ಅಂಕಣ – ನಗಾರಿ
ಬಿಜೆಪಿ, ಕಾಂಗ್ರೆಸ್ ಖಾತೆಗಳನ್ನೇ ಹಿಂದಿಕ್ಕಿದ ‘ಜಿರಳೆ’ ಅಲೆ! ಕೇವಲ 5 ದಿನಗಳಲ್ಲಿ ಮಿಲಿಯನ್ ಫಾಲೋವರ್ಸ್ ಅನ್ನು ಸೃಷ್ಟಿಸಿದ ಡಿಜಿಟಲ್ ಪವಾಡ! ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿಕೆಯ ವಿರುದ್ಧ ಭುಗಿಲೆದ್ದ Gen-Z ಆಕ್ರೋಶ, ಇಂದು ದೇಶದ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಗೆ ವ್ಯಂಗ್ಯದ ಚಾಟಿ ಬೀಸುತ್ತಿದೆ. ಏನಿದು ‘ಕಾಕ್ರೋಚ್ ಜನತಾ ಪಾರ್ಟಿ?’ ಇದರ ಹಿಂದಿರುವ ಮಾಸ್ಟರ್ ಮೈಂಡ್ ಯಾರು? ಓದಿ ರಾಜಕೀಯದ ಹೊಸ ಅಖಾಡದ ಕಥೆ; ಡಿಜಿಟಲ್ ರಾಜಕೀಯದ ಈ ಹೊಸ ಸದ್ದಿನ ಒಳಹರಿವನ್ನು ಬಿಚ್ಚಿಡುವ ಲೇಖನ.
- ಭೈರೇಗೌಡ ಎಮ್.ಎಸ್., ಎಂಎ ವಿದ್ಯಾರ್ಥಿ, ಕಾಳಿದಾಸ ಮಹಾವಿದ್ಯಾಲಯ, ಬಾದಾಮಿ
ಇಂದಿನ ಭಾರತೀಯ ರಾಜಕೀಯದಲ್ಲಿ ಯುವಜನತೆಯ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿಶೇಷವಾಗಿ Gen Z ಪೀಳಿಗೆಯ ಮನೋಭಾವ ರಾಜಕೀಯ ಪಕ್ಷಗಳ ಕಾರ್ಯವೈಖರಿಯನ್ನು ಬದಲಾಯಿಸುತ್ತಿದೆ. ಸಾಮಾಜಿಕ ಜಾಲತಾಣದ ಪ್ರಭಾವ, ಮೀಮ್ ಸಂಸ್ಕೃತಿ, ಡಿಜಿಟಲ್ ಪ್ರಚಾರ ಮತ್ತು ತಕ್ಷಣದ ಪ್ರತಿಕ್ರಿಯೆಗಳ ಯುಗದಲ್ಲಿ ‘ಜಿರಳೆ ಜನತಾ ಪಾರ್ಟಿ’ (Cockroach Janta Party) ಎಂಬ ಕಲ್ಪಿತ ರಾಜಕೀಯ ಸಂಘಟನೆ ಹೊಸ ರೀತಿಯ ರಾಜಕೀಯ ಪ್ರವೃತ್ತಿಯ ಪ್ರತಿನಿಧಿಯಂತೆ ಕಾಣುತ್ತಿದೆ. ಈ ಪಕ್ಷವು ಸಾಂಪ್ರದಾಯಿಕ ರಾಜಕೀಯದ ಮಿತಿಗಳನ್ನು ಮೀರಿ ಯುವಜನರ ಭಾವನೆಗಳನ್ನು, ನಿರಾಸೆಗಳನ್ನು ಹಾಗೂ ಡಿಜಿಟಲ್ ಸಂಸ್ಕೃತಿಯನ್ನು ರಾಜಕೀಯ ಸಾಧನವಾಗಿ ಬಳಸಿಕೊಳ್ಳುತ್ತಿದೆ.
‘ಜಿರಳೆ’ ಎಂಬ ಪದವೇ ಇಲ್ಲಿ ಪ್ರತೀಕಾತ್ಮಕವಾಗಿದೆ. ಎಷ್ಟು ಸವಾಲುಗಳು ಬಂದರೂ ಬದುಕಿ ಉಳಿಯುವ ಗುಣವನ್ನು ಜಿರಳೆ ಪ್ರತಿನಿಧಿಸುತ್ತದೆ. ಇದೇ ರೀತಿಯಾಗಿ ಸಾಮಾನ್ಯ ಜನರ ಸಮಸ್ಯೆಗಳು, ನಿರುದ್ಯೋಗ, ಶಿಕ್ಷಣದ ಒತ್ತಡ, ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯಗಳ ನಡುವೆ ಯುವಕರು ಬದುಕು ಕಟ್ಟಿಕೊಳ್ಳುತ್ತಿರುವ ಸ್ಥಿತಿಯನ್ನು ಈ ಪಕ್ಷ ತನ್ನ ರಾಜಕೀಯ ತತ್ತ್ವವಾಗಿ ಬಳಸಿಕೊಳ್ಳುತ್ತಿದೆ. ಇದರಿಂದ ಯುವಜನತೆಗೆ ಈ ಪಕ್ಷ “ನಮ್ಮ ಮಾತು ಹೇಳುವ ಸಂಘಟನೆ” ಎಂಬ ಭಾವನೆ ಮೂಡಿಸುತ್ತಿದೆ.
ಏನಿದು ಸಿಜೆಪಿ?
ಸಿಜೆಪಿ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಒಂದು ವಿಡಂಬನಾತ್ಮಕ ಅಭಿಯಾನ. ಇದು ಸದ್ಯ ಆನ್ಲೈನ್ ಯುದ್ಧಗಳಲ್ಲಿ ಭಾರತದ ಅತ್ಯಂತ ಶಕ್ತಿಶಾಲಿ ರಾಜಕೀಯ ಪಕ್ಷಗಳನ್ನು ಹಿಂದಿಕ್ಕುತ್ತಿದೆ. ಅಭಿಜಿತ್ ದಿಪ್ಕೆ ಎಂಬ ಯುವಕ ಆರಂಭಿಸಿದ ಈ ಅಭಿಯಾನ ಈಗ Gen-Z ಸಂಘಟನೆಯಾಗಿ ಬದಲಾಗುತ್ತಿದೆ. ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ ಯುವಕರ ಬಗ್ಗೆ ಹೇಳಿದ್ದಾರೆ ಎನ್ನಲಾದ ಹೇಳಿಕೆಗೆ ಪ್ರತಿಯಾಗಿ, ಆನ್ಲೈನ್ನಲ್ಲಿ ಆಕ್ರೋಶ ವ್ಯಕ್ತಪಡಿಸಲು ಮತ್ತು ವ್ಯಂಗ್ಯದ ಬಾಣಗಳನ್ನು ಬಿಡಲು ಕಾಕ್ರೋಚ್ ಜನತಾ ಪಾರ್ಟಿ ಹೆಸರಿನ ಅಭಿಯಾನವನ್ನು ಆರಂಭಿಸಲಾಗಿತ್ತು.
ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೇ ಆನ್ಲೈನ್ ಮಾಧ್ಯಮವಾಗಿ ಪರಿವರ್ತಿಸಿದ ಅಭಿಜಿತ್ ದಿಪ್ಕೆ, ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಾದ ಎಕ್ಸ್, ಇನ್ಸ್ಟಾಗ್ರಾಮ್ಗಳಲ್ಲಿ ಪೋಸ್ಟ್ ಮಾಡಲಾರಂಭಿಸಿದ್ದರು. Gen-Z ಸಮುದಾಯವನ್ನು ಆಕರ್ಷಿಸಿದ ಈ ಕಾರ್ಯ ನಂಬಲಸಾಧ್ಯ ಸಂಖ್ಯೆಯ ಫಾಲೋವರ್ಸ್ ಗಳನ್ನು ಗಳಿಸಿದೆ. ಯುವಕರ ಉದ್ಯೋಗದ ಹಕ್ಕನ್ನು ಧ್ವನಿಸುವಂತೆ ಮುಖ್ಯ ನ್ಯಾಯಮೂರ್ತಿಯನ್ನು ಒತ್ತಾಯಿಸುತ್ತದೆ.
@cockroachjantaparty ಹ್ಯಾಂಡಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಖಾತೆ ಸುಮಾರು 22 ಮಿಲಿಯನ್ ಫಾಲೋವರ್ಸ್ ಗಡಿಯನ್ನು ದಾಟಿದೆ. ಆಡಳಿತಾರೂಢ ಬಿಜೆಪಿಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ @bjp4india ಪ್ರಸ್ತುತ ಸುಮಾರು 8.7 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ಕಾಂಗ್ರೆಸ್ನ @incindia ಖಾತೆಯು ಸುಮಾರು 13.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. 2012ರಲ್ಲಿ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷ (ಆಪ್) ಸುಮಾರು 1.9 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದೆ.
ಯಾರು ಈ ಅಭಿಜಿತ್ ದಿಪ್ಕೆ..?
30 ವರ್ಷದ ಅಭಿಜಿತ್ ದಿಪ್ಕೆ ಭಾರತೀಯ ರಾಜಕೀಯ ಸಂವಹನ ತಂತ್ರಜ್ಞ ಮತ್ತು ಸಿಜೆಪಿ ಪಕ್ಷದ ಸ್ಥಾಪಕ. ಡಿಜಿಟಲ್ ವೇದಿಕೆಯಲ್ಲಿ ರಾಜಕೀಯ ಸಂದೇಶ ಕಳುಹಿಸುವಿಕೆ, ನಿರೂಪಣೆ, ಮತ್ತು ಆನ್ಲೈನ್ ಪ್ರಚಾರ ತಂತ್ರಗಾರಿಕೆಯಲ್ಲಿ ನಿಪುಣರಾಗಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳುವ ಮೊದಲು ಅಭಿಜಿತ್ ದಿಪ್ಕೆ ಪುಣೆಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಪದವಿಯನ್ನು ಪೂರ್ಣಗೊಳಿಸಿದ್ದರು.
ಇತ್ತೀಚೆಗೆ ಬೋಸ್ಟನ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಸಂಪರ್ಕದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿಯನ್ನು ಪಡೆದ ಅಭಿಜಿತ್ ದಿಪ್ಕೆ, 2020 ಮತ್ತು 2023ರಲ್ಲಿ ಆಪ್ ಪಕ್ಷದ ಜೊತೆ ಕೆಲಸ ಮಾಡಿದ್ದರು. ಅವರು ಆಪ್ನ ಸಾಮಾಜಿಕ ಮಾಧ್ಯಮ ಮತ್ತು ಚುನಾವಣಾ ಪ್ರಚಾರ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದರು.
2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಪ್ರಮುಖ ಗೆಲುವು ಸಾಧಿಸಿದಾಗ, 24 ವರ್ಷದವರಾಗಿದ್ದ ಅಭಿಜಿತ್ ದಿಪ್ಕೆ, ಮೀಮ್-ಚಾಲಿತ ಡಿಜಿಟಲ್ ಅಭಿಯಾನಗಳಲ್ಲಿ ಭಾರೀ ಕೊಡುಗೆ ನೀಡಿದ್ದರು. ಅದೇ ಅಭಿಜಿತ್ ದಿಪ್ಕೆ ಈಗ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸುತ್ತಿದ್ದಾರೆ.
ಜಿರಳೆ ಜನತಾ ಪಾರ್ಟಿಯ ಪ್ರಣಾಳಿಕೆ
● ಎಲ್ಲ ಕ್ಯಾಬಿನೆಟ್ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲಾಗುವುದು.
● ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ಶಾಸಕರು ಮತ್ತು ಸಂಸದರ ಮೇಲೆ 20 ವರ್ಷಗಳ ನಿಷೇಧ ಹೇರಲಾಗುವುದು.
● ‘ಗೋದಿ ಮೀಡಿಯಾ’ ಆಂಕರ್ಗಳ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಲಾಗುವುದು.
● ಯಾವುದೇ ಮಾನ್ಯವಾದ ಮತವನ್ನು ಡಿಲೀಟ್ ಮಾಡಿದರೆ ಮುಖ್ಯ ಚುನಾವಣಾ ಆಯುಕ್ತರನ್ನು (CEC) ಯುಎಪಿಎ ಕಾಯ್ದೆಯಡಿ ಬಂಧಿಸಲಾಗುವುದು ಹಾಗೂ ಯಾವುದೇ ಮುಖ್ಯ ನ್ಯಾಯಮೂರ್ತಿಗಳನ್ನು ನಿವೃತ್ತಿಯ ನಂತರ ರಾಜ್ಯಸಭೆಗೆ ನೇಮಕ ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುವುದು.
5 ದಿನ – ಮಿಲಿಯನ್ ಫಾಲೋವರ್ಸ್- ಪವಾಡವೋ ಪಿತೂರಿಯೋ?
‘ಜಿರಳೆ ಜನತಾ ಪಾರ್ಟಿ’ ಎಂಬ ಹೊಸ ರಾಜಕೀಯ ಅಥವಾ ಸಾಮಾಜಿಕ ಚಳವಳಿಗೆ ಆರಂಭವಾದ ಕೇವಲ ಐದು ದಿನಗಳಲ್ಲಿ 80 ಲಕ್ಷ ಫಾಲೋವರ್ಸ್ ಬಂದಿದ್ದಾರೆ ಎಂದರೆ ಅದು ಸಾಮಾನ್ಯ ಘಟನೆಯಲ್ಲ. ಆದರೆ ಅದನ್ನು ತಕ್ಷಣ ‘ಪವಾಡ’ ಅಥವಾ ‘ಸಂಚು’ ಎಂದು ನಿರ್ಧರಿಸುವುದಕ್ಕಿಂತ, ಅದರ ಹಿಂದೆ ಇರುವ ಕಾರಣಗಳನ್ನು ವಿಶ್ಲೇಷಿಸುವುದು ಮುಖ್ಯ.
ಒಂದು ಕಡೆ ನೋಡಿದರೆ, ಇದು ಡಿಜಿಟಲ್ ಯುಗದ ಶಕ್ತಿ. ಇಂದಿನ Gen Z ಮತ್ತು ಯುವಜನತೆ ಮೀಮ್ಸ್, ರೀಲ್ಸ್, ವ್ಯಂಗ್ಯ ರಾಜಕೀಯ, ಮತ್ತು ವೈರಲ್ ಕಂಟೆಂಟ್ ಕಡೆ ಹೆಚ್ಚು ಆಕರ್ಷಿತರಾಗುತ್ತಾರೆ. ಒಂದು ಹೊಸ ಹೆಸರು, ವಿಭಿನ್ನ ಲೋಗೋ, ಟ್ರೆಂಡಿಂಗ್ ಹ್ಯಾಶ್ಟ್ಯಾಗ್ ಅಥವಾ ಸರ್ಕಾರ ವಿರೋಧಿ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗುವ ವಾತಾವರಣವಿದೆ. ಈ ದೃಷ್ಟಿಯಿಂದ ನೋಡಿದರೆ, 80 ಲಕ್ಷ ಫಾಲೋವರ್ಸ್ ಅನ್ನು ‘ಡಿಜಿಟಲ್ ಪವಾಡ’ ಅನ್ನಬಹುದು.
ಹೆಚ್ಚಾದ ಕಳವಳ
ಹೌದು, ಕಾಕ್ರೋಚ್ ಜನತಾ ಪಾರ್ಟಿ ಪರಿಸ್ಥಿತಿ ಈಗ ಬೇರೆ ರೂಪ ತೆಗೆದುಕೊಂಡಿದೆ, ಇದು ಕೇವಲ ಮೀಮ್ ಮತ್ತು ಜೋಕ್ ಮಟ್ಟದಲ್ಲಿ ನಿಂತಿಲ್ಲ. ಭದ್ರತಾ ಸಂಸ್ಥೆಗಳು ಈ ಡಿಜಿಟಲ್ ಪ್ರತಿಕ್ರಿಯೆ ಮುಂದೆ ದೊಡ್ಡ ರಾಜಕೀಯ ಚಳುವಳಿಯಾಗಿ ಮಾರ್ಪಾಡಾಗಬಹುದೇ ಎಂಬ ಭಯದಲ್ಲಿವೆ. ಈ ಚಳವಳಿಯ ವೇಗವಾಗಿ ವಿಸ್ತರಿಸುತ್ತಿರುವ ಜಾಲ, ಅದರ ಹಿಂದಿರುವ ಸಂಘಟನೆ ಮತ್ತು ಅದರ ಪ್ರಭಾವದ ವ್ಯಾಪ್ತಿ ಕಳವಳದ ವಿಚಾರವಾಗಿದೆ. ಸಾಮಾನ್ಯ ಸಾಮಾಜಿಕ ಮಾಧ್ಯಮ ಟ್ರೆಂಡ್ಗಳು ಬೆಳೆಯುವ ವೇಗಕ್ಕಿಂತ ಬಹಳ ಬೇಗ ಸಿಜೆಪಿ ಬೆಳೆದಿದೆ ಎಂದು ಏಜೆನ್ಸಿಗಳು ಹೇಳುತ್ತಿವೆ. ಆದ್ದರಿಂದ ಇದರ ವಿದೇಶಿ ಸಂಪರ್ಕಗಳು, ಟೆಲಿಗ್ರಾಮ್ ನೆಟ್ವರ್ಕ್, ಹಳೆಯ ಡಿಜಿಟಲ್ ದಾಖಲೆಗಳನ್ನು ಈಗ ಸನ್ನಿವೇಶವಾಗಿ ತನಿಖೆ ಮಾಡಲಾಗುತ್ತಿದೆ.
ಹೊಸ ಚಳವಳಿಗೆ ನಾಂದಿ ಹಾಡಿದ ಅಭಿಜಿತ್ ದಿಪ್ಕೆ
ಮೇ ತಿಂಗಳ ಮಧ್ಯದಲ್ಲಿ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಹೇಳಿದ ವಿವಾದಾತ್ಮಕ ಹೇಳಿಕೆಗಳ ನಂತರ ಈ ಚಳವಳಿ ಭುಗಿಲೆದ್ದಿದೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ನಂತರ ನ್ಯಾಯಮೂರ್ತಿಯವರು ಸ್ಪಷ್ಟನೆಯನ್ನೂ ನೀಡಿದರು. ಈ ಪಾರ್ಟಿಯು ಸಾಮಾನ್ಯ ನಿರುದ್ಯೋಗಿ ಯುವಕರನ್ನಲ್ಲ, ಹೊರತಾಗಿ ಪ್ರತಿಷ್ಥಿತ ವೃತ್ತಿಗಳಿಗೆ ಪ್ರವೇಶಿಸಲು ನಕಲಿ ಪದವಿಗಳನ್ನು ಬಳಸುವವರನ್ನು ಗುರಿಯಾಗಿಸಿಕೊಂಡಿದೆ.
ಆನ್ಲೈನ್ನಲ್ಲಿ ನಡೆಯುವ ಸಾಮಾನ್ಯ ಪ್ರತಿಭಟನೆಗಳ ಬದಲು, ಡಿಜಿಟಲ್ ಸೃಷ್ಟಿಕರ್ತರು ಮತ್ತು ಯುವಕರು ಅವಮಾನಗಳನ್ನು ಸ್ವೀಕರಿಸಲು ಮತ್ತು ಅವುಗಳನ್ನು ಸಾಮೂಹಿಕ ರಾಜಕೀಯ ಆಕ್ರೋಶದ ಸಂಕೇತಗಳಾಗಿ ಪರಿವರ್ತಿಸುವ ಸಲುವಾಗಿ ಮೇ 16ಕ್ಕೆ ಜಿರಳೆ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು ತನ್ನನ್ನು ತಾನು ಸೋಮಾರಿ ಮತ್ತು ನಿರುದ್ಯೋಗಿಗಳ ಧ್ವನಿ ಎಂದು ಬಿಂಬಿಸಿಕೊಂಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ನೇರ ಸ್ಪರ್ಧೆಗೆ ಇಳಿಯಬಹುದೇ?
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದಶಕಗಳ ಇತಿಹಾಸ, ಬಲವಾದ ಕಾರ್ಯಕರ್ತರ ಸಮೂಹ, ಪ್ರಾದೇಶಿಕ ನಾಯಕರು ಮತ್ತು ಚುನಾವಣಾ ತಂತ್ರಗಾರಿಕೆಯನ್ನು ಹೊಂದಿವೆ. ಸಿಜೆಪಿ ರಾಜಕೀಯ ಅಖಾಡಕ್ಕಿಳಿದರೂ ಹೊಸ ಪಕ್ಷವಾಗಿರುವುದರಿಂದ ಆರಂಭದಲ್ಲೇ ರಾಷ್ಟ್ರಮಟ್ಟದಲ್ಲಿ ಸಮಾನ ಸ್ಪರ್ಧೆ ನೀಡುವುದು ಕಷ್ಟ, ಆದರೆ ಅಸಾಧ್ಯವಂತೂ ಅಲ್ಲ. ಇತಿಹಾಸದಲ್ಲಿ ಕೂಡ ಹಲವಾರು ಚಳವಳಿಗಳು ಮೊದಲು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿ ನಂತರ ರಾಜಕೀಯ ಶಕ್ತಿಯಾಗಿವೆ. ಉದಾಹರಣೆಗೆ: ಆಮ್ ಆದ್ಮಿ ಪಾರ್ಟಿ ಮೊದಲಿಗೆ ಒಂದು ಜನಾಂದೋಳನವಾಗಿ ಶುರುವಾಗಿ ನಂತರ ದೊಡ್ಡ ರಾಜಕೀಯ ಶಕ್ತಿಯಾಯಿತು. ಡೊನಾಲ್ಡ್ ಟ್ರಂಪ್ ಕೂಡ ಅವರ ಡಿಜಿಟಲ್ ಕ್ಯಾಂಪೇನ್ ಕೂಡ ಸಾಮಾಜಿಕ ಜಾಲತಾಣದ ಪ್ರಭಾವದಿಂದ ದೊಡ್ಡಮಟ್ಟಕ್ಕೆ ಬೆಳೆದಿತ್ತು.
ಇದು ಡಿಜಿಟಲ್ ರಾಜಕೀಯ, ಯುವಜನರ ಮನೋಭಾವ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದ ಮಿಶ್ರಣವಾಗಿರಬಹುದು. ನಿಜವಾದ ಶಕ್ತಿ ಇದೆಯೇ ಎಂಬುದು ಮುಂದಿನ ದಿನಗಳಲ್ಲಿ ಅವರ ಕಾರ್ಯಪದ್ಧತಿ, ಜನಸಂಪರ್ಕ, ಮತ್ತು ರಾಜಕೀಯ ಪರಿಣಾಮದಿಂದ ತಿಳಿಯುತ್ತದೆ. ಭಾರತದ ರಾಜಕೀಯ ಇತಿಹಾಸದಲ್ಲಿ ಕೆಲವು ಹೊಸಪಕ್ಷಗಳು ರಾಜ್ಯಮಟ್ಟದಲ್ಲಿ ವೇಗವಾಗಿ ಬೆಳೆದ ಉದಾಹರಣೆಗಳಿವೆ. ಜನರ ಭಾವನೆ, ಸಾಮಾಜಿಕ ಚಳವಳಿ ಮತ್ತು ಪ್ರಬಲ ನಾಯಕತ್ವ ಇದ್ದರೆ ಹೊಸ ಪಕ್ಷವೂ ರಾಜಕೀಯದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ‘ಜಿರಳೆ ಜನತಾ ಪಾರ್ಟಿ’ ಹೊಸ ಕಲ್ಪಿತ ಪಕ್ಷವು ನೇರವಾಗಿ ಕಾಂಗ್ರೆಸ್ ಅಥವಾ ಬಿಜೆಪಿ ಮಟ್ಟಕ್ಕೆ ತಲುಪಲು ಸಮಯ, ಸಂಘಟನೆ ಮತ್ತು ಜನಬೆಂಬಲ ಅಗತ್ಯ. ಆದರೆ ಯುವಜನರ ಮನಸ್ಥಿತಿ ಹಿಡಿದರೆ ಮತ್ತು ಹೊಸ ರಾಜಕೀಯ ಪರ್ಯಾಯವಾಗಿ ತೋರುತ್ತದೆ ಎಂದರೆ ಪ್ರಭಾವ ಬೀರುವ ಅವಕಾಶ ಖಂಡಿತ ಇದೆ.
