ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ
ನಮ್ಮದು ಋಷಿ ಪರಂಪರೆ. ಎಲ್ಲ ಕಾಲಗಳಲ್ಲೂ ಋಷಿಗಳು ಇರುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಋಷಿಗಳಿರುತ್ತಾರೆ. ಎಲ್ಲರನ್ನೂ ತನ್ನ ಪತ್ನಿ-ಪುತ್ರರ ಸಹಿತ ವಿಶಿಷ್ಟ ಕಾರ್ಯ ಒಂದಕ್ಕೆ ಸಮರ್ಪಿಸಿ ವಿಶ್ವಹಿತಕ್ಕಾಗಿ ದುಡಿದವರನ್ನು ಋಷಿ ಎನ್ನುತ್ತಾರೆ. ಅಂತಹವರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು ಪ್ರಭಾಕರ ಘಾಟೆಯವರು.
ಸಂಘ, ಜನಸಂಘ, ಬಿಜೆಪಿ, ಭಾರತೀಯ ಮಜ್ದೂರ್ ಸಂಘ ಮುಂತಾದ ಸಂಘ ಪರಿವಾರದ ಸಂಸ್ಥೆಗಳಲ್ಲಿ ಅಹರ್ನಿಶಿ ದುಡಿದು ತನ್ನದೇ ಛಾಪು ಒತ್ತಿದ ಪ್ರಭಾಕರ ಘಾಟೆಯವರು ಜನಿಸಿದ್ದು ಗುಜರಾತಿನ ಸೂರತ್ನಲ್ಲಿ. (ಜನನ 23-6-1927: ನಿಧನ 10-9-2005). ತಂದೆ ಪಾಂಡುರಗ ಘಾಟೆ, ತಾಯಿ ಶ್ರೀಮತಿ ರಾಧಾಬಾಯಿ ಘಾಟೆ. 1929ರಲ್ಲಿ ತಂದೆ ಸ್ವರ್ಗಸ್ಥರಾದ ಬಳಿಕ ಘಾಟೆ ಕುಟುಂಬ ಬಂದು ನೆಲೆಸಿದ್ದು ಮಂಗಳೂರಿನಲ್ಲಿ. ಡೊಂಗರ ಕೇರಿಯ ಕೆನರಾ ಹೈಸ್ಕೂಲ್ನಲ್ಲಿ ಪ್ರೌಢಶಾಲೆಯ ಶಿಕ್ಷಣ. 1948ರಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ಬಿಕಾಂ ಪದವಿ. 1942ರಲ್ಲಿ ಆರ್ಎಸ್ಎಸ್ನ ಮೊದಲ ಶಾಖೆ ಮಂಗಳೂರಿನ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಪ್ರಾರಂಭವಾದಾಗ ಪ್ರಭಾಕರ ಘಾಟೆ ಸಂಘದ ಜವಾಬ್ದಾರಿ ನಿರ್ವಹಿಸಿದರು. ಪದವಿ ಪಡೆದ ಬಳಿಕ ಸಂಘದ ಪ್ರಚಾರಕರಾಗಿ ಕೋಲಾರದಲ್ಲಿ ಸಂಘಕಾರ್ಯಕ್ಕೆ ಹೆಗಲುಕೊಟ್ಟರು.
ಆದರೆ ಅಷ್ಟರಲ್ಲೇ ಸಿಡಿಲಾಘಾತ. ಗಾಂಧೀಜಿ ಹತ್ಯೆ ಆರೋಪ ಹೊರಿಸಿ ಸಂಘದ ಮೇಲೆ ಸರ್ಕಾರದ ನಿಷೇಧ. ಘಾಟೆಯವರು ಕಾರ್ಕಳದಲ್ಲಿ ಈ ಆರೋಪದ ವಿರುದ್ಧ ಸತ್ಯಾಗ್ರಹ ಮಾಡಿ ಬಂಧನಕ್ಕೊಳಗಾದರು. 8 ತಿಂಗಳು ಕೇರಳದ ಕಣ್ಣಾನೂರು ಜೈಲಿನಲ್ಲಿ ಸೆರೆವಾಸ. ಬಿಡುಗಡೆಯ ಬಳಿಕ ಕಾರ್ಕಳದಲ್ಲಿ ಸಂಘಕಾರ್ಯದಲ್ಲಿ ವ್ಯಸ್ತರಾದರು. 1950ರ ತುಮಕೂರು ಸಂಘ ಶಿಕ್ಷಣ ವರ್ಗ ಮುಗಿಸಿ ಘಾಟೆಯವರು ಮರಳಿ ಮನೆಗೆ ಬಂದರು. ಮನೆಯಲ್ಲಿ ದುಡಿಯುವರೇ ಇರಲಿಲ್ಲ. ತುತ್ತಿನ ಚೀಲ ತುಂಬಿಸಲು ನೌಕರಿಗೆ ಸೇರುವುದು ಅನಿವಾರ್ಯವಾಯಿತು. ಆಗ ಮಂಗಳೂರಿನಲ್ಲಿ ಜನಪ್ರಿಯವಾಗಿದ್ದ ‘ನವ ಭಾರತ’ ಪತ್ರಿಕೆಗೆ ಉಪಸಂಪಾದಕನಾಗಿ ಸೇರಿ ಜೊತೆಗೆ ಸಂಘಕಾರ್ಯದಲ್ಲೂ ಕೈ ಜೋಡಿಸಿದರು.
ಸಂಘದ ಸರಸಂಘಚಾಲಕರಾಗಿದ್ದ ಗುರೂಜಿಯವರು ಉಡುಪಿಗೆ ಬಂದಿದ್ದಾಗ ಘಾಟೆಯವರು ತಮ್ಮ ವಾರದ ರಜೆಯನ್ನು ಇನ್ನೊಬ್ಬ ಉಪಸಂಪಾದಕನೊಂದಿಗೆ ಮಾತನಾಡಿ ಪರಸ್ಪರ ಬದಲಾಯಿಸಿಕೊಂಡು ಕಾರ್ಯಕ್ರಮಕ್ಕೆ ತೆರಳಿದ್ದರು. ಇದೇ ವಿಚಾರಕ್ಕೆ ಪತ್ರಿಕೆ ವ್ಯವಸ್ಥಾಪಕರು ವಿನಾಕಾರಣ ತರಲೆ ತೆಗೆದರು. ಬೇಸರ ಪಟ್ಟ ಘಾಟೆಯವರು ಪತ್ರಕರ್ತನ ವೃತ್ತಿಗೆ ಅಲ್ಲಿಗೇ ವಿದಾಯ ಹೇಳಿದರು. ಅವರ ಮುಂದಿನ ಸಾರ್ವಜನಿಕ ಬದುಕಿಗೆ ತಿರುವು ನೀಡಿದ ಘಟನೆ ಬಹುಶಃ ಇದೇ ಆಗಿರಬಹುದು.
ಆಗ ತಾನೇ ಪ್ರಾರಂಭವಾಗಿದ್ದ ಭಾರತೀಯ ಜನಸಂಘ (ಈಗ ಬಿಜೆಪಿ)ದಲ್ಲೂ ಘಾಟೆಯವರು ಕೆಲಸ ಮಾಡಿದ್ದಿದೆ. ಮಂಗಳೂರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸಾಕಷ್ಟು ಮತಗಳನ್ನು ಗಳಿಸಿದ್ದರು. ಆದರೆ ಗೆಲ್ಲಲಿಲ್ಲ. ಆಗೆಲ್ಲ ಎಲ್ಲೆಡೆ ಕಾಂಗ್ರೆಸ್ನದ್ದೇ ಹವಾ. ಜನಸಂಘದ ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
ಕಾರ್ಮಿಕ ಸಂಘಕ್ಕೆ ಪಾದಾರ್ಪಣೆ
ಮಂಗಳೂರಿನಲ್ಲಿ ಗೇರುಬೀಜ ಕಾರ್ಖಾನೆ, ಹೆಂಚು ಉದ್ಯಮ ಆಗಿನ ಕಾಲದಲ್ಲಿ ಬಲು ಪ್ರಖ್ಯಾತ. ಗೇರುಬೀಜ, ಹೆಂಚು ಅಲ್ಲಿ ಉತ್ಪಾದನೆಯಾಗಿ ದೇಶ ವಿದೇಶಗಳಿಗೆ ರಫ್ತು ಆಗುತ್ತಿತ್ತು. ಈ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕ ವರ್ಗದ ಮೇಲೆ ಆಗ ಕಮ್ಯುನಿಷ್ಟರದೇ ಅಧಿಪತ್ಯ. ಪ್ರತಿನಿತ್ಯ ವಿನಾಕಾರಣ ಕಾಲು ಕೆರೆದು ಜಗಳ, ಮುಷ್ಕರ, ಹೋರಾಟ. ಕಾರ್ಮಿಕ ಹಿತರಕ್ಷಣೆಗೆ ಅನ್ಯ ಮಾರ್ಗಗಳೇ ಇಲ್ಲವೇ? ಎಂಬ ಹೊಸ ಚಿಂತನೆ ರೂಪ ಪಡೆದು ಸಮಾನಮನಸ್ಕರ ಬೇರೊಂದು ಯೂನಿಯನ್ ನೋಂದಣಿ ಆಯಿತು. ಇದು ಕಮ್ಯುನಿಸ್ಟ್ ಮುಖಂಡರನ್ನು ಕಂಗೆಡಿಸಿತು. ರಾಷ್ಟ್ರಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆರಂಭವಾದ ಕಾರ್ಮಿಕರ ಯೂನಿಯನ್ ಎರಡು ಮೂರು ವರ್ಷ ಕಾಲ ಚೆನ್ನಾಗಿ ಕಾರ್ಯನಿರ್ವಹಿಸಿತು. 1956ರಲ್ಲಿ ಈ ಯೂನಿಯನ್ ಭಾರತೀಯ ಮಜ್ದೂರ್ ಸಂಘದ ಜೊತೆಗೆ ವಿಲೀನಗೊಂಡಿತು. ಈ ಯೂನಿಯನ್ ಅನ್ನು ಹುಟ್ಟು ಹಾಕುವಲ್ಲಿ ಘಾಟೆಯವರ ಪಾತ್ರ ಮಹತ್ವದ್ದಾಗಿತ್ತು.
ಅಲ್ಲಿಂದಾಚೆಗೆ ಪ್ರಭಾಕರ ಘಾಟೆಯವರು ಹಿಂತಿರುಗಿ ನೋಡಿದ್ದೇ ಇಲ್ಲ. ಬಿಎಮ್ಎಸ್ನ ಪೂರ್ಣಾವಧಿ ಕಾರ್ಯಕರ್ತರಾಗಿ ತಮ್ಮನ್ನು ಸಂಪೂರ್ಣ ಕಾರ್ಮಿಕ ರಂಗದ ಪ್ರಗತಿಗಾಗಿ ತೊಡಗಿಸಿಕೊಂಡರು. ಕರ್ನಾಟಕದ ಎಲ್ಲೆಡೆ ಪ್ರವಾಸ ಮಾಡಿ ಬಿಎಂಎಸ್ಗೆ ಹಲವು ಯೂನಿಯನ್ಗಳನ್ನು ಸಂಯೋಜನೆಗೊಳಿಸಿದರು. ಆನಂತರ ಬಿಎಂಎಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ 1985ರಿಂದ 1999ರವರೆಗೆ ಅವರು ನಿರ್ವಹಿಸಿದ ಕಾರ್ಯದಿಂದಾಗಿ ಕಾರ್ಮಿಕ ಕ್ಷೇತ್ರದಲ್ಲಿ ಬಿಎಂಎಸ್ ನಂಬರ್ ಒನ್ ಸ್ಥಾನಕ್ಕೇರಿದ್ದು ಈಗ ಇತಿಹಾಸ.
ಗೃಹಸ್ಥ ಪ್ರಚಾರಕ
ಪ್ರಭಾಕರ ಘಾಟೆಯವರು ತಮ್ಮ ಸ್ವಂತ ಬದುಕಿಗಾಗಿ ಯಾವುದೇ ಉದ್ಯೋಗಕ್ಕೆ ಅಂಟಿಕೊಂಡವರಲ್ಲ. ಪತ್ರಕರ್ತನಾಗಿ ಒಂದೆರಡು ವರ್ಷ ದುಡಿದಿದ್ದು ಬಿಟ್ಟರೆ, ಅವರು ಸ್ವಂತಕ್ಕಾಗಿ ಸಂಪಾದಿಸಿದ್ದೇ ಇಲ್ಲ. “ಗೃಹಸ್ಥರಾಗಿ ನಿಮ್ಮ ಸಂಸಾರ, ಮನೆ ನಡೆದಿದ್ದು ಹೇಗೆ?” ಎಂದು ನಾನು ಅವರನ್ನು ಒಮ್ಮೆ ಪ್ರಶ್ನಿಸಿದ್ದೆ. ಆಗ ಅವರು ಹೇಳಿದ್ದು: “ನಾನು ಆ ಬಗ್ಗೆ ಎಂದೂ ಯೋಚಿಸಲೇ ಇಲ್ಲ. ನಾನು ಮದುವೆಯಾದಾಗ ನನ್ನ ಪತ್ನಿ ಶಾರದಾ ಎಸ್ಎಸ್ಎಲ್ಸಿ ಮುಗಿಸಿದ್ದಳು. ನನ್ನ ತಾಯಿ ಸ್ವತಃ ಅನಕ್ಷರಸ್ಥೆಯಾಗಿದ್ದರೂ ಸೊಸೆಗೆ ಓದು ಮುಂದುವರಿಸಲು ಪ್ರೋತ್ಸಾಹಿಸಿದರು. ಹೀಗಾಗಿ ನನ್ನ ಪತ್ನಿ ಶಾರದಾ ಖಾಸಗಿಯಾಗಿ ಬಿ.ಎ, ಎಂ.ಎ, ಬಿಎಡ್ ಪರೀಕ್ಷೆ ಪಾಸು ಮಾಡಿ ಕೆನರಾ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿಕೊಂಡಳು. ಮನೆಯ ಆಗುಹೋಗುಗಳನ್ನು ನನ್ನ ಪತ್ನಿ ನಿಭಾಯಿಸಿದ್ದರಿಂದಲೇ ನಾನು ಹೊರಗೆ ಬಿಎಮ್ಎಸ್ ಕೆಲಸದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು”.
ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಸ್ತ್ರೀಯೊಬ್ಬಳ ಪಾತ್ರವಿರುತ್ತದೆ ಎಂಬ ಮಾತಿಗೆ ಶಾರದಾ ಘಾಟೆ ಪ್ರತ್ಯಕ್ಷ ನಿದರ್ಶನ. ಕಾಲೇಜಿನ ಉಪನ್ಯಾಸಕಿಯಾಗಿ, ಗೃಹ ಕೃತ್ಯ ನಿರ್ವಹಿಸಿ, ಇಬ್ಬರು ಗಂಡು ಮಕ್ಕಳನ್ನು ಬೆಳೆಸಿ, ವಿದ್ಯಾವಂತರನ್ನಾಗಿಸಿದ್ದು ಆಗಿನ ಕಾಲದಲ್ಲಿ ಸಾಮಾನ್ಯ ಸಂಗತಿಯೇನೂ ಆಗಿರಲಿಲ್ಲ.
ಸರಳರಲ್ಲಿ ಸರಳ
ಮೊದಲು ಭಾರತೀಯ ಮಜ್ದೂರ್ ಸಂಘದ ಸಾಮಾನ್ಯ ಕಾರ್ಯಕರ್ತ. ಅನಂತರ ಪ್ರಾಂತ ಸಂಘಟನಾ ಕಾರ್ಯದರ್ಶಿ, ದಕ್ಷಿಣಾಂಚಲ ಕಾರ್ಯದರ್ಶಿ, ರಾಷ್ಟ್ರೀಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ಜವಾಬ್ದಾರಿ ನಿರ್ವಹಣೆ. ರಷ್ಯಾ, ಚೀನಾ, ಜಿನೀವಾ, ಹಂಗೇರಿ ಮೊದಲಾದ ದೇಶಗಳನ್ನು ಸುತ್ತಿ ಹಲವು ಕಾರ್ಮಿಕ ನಿಯೋಗಗಳ ಯಶಸ್ವಿ ನೇತೃತ್ವ ವಹಿಸಿದ್ದ ಅವರು ನಮ್ಮ ದೇಶದ ಅಗ್ರಪಂಕ್ತಿಯ ಒಬ್ಬ ಕಾರ್ಮಿಕ ನಾಯಕ.
ಆದರೆ ಅವರನ್ನು ಭೇಟಿ ಮಾಡಿದವರಿಗೆ ಅವರೊಬ್ಬ ಕಾರ್ಮಿಕ ನಾಯಕನೆಂದು ಅನಿಸುತ್ತಲೇ ಇರಲಿಲ್ಲ. ನಾಯಕರಿಗಿರುವ ಗತ್ತು, ಪ್ರತಿಷ್ಠೆ, ಮಾತಿನ ದರ್ಪ, ಒಣಜಂಬ ಇವುಗಳಿಂದ ಅವರು ಗಾವುದ ಗಾವುದ ದೂರ. ಜಾರ್ಜ್ ಫರ್ನಾಂಡಿಸ್, ದತ್ತಾ ಸಾಮಂತ್, ಬಿ.ಟಿ. ರಣದಿವೆ ಮೊದಲಾದ ಆ ಕಾಲದ ಕಾರ್ಮಿಕ ನಾಯಕರಿಗೆ ಹೋಲಿಸಿದರೆ ಘಾಟೆಯವರು ಒಬ್ಬ ಮುಖಂಡರೇ ಅಲ್ಲವೇನೋ ಎಂದು ಅನುಮಾನ ಬರುವಷ್ಟು ಸರಳ ವ್ಯಕ್ತಿ. ಸಾಧಾರಣ ಪಂಚೆ. ಅದರ ಮೇಲೊಂದು ಶರಟು, ಕಾಲಿಗೆ ಚಪ್ಪಲಿ-ಇವಿಷ್ಟೇ ಅವರ ವೇಷ. ಹೆಚ್ಚಾಗಿ ಕಾಲ್ನಡಿಗೆಯಲ್ಲೇ ಸಂಚಾರ. ಬಸ್ಸು, ಆಟೋರಿಕ್ಷಾ ಸೌಕರ್ಯವಿದ್ದರೂ ದೇಹದಲ್ಲಿ ಕಸುವು ಇರುವಷ್ಟು ದಿನ ಅವರು ಅನುಸರಿಸಿದ್ದು ಇದನ್ನೇ. ಸರಳರಲ್ಲಿ ಸರಳ. ಅಂಥವರು ಈಗಿನ ಕಾಲದಲ್ಲಿ ತೀರಾ ವಿರಳ.
ಕಾರ್ಮಿಕ ಮುಖಂಡರಿಗೆ ಅಗತ್ಯವಿರುವ ಗಡಸು ಧ್ವನಿ ಕೂಡ ಅವರಿಗಿರಲಿಲ್ಲ. ಅತ್ಯಂತ ಮೆಲುದನಿಯಲ್ಲೇ ಮಾತುಕತೆ. ಆ ಮೆಲುದನಿ ಎಂದೂ ತಾರಕಕ್ಕೇರಿದ್ದೇ ಇಲ್ಲ. ಆ ಮೆಲುದನಿಯ ಮಾತುಗಳಿಂದಲೇ ಲಕ್ಷಾಂತರ ಮಂದಿಯ ಮನಸ್ಸು ಗೆದ್ದಿದ್ದರು. ಬಿಎಮ್ಎಸ್ ಸಂಘಟನೆಯನ್ನು ಬಲಶಾಲಿಯಾಗಿ ಕಟ್ಟಿ ಬೆಳೆಸಿದ್ದರು. ಅದನ್ನು ನಂಬರ್ ಒನ್ ಕಾರ್ಮಿಕ ಸಂಘಟನೆಯಾಗಿ ರೂಪಿಸಲು ತಮ್ಮ ಶಕ್ತಿ, ಸಮಯ, ತಪಸ್ಸು ಎಲ್ಲವನ್ನೂ ಧಾರೆಯೆರೆದಿದ್ದರು.
ಪಾರದರ್ಶಕ ವ್ಯವಹಾರ
ಪ್ರಭಾಕರ ಘಾಟೆಯವರ ಇನ್ನೊಂದು ವಿಶೇಷತೆ ಎಂದರೆ ಸಾರ್ವಜನಿಕ ಸಂಸ್ಥೆಗಳ ಲೆಕ್ಕಪತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ರೀತಿ. ಸಾರ್ವಜನಿಕ ಹಣದ ಬಗ್ಗೆ ಅವರಿಗಿದ್ದ ಕಾಳಜಿ ಅಂತಹುದು. ಸಂಘಟನೆಯ ಚಿಕ್ಕಾಸನ್ನೂ ಸ್ವಂತಕ್ಕೆ ಬಳಸಕೂಡದು ಎಂಬ ಅವರ ಆಗ್ರಹ ಉಳಿದವರಿಗೆ ಮೇಲ್ಪಂಕ್ತಿ.
ಒಮ್ಮೆ ಚುನಾವಣೆ ವೇಳೆ ಯಾರೋ ಒಬ್ಬ ಅಭಿಮಾನಿಗಳು ಮನೆಗೆ ಬಂದು 10 ಸಾವಿರ ರೂಪಾಯಿ ನೀಡಿ “ಇದು ಬಿಜೆಪಿ ಚುನಾವಣೆಗೆ ನನ್ನ ಕೊಡುಗೆ” ಎಂದು ಹೇಳಿ ಹೊರಟೇಬಿಟ್ಟರು. ಅವರು ಯಾರು, ಅವರ ಹೆಸರೇನು ಎಂಬುದು ಕೂಡ ಘಾಟೆಯವರಿಗೆ ತಿಳಿದಿರಲಿಲ್ಲ. ಆಗಿನ ಕಾಲದಲ್ಲಿ ಅದೊಂದು ದೊಡ್ಡ ಮೊತ್ತ. ಯಾರಿಗೂ ಹೇಳದೆ ತಾನೇ ಇಟ್ಟುಕೊಂಡಿದ್ದರೂ ಕೇಳುವವರಿರಲಿಲ್ಲ. ಆದರೆ ಘಾಟೆಯವರು ಸುಮ್ಮನಿರಲಿಲ್ಲ. ಆಗಿಂದಾಗಲೇ ಮಂಗಳೂರಿನ ಬಿಜೆಪಿ ಕಚೇರಿಗೆ ತೆರಳಿ, ಆ ಹಣ ನೀಡಿ ರಸೀದಿ ಹಾಕಿಸಿದರು. ಪಕ್ಷದ ಕೆಲಸಕ್ಕೆ ಅದನ್ನು ಬಳಸುವಂತೆ ಸಂಬಂಧಿಸಿದವರಿಗೆ ಸೂಚಿಸಿ ನಿರಾಳವಾಗಿ ಮನೆಗೆ ಹೆಜ್ಜೆ ಹಾಕಿದ್ದರು.
ಸಂಘದ ಒಬ್ಬ ಸ್ವಯಂಸೇವಕನನ್ನು ಇನ್ನೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಕಳುಹಿಸಿದಾಗ ಆತ ಹೇಗಿರಬೇಕೆಂಬುದಕ್ಕೆ ಪ್ರಭಾಕರ ಘಾಟೆಯವರು ಮಾದರಿಯಾಗಿದ್ದರು. ತಮ್ಮ ಬದುಕಿನ ಅಂತಿಮ ಕ್ಷಣದವರೆಗೂ ತಾನೊಬ್ಬ ಸಂಘದ ಸ್ವಯಂಸೇವಕ ಎಂಬುದನ್ನು ಅವರು ಮರೆಯಲಿಲ್ಲ. ಸ್ವಯಂಸೇವಕತ್ವಕ್ಕೆ ಚ್ಯುತಿ ಉಂಟಾಗುವಂತೆ ಎಂದಿಗೂ ನಡೆದುಕೊಳ್ಳಲಿಲ್ಲ.
ಖ್ಯಾತ ಅಂಕಣಕಾರ ಎಸ್. ಗುರುಮೂರ್ತಿ ಪ್ರಭಾಕರ ಘಾಟೆ ಅವರನ್ನು ವರ್ಣಿಸಿರುವುದು ಹೀಗೆ: “He was not a pracharak but in no way less than a pracharak. He was not a whole timer in BMS, but in no way less than the best whole timer. He was an eminent writer but never occupied the list of such writers. He was an excellent orator but was never included in the list of such orators. He was an eminent trade union leader but never adored in the group of such leaders”.
