ಅಂಕಣ– ಸ್ವಾಸ್ಥ್ಯ ಸಂಪದ
- ಡಾ. ಶ್ರೀವತ್ಸ ಭಾರದ್ವಾಜ, ದತ್ತಂ ಆಯುರ್ಧಾಮ, ಮಂಗಳೂರು
ಮೌನಕ್ಕೂ ಶಾಂತಿಗೂ ಅವಿನಾಭಾವ ಸಂಬಂಧ. ಮೌನದ ಪಾಲನೆಯನ್ನು ಬಲವಂತವಾಗಿ ಹಲವಾರು ಕಡೆ ಪಾಲಿಸುವುದನ್ನು ನೋಡಿದ್ದೇವೆ. ಶಾಲೆಗಳಲ್ಲಿ, ಗ್ರಂಥಾಲಯಗಳಲ್ಲಿ, ಆಸ್ಪತ್ರೆಗಳಲ್ಲಿ, ಮಂದಿರಗಳಲ್ಲಿ ಹೀಗೆ ಹಲವಾರು ಕಡೆ ಪಾಲಿಸಲೇಬೇಕೆಂದು ನಿಯಮಗಳಿರುವ ಕಾರಣ ಪ್ರಶ್ನಿಸದೇ ಪಾಲಿಸುತ್ತೇವೆ. ಆದರೆ ಮನೆಯಲ್ಲಿ, ಮನದಲ್ಲಿ ಮೌನಪಾಲನೆ ಅಸಾಧ್ಯದ ವಿಷಯವಾಗಿದೆ. ಮೌನವಾಗಿರಬೇಕು ಎಂದರೆ ಯಾಕೆ ಸರ್? ಎಂದು ಕೇಳುವವರೇ ಹೆಚ್ಚು. ಋಷಿಮುನಿಗಳು ತಿಂಗಳುಗಟ್ಟಲೆ ಮೌನವನ್ನು ಪಾಲಿಸುವುದು ನೋಡಿದ್ದೇವೆ. ಈ ರೀತಿ ಮೌನವನ್ನು ಪಾಲಿಸಿದರೆ ಪ್ರಯೋಜನವೇನು? ಲೌಕಿಕವಾಗಿರುವ ನಮಗೆ ಮೌನದಿಂದ ಏನು ಪ್ರಯೋಜನ? ಇದರ ಬಗ್ಗೆ ಇವತ್ತು ತಿಳಿಯೋಣ ಬನ್ನಿ.
ಪ್ರಾಚೀನ ಕಾಲದಿಂದಲೂ ಮೌನ ಮತ್ತು ಉಪವಾಸ ಆಧ್ಯಾತ್ಮಿಕ ಏಳಿಗೆಗೆ ಸಹಾಯ ಮಾಡುತ್ತವೆ ಎಂದು ನಂಬಿದ್ದೇವೆ. ಹಲವರು ಮೌನಾಚರಣೆಯಿಂದ ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡಿದ್ದಾರೆ. ಮೌನ ಕೇವಲ ಮಾತನ್ನು ನಿಲ್ಲಿಸುವುದಕ್ಕೆ ಸೀಮಿತವಲ್ಲ. ಮೌನ ಮನಸ್ಸಿನ ಅನಗತ್ಯ ಚಿಂತನೆಯನ್ನು ನಿಲ್ಲಿಸಲೂ ಸಹಾಯ ಮಾಡುತ್ತದೆ.
● ಸಂಶೋಧನೆಯ ಪ್ರಕಾರ ಮೌನದಿಂದ ಬುದ್ಧಿಯು ಚುರುಕಾಗುತ್ತದೆ ಎಂದು ತಿಳಿದು ಬಂದಿದೆ. ದಿನಕ್ಕೆ ಎರಡು ಘಂಟೆ ಮೌನದಲ್ಲಿದ್ದರೆ ಸಾಕು, ಮೆದುಳಿನಲ್ಲಿರುವ ಸೂಕ್ಷ್ಮಕಣಗಳಿಗೆ ಮರುಜೀವ ತುಂಬುತ್ತದೆ.
● ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಮೌನ ಅತ್ಯಂತ ಪರಿಣಾಮಕಾರಿಯಾಗಿದೆ.
● ಶ್ರಮಭರಿತವಾದ ದಿನದ ಮುಕ್ತಾಯ ಮೌನದಿಂದ ಆದಲ್ಲಿ ಮರುದಿನ ಉಲ್ಲಾಸಭರಿತವಾಗಿರುತ್ತದೆ.
● ದುಃಖ, ಭಯ, ಅಶಾಂತಿ ಇದ್ದಲ್ಲಿ ಮೌನದ ಮೊರೆ ಹೋದರೆ ದೇಹಕ್ಕೂ ಮನಸ್ಸಿಗೂ ಚೇತರಿಸಿಕೊಳ್ಳುವ ಶಕ್ತಿ ಸಿಗುತ್ತದೆ.
● ಏಕಾಗ್ರತೆಯನ್ನು ಹೆಚ್ಚಿಸಲು ಮೌನವನ್ನು ಕ್ರಮವಾಗಿ ಪಾಲಿಸವುದು ಉತ್ತಮ.
● ಮೌನ ಆಚರಣೆಯಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ.
● ಮೌನದಿಂದ ಜೀರ್ಣಕ್ರಿಯೆಯು ಸರಿಯಾಗುತ್ತದೆ.
● ಮೌನದಿಂದ ಶ್ವಾಸಕೋಶಕ್ಕೆ ಶಕ್ತಿ ಸಿಗುತ್ತದೆ.
ಮಾನಸಿಕ ಖಿನ್ನತೆಗೆ ಮೌನ ಅಮೃತದಂತೆ ಕೆಲಸ ಮಾಡುತ್ತದೆ.
● ಮೌನದಿಂದ ತಾಳ್ಮೆ, ಸಹನೆ ಹೆಚ್ಚುತ್ತದೆ.
ಮೌನವನ್ನು ಎಷ್ಟು ದಿನಕ್ಕೊಮ್ಮೆ, ಎಷ್ಟು ಹೊತ್ತು ಪಾಲಿಸಬೇಕು? ಹೇಗೆ ಪಾಲಿಸಬೇಕು? ಎಂಬ ಪ್ರಶ್ನೆಗಳು ಉದ್ಭವಿಸಬಹುದು. ಮೌನದ ಪಾಲನೆಗೆ ಸಮಯದ ರೇಖೆ ಇಲ್ಲ. ಸಂದರ್ಭಕ್ಕೆ ಅನುಗುಣವಾಗಿ ಮೌನದ ಸಮಯ ಬದಲಾಗುತ್ತದೆ. ತುಂಬಾ ಒತ್ತಡಪೂರ್ಣ ಜೀವನಶೈಲಿ ನಡೆಸುವವರು ಮಲಗುವ ಮುನ್ನ ಅರ್ಧಗಂಟೆಯ ಕಾಲವಾದರೂ ಮೌನವನ್ನು ಆಚರಿಸಿದರೆ ಉತ್ತಮ.
“ವೈದ್ಯರೇ ನನ್ನ ಗಂಡ ಮನೆಗೆ ಬಂದರೆ ಸಾಕು ಮೌನದಲ್ಲಿರುತ್ತಾರೆ. ನಿರಂತರವಾಗಿ ಮೊಬೈಲ್ ನೋಡುತ್ತಾ ಇರುತ್ತಾರೆ” ಎಂದು ಒಬ್ಬರು ಹೇಳಿದರು. ಈ ರೀತಿಯ ಮೌನ ಮನಸ್ಸಿಗೂ ಶರೀರಕ್ಕೂ ಘಾತಕವಾಗುತ್ತದೆ. “ವೈದ್ಯರೇ ಇವತ್ತು ನಾನು ಚೆನ್ನಾಗಿ ಮೌನವನ್ನು ಆಚರಿಸಿದೆ” ಎಂದು ಹೇಳುವ ಇನ್ನು ಕೆಲವರು, ಹೌದಾ! ಹೇಗೆ? ಎಂದು ಕೇಳಿದಾಗ ದಿನವಿಡೀ ಚೆನ್ನಾಗಿ ನಿದ್ರಿಸಿದೆ. ಯಾರ ಹತ್ತಿರವೂ ಮಾತಾಡಲಿಲ್ಲ” ಎನ್ನುತ್ತಾರೆ. ಮನಸ್ಸಿಗೆ ಹಾಗೂ ಇಂದ್ರಿಯಗಳ ಓಟಕ್ಕೆ ಸ್ವಲ್ಪ ಬ್ರೇಕ್ ಹಾಕುವುದೇ ಮೌನದ ಮುಖ್ಯ ಉದ್ದೇಶ. ಲೌಕಿಕವಾದ ಯಾವ ಕೆಲಸವನ್ನೂ ಮಾಡದೆ ಆಧ್ಯಾತ್ಮಿಕವಾಗಿ ನಮ್ಮನ್ನು ತೊಡಗಿಸಿಕೊಂಡರೆ ಮೌನ ಫಲಕಾರಿಯಾಗುತ್ತದೆ. ದಿನವಿಡೀ ಮೌನ ಆಚರಿಸಲು ಇಚ್ಛಿಸುವವರು ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಚರಿಸಬಹುದು. ನೆನಪಿಡಿ, ಮೌನವನ್ನು ಪಾಲಿಸುವ ದಿನ ಹಾಡುಗಳನ್ನೂ ಕೇಳಬಾರದು. ಟಿವಿ, ಮೊಬೈಲ್, ಕಂಪ್ಯೂಟರ್ನಿಂದ ದೂರವಿರಬೇಕು. ಆಧ್ಯಾತ್ಮಿಕ ಪುಸ್ತಕಗಳನ್ನು ಓದಬಹುದು. ಮೌನವನ್ನು ಆಚರಿಸುವಾಗ ಪ್ರಾಣಾಯಾಮ, ಜಪ, ಧ್ಯಾನ ಇಂತಹವುಗಳಲ್ಲಿ ನಿರತರಾಗುವುದು ಉತ್ತಮ. ಲಘು ಆಹಾರವನ್ನು ಸೇವಿಸಿರಿ. ದ್ರವಾಹಾರವನ್ನು ಅಧಿಕವಾಗಿ ಸೇವಿಸಿರಿ. ಮೌನವನ್ನು ಮುರಿಯುವ ಮುನ್ನ ಸಂಪೂರ್ಣ ಶರೀರಕ್ಕೆ ಶುದ್ಧವಾದ ಎಳ್ಳೆಣ್ಣೆಯನ್ನು ಹಚ್ಚಿ, ಸ್ನಾನ ಮಾಡಿ, ಓಂಕಾರವನ್ನು ಹೇಳಿ ಮೌನವನ್ನು ಮುರಿದರೆ ಉತ್ತಮ.
