ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ
ವಿಕ್ರಮ ಪತ್ರಿಕೆಯ 60 ವರ್ಷಗಳ ಹಳೆಯ ಸಂಚಿಕೆಗಳನ್ನು ತಿರುವಿ ಹಾಕುತ್ತಿದ್ದೆ. 8.4.1965ರ ಸಂಚಿಕೆಯ ಕೊನೆಯ ಪುಟದಲ್ಲಿ ಒಂದು ಸುದ್ದಿ. ಶಿವಮೊಗ್ಗದಲ್ಲಿ ನಡೆದ ಸಂತಾಪ ಸೂಚಕ ಸಭೆಯ ವರದಿ ಅದು. ಆ ಸುದ್ದಿ ಹೀಗಿತ್ತು: “ಶಿವಮೊಗ್ಗ ಶಾಖೆಯ ಅ.ಭಾ. ವಿದ್ಯಾರ್ಥಿ ಪರಿಷತ್ತಿನ ಕಾರ್ಯಕಾರಿ ಸಮಿತಿಯು ದಿವಾಕರ ಭಾಗವತರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಭಕ್ತಶಿರೋಮಣಿ ಅನಂತರಾಮಯ್ಯ ನಿಧನದ ಬಗ್ಗೆ ಸಂತಾಪ ಸೂಚಿಸಿ ಪೂಜ್ಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿತು”.
ಯಾರು ಈ ದಿವಾಕರ ಭಾಗವತ್? 61 ವರ್ಷಗಳ ಹಿಂದೆ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿದ್ದವರು ಯಾರು? ದಿವಾಕರ ಭಾಗವತರೆಂದರೆ ತಕ್ಷಣ ಅಷ್ಟಾಗಿ ಯಾರಿಗೂ ಗೊತ್ತಾಗುವುದಿಲ್ಲ. ದಿವೂ ಎಂದರೆ ಮಾತ್ರ ಅವರು ಯಾರೆಂದು ಬಹುತೇಕ ಮಂದಿಗೆ ಗೊತ್ತಾಗುತ್ತದೆ. ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ದೈವಾಧೀನರಾದ ದಿವೂ ಅವರನ್ನು ಮರೆಯುವುದು ನನ್ನಿಂದಂತೂ ಖಂಡಿತ ಸಾಧ್ಯವಾಗದು. (ಜನನ: 17.04.1943; ನಿಧನ: 25.03.2015).
ಹಾಗೆ ನೋಡಿದರೆ ಅವರೇನೂ ಗಣ್ಯವ್ಯಕ್ತಿ ಆಗಿರಲಿಲ್ಲ. ಯಾವುದೇ ಪಕ್ಷದ ನಾಯಕರೂ ಅಲ್ಲ. ಪ್ರತಿಷ್ಠಿತ ಸಂಘ -ಸಂಸ್ಥೆಗಳ ಅಧ್ಯಕ್ಷ ಕೂಡ ಆಗಿರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕಿದ್ದ ಆ ಪುಟ್ಟ ಮೂರ್ತಿ ಹಲವು ಕಾರಣಗಳಿಗಾಗಿ ನನ್ನ ಮನದಲ್ಲಿ ಸದಾಕಾಲ ಹಚ್ಚ ಹಸಿರು.
ಶಿವಮೊಗ್ಗದ ʼಭಾಗವತ ಅಡಿಕೆ ಮಂಡಿʼಯನ್ನು ಸ್ಥಾಪಿಸಿದ ಹಿರಿಯರಾದ ಶಂಕರ್ ನಾರಾಯಣ ಭಾಗವತರು ಕಾಲವಾಗಿ ಎಷ್ಟೋ ಕಾಲವಾಯಿತು. ಶಿವಮೊಗ್ಗಕ್ಕೆ ಪಿಯುಸಿ ಓದಲು ಹೋದಾಗಿನಿಂದ ಆ ಮನೆಯೊಂದಿಗೆ ನನ್ನದು ನಿಕಟ ಸಂಬಂಧ. ಅದೊಂದು ಅವಿಭಕ್ತ ಕುಟುಂಬ. ಶಂಕರನಾರಾಯಣ ಭಾಗವತರಿಗೆ 9 ಗಂಡು ಮತ್ತು 4 ಹೆಣ್ಣು ಮಕ್ಕಳು. ಮನೆಯ ಒಟ್ಟು ಸದಸ್ಯರ ಸಂಖ್ಯೆ ನನಗಿರಲಿ, ಮನೆಯವರಿಗೇ ಸರಿಯಾಗಿ ಗೊತ್ತಿರಲಿಲ್ಲ. ಪ್ರತಿನಿತ್ಯ ಮಧ್ಯಾಹ್ನ – ರಾತ್ರಿ ಊಟದ ವೇಳೆ ಆ ಮನೆಯಲ್ಲಿ ಒಂದು ಸಮಾರಾಧನೆ ದೃಶ್ಯ. 20, 30 ಜನರು ಸಾಲಾಗಿ ಕುಳಿತು ಊಟಮಾಡುವ ದೃಶ್ಯ ನೋಡುವುದೇ ಒಂದು ಸೊಗಸು. ಮಧ್ಯಾಹ್ನದ ವೇಳೆ ಯಾರೇ ಮನೆಗೆ ಬರಲಿ, ಅವರಿಗೆ ಅಲ್ಲೇ ಊಟ. ನಾನಂತೂ ಆ ಮನೆಯಲ್ಲಿ ಅದೆಷ್ಟು ಬಾರಿ ಉಂಡಿರುವೆನೋ ಗೊತ್ತಿಲ್ಲ. ದಿವಾಕರ ಭಾಗವತ್ ಮನೆಯ ಹಿರಿಯ ಮಗನಲ್ಲದಿದ್ದರೂ ಇಡೀ ಮನೆಯನ್ನು ಸಂಭಾಳಿಸುತ್ತಿದ್ದುದು ಅವರೇ. ಮನೆ, ಅಡಿಕೆ ಮಂಡಿ, ತೋಟ, ಜೊತೆಗೆ ಸಂಜೆ ವೇಳೆ ಸಂಘ ಕಾರ್ಯಾಲಯದ ಸಂಘವಸ್ತು ಭಂಡಾರದ ನಿರ್ವಹಣೆಯನ್ನು ನಿರಂತರವಾಗಿ, ನಿರ್ವಂಚನೆಯಿಂದ ಸದ್ದಿಲ್ಲದೆ ನಿರ್ವಹಿಸಿದ ಅವರ ತಾಕತ್ತು ನಿಜಕ್ಕೂ ಅದ್ಭುತ. ದಿವಾಕರ ಅವರ ಅಣ್ಣ ನಾಗಭೂಷಣ ಭಾಗವತ್ ಸಂಘದ ಹಿರಿಯ ಪ್ರಚಾರಕರಾಗಿದ್ದರು. ಉಳಿದ ಸೋದರರಾದ ಗೋಪಾಲಕೃಷ್ಣ(ಗೋಪಿ), ಡಾ. ಶ್ರೀನಿವಾಸ ಭಾಗವತ್, ರವಿ, ಭಾಸ್ಕರ ಅವರೆಲ್ಲರೂ ಸಂಘದ ನಿಷ್ಠಾವಂತ ಕಾರ್ಯಕರ್ತರು. ಇಡೀ ಮನೆಯೇ ಸಂಘದ ಮನೆಯಾಗಿತ್ತು.
ದಿವಾಕರ್ ಬದುಕಿ ಬಾಳಿದ ರೀತಿ ಅಂತಹದು. ಮಿತ, ಮೆದು ಮಾತು. ಸದ್ದಿಲ್ಲದ ಕೆಲಸ. ಆದರೆ ಯಾರಿಗೆ ಏನು ಹೇಳಬೇಕೋ ಅದನ್ನು ಮುಲಾಜಿಲ್ಲದೆ ಶಾಂತವಾಗಿ ಹೇಳುವ ಸ್ವಭಾವ. ತುರ್ತು ಪರಿಸ್ಥಿತಿ ಕಳೆದ ಬಳಿಕ ನಾನು 1980ರಿಂದ 85ರವರೆಗೆ ಶಿವಮೊಗ್ಗ ಜಿಲ್ಲಾ ಪ್ರಚಾರಕನಾಗಿದ್ದಾಗ, ದಿವಾಕರ್ ಅವರನ್ನು ಆಗಾಗ ಸಂಧಿಸುವ ಅವಕಾಶ ಸಿಗುತ್ತಿತ್ತು. ಕಾರ್ಯಾಲಯಕ್ಕೆ ಬಂದಾಗ ಪ್ರತಿನಿತ್ಯ ಸಂಜೆಯಂತೂ ತಪ್ಪದೇ ಭೇಟಿ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಏಕವಚನದಲ್ಲಿ ನನ್ನನ್ನು ಸಂಬೋಧಿಸುತ್ತಿದ್ದ ಅವರು ಈಗ, “ಬನ್ನಿ ದೇವರೇ ಹೇಗಿದ್ದೀರಿ? ಸಾಹೇಬರ ಸವಾರಿ ಯಾವ ಕಡೆಯಿಂದ ಬರೋಣವಾಯಿತು?” ಎಂದು ಕಿಚಾಯಿಸಿದಾಗ ಹುಸಿಮುನಿಸು ತೋರುವ ಸರದಿ ನನ್ನದು. ಸ್ವಲ್ಪ ಹೊತ್ತಿಗೆ ಮತ್ತದೇ ಹಳೆಯ ಧಾಟಿಗೆ ಹೊರಳಿ, ಎಲ್ಲಿಂದ ಬಂದೆ? ಏನು ಸಮಾಚಾರ? ಹೊಟ್ಟೆಗೆ ಏನಾದರೂ ಬಿದ್ದಿದೆಯಾ? ಎಂದು ಆಪ್ಯಾಯವಾಗಿ ಮಾತನಾಡಿಸಿದಾಗ ನನಗೆ ಆಗುತ್ತಿದ್ದ ಸಂತೋಷ ಅಷ್ಟಿಷ್ಟಲ್ಲ. ಅನೇಕ ಸಲ ಪ್ರವಾಸ ಮುಗಿಸಿ ಕಾರ್ಯಾಲಯಕ್ಕೆ ಬಂದಾಗ, ಅವರು ಹತ್ತಿರದ ಹೊಟೇಲ್ಗೆ ಕರೆದುಕೊಂಡು ಹೋಗಿ ಕಾಫಿ ತಿಂಡಿ ಕೊಡಿಸುತ್ತಿದ್ದುದನ್ನು ಮರೆಯುವಂತಿಲ್ಲ. ನನಗೆ ಹಸಿವಾಗಿದೆ, ಊಟವಾಗಿಲ್ಲ ಎಂದು ಅವರಿಗೆ ಹೇಗೆ ಗೊತ್ತಾಗುತ್ತಿತ್ತು?
ಪ್ರಚಾರಕನಾಗಿದ್ದಾಗ ಒಮ್ಮೆ ಹತ್ತಿರದ ಹಳ್ಳಿಗೆ ತುರ್ತಾಗಿ ಗುರುಪೂಜಾ ಉತ್ಸವಕ್ಕೆ ಹೋಗಬೇಕಿತ್ತು. ಹಳ್ಳಿಗೆ ಬಸ್ ಸೌಲಭ್ಯ ಇರಲಿಲ್ಲ. ನಡೆದುಕೊಂಡು ಹೋಗುವುದಕ್ಕೆ ಬಲು ದೂರ. ದಿವಾಕರ ಅವರ ಬಳಿ ಒಂದು ಹಳೆಯ ಸುವೇಗ ಇತ್ತು. ನನಗೆ ಅದನ್ನು ಓಡಿಸುವುದಕ್ಕೆ ಬರುತ್ತಿರಲಿಲ್ಲ. ಆದರೂ ಧೈರ್ಯಮಾಡಿ ಅವರ ಬಳಿ ಕೇಳಿದೆ. ತೆಗೆದುಕೊಂಡು ಹೋಗು ಎಂದರು. ಸುವೇಗವನ್ನು ಹೇಗೋ ಸ್ಟಾರ್ಟ್ ಮಾಡಿ, ಮುಂದಕ್ಕೆ ಹೋದೆ. ಆದರೆ ಅದರ ಬ್ರೇಕ್ ಎಲ್ಲಿ? ಅದನ್ನು ಆಫ್ ಮಾಡೋದು ಹೇಗೆ? ಇತ್ಯಾದಿ ಗೊತ್ತಿರಲಿಲ್ಲ. ಹೋಗುತ್ತಾ ಹೋಗುತ್ತಾ ನಿಧಾನವಾಗಿ ಒಂದೊಂದೇ ಗೊತ್ತಾಗುತ್ತಾ ಹೋಯಿತು. ಅಂತೂ ಹಳ್ಳಿಗೆ ತಲುಪಿ ಕಾರ್ಯಕ್ರಮ ಮುಗಿಸಿ, ಸುರಕ್ಷಿತವಾಗಿ ವಾಪಸ್ ಬಂದು, ಅವರಿಗೆ ಗಾಡಿ ಒಪ್ಪಿಸಿ ನಿರಾಳನಾದೆ. ನನಗೆ ಸುವೇಗ ಓಡಿಸಲು ಗೊತ್ತಿರಲಿಲ್ಲ ಎಂಬ ವಿಷಯ ಅವರಿಗೆ ತಿಳಿದಿತ್ತೋ ಇಲ್ಲವೋ ನನಗಂತೂ ಗೊತ್ತಿಲ್ಲ. ಅವರಂತೂ ಈ ಬಗ್ಗೆ ಎಂದೂ ಕೇಳಲಿಲ್ಲ…
ಶಿವಮೊಗ್ಗದಿಂದ 1985ರಲ್ಲಿ ಮಂಗಳೂರು ಜಿಲ್ಲೆಗೆ ನನ್ನ ವರ್ಗಾವಣೆಯಾದಾಗ ಭಂಡಾರದಲ್ಲಿದ್ದ ದಿವಾಕರ್ ಅವರಿಗೆ ಈ ವಿಷಯ ತಿಳಿಸಿದೆ. ಅವರು ಮರು ಮಾತನಾಡದೆ ನನಗೊಂದು ಬಾಕಿ ಪಟ್ಟಿಯನ್ನು ಕೊಟ್ಟರು. ನನಗೋ ಆಶ್ಚರ್ಯ. ಅವರ ಬಳಿ ನಾನು ಯಾವ ಸಾಲವನ್ನೂ ತೆಗೆದುಕೊಂಡಿರಲಿಲ್ಲ. ಆದರೂ ಈ ಪಟ್ಟಿಯೇಕೆ? ಆಮೇಲೆ ಅವರೇ ಹೇಳಿದರು: “ನಿಮ್ಮ ಜಿಲ್ಲೆಯಿಂದ ಭಂಡಾರಕ್ಕೆ ಬರಬೇಕಾದ ಬಾಕಿ ಮೊತ್ತದ ಪಟ್ಟಿ ಇದು”. ಕೆಲವು ಕಾರ್ಯಕರ್ತರು ಭಂಡಾರದಿಂದ ಮುಂಗಡವಾಗಿ ಪಡೆದ ವಸ್ತುಗಳ ಮೊತ್ತವನ್ನು ತೀರಿಸಿರಲಿಲ್ಲ. ಕೊನೆಗೆ ನಾನು ಅಂತಹ ಕಾರ್ಯಕರ್ತರಿಗೆ ಪತ್ರ ಬರೆದು ಅವರಿಂದ ಬರಬೇಕಾದ ಬಾಕಿಮೊತ್ತ ಸಂಗ್ರಹಿಸಿ, ದಿವಾಕರ್ ಅವರಿಗೆ ಕೊಟ್ಟೆನೆಂದು ನೆನಪು. ಇದು ನನ್ನೊಬ್ಬನ ಅನುಭವ ಅಲ್ಲ. ಶಿವಮೊಗ್ಗದಲ್ಲಿ ಜಿಲ್ಲಾ ಪ್ರಚಾರಕರಾಗಿ, ವಿಭಾಗ ಪ್ರಚಾರಕರಾಗಿ ಕೆಲಸ ಮಾಡಿದ ಬಹುತೇಕ ಎಲ್ಲರದ್ದು. ಶಿವಮೊಗ್ಗದಿಂದ ಬೇರೆ ಊರಿಗೆ ವರ್ಗಾವಣೆಯಾದಾಗ ಅಂತಹ ಪ್ರಚಾರಕರ ಗಮನಕ್ಕೆ ನಿಸ್ಸಂಕೋಚವಾಗಿ ಬಾಕಿ ಪಟ್ಟಿಯನ್ನು ದಿವಾಕರ್ ತರುತ್ತಿದ್ದರು.
ಸಂಘ ವಸ್ತು ಭಂಡಾರಕ್ಕೆ ಜೀವ ತುಂಬಿದವರು ದಿವಾಕರ ಎನ್ನುವ ಆ ಪುಟ್ಟ ಜೀವ. ತನ್ನ ಇನ್ನೊಂದು ಸಂಸಾರದಂತೆ ಅದನ್ನು ಸಾಕಿ ಸಲಹಿದರು. ಯಾವುದೇ ಹೊರಗಿನ ಬಾಕಿಯನ್ನು ಅವರು ಇಟ್ಟುಕೊಂಡಿದ್ದಿಲ್ಲ. ಆದರೆ ಬರಬೇಕಾದ ಬಾಕಿ ಸಾಕಷ್ಟಿರುತ್ತಿತ್ತು. ಆಗಾಗ ಸಂಬಂಧಿಸಿದವರಿಗೆ ರಿಮೈಂಡ್ ಮಾಡುತ್ತಿದ್ದರು. ಕೊನೆಗೂ ಲೆಕ್ಕಪತ್ರ ಮಾತ್ರ ಇನ್ಟ್ಯಾಕ್ಟ್ ಆಗಿರುತ್ತಿತ್ತು. ಈ ರೀತಿ ಲೆಕ್ಕ ಇನ್ಟ್ಯಾಕ್ಟ್ ಆಗಿರಲು ತಮ್ಮ ಜೇಬಿನಿಂದ ಅದೆಷ್ಟು ಹಣ ಸುರಿಯುತ್ತಿದ್ದರೆಂಬುದು ಅವರಿಗೆ ಮಾತ್ರ ಗೊತ್ತು!.
ದಿವು ಅವರು ತಮ್ಮ ಸಂಘ ಜೀವನದಲ್ಲಿ ಒಂದೇ ಒಂದು ಬೈಠಕ್ ತೆಗೆದುಕೊಂಡವರಲ್ಲ. ಅಪ್ಪಿತಪ್ಪಿಯೂ ಒಂದೇ ಒಂದು ಬೌದ್ಧಿಕ ಮಾಡಿರಲಿಲ್ಲ. ಇನ್ನು ಸಾರ್ವಜನಿಕ ಭಾಷಣಕ್ಕೂ ಅವರಿಗೂ ಗಾವುದ ದೂರ. ಆದರೆ ತಮ್ಮ 50 ವರ್ಷಗಳ ಅಹರ್ನಿಶಿ, ಪಾರದರ್ಶಕ ಕೆಲಸದ ಮೂಲಕ 100 ಬೈಠಕ್ ತೆಗೆದುಕೊಳ್ಳುವವರು, 200 ಬೌದ್ಧಿಕ್ ಮಾಡುವವರು ಹೇಳಬಹುದಾದ ಆದರ್ಶ, ಮೌಲ್ಯಗಳನ್ನು ಸದ್ದಿಲ್ಲದೆ ಕಾರ್ಯಕರ್ತಗೊಳಿಸಿದ್ದರು.
ಪ್ರಚಾರ ಪ್ರಿಯತೆಯಿಂದಲೂ ಅವರು ಮಾರು ದೂರ. ಸಾಮಾಜಿಕ ಸೇವೆ ಸಲ್ಲಿಸುವ ಯಾವುದಾದರೂ ಸಂಸ್ಥೆಗೆ ದಾನ ನೀಡಬೇಕೆಂದು ಅವರಿಗೆ ಮನಸ್ಸಾದರೆ, ಆ ಸಂಸ್ಥೆಗೆ ಫೋನ್ ಮಾಡಿ ಹೇಳುತ್ತಿರಲಿಲ್ಲ. ತಾವೇ ನೇರವಾಗಿ ಆ ಸಂಸ್ಥೆಯ ಪ್ರಮುಖರ ಬಳಿಗೆ ತೆರಳಿ, ನನಗೆ ನಿಮ್ಮ ಸಂಸ್ಥೆಗೆ ನೆರವು ನೀಡಬೇಕೆಂದು ಮನಸ್ಸಾಗಿದೆ. ದಯವಿಟ್ಟು ತೆಗೆದುಕೊಳ್ಳಿ ಎಂದಷ್ಟೇ ಹೇಳಿ ಹಣ ಕೊಟ್ಟು ಸದ್ದಿಲ್ಲದೆ ಮರಳುತ್ತಿದ್ದರು. ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೂ ಗೊತ್ತಾಗಬಾರದು ಎಂಬಂತಹ ಆದರ್ಶ ನೀತಿ ಅವರದು. ಹೀಗಾಗಿ ಅವರು ಯಾವ ಯಾವ ಸಂಸ್ಥೆಗೆ ಎಷ್ಟೆಷ್ಟು ದಾನ ಮಾಡಿದ್ದಾರೆ, ಯಾರ್ಯಾರಿಗೆ ನೆರವು ನೀಡಿದ್ದಾರೆ ಎಂಬುದು ಅವರಿಗೆ ಹಾಗೂ ಆಯಾ ಸಂಸ್ಥೆಗಳ ಪ್ರಮುಖರಿಗೆ ಮಾತ್ರ ಗೊತ್ತು. ದೇವಸ್ಥಾನ ಕ್ಕೆ ಒಂದು ಸಣ್ಣ ಟ್ಯೂಬ್ ಲೈಟ್ ದಾನವಾಗಿ ಕೊಟ್ಟವರು ಕೂಡ ಪ್ರಚಾರ ಬಯಸುತ್ತಾರೆ. ಆ ಟ್ಯೂಬ್ ಲೈಟ್ ಮೇಲೆ ತಮ್ಮ ಹೆಸರು ಕೆತ್ತಿಸಿಕೊಳ್ಳುತ್ತಾರೆ. ಆದರೆ ದಿವೂ ಮಾತ್ರ ಅಂತಹ ಪ್ರಚಾರದ ಗೀಳು ಅಂಟಿಸಿಕೊಂಡಿರಲಿಲ್ಲ.
ಶಿವಮೊಗ್ಗದಲ್ಲಿ ಸಂಘಕಾರ್ಯಕ್ಕೆ ಹೊಸ ಆಯಾಮ ನೀಡಿದ ಹಿರಿಯೂರು ಕೃಷ್ಣಮೂರ್ತಿಗಳಿಗೂ ದಿವಾಕರ್ ಅವರಿಗೂ ಗಳಸ್ಯ ಕಂಠಸ್ಯ. ನಾಗಭೂಷಣ ಭಟ್, ಪ್ರಾಣೇಶ್, ಅಶ್ವಥ್, ಬಿ.ವಿ ರಾಮಸ್ವಾಮಿ, ಜೊತೆಗೆ ಹಿರಿಯೂರು ಇವರೆಲ್ಲ ಜೀವಕ್ಕೆ ಜೀವ ಕೊಡುವ ಪ್ರಾಣ ಸ್ನೇಹಿತರು. ಶಿವಮೊಗ್ಗದಲ್ಲಿ 80ರ ದಶಕದಲ್ಲಿ ಕಾರು ಹೊಂದಿರುವ ಸ್ವಯಂಸೇವಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಆಡಿಟರ್ ಎಸ್.ಬಿ. ರಾಮಸ್ವಾಮಿ ಅವರ ಫಿಯೆಟ್, ಡಿ.ಹೆಚ್. ಸುಬ್ಬಣ್ಣನವರ ಕಾರು, ಅವರನ್ನು ಬಿಟ್ಟರೆ ದಿವಾಕರ್ ಅವರ ಹಳೆಯ ಅಂಬಾಸಿಡರ್ ಕಾರು ಶಿವಮೊಗ್ಗಕ್ಕೆ ಬರುವ ಸಂಘದ ಹಿರಿಯ ಅಧಿಕಾರಿಗಳನ್ನು ರೈಲ್ವೆ ಸ್ಟೇಷನ್ ಅಥವಾ ಬಸ್ ನಿಲ್ದಾಣದಿಂದ ಕರೆದುಕೊಂಡು ಬರಲು ಸಿದ್ಧವಾಗುತ್ತಿತ್ತು. ರಾಮಸ್ವಾಮಿ ಅಥವಾ ಸುಬ್ಬಣ್ಣ ಅವರ ಕಾರು ಸಿಗದಿದ್ದರೆ ಹಿರಿಯೂರು ಕೃಷ್ಣಮೂರ್ತಿ ದಿವಾಕರ್ ಅವರಿಗೆ ಫೋನ್ ಮಾಡಿ “ದಿವು, ರಾಷ್ಟ್ರಸೇವೆಗೆ ಭಾಗವತರ ಅಂಬಾಸಿಡರ್ ರೆಡಿಯಾಗಲಿ” ಎನ್ನುತ್ತಿದ್ದರು. ನನ್ನ ಕಾರು ಬಿಟ್ರೆ ನಿಮಗೆ ಬೇರೆ ಗತಿ ಇಲ್ವಾ? ಎಂದು ರೇಗಿದರೂ, ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಕಾರು ತರುತ್ತಿದ್ದರು. ಅಧಿಕಾರಿಗಳನ್ನು ನಿಗದಿತ ಜಾಗಕ್ಕೆ ತಲುಪಿಸಿ ಹೋಗುತ್ತಿದ್ದರು. ಒಮ್ಮೆ ಮಧುಕೃಪಾ ಕಾರ್ಯಾಲಯಕ್ಕೆ ಹೋಗಿದ್ದಾಗ ದಿವಾಕರ್ ಭೇಟಿಯಾಗಿದ್ದರು. ನಾನು “ಏನ್ರೀ ದಿವು, ಸಂಘ ಪರಿವಾರದಲ್ಲಿ ಚಿಕ್ಕ ವಯಸ್ಸಿನವರೆಲ್ಲ ದೊಡ್ಡ ದೊಡ್ಡ ಹುದ್ದೆಗೇರಿದ್ದಾರೆ. ನಿಮ್ಮ ಊರಿಗೆ ಅವರೆಲ್ಲ ಶಾಸಕರು, ಮಂತ್ರಿಗಳಾಗಿದ್ದಾರೆ. ನೀವು ಮಾತ್ರ ಅದೇ ಭಂಡಾರ ಪ್ರಮುಖರಾಗಿ ಅದೇ ಕೆಲಸ ಮಾಡ್ತಾ ಇದೀರಲ್ಲ” ಎಂದು ಕಿಚಾಯಿಸಿದ್ದೆ. “ಹೌದಪ್ಪ, ನಮ್ಮ ಹಣೆಬರೆಹ. ಏನ್ ಮಾಡೋದು” ಎಂದು ಅವರು ಹುಸಿಮುನಿಸಿನಿಂದ ಹೇಳಿದ್ದರು. ಆದರೆ ಅವರೆಂದೂ ಭಂಡಾರದ ಕೆಲಸದಲ್ಲಿ ಬೇಸರ ತಾಳಿದ್ದನ್ನು ನಾನು ನೋಡಿಲ್ಲ. ನನ್ನ ಹಣೆಬರೆಹ, ಕರ್ಮ ಇದು ಎಂದು ಗೋಳಾಡಿದ್ದನ್ನು ನಾನಂತೂ ಕಂಡಿಲ್ಲ. 50 ವರ್ಷಕಾಲ ಅದೇ ಕೆಲಸ ನಿರ್ವಹಿಸುತ್ತಿದ್ದರು. ಅದೇ ಉತ್ಸಾಹ, ಅದೇ ಹೊಣೆಗಾರಿಕೆ, ಅಷ್ಟೇ ಜವಾಬ್ದಾರಿಯುತ ನಿರ್ವಂಚನೆಯ ಭಾವ ಅವರಲ್ಲಿ ಕಾಣುತ್ತಿತ್ತು. ಅಂತಹ ನಿಷ್ಕಾಮಕರ್ಮಿ, ನಿಷ್ಕಪಟ, ನಿತಾಂತ ಶ್ರದ್ಧೆಯ ಕಾರ್ಯಕರ್ತ ಅವರಾಗಿದ್ದರು.
