ಅಂಕಣ – ನಗಾರಿ
- ತೇಜಸ್ ಎಚ್ ಬಾಡಾಲ, ಕಾನೂನು ವಿದ್ಯಾರ್ಥಿ
ತಮಿಳುನಾಡಿನ ಚುನಾವಣೆಯು ಈ ಬಾರಿ ದ್ರಾವಿಡ ಪಕ್ಷಗಳಿಗೆ ಆಘಾತವನ್ನು ನೀಡಿತು. ಒಂದೊಂದು ಬೂತ್ ಅಲ್ಲಿಯೂ ವಿಜಿ ಅನ್ನನ(ಅಣ್ಣ, ತಮಿಳು ಉಚ್ಚಾರಣೆ) ಹವಾ! ಅಂತೆಯೇ 64 ವರ್ಷದ ಶ್ರೀಮಾನ್ ಕಿಶೋರ್ ಅವರೂ ವಿರುಗಂಬಾಕ್ಕಂ ಬೂತ್ನಲ್ಲಿ ಬಹು ಉತ್ಸಾಹದಿಂದಲೇ ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬೆರಳಿಗೆ ಅಂಟಿದ ಅಳಿಸಲಾಗದ ಶಾಯಿಯನ್ನು ನೋಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡ ಹೆಮ್ಮೆ ಅವರ ಮುಖದಲ್ಲಿತ್ತು. ವೋಟು ಹಾಕಿದ ಖುಷಿಯಲ್ಲಿ, ದುಬೈ ಮೂಲಕ ಅಮೆರಿಕಕ್ಕೆ ಹಾರಲು ಅವರು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಇಮಿಗ್ರೇಷನ್ ಅಧಿಕಾರಿಯ ಮುಂದೆ ಪಾಸ್ಪೋರ್ಟ್ ನೀಡಿದರು. ಶ್ರೀಮಾನ್ ಕಿಶೋರರ ಆ ಪಾಸ್ಪೋರ್ಟ್ ಭಾರತದ್ದೇ ಅಲ್ಲ! ಅವರು ಭಾರತದ ಪ್ರಜೆಯೇ ಅಲ್ಲ! ಅವರ ಕೈಯಲ್ಲಿದ್ದದ್ದು ಅಮೆರಿಕನ್ ಪಾಸ್ಪೋರ್ಟ್. ಅವರು ಅಮೆರಿಕದ ಅಧಿಕೃತ ಪ್ರಜೆ. ಆದರೆ ಅವರ ಎಡಗೈ ತೋರುಬೆರಳಿನ ಮೇಲಿದ್ದ ಚುನಾವಣಾ ಶಾಯಿ, ಭಾರತದ ಭದ್ರತಾ ವ್ಯವಸ್ಥೆಯನ್ನೇ ಅಣಕಿಸುತ್ತಿತ್ತು. ಇದು ಕೇವಲ ಒಬ್ಬ ಕಿಶೋರ್ ಅವರ ಕಥೆಯಲ್ಲ; ಇದು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಜ್ಯದ ಗಡಿಗಳನ್ನು ದಾಟಿ ನಡೆದ ಒಂದು ಬೃಹತ್, ವ್ಯವಸ್ಥಿತ ಮತ್ತು ಅತಿ-ರಹಸ್ಯ ‘ಅಂತಾರಾಷ್ಟ್ರೀಯ ವೋಟರ್ ಫ್ರಾಡ್’ (Transnational Voter Fraud) ಜಾಲದ ಕರಾಳ ಮುಖ.
ಬೆರಳಿನ ಮೇಲಿನ ಶಾಯಿಯೇ ‘ವಿಲನ್’ ಆದಾಗ!
ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ಐತಿಹಾಸಿಕ ಚುನಾವಣೆ ನಡೆದು ಮುಗಿದಿತ್ತು. ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಅಲೆ ರಾಜ್ಯಾದ್ಯಂತ ಅಪ್ಪಳಿಸಿತ್ತು. ಹೊಸ ಸರ್ಕಾರ ರಚನೆಯ ರಾಜಕೀಯ ನಾಟಕಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿದ್ದ ಸಮಯದಲ್ಲಿ ತೆರೆಯ ಹಿಂದೆ ಭಾರತೀಯ ಚುನಾವಣಾ ಆಯೋಗ (ECI) ಮತ್ತು ಗುಪ್ತಚರ ಇಲಾಖೆಗೆ ಒಂದು ಆಘಾತಕಾರಿ ರಹಸ್ಯ ಮಾಹಿತಿ ರವಾನೆಯಾಗಿತ್ತು. “ಭಾರತದ ಪ್ರಜೆಗಳಲ್ಲದ ನೂರಾರು ವಿದೇಶಿಯರು ತಮಿಳುನಾಡಿನ ಚುನಾವಣೆಯಲ್ಲಿ ಮತ ಹಾಕಿ, ಈಗ ತಮ್ಮ ದೇಶಗಳಿಗೆ ವಾಪಸ್ ಹೋಗಲು ವಿಮಾನ ನಿಲ್ದಾಣಗಳಲ್ಲಿ ಜಮಾಯಿಸುತ್ತಿದ್ದಾರೆ” ಎಂಬುದು ಆ ಗುಪ್ತಚರ ವರದಿಯ ಸಾರಾಂಶವಾಗಿತ್ತು.
ಕೂಡಲೇ ಚೆನ್ನೈ, ಮಧುರೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಮಿಗ್ರೇಷನ್ ಬ್ಯೂರೋ (BOI) ಅಧಿಕಾರಿಗಳು ಹದ್ದಿನ ಕಣ್ಣಿಟ್ಟರು. ಹೊರದೇಶಗಳಿಗೆ ಹೋಗುವ, ಮೂಲತಃ ಭಾರತೀಯರಂತೆ ಕಾಣುವ ಪ್ರತಿಯೊಬ್ಬ ಪ್ರಯಾಣಿಕರ ಬೆರಳುಗಳನ್ನು ತಪಾಸಣೆ ಮಾಡಲು ಶುರುಮಾಡಿದರು.
ಫಲಿತಾಂಶ? ಅಮೆರಿಕ, ಬ್ರಿಟನ್ (UK), ಕೆನಡಾ, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಡೋನೇಷ್ಯಾ ಪಾಸ್ಪೋರ್ಟ್ ಹೊಂದಿದ್ದ 30ಕ್ಕೂ ಹೆಚ್ಚು ‘ವಿದೇಶಿ’ ಪ್ರಜೆಗಳು ಸಿಕ್ಕಿಬಿದ್ದರು. ಇವರಲ್ಲಿ ಬಹುತೇಕರು ಶ್ರೀಲಂಕಾ ಮೂಲದ ತಮಿಳರು ಮತ್ತು ಇತರ ದೇಶಗಳ ಪೌರತ್ವ ಪಡೆದಿದ್ದವರು. ಇವರೆಲ್ಲರೂ ತಮ್ಮ ದೇಶದ ಪಾಸ್ಪೋರ್ಟ್ ಹೊಂದಿದ್ದರೂ, ಬೆರಳಿನ ಮೇಲೆ ಭಾರತದ ಚುನಾವಣಾ ಶಾಯಿಯನ್ನು ಹೊತ್ತುಕೊಂಡಿದ್ದರು. ಕಿಶೋರ್ ಎಂಬ ಅಮೆರಿಕನ್ ಪ್ರಜೆಯ ವಿಚಾರಣೆ ನಡೆಸಿದಾಗ, ಆತ ತಾನು ವಿರುಗಂಬಾಕ್ಕಂ ಕ್ಷೇತ್ರದಲ್ಲಿ ವೋಟು ಹಾಕಿದ್ದಾಗಿ ಬಾಯ್ಬಿಟ್ಟ! ಕೂಡಲೇ ಆತನ ಪ್ರಯಾಣವನ್ನು ರದ್ದುಗೊಳಿಸಿ, ಚೆನ್ನೈ ಪೊಲೀಸರ ಕೇಂದ್ರ ಅಪರಾಧ ವಿಭಾಗಕ್ಕೆ (CCB) ಒಪ್ಪಿಸಲಾಯಿತು.
ಒಸಿಐ (OCI) ಕಾರ್ಡ್ ಎಂಬ ಅಸ್ತ್ರ ಮತ್ತು ಕಾನೂನಿನ ಕಣ್ಣಾಮುಚ್ಚಾಲೆ
ಸಾಮಾನ್ಯ ಜನರಿಗೆ ಬರುವ ಮೊದಲ ಪ್ರಶ್ನೆ: ಅಮೆರಿಕ ಅಥವಾ ಕೆನಡಾ ಪ್ರಜೆಯೊಬ್ಬ ಭಾರತದಲ್ಲಿ ವೋಟು ಹಾಕಲು ಹೇಗೆ ಸಾಧ್ಯ? ಇಲ್ಲಿಯೇ ಬರುವುದು OCI (Overseas Citizenship of India) ಕಾರ್ಡ್ ನ ದುರ್ಬಳಕೆ. ಭಾರತ ಸರ್ಕಾರವು ಮೂಲತಃ ಭಾರತೀಯರಾಗಿರುವ ವಿದೇಶಿ ಪ್ರಜೆಗಳಿಗೆ ಭಾರತಕ್ಕೆ ಬಂದು ಹೋಗಲು, ವ್ಯಾಪಾರ ಮಾಡಲು ಅನುಕೂಲವಾಗುವಂತೆ ಜೀವಿತಾವಧಿಯ OCI ಕಾರ್ಡ್ ನೀಡುತ್ತದೆ. ಆದರೆ, ಈ ಕಾರ್ಡ್ ಹೊಂದಿರುವವರಿಗೆ ಭಾರತದಲ್ಲಿ ಯಾವುದೇ ರಾಜಕೀಯ ಹಕ್ಕುಗಳಿರುವುದಿಲ್ಲ. ಅವರು ವೋಟು ಹಾಕುವಂತಿಲ್ಲ, ಚುನಾವಣೆಗೆ ನಿಲ್ಲುವಂತಿಲ್ಲ ಮತ್ತು ಕೃಷಿ ಭೂಮಿ ಖರೀದಿಸುವಂತಿಲ್ಲ. ಕಾನೂನಿನ ಪ್ರಕಾರ, ಬೇರೆ ದೇಶದ ಪೌರತ್ವ ಪಡೆದ ತಕ್ಷಣ, ಅವರು ತಮ್ಮ ಭಾರತೀಯ ವೋಟರ್ ಐಡಿಯನ್ನು ಒಪ್ಪಿಸಬೇಕು; ಜೊತೆಗೆ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲು ಅರ್ಜಿ ಸಲ್ಲಿಸಬೇಕು.
ಆದರೆ ಈ ಬಂಧಿತ ಆರೋಪಿಗಳು ಮಾಡಿದ್ದೇ ಬೇರೆ. ಅವರು ವಿದೇಶಿ ಪೌರತ್ವ ಪಡೆದರೂ, ತಮ್ಮ ಹಳೆಯ ಭಾರತೀಯ ವೋಟರ್ ಐಡಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸದೆ, ಅಕ್ರಮವಾಗಿ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಕೆಲವರಂತೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೊಸ ವೋಟರ್ ಐಡಿಗಳನ್ನು ಪಡೆದುಕೊಂಡಿದ್ದರು. ಬೇಸಿಗೆಯ ರಜೆಯಲ್ಲಿ ತಮಿಳುನಾಡಿಗೆ ಬರುವ ವಿದೇಶಿ ಪ್ರವಾಸಿಗರಲ್ಲಿ ಶೇ.35ರಷ್ಟು ಮಂದಿ ಈ OCI ಕಾರ್ಡ್ ಹೊಂದಿದವರೇ ಆಗಿರುತ್ತಾರೆ. ಇವರಲ್ಲಿ ಎಷ್ಟು ಸಾವಿರ ಜನ ಬಂದು ಗುಟ್ಟಾಗಿ ವೋಟು ಹಾಕಿ, ಶಾಯಿ ಅಳಿಸಿದ ಮೇಲೆ ವಿಮಾನ ಹತ್ತಿದ್ದಾರೋ ದೇವರಿಗೇ ಗೊತ್ತು!.
ಚುನಾವಣಾ ಆಯೋಗದ ‘ಕ್ಲೀನಿಂಗ್’ ಕಾರ್ಯಾಚರಣೆ ಅಟ್ಟರ್ ಫ್ಲಾಪ್!
ಈ ಹಗರಣವು ಭಾರತೀಯ ಚುನಾವಣಾ ಆಯೋಗದ ಮುಖಕ್ಕೆ ಬಡಿದಂತಿದೆ. ಚುನಾವಣೆಗೂ ಮುನ್ನ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಸತ್ತವರ, ಊರು ಬಿಟ್ಟವರ ಮತ್ತು ವಿದೇಶಿ ಪೌರತ್ವ ಪಡೆದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ECI ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ (SIR) ಎಂಬ ಬೃಹತ್ ಕಾರ್ಯಾಚರಣೆ ನಡೆಸಿತ್ತು. ಸುಮಾರು 74ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಇಷ್ಟೆಲ್ಲಾ ಹೈ-ಟೆಕ್ ಫಿಲ್ಟರ್ಗಳ ನಡುವೆಯೂ, ಅಮೆರಿಕ, ಲಂಡನ್ನಲ್ಲಿ ಕೂತಿರುವವರ ಹೆಸರುಗಳು ತಮಿಳುನಾಡಿನ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿದ್ದು ಹೇಗೆ? ಅಕ್ರಮ ವೋಟರ್ ಐಡಿಗಳನ್ನು ಬೂತ್ ಲೆವೆಲ್ ಅಧಿಕಾರಿಗಳು ಪತ್ತೆಹಚ್ಚಲು ಏಕೆ ವಿಫಲರಾದರು? ಇವೆಲ್ಲವೂ ಚುನಾವಣಾ ಆಯೋಗದ ವ್ಯವಸ್ಥೆಯಲ್ಲಿರುವ ಬೃಹತ್ ಭ್ರಷ್ಟಾಚಾರ ಮತ್ತು ತಾಂತ್ರಿಕ ಲೋಪಗಳನ್ನು ತೋರಿಸುತ್ತಿದೆಯಷ್ಟೆ?.
ಹಾಗಾದರೆ ಇದರ ಹಿಂದಿನ ಮಾಸ್ಟರ್ ಮೈಂಡ್ ಯಾರು?
ಈ 30 ಜನರ ಬಂಧನ ಕೇವಲ ಕಣ್ಣಿಗೆ ಕಾಣುತ್ತಿರುವ ಸಂಖ್ಯೆ; ಗೊತ್ತಿಲ್ಲದಿರುವುದು, ಕಣ್ತಪ್ಪಿಸಿ ಪರಾರಿಯಾದವರು, ಬೆರಳ ಮೇಲಿನ ಗುರುತು ಅಳಿಸಿ ತಪ್ಪಿಸಿಕೊಂಡವರು ಅಸಂಖ್ಯಾತ ಎಂದು ಗುಪ್ತಚರ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಈ ವಿದೇಶಿ ಪ್ರಜೆಗಳು ಕೇವಲ ತಮ್ಮ ಊರಿನ ಮೇಲಿನ ಪ್ರೀತಿಗೋ ಅಥವಾ ಯಾವುದೋ ನಾಯಕನ ಮೇಲಿನ ಅಭಿಮಾನಕ್ಕೋ ಸ್ವಂತ ಖರ್ಚಿನಲ್ಲಿ ತಮ್ಮ ದೇಶದಿಂದ ಈ ಯುದ್ಧದ ಪರಿಸ್ಥಿತಿಯಲ್ಲಿ ಹಿಗ್ಗಾಮುಗ್ಗಾ ಏರುತ್ತಿರುವ ವಿಮಾನದ ಟಿಕೇಟುಗಳನ್ನು ಖರೀದಿಸಿ ಬಂದು ವೋಟು ಹಾಕಿದರೆ? ಖಂಡಿತ ಇಲ್ಲ ಎನ್ನುತ್ತವೆ ಪೊಲೀಸ್ ಮೂಲಗಳು. ಪೊಲೀಸ್ ಮೂಲಗಳೇ ಬೇಕೆ? ಸಾಮಾನ್ಯ ಬುದ್ಧಿವಂತ ನಾಗರಿಕನಿಗೆ ಥಟ್ ಎಂದು ತಿಳಿಯುವ ವಿಷಯ ಇದಾಗಿದೆ. ಇದರ ಹಿಂದೆ ದೊಡ್ಡದೊಂದು ವ್ಯವಸ್ಥಿತ ಜಾಲ ಕೆಲಸ ಮಾಡಿದೆ. ತಮಿಳುನಾಡಿನ ನಗರ ಪ್ರದೇಶಗಳಲ್ಲಿನ ಬಿರುಸಿನ ಹಣಾಹಣಿಯಲ್ಲಿ, ಗೆಲುವಿನ ಅಂತರವನ್ನು ಕೃತಕವಾಗಿ ಹೆಚ್ಚಿಸಲು ಕೆಲವು ರಾಜಕೀಯ ಪಕ್ಷಗಳೇ ಇವರ ವಿಮಾನ ಟಿಕೆಟ್ ಮತ್ತು ಪ್ರಯಾಣದ ಖರ್ಚನ್ನು ಭರಿಸಿ, ಇವರನ್ನು ಕರೆತಂದಿರುವ ಬಲವಾದ ಶಂಕೆ ಇದೆ ಎಂದು ಹಲವಾರು ಪತ್ರಿಕೆಗಳ, ಸ್ಥಳೀಯ ಸುದ್ದಿಜಾಲಗಳ ಪ್ರಕಟಣೆಯಿಂದ ತಿಳಿಯಬಹುದು.
ವಿಜಯ್ ಅವರ ಟಿವಿಕೆ ಪಕ್ಷವು ದ್ರಾವಿಡ ಪಕ್ಷಗಳ 60 ವರ್ಷಗಳ ಏಕಸ್ವಾಮ್ಯವನ್ನು ಮುರಿದು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಈ ಹಗರಣ ಸ್ಫೋಟಗೊಂಡಿದೆ. ಅಧಿಕಾರ ಕಳೆದುಕೊಂಡ ಡಿಎಂಕೆ ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಎಐಎಡಿಎಂಕೆ ಪಕ್ಷಗಳು ಇದೇ ವಿಚಾರವನ್ನು ಇಟ್ಟುಕೊಂಡು ಚುನಾವಣೆಯ ಪಾವಿತ್ರ್ಯತೆಯನ್ನೇ ಪ್ರಶ್ನಿಸುತ್ತಿವೆ. ಇನ್ನು, ಬಿಜೆಪಿಯ ಕೆ. ಅಣ್ಣಾಮಲೈ ಅವರು, “1200 ಕೋಟಿ ರೂಪಾಯಿಗಳ ‘ಕ್ಯಾಶ್ ಫಾರ್ ವೋಟ್’ ಮತ್ತು ಈ ವಿದೇಶಿ ವೋಟುಗಳೇ ವಿಜಯ್ ಸರ್ಕಾರದ ಅಡಿಪಾಯ” ಎಂದು ವಾಗ್ದಾಳಿ ನಡೆಸಿದರು. ಒಂದು ಪ್ರಾದೇಶಿಕ ಹಗರಣ ಇದೀಗ ಅಂತಾರಾಷ್ಟ್ರೀಯ ಮಟ್ಟದ ರಾಜತಾಂತ್ರಿಕ ಬಿಕ್ಕಟ್ಟಾಗಿ ಮಾರ್ಪಟ್ಟಿದೆ.
ಆರೋಪಿಗಳ ಭವಿಷ್ಯವೇನು? ಸುಪ್ರೀಂ ಕೋರ್ಟ್ ಎಂಟ್ರಿ!
ಕಳ್ಳ ವೋಟು ಹಾಕಿದ ವಿದೇಶಿ ಪ್ರಜೆಗಳಿಗೆ ತಕ್ಕ ಶಾಸ್ತಿಯಾಯಿತು. ಭಾರತೀಯ ನ್ಯಾಯ ಸಂಹಿತೆ (BNS) 2023 ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1950ರ ಅಡಿಯಲ್ಲಿ ಕಠಿಣ ಎಫ್ಐಆರ್ (FIR) ದಾಖಲಿಸಲಾಗಿದೆ. ನಿಯಮದ ಪ್ರಕಾರ, ಈ ರೀತಿ ವಂಚನೆ ಮಾಡಿದವರ OCI ಕಾರ್ಡ್ ಅನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ ಮತ್ತು ಅವರಿಗೆ ಜೀವಿತಾವಧಿಯಲ್ಲಿ ಮತ್ತೆಂದೂ ಭಾರತದೊಳಗೆ ಕಾಲಿಡದಂತೆ ‘ಲೈಫ್ ಟೈಮ್ ಬ್ಯಾನ್’ (Lifetime ban) ಹೇರಲಾಗುತ್ತದೆ. ಸದ್ಯಕ್ಕೆ ಈ ಆರೋಪಿಗಳು ತಮ್ಮ ದೇಶಕ್ಕೂ ಹೋಗುವಂತಿಲ್ಲ, ಕೋರ್ಟ್ ಅನುಮತಿ ಇಲ್ಲದೆ ಜೈಲಿನಿಂದ/ದೇಶದಿಂದ ಆಚೆ ಬರುವಂತೆಯೂ ಇಲ್ಲ.
ಇದೇ ವೇಳೆ, ಪ್ರಕರಣದ ಗಂಭೀರತೆಯನ್ನು ಅರಿತ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ನ್ಯಾ|| ಜೊಯ್ಮಲ್ಯ ಬಾಗ್ಚಿ ಅವರ ಪೀಠವು ಚುನಾವಣಾ ಆಯೋಗಕ್ಕೆ ಚಾಟಿ ಬೀಸಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಪಾರದರ್ಶಕತೆ ತರಲು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದೆ.
ಇದರ ಪರಿಣಾಮವಾಗಿ, ಚುನಾವಣಾ ಆಯೋಗವು ಮೇ 30ರಿಂದ ‘SIR ಫೇಸ್-3’ (Phase III) ಎಂಬ ದೇಶವ್ಯಾಪಿ ಶುದ್ಧೀಕರಣ ಕಾರ್ಯಾಚರಣೆಯನ್ನು ಆರಂಭಿಸಿತು. ಬರೋಬ್ಬರಿ 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆ ಮನೆಗೆ ತೆರಳಿ 36.73 ಕೋಟಿ ಮತದಾರರ ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದರು. ಆಧಾರ್ ಕಾರ್ಡ್ ಅನ್ನು ಕೇವಲ ‘ಗುರುತಿನ ಚೀಟಿ’ಯಾಗಿ ಮಾತ್ರ ಪರಿಗಣಿಸಬೇಕು, ‘ಪೌರತ್ವದ ಆಧಾರ’ವಾಗಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಹೊಸ ಕಾರ್ಯಾಚರಣೆಯ ಭಯದಿಂದಲೇ ಈಗಾಗಲೇ ಸುಮಾರು 5.18 ಕೋಟಿ ನಕಲಿ ಮತ್ತು ಅನರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಗಾಯಬ್ ಆಗಿವೆ!.
ಪ್ರಜಾಪ್ರಭುತ್ವದ ಅಡಿಪಾಯವೇ ಅಲುಗಾಡುತ್ತಿದೆ!
2026ರ ತಮಿಳುನಾಡು ಚುನಾವಣೆಯು ಕೇವಲ ಒಂದು ರಾಜಕೀಯ ಬದಲಾವಣೆಯನ್ನಷ್ಟೇ ತರಲಿಲ್ಲ; ನಮ್ಮ ಚುನಾವಣಾ ವ್ಯವಸ್ಥೆಯ ಭದ್ರತೆಯಲ್ಲಿರುವ ಬೃಹತ್ ರಂಧ್ರಗಳನ್ನೂ ಜಗಜ್ಜಾಹೀರು ಮಾಡಿದೆ. ವಿಮಾನ ನಿಲ್ದಾಣದಲ್ಲಿ ಬೆರಳಿನ ಮೇಲಿನ ಶಾಯಿಯನ್ನು ನೋಡಿ ಹಿಡಿಯುವಂತಹ ಹಳೆಯ ಕಾಲದ ತಂತ್ರಗಳು ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಗೃಹ ಸಚಿವಾಲಯದ ಇಮಿಗ್ರೇಷನ್ ಡೇಟಾಬೇಸ್ ಮತ್ತು ಚುನಾವಣಾ ಆಯೋಗದ ಡೇಟಾಬೇಸ್ ನಡುವೆ ನೇರ ತಾಂತ್ರಿಕ ಸಂಪರ್ಕವಿಲ್ಲದೆ ಹೋದರೆ, ಮುಂದೊಂದು ದಿನ ವಿದೇಶಿ ಶಕ್ತಿಗಳೇ ನಮ್ಮ ದೇಶದ ಸರ್ಕಾರಗಳನ್ನು ನಿರ್ಧರಿಸುವ ಅಪಾಯವಿದೆ. ಕೇವಲ ಬೆರಳಿಗೊಂದು ಶಾಯಿ ಹಚ್ಚಿದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ, ವ್ಯವಸ್ಥೆಯ ಕಳಂಕವನ್ನು ಅಳಿಸುವ ಇಚ್ಛಾಶಕ್ತಿಯೂ ಬೇಕು ಎಂಬುದನ್ನೇ ಈ ಅಂತಾರಾಷ್ಟ್ರೀಯ ಕಳ್ಳ ವೋಟು ದಂಧೆ ನಮಗೆ ಎತ್ತಿ ತೋರಿಸುತ್ತಿದೆ.
