆಸೆದುಕೊಂಡಿರುತ್ತದೆ. ಇಡೀ ವಿಶ್ವ ಒಂದೇ ಸಿದ್ಧಾಂತಕ್ಕೆ ಒಳಪಟ್ಟಾಗ ಈ ಎಲ್ಲ ವಿಶಿಷ್ಟ ಅಸ್ಮಿತೆಗಳು ಅಳಿದುಹೋಗಿ, ಜಗತ್ತು ಸಾಂಸ್ಕೃತಿಕವಾಗಿ ಕೇವಲ ಒಂದೇ ಬಣ್ಣಕ್ಕೆ ತಿರುಗುತ್ತದೆ. ಈ ರೀತಿಯ ಏಕರೂಪತೆಯು ಜಗತ್ತಿನಲ್ಲಿ ಶಾಂತಿಯನ್ನು ತರುತ್ತದೆ ಎಂದು ಭಾವಿಸುವುದು ತಪ್ಪು. ಏಕೆಂದರೆ ಯಾವುದೇ ಒಂದು ದೊಡ್ಡ ಧರ್ಮವು ಇಡೀ ಜಗತ್ತನ್ನು ಆಳಲು ಯತ್ನಿಸಿದಾಗ, ಕಾಲಕ್ರಮೇಣ ಅದರೊಳಗೇ ಸಿದ್ಧಾಂತ ಮತ್ತು ಅಧಿಕಾರದ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಮೂಡಿ ಆಂತರಿಕ ಪಂಗಡಗಳಾಗಿ ಸೀಳುತ್ತದೆ. ಇದನ್ನು ಇತಿಹಾಸ ಈಗಾಗಲೇ ಸಾಬೀತುಪಡಿಸಿದ ಉದಾಹರಣೆಗಳಿವೆ. ಈ ಆಂತರಿಕ ಗುಂಪುಗಳ ನಡುವಿನ ವೈಷಮ್ಯವು ಜಗತ್ತಿನಲ್ಲಿ ಹೊಸ ರೀತಿಯ ಭೀಕರ ಅಂತರ್ಯುದ್ಧಗಳಿಗೆ ಮತ್ತು ರಕ್ತಪಾತಕ್ಕೆ ಕಾರಣವಾಗಬಹುದು.
ಇದರ ಜೊತೆಗೆ, ಧಾರ್ಮಿಕ ಸಿದ್ಧಾಂತಗಳ ಅತಿಯಾದ ಪ್ರಭಾವವು ಮಾನವನ ಬೌದ್ಧಿಕ ವಿಕಾಸ ಮತ್ತು ವೈಜ್ಞಾನಿಕ ಪ್ರಗತಿಗೆ ದೊಡ್ಡ ಅಡ್ಡಿಯಾಗುತ್ತದೆ. ಧಾರ್ಮಿಕ ಗ್ರಂಥಗಳ ನಿಯಮಗಳೇ ಅಂತಿಮ ಎಂಬಂತಾದಾಗ, ತಾರ್ಕಿಕ ಚಿಂತನೆ, ಪ್ರಶ್ನಿಸುವ ಪ್ರವೃತ್ತಿ ಮತ್ತು ಮುಕ್ತ ವಿಜ್ಞಾನದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ವಿಜ್ಞಾನದ ಹೊಸ ಸಂಶೋಧನೆಗಳು ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದ್ದಾಗ ಅವುಗಳನ್ನು ನಿಷೇಧಿಸುವ ಅಥವಾ ಹತ್ತಿಕ್ಕುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ಇಂತಹ ಜಗತ್ತಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಎಂಬುದು ಸಂಪೂರ್ಣವಾಗಿ ನಾಶವಾಗುತ್ತದೆ. ಯಾವುದೇ ಧರ್ಮವನ್ನು ನಂಬದ ನಾಸ್ತಿಕರು, ಮುಕ್ತ ಚಿಂತಕರು, ವಿಜ್ಞಾನಿಗಳು ಅಥವಾ ಆ ಧರ್ಮದ ನಿಯಮಗಳಿಂದ ಭಿನ್ನಾಭಿಪ್ರಾಯ ಹೊಂದಿರುವ ಜನರಿಗೆ ಜಗತ್ತಿನಲ್ಲಿ ಬೇರೆಲ್ಲೂ ಆಶ್ರಯವೇ ಸಿಗದಂತಾಗುತ್ತದೆ. ಇಡೀ ಭೂಮಿಯೇ ಒಂದೇ ಧರ್ಮದ ಆಡಳಿತಕ್ಕೆ ಒಳಪಡುವುದರಿಂದ, ಪ್ರಸ್ತುತ ಕಾಲದಲ್ಲಿದ್ದಂತೆ ಒಂದು ದೇಶದಲ್ಲಿ ಕಿರುಕುಳ ಅನುಭವಿಸಿದಾಗ ಮತ್ತೊಂದು ಮುಕ್ತ ದೇಶಕ್ಕೆ ವಲಸೆ ಹೋಗುವ ಅಥವಾ ಆಶ್ರಯ ಪಡೆಯುವ ಹಕ್ಕು ಮತ್ತು ಆಯ್ಕೆ ಮನುಷ್ಯನಿಗೆ ಇಲ್ಲದಂತಾಗಿ, ಜಗತ್ತು ಒಂದು ದಮನಕಾರಿ ಜೈಲಿನಂತಾಗುತ್ತದೆ. ಈ ಎಲ್ಲದಕ್ಕೂ ಒಂದೇ ಧರ್ಮವನ್ನು ಒಪ್ಪಿರುವ ಮತ್ತು ಅದನ್ನೇ ಕಾನೂನಾಗಿ ಪಾಲಿಸುವ ದೇಶಗಳ ಪರಿಸ್ಥಿತಿಗಳು ಜ್ವಲಂತ ಸಾಕ್ಷಿ.
ಹೇಗೆ ಪ್ರದೇಶವೊಂದರಲ್ಲಿ ಒಂದೇ ಮರ ಬೆಳೆದರೆ ಅದು ಕಾಡಾಗುವುದಿಲ್ಲವೋ, ಒಂದೇ ಬಣ್ಣದ ಹೂವು ಅರಳಿದರೆ ಅದನ್ನು ವಸಂತ ಎನ್ನಲಾಗುವುದಿಲ್ಲವೋ, ಒಂದೇ ಭಾಷೆ ಮಾತನಾಡಿದರೆ ಅದನ್ನು ಸಂಸ್ಕೃತಿ ಎನ್ನುವುದಿಲ್ಲವೋ ಮಾನವ ನಾಗರಿಕತೆಯೂ ಹಾಗೆಯೇ. ವೈವಿಧ್ಯವೇ ಜೀವಂತ ನಾಗರಿಕತೆಯ ಲಕ್ಷಣ. ಹೀಗಾಗಿ ಇದನ್ನು ತಪ್ಪಿಸಬೇಕೆಂದರೆ ಒಂದಷ್ಟು ಅಗತ್ಯ ಕ್ರಮಗಳು ಅನಿವಾರ್ಯ. ಹೇಗೆ ಕ್ರಿಶ್ಚಿಯನ್ ಧರ್ಮ ಈಗಾಗಲೇ 120 ದೇಶಗಳನ್ನು ಆವರಿಸಿಕೊಂಡು ಒಂದು ಮಟ್ಟಿಗಿನ ಏಕರೂಪತೆಗೆ ಕಾರಣವಾಗಿದೆಯೋ, ಹಾಗೆ ಇಸ್ಲಾಂ ಧರ್ಮ ಅವರಿಸಿಕೊಳ್ಳಹೊರಟಿದೆ. ಇದರಲ್ಲಿ ಅನುಮಾನವೂ ಇಲ್ಲ, ಎರಡನೇ ಮಾತೂ ಇಲ್ಲ.
ಅದಕ್ಕಾಗಿ ಜಾಗತಿಕವಾಗಿ ವಲಸೆ, ಜನಸಂಖ್ಯಾ ಬದಲಾವಣೆ ಹಾಗೂ ಸಾಂಸ್ಕೃತಿಕ ಏಕರೂಪತೆಯ ಸವಾಲುಗಳನ್ನು ಎದುರಿಸಲು ವಿಶ್ವದ ಹಲವಾರು ದೇಶಗಳು ಇಸ್ಲಾಮಿಕ್ ಆಚರಣೆಗಳು ಮತ್ತು ಸಾಂಪ್ರದಾಯಿಕ ಉಡುಪುಗಳ ಮೇಲೆ ಕಠಿಣ ಕಾನೂನಾತ್ಮಕ ನಿಯಂತ್ರಣಗಳನ್ನು ಹೇರಲು ಮುಂದಾಗುತ್ತಿವೆ. ಡೆನ್ಮಾರ್ಕ್ ದೇಶವು ತನ್ನ ಸಮಾಜದಲ್ಲಿ ಇಸ್ಲಾಮೀಕರಣದ ಪ್ರಭಾವವನ್ನು ತಡೆಯಲು ಮತ್ತು ಸಾಂಸ್ಕೃತಿಕ ಏಕೀಕರಣವನ್ನು ಬಲಪಡಿಸಲು ಮೈಕ್ರೋಫೋನ್ ಮೂಲಕ ಸಾರ್ವಜನಿಕವಾಗಿ ಆಜಾನ್ ಕೂಗುವುದನ್ನು ನಿಷೇಧಿಸುವ ಪ್ರಸ್ತಾಪವನ್ನು ತಂದಿದ್ದು, ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ಹಾಗೂ ಶಾಲೆಗಳಲ್ಲಿ ಪ್ರಾರ್ಥನಾ ಕೊಠಡಿಗಳನ್ನು ನಿಷೇಧಿಸಿದೆ. ಅದೇ ರೀತಿ, ಫ್ರಾನ್ಸ್ ದೇಶವು ತನ್ನ ಕಟ್ಟುನಿಟ್ಟಾದ ಜಾತ್ಯತೀತ ತತ್ತ್ವವಾದ ‘ಲೈಸಿಟೆ’ (Laïcité) ಅನ್ನು ಕಾಪಾಡುವ ಉದ್ದೇಶದಿಂದ ಸಾರ್ವಜನಿಕವಾಗಿ ನಿಖಾಬ್ ಮತ್ತು ಬುರ್ಖಾಗಳನ್ನು ನಿಷೇಧಿಸಿದ್ದಲ್ಲದೆ, ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಮುಸ್ಲಿಂ ಧರ್ಮದ ದೀರ್ಘ ಉಡುಪಾದ ‘ಅಬಾಯಾ’ ಧರಿಸುವುದರ ಮೇಲೂ ನಿರ್ಬಂಧ ಹೇರಿದೆ. ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳು ಸಹ ತಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಸಲುವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಮುಖವನ್ನು ಮುಚ್ಚುವ ಬುರ್ಖಾಗಳನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ನಿಷೇಧಿಸಿವೆ. ಜೊತೆಗೆ ಆಸ್ಟ್ರಿಯಾ ದೇಶವು ಮಸೀದಿಗಳಿಗೆ ವಿದೇಶಗಳಿಂದ ಬರುವ ಧಾರ್ಮಿಕ ಹಣಕಾಸು ಧನಸಹಾಯವನ್ನು ಸಂಪೂರ್ಣವಾಗಿ ನಿಲ್ಲಿಸುವ ಕಾನೂನನ್ನು ಜಾರಿಗೆ ತಂದಿದೆ.
ಇನ್ನು ಯುರೋಪ್ ಮಾತ್ರವಲ್ಲದೆ ಆಫ್ರಿಕಾ ಮತ್ತು ಏಷ್ಯಾದ ದೇಶಗಳೂ ಇಂತಹದ್ದೇ ಕಠಿಣ ಕ್ರಮಗಳನ್ನು ಕೈಗೊಂಡಿವೆ. ಅಂಗೋಲಾ ದೇಶವು ಅಕ್ರಮ ವಲಸೆಯನ್ನು ತಡೆಗಟ್ಟಲು ಮತ್ತು ಕಾನೂನುಬದ್ಧವಾಗಿ ನೋಂದಾಯಿಸಲ್ಪಡದ ಧಾರ್ಮಿಕ ಗುಂಪುಗಳನ್ನು ನಿಯಂತ್ರಿಸಲು ಇಸ್ಲಾಮಿಕ್ ಆಚರಣೆಗಳ ಮೇಲೆ ವ್ಯಾಪಕ ನಿಗಾ ಇಟ್ಟಿದ್ದು, ಇಸ್ಲಾಂ ಧರ್ಮಕ್ಕೆ ಅಲ್ಲಿ ಕಾನೂನುಬದ್ಧ ಮಾನ್ಯತೆ ನೀಡದೆ ಅನೇಕ ಪ್ರಾರ್ಥನಾ ಮಂದಿರಗಳನ್ನು ಮುಚ್ಚಿಸಿದೆ. ಏಷ್ಯಾದಲ್ಲಿ ಶ್ರೀಲಂಕಾ ದೇಶವು 2019ರ ಈಸ್ಟರ್ ಬಾಂಬ್ ಸ್ಫೋಟದ ನಂತರ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಮುಖವನ್ನು ಗುರುತಿಸಲು ಸಾಧ್ಯವಾಗುವಂತೆ ನಿಖಾಬ್ ಧರಿಸುವುದನ್ನು ಭಾಗಶಃ ನಿಷೇಧಿಸಿದೆ. ಇಸ್ಲಾಂ ಧರ್ಮವೇ ಬಹುಸಂಖ್ಯಾತವಾಗಿರುವ ತಜಿಕಿಸ್ತಾನ್ ದೇಶವು ಸಹ ಧಾರ್ಮಿಕ ಉಗ್ರವಾದವನ್ನು ತಡೆಗಟ್ಟಲು ಮತ್ತು ಜಾತ್ಯತೀತ ಆಡಳಿತವನ್ನು ಮುಂದುವರಿಸಲು ಶಾಲೆ ಹಾಗೂ ಕಚೇರಿಗಳಲ್ಲಿ ಹಿಜಾಬ್ ಸೇರಿದಂತೆ ಯಾವುದೇ ರೀತಿಯ ವಿದೇಶಿ ಉಡುಪುಗಳನ್ನು ಧರಿಸುವುದನ್ನು ಹಾಗೂ ಮಕ್ಕಳ ಈದ್ ಹಬ್ಬದ ಆಚರಣೆಗಳನ್ನು ಕಟ್ಟುನಿಟ್ಟಾದ ಕಾನೂನಿನ ಮೂಲಕ ನಿಷೇಧಿಸಿದೆ. ಈ ರೀತಿಯಾಗಿ ಪ್ರತಿಯೊಂದು ದೇಶವೂ ತನ್ನದೇ ಆದ ರಾಜಕೀಯ ಕಾಳಜಿ, ರಾಷ್ಟ್ರೀಯ ಭದ್ರತೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ನೆಪದಲ್ಲಿ ಇಂತಹ ಕಠಿಣ ನಿರ್ಬಂಧಗಳನ್ನು ಹೇರುತ್ತಿವೆ. ಈ ಪ್ರಕ್ರಿಯೆಗಳು ಒಂದು ಕಡೆ ದೇಶದ ಆಂತರಿಕ ಸಾರ್ವಜನಿಕ ಭದ್ರತೆ ಮತ್ತು ಏಕರೂಪತೆಗೆ ಅಗತ್ಯ ಎಂದು ಆಯಾ ದೇಶಗಳ ಸರ್ಕಾರಗಳು ವಾದಿಸುತ್ತಿದ್ದರೂ, ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಧಾರ್ಮಿಕ ಮುಖಂಡರು ಇವುಗಳನ್ನು ತಾರತಮ್ಯದ ನೀತಿಗಳೆಂದು ಟೀಕಿಸುತ್ತಿದ್ದಾರೆ. ಅಂತಿಮವಾಗಿ, ಜಗತ್ತಿನಲ್ಲಿ ಒಂದು ನಿರ್ದಿಷ್ಟ ಸಿದ್ಧಾಂತ ಅಥವಾ ಧರ್ಮದ ಅತಿಯಾದ ವ್ಯಾಪಿಸುವಿಕೆಯನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ದೇಶಗಳು ತಮ್ಮ ಆಡಳಿತ ವ್ಯವಸ್ಥೆಯನ್ನು ಮತ್ತು ನಾಗರಿಕ ಕಾನೂನುಗಳನ್ನು ಕಾಲಕ್ಕೆ ತಕ್ಕಂತೆ ಎಷ್ಟು ಕಠಿಣಗೊಳಿಸುತ್ತಿವೆ ಎಂಬುದಕ್ಕೆ ಈ ಎಲ್ಲಾ ದೇಶಗಳ ಕಾನೂನುಗಳು ಸ್ಪಷ್ಟ ಉದಾಹರಣೆಗಳಾಗಿವೆ.
ಇದೆಲ್ಲದರ ನಡುವೆ ಭಾರತ ಸರ್ವಧರ್ಮವನ್ನೂ ತನ್ನೊಡಲಲ್ಲಿ ಇಟ್ಟುಕೊಂಡು ಸಲಹುತ್ತಿದೆ. ಈಗಾಗಲೇ ಜಗತ್ತಿನ ಒಟ್ಟು ಮುಸ್ಲಿಂ ಜನಸಂಖ್ಯೆಯ ಶೇ.11 ಮುಸಲ್ಮಾನರು ಭಾರತದಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ಆರಾಮವಾಗಿ ಜೀವಿಸುತ್ತಿದ್ದಾರೆ. ತಮ್ಮ ಎಲ್ಲ ಧಾರ್ಮಿಕ ಆಚರಣೆಗಳನ್ನೂ ಸ್ವೇಚ್ಛೆಯಿಂದ ನಡೆಸುತ್ತಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿಯೂ ಧಾರ್ಮಿಕ ವಿಧಿ ವಿಧಾನಗಳು, ಆಚರಣೆಗಳು ಯಾವುದೇ ಅಂಕುಶವಿಲ್ಲದೆ ನಡೆಯುತ್ತದೆ. ಕೇವಲ ಇಸ್ಲಾಂ ಮಾತ್ರವಲ್ಲ, ಕ್ರಿಶ್ಚಿಯನ್ ಧರ್ಮಕ್ಕೂ ಇದೇ ತೆರನಾದ ಮುಕ್ತ ಅವಕಾಶವಿದೆ. ಆದರೆ ನಿಜಕ್ಕೂ ಜಗತ್ತಿಗೆ ಸನಾತನ ಧರ್ಮವೆಂಬ ಅತ್ಯದ್ಭುತ ಜೀವನ ವಿಧಾನವನ್ನು ಪರಿಚಯಿಸಿದ ರಾಷ್ಟ್ರವಾಗಿ, ಹಿಂದೂ ನೇಷನ್ ಆಗಿ ಗುರುತಿಸಿಕೊಂಡಿಲ್ಲ. ಆಗಲೇ ಹೇಳಿದಂತೆ ಜಗತ್ತಿನಲ್ಲಿ ಮುಸಲ್ಮಾನರಿಗೆ ವಲಸೆ ಹೋಗಲು ಐವತ್ತಕ್ಕೂ ಹೆಚ್ಚಿನ, ಕ್ರಿಶ್ಚಿಯನ್ನರಿಗೆ ನೂರಕ್ಕೂ ಹೆಚ್ಚಿನ ದೇಶಗಳಿವೆ. ಆದರೆ ಹಿಂದೂ ಎಂಬವನಿಗೆ ಹಿಂದೂರಾಷ್ಟ್ರವೆಂದು ಇರುವುದು ಸ್ವಂತ ಭಾರತವೊಂದೇ. ಆದರೂ ಅದು ಜಾತ್ಯತೀತತೆಯನ್ನು ಪೋಷಿಸುತ್ತದೆ. ಕೇವಲ ಹಾಳೆಗಳ ಮೇಲೆಯೋ, ದಾಖಲೆಗಳಲ್ಲೋ ಅಲ್ಲ, ಬದಲಾಗಿ ನಿಜಜೀವನದಲ್ಲಿ, ದಿನಂಪ್ರತಿಯ ವ್ಯವಹಾರದಲ್ಲಿ. ಯಾಕೆಂದರೆ, ಇಡೀ ಜಗತ್ತು ಒಂದೇ ಧರ್ಮವನ್ನು ಅನುಸರಿಸುವುದಕ್ಕಿಂತ, ಬೇರೆ ಬೇರೆ ನಂಬಿಕೆಗಳ ಜನರು ಪರಸ್ಪರ ಗೌರವದಿಂದ ಬದುಕುವ ಜಗತ್ತೇ ಹೆಚ್ಚು ಬಲಿಷ್ಠ ನಾಗರಿಕತೆಯಾಗಿರುತ್ತದೆ. ಭಾರತವು ಸಾವಿರಾರು ವರ್ಷಗಳಿಂದ ಜಗತ್ತಿಗೆ ಕಲಿಸುತ್ತಿರುವ ಪಾಠವೂ ಇದೇ. ಅಕಸ್ಮಾತ್ ಹಿಂದೂರಾಷ್ಟ್ರವೇ ಆದರೂ ಅದರ ತಿರುಳೂ ವಿವಿಧತೆಯೇ.
