ಅಂಕಣ– Xಫ್ಯಾಕ್ಟರ್
- ಪರಪ್ಪ ಶಾನವಾಡ, ಸಾಮಾಜಿಕ ಜಾಲತಾಣ ವಿಶ್ಲೇಷಕ
ಜಾಲತಾಣ ಜಗತ್ತಿನ ವಿಶೇಷತೆಯೇ ವೈರಲ್ಸ್ & ಟ್ರೆಂಡ್ಸ್. ಯಾವಾಗ ಏನು ಮತ್ತು ಯಾಕೆ ಟ್ರೆಂಡ್ ಆಗುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಇದು ಯಾವಾಗಲೂ ಗುರುತು ಪತ್ತೆಯಾಗದ ಯಕ್ಷಪ್ರಶ್ನೆ. ಹೀಗೆಯೇ ಇತ್ತೀಚಿಗೆ ಟ್ರೆಂಡ್ಗೆ ಒಳಗಾಗಿ ಅಂತರ್ಜಾಲದಲ್ಲಿ ಮಿಂಚಿನ ಸಂಚಾರ ಮಾಡಿದ್ದ ಕಾಕ್ರೋಚ್ ಜನತಾ ಪಾರ್ಟಿ(CJP) ಎಲ್ಲೆಡೆ ಮಾತಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹಾಸ್ಯಭರಿತ ಹೇಳಿಕೆಯೊಂದನ್ನು ಇಂದಿನ ಯುವಜನತೆಯ ಸಮಸ್ಯೆಗಳಿಗೆ ಭರವಸೆಯ ಧ್ವನಿಯಾಗಿಸುತ್ತಾ ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿ ಟ್ರೋಲ್ ಮಾಡಲು ತಯಾರಾದ ಡಿಜಿಟಲ್ ಪಟ್ಟಿಯು ಕೆಲವೇ ದಿನಗಳಲ್ಲಿ ಇನ್ಸ್ಟಾಗ್ರಾಮ್ನಲ್ಲಿ 2.2+ ಕೋಟಿ ಜನರಿಂದ ಅನುಸರಿಸಲ್ಪಟ್ಟಿದೆ. ಜೊತೆಗೆ ಫೇಸ್ಬುಕ್, X.ಕಾಮ್, ಯೂಟ್ಯೂಬ್, ರೆಡ್ಡಿಟ್ನಲ್ಲಿಯೂ ಲಕ್ಷಾಂತರ ಜನರನ್ನು ಸೆಳೆಯುವ ಮೂಲಕ ಭರ್ಜರಿ ಸೌಂಡ್ ಮಾಡಿದೆ. ಇತ್ತೀಚೆಗೆ ಗ್ಲೋಬಲ್ ಜಿಯೋ ಪಾಲಿಟಿಕ್ಸ್ ನಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಹೆಚ್ಚುತ್ತಿರುವ ತೈಲ ಬೆಲೆ, ನಿರುದ್ಯೋಗ ಮತ್ತು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಸಮಸ್ಯೆಗಳು ಜೆನ್ ಝಿಗಳನ್ನು ರೊಚ್ಚಿಗೆಬ್ಬಿಸಿದ್ದವು. ಇದನ್ನೇ ದಾಳವಾಗಿ ಮಾಡಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಹೊಂಚು ಹಾಕಿ ಕಾಯುತ್ತಿದ್ದ ವಿರೋಧಿಗಳೆಲ್ಲಾ ಸಿಜೆಪಿ ಹೆಸರಿನಲ್ಲಿ ಒಗ್ಗಟ್ಟಾಗಿ ಅಂತಾರಾಷ್ಟ್ರೀಯ ವಾಮಪಂಥೀಯ ಪ್ರೊಪಾಗೆಂಡಾದ ಭಾಗವಾಗಿದ್ದಾರೆ ಎಂಬುದು ಜಾಲತಾಣ ಪ್ರಬುದ್ಧರ ಅಭಿಪ್ರಾಯವಾಗಿದೆ. ಈ ಡಿಜಿಟಲ್ ಚಳವಳಿಯ ಪರವಾಗಿ #CockroachJantaParty, #GenZRevolt, #YouthVsSystem ಮುಂತಾದ ಹ್ಯಾಶ್ಟ್ಯಾಗ್ ಸುದ್ದಿಯಾದರೆ, #NarrativeWarfare, #AntiIndiaPropaganda, #PropagandaPolitics ಮುಂತಾದ ಹ್ಯಾಶ್ಟ್ಯಾಗ್ಗಳು ಸಿಜೆಪಿ ಚಳವಳಿಯ ವಿರುದ್ಧವಾಗಿ ರಾಷ್ಟ್ರೀಯತೆಯ ಪರವಾದ ಅಭಿಪ್ರಾಯ ಮಂಡಿಸುವಲ್ಲಿ ಸಫಲವಾಗಿವೆ. ಸಿಜೆಪಿ ಡಿಜಿಟಲ್ ಚಳವಳಿಗೆ ಶೇ.45ರಷ್ಟು ಜನರು ಧನಾತ್ಮಕವಾಗಿ ಬೆಂಬಲಿಸಿದ್ದರೆ, ಶೇ.35ರಷ್ಟು ಜನರು ಋಣಾತ್ಮಕವಾಗಿ ಮತ್ತು ಶೇ.20ರಷ್ಟು ಜನರು ತಟಸ್ಥವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿಜೆಪಿ ಪಕ್ಷದ ಸ್ಥಾಪಕ ಅಭಿಜಿತ್ ದೀಪ್ಕೆ ಈ ಹಿಂದೆ ಕೇಜ್ರಿವಾಲ್ ಅವರ ಆಪ್ ಪಕ್ಷದಲ್ಲಿ ಒಂದಷ್ಟು ಜವಾಬ್ದಾರಿಗಳನ್ನು ನಿರ್ವಹಿಸಿ ಈಗ ಅಮೆರಿಕದಲ್ಲಿ ವಾಸವಾಗಿದ್ದು, ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಯೂಟ್ಯೂಬರ್ ಧ್ರುವ್ ರಾಠೆ, ಪ್ರಕಾಶ್ ರೈ, ರಾಜದೀಪ್ ಸರ್ದೇಸಾಯಿ ಸೇರಿದಂತೆ ಅನೇಕ ಅಲ್ಪಸಂಖ್ಯಾತ ಯುವಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಅದೇ ರೀತಿಯಲ್ಲೇ ಸಿಜೆಪಿಯ ಸುಳ್ಳುಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಾಯಿತು, ಸಿಜೆಪಿ ಚಳವಳಿಯ ಪರ ಮತ್ತು ವಿರೋಧ ಎರಡು ಕಡೆಗೂ ಯುವಕರ ಪಡೆಗಳು ಆಕ್ಟಿವ್ ಆಗಿದ್ದವು. ಲಕ್ಷಾಂತರ ಪೋಸ್ಟ್ ಗಳು, ಮೀಮ್ಗಳು, ರೀಲ್ಸ್ ಗಳು, ವಿಡಿಯೋ ತುಣುಕುಗಳು, “ನಾನು ಕೂಡಾ ಕಾಕ್ರೋಚ್” ಎನ್ನುವ ಪೋಸ್ಟರ್ಗಳು, ಕಾಕ್ರೋಚ್ ಕೊಲ್ಲುವ ಹಿಟ್, ಲಕ್ಷ್ಮಣ ರೇಖೆ ಪೋಸ್ಟ್ ಗಳು ವ್ಯಾಪಕವಾಗಿ ವೈರಲ್ ಆದವು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂತೋಷ್ ಲಾಡ್ ಸೇರಿದಂತೆ ಹಲವಾರು ಬೆಂಬಲ ವ್ಯಕ್ತಪಡಿಸಿದರು. ಇನ್ನು ಕೇಂದ್ರ ಸರ್ಕಾರದ ವಿರುದ್ಧವಾಗಿ ಭಾರತದಾದ್ಯಂತ ಎಲ್ಲಾ ರಾಜ್ಯ, ನಗರಗಳಲ್ಲಿ ಮಾನವ ಸರಪಳಿ ರಚಿಸಲು ಕರೆ ಕೊಟ್ಟಿತು. ಆದರೆ ಜಾಲತಾಣದಲ್ಲಿ ದೊರೆತ ಬೆಂಬಲ, ನೈಜವಾಗಿ ಎಲ್ಲಿಯೂ ಸಫಲವಾಗಿಲ್ಲ.
ಜಾಲತಾಣ ಖ್ಯಾತನಾಮರ ವಿಶ್ಲೇಷಣೆಯ ಪ್ರಕಾರ ಭಾರತದ ಜೆನ್ ಝಿಗಳು ಪ್ರಬುದ್ಧರಾಗಿದ್ದು ದೇಶದ ಅಭಿವೃದ್ಧಿ ಮತ್ತು ಭಾರತದ ಏಕತೆಯ ಪರವಾಗಿದ್ದು, ಭಾವನಾತ್ಮಕ ವದಂತಿಗಳಿಗೆ ಓಗೊಡುವುದಿಲ್ಲ, ಇದು ಕೇವಲ ಡಿಜಿಟಲ್ ಟ್ರೆಂಡ್ ಆಗಿದ್ದು, ಕೆಲ ದಿನಗಳ ವರೆಗೆ ಟ್ರೆಂಡ್ನಲ್ಲಿದ್ದು ಕ್ರಮೇಣವಾಗಿ ಶಾಂತವಾಗಲಿದೆ, ಜಿರಳೆಗಳು ಕೇವಲ ಕೊಳಕಾದ ಪ್ರದೇಶದಲ್ಲಿ ಇರುತ್ತವೆ, ನಮ್ಮ ದೇಶವನ್ನು ಶುಚಿಯಾಗಿಡೋಣ, ಜಿರಳೆಗಳನ್ನು ಓಡಿಸೋಣ ಎಂಬುದು ಎಲ್ಲರ ಒಕ್ಕೊರಲಿನ ಅಭಿಪ್ರಾಯವಾಗಿದೆ.
