ಅದೆಷ್ಟೋ ಸರ್ಕಾರಿ ಯೋಜನೆಗಳು ಕಾಗದದ ಮೇಲೆ ಸರಳವಾಗಿ ಕಂಡರೂ, ವಾಸ್ತವದಲ್ಲಿ ಅತ್ಯಂತ ಗೊಂದಲಮಯವಾಗಿರುತ್ತವೆ. ಗುತ್ತಿಗೆದಾರರೊಬ್ಬರು ರಸ್ತೆ, ಸೇತುವೆ ನಿರ್ಮಿಸುತ್ತಾರೆ ಅಥವಾ ಸಾರ್ವಜನಿಕ ಮೂಲಸೌಕರ್ಯಗಳನ್ನು ದುರಸ್ತಿ ಮಾಡುತ್ತಾರೆ. ಆದರೆ ಅಸಲಿ ಆಟ ಶುರುವಾಗುವುದೇ ಬಿಲ್ ಪಾವತಿಯ ಹಂತದಲ್ಲಿ. ಕಡತಗಳು ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಅತ್ಯಂತ ನಿಧಾನವಾಗಿ ಚಲಿಸುತ್ತವೆ. ಈ ಪ್ರತಿಯೊಂದು ಹಂತದಲ್ಲೂ, ಒಟ್ಟು ಪಾವತಿಯಲ್ಲಿ ಶೇಕಡಾ 10ರಿಂದ 15ರಷ್ಟು ಹಣವನ್ನು ‘ಕಮಿಷನ್’ ರೂಪದಲ್ಲಿ ಕತ್ತರಿಸಿಕೊಳ್ಳಲಾಗುತ್ತದೆ. ಕೈಯಿಂದ ಕೈಗೆ ನಗದು ಹಣ ಸದ್ದಿಲ್ಲದೆ ವರ್ಗಾವಣೆಯಾಗುತ್ತದೆ. ಇದು ಇಂದಿನ ವ್ಯವಸ್ಥೆಯಲ್ಲಿ ಒಂದು ಸಾಮಾನ್ಯ ಪ್ರಕ್ರಿಯೆಯಾಗಿಬಿಟ್ಟಿದೆ.
ಈಗ, ಈ ಇಡೀ ವ್ಯವಸ್ಥೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಡಿಜಿಟಲ್ ರೂಪಾಯಿ ಅಥವಾ ಇ-ರೂಪಾಯಿಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ. ಇದುವರೆಗೆ ಇದನ್ನು ಪ್ರಮುಖವಾಗಿ ಸಬ್ಸಿಡಿ (ಸಹಾಯಧನ) ಪಾವತಿಗಳಿಗಾಗಿ ಬಳಸಲಾಗುತ್ತಿತ್ತು. ಅಧಿಕಾರಿಗಳು ಈಗ ಇದನ್ನು ಮತ್ತೊಂದು ದೊಡ್ಡ ಉದ್ದೇಶಕ್ಕಾಗಿ ಬಳಸಲು ಮುಂದಾಗಿದ್ದಾರೆ; ಅದೇ ಗುತ್ತಿಗೆದಾರರಿಗೆ ನೇರವಾಗಿ ಹಣ ಪಾವತಿಸುವುದು. ಇಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ ‘ಪ್ರೋಗ್ರಾಮಬಿಲಿಟಿ’ (Programmability- ಹಣದ ಬಳಕೆಯನ್ನು ನಿಯಂತ್ರಿಸುವ ತಂತ್ರಜ್ಞಾನ). ಇದರರ್ಥ, ಸರ್ಕಾರವು ಈ ಹಣವನ್ನು ಯಾವ ಉದ್ದೇಶಕ್ಕಾಗಿ ಬಳಸಬೇಕು ಎಂಬ ನಿಯಮಗಳನ್ನು ಮೊದಲೇ ರೂಪಿಸಬಹುದಾಗಿದೆ. ಪ್ರತಿಯೊಂದು ವಹಿವಾಟೂ ಸ್ಪಷ್ಟವಾದ ಡಿಜಿಟಲ್ ಹೆಜ್ಜೆಯ ಗುರುತನ್ನು ಬಿಟ್ಟು ಹೋಗುವುದರಿಂದ, ಹಣವನ್ನು ಬಚ್ಚಿಡುವುದು ಅಥವಾ ದುರುಪಯೋಗಪಡಿಸಿಕೊಳ್ಳುವುದು ಅತ್ಯಂತ ಕಠಿಣವಾಗುತ್ತದೆ.
2026ರ ಆರಂಭದ ವೇಳೆಗೆ, ಇ-ರೂಪಾಯಿಯ ಚಿಲ್ಲರೆ ಬಳಕೆಯ ಪ್ರಾಯೋಗಿಕ ಯೋಜನೆ (Retail Pilot) ಅತ್ಯಂತ ವೇಗವಾಗಿ ವಿಸ್ತರಿಸಿದೆ. ಲಕ್ಷಾಂತರ ಬಳಕೆದಾರರು ಇದರ ಭಾಗವಾಗಿದ್ದು, ವಹಿವಾಟುಗಳು ಈಗಾಗಲೇ ಹಲವು ಸಾವಿರ ಕೋಟಿ ರೂಪಾಯಿಗಳನ್ನು ತಲುಪಿವೆ. ಕೇವಲ ಒಂದು ಸಣ್ಣ ಪ್ರಯೋಗವಾಗಿ ಆರಂಭವಾದ ಈ ವ್ಯವಸ್ಥೆ, ಇಂದು ಸರ್ಕಾರಿ ಹಣದ ದುರುಪಯೋಗವನ್ನು ತಡೆಯುವ ಒಂದು ಅತ್ಯಂತ ಗಂಭೀರ ಅಸ್ತ್ರವಾಗಿ ಹೊರಹೊಮ್ಮುತ್ತಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಹಿರಿಯ ಅಧಿಕಾರಿಗಳು ಸಾರ್ವಜನಿಕವಾಗಿ ಈ ಬಗ್ಗೆ ಜಾಗರೂಕತೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ವ್ಯವಸ್ಥೆಯು ಹಣದ ಚಲಾವಣೆಯನ್ನು ನೈಜ ಸಮಯದಲ್ಲಿ (Real-time) ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂಬುದನ್ನು ಖಾಸಗಿ ಸಂಭಾಷಣೆಗಳಲ್ಲಿ ಒಪ್ಪಿಕೊಳ್ಳುತ್ತಿದ್ದಾರೆ. ಆಡಿಟ್ ವರದಿಗಳಿಗಾಗಿ ತಿಂಗಳುಗಟ್ಟಲೆ ಕಾಯುವ ಬದಲು, ಅಧಿಕಾರಿಗಳು ಹಣ ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬುದನ್ನು ತಕ್ಷಣವೇ ನೋಡಬಹುದು. ಈ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಯೊಬ್ಬರು, “ಮೂಲಸೌಕರ್ಯ ಗುತ್ತಿಗೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವುದೇ ನಮ್ಮ ಸರಳ ಉದ್ದೇಶವಾಗಿದೆ” ಎಂದು ತಿಳಿಸಿದ್ದಾರೆ.
ಈ ಭ್ರಷ್ಟಾಚಾರದ ಸಮಸ್ಯೆಯ ವ್ಯಾಪ್ತಿ ಅತ್ಯಂತ ದೊಡ್ಡದಾಗಿದೆ. ಭಾರತದಲ್ಲಿ ಸಾರ್ವಜನಿಕ ಸಂಗ್ರಹಣೆ (Public Procurement) ಮತ್ತು ಗುತ್ತಿಗೆಗಳು ದೇಶದ ಒಟ್ಟು ಆರ್ಥಿಕತೆಯ ಶೇಕಡಾ 15ರಿಂದ 30ರಷ್ಟಿವೆ. ಪ್ರತಿ ವರ್ಷ ರಸ್ತೆಗಳು, ಸೇತುವೆಗಳು, ಶಾಲೆಗಳು ಮತ್ತು ನೀರಾವರಿ ಯೋಜನೆಗಳಿಗಾಗಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಆದಾಗ್ಯೂ, ಭಾರತದ ಮಹಾಲೇಖಪಾಲರ (CAG) ವರದಿಗಳು ಪದೇ ಪದೇ ಇದೇ ಸಮಸ್ಯೆಗಳನ್ನು ಎತ್ತಿ ತೋರಿಸುತ್ತವೆ. ಅವುಗಳೆಂದರೆ — ಕೃತಕವಾಗಿ ಹೆಚ್ಚಿಸಿದ ಬಿಲ್ಗಳು, ಕೇವಲ ಕಾಗದದ ಮೇಲಿರುವ ಯೋಜನೆಗಳು ಮತ್ತು ತಲುಪಬೇಕಾದ ಮೂಲ ಉದ್ದೇಶಕ್ಕೆ ತಲುಪದ ಹಣ.
ಜಾಗತಿಕ ಮಟ್ಟದಲ್ಲೂ ಈ ಆತಂಕ ಎದ್ದುಕಾಣುತ್ತಿದೆ. ಟ್ರಾನ್ಸ್ ಪರೆನ್ಸಿ ಇಂಟರ್ನ್ಯಾಶನಲ್ ಸಂಸ್ಥೆಯ ‘2025ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ’ದಲ್ಲಿ (Corruption Perceptions Index) ಭಾರತವು 100ಕ್ಕೆ 39 ಅಂಕಗಳನ್ನು ಪಡೆದು 91ನೇ ಸ್ಥಾನದಲ್ಲಿದೆ. ಸಾರ್ವಜನಿಕ ಗುತ್ತಿಗೆ ಪ್ರಕ್ರಿಯೆಯು ಇಂದಿಗೂ ನಮ್ಮ ವ್ಯವಸ್ಥೆಯ ಅತ್ಯಂತ ದುರ್ಬಲ ಕೊಂಡಿಯಾಗಿದೆ.
ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಹಲವಾರು ಲೋಪದೋಷಗಳಿವೆ ಎಂದು ತಜ್ಞರು ಹೇಳುತ್ತಾರೆ. ಫಿನ್ಟೆಕ್ (Fintech) ನೀತಿ ಸಂಶೋಧಕಿ ಡಾ. ರಾಜೇಶ್ವರಿ ರಾವ್ ಅವರು, “ಸಾಮಾನ್ಯ ಬ್ಯಾಂಕ್ ವರ್ಗಾವಣೆಗಳಲ್ಲೂ ಹಣವನ್ನು ಬೇರೆಡೆಗೆ ವರ್ಗಾಯಿಸಲು ಹಲವು ಮಾರ್ಗಗಳಿವೆ” ಎಂದು ಬೆಟ್ಟು ಮಾಡುತ್ತಾರೆ. ಆದರೆ, ಪ್ರೋಗ್ರಾಮಬಲ್ ಡಿಜಿಟಲ್ ರೂಪಾಯಿಯ ಮೂಲಕ, ಹಣವನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಮಾತ್ರ (ಉದಾಹರಣೆಗೆ ಕಾರ್ಮಿಕರಿಗೆ ವೇತನ ನೀಡುವುದು ಅಥವಾ ಕಚ್ಚಾವಸ್ತುಗಳನ್ನು ಖರೀದಿಸುವುದು) ಮೀಸಲಿಡಬಹುದು ಮತ್ತು ನಿಗದಿಪಡಿಸಿದ ಕೆಲಸದ ಹಂತಗಳು ಪೂರ್ಣಗೊಂಡ ನಂತರವಷ್ಟೇ ಆ ಹಣ ಬಿಡುಗಡೆಯಾಗುವಂತೆ ಮಾಡಬಹುದು.
ಈ ಆರಂಭಿಕ ಪ್ರಾಯೋಗಿಕ ಯೋಜನೆಗಳನ್ನು ನೋಡಿರುವ ಗುತ್ತಿಗೆದಾರರು ಸ್ಪಷ್ಟ ಬದಲಾವಣೆಗಳನ್ನು ಗುರುತಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಗುತ್ತಿಗೆದಾರ ರಾಘವೇಂದ್ರ ಭಟ್ ಮಾತನಾಡಿ, “ಹಣವು ಈಗ ನೇರವಾಗಿ ಕೆಲಸ ನಡೆಯುವ ಸ್ಥಳಕ್ಕೇ ತಲುಪುತ್ತಿದೆ. ಕಾರ್ಮಿಕರಿಗೆ ಡಿಜಿಟಲ್ ವಾಲೆಟ್ಗಳ ಮೂಲಕ ವೇತನ ಪಾವತಿಯಾಗುತ್ತಿದೆ. ವಸ್ತುಗಳನ್ನು ಪೂರೈಸುವವರಿಗೆ ಕೆಲಸ ಖಚಿತವಾದ ನಂತರವಷ್ಟೇ ಹಣ ಸಿಗುತ್ತಿದೆ. ಇದರಿಂದ ಮಧ್ಯವರ್ತಿಗಳು ಬಹುಮಟ್ಟಿಗೆ ದೂರವಾಗಿದ್ದಾರೆ. ಹಣ ನೀಡುವವರಿಗೂ ಮತ್ತು ಪಡೆಯುವವರಿಗೂ ನಡುವೆ ಯಾವುದೇ ಅಂತರ ಉಳಿದಿಲ್ಲ” ಎನ್ನುತ್ತಾರೆ.
ಆದರೆ, ಎಲ್ಲರೂ ಇದನ್ನು ಸಂಪೂರ್ಣವಾಗಿ ನಂಬುತ್ತಿಲ್ಲ. ಮಂಗಳೂರಿನ ಪ್ರಥಮ ದರ್ಜೆ ಲೋಕೋಪಯೋಗಿ (PWD) ಗುತ್ತಿಗೆದಾರ ಸುರೇಶ್ ರಾವ್ ಅವರು, “ಇ-ರೂಪಾಯಿಯು ಬಿಲ್ ಪಾವತಿಯಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಬಹುದು ನಿಜ. ಆದರೆ, ಇದರ ಅಸಲಿ ಪರೀಕ್ಷೆ ಇರುವುದು ಗುತ್ತಿಗೆಗಳನ್ನು (Tenders) ಮೊದಲ ಹಂತದಲ್ಲಿ ಹೇಗೆ ನೀಡಲಾಗುತ್ತದೆ ಎಂಬುದರ ಮೇಲೆ. ಟೆಂಡರ್ ಪ್ರಕ್ರಿಯೆಗಳು ಬದಲಾಗದೆ ಹಾಗೇ ಉಳಿದರೆ, ಭ್ರಷ್ಟಾಚಾರದ ಸಮಸ್ಯೆ ಸಂಪೂರ್ಣವಾಗಿ ನಾಶವಾಗುವ ಬದಲು ಕೇವಲ ಬೇರೆ ರೂಪ ಪಡೆದುಕೊಳ್ಳಬಹುದು” ಎಂದು ಎಚ್ಚರಿಸುತ್ತಾರೆ.
ಇದೇ ವೇಳೆ, ಇತರ ಪೂರಕ ಕ್ಷೇತ್ರಗಳಲ್ಲೂ ಇದರ ಸಕಾರಾತ್ಮಕ ಪರಿಣಾಮಗಳು ಕಾಣಸಿಗುತ್ತಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, “ಕೆಲವು ಜಿಲ್ಲೆಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (MGNREGA) ವೇತನ ಪಾವತಿಗಾಗಿ ಡಿಜಿಟಲ್ ರೂಪಾಯಿಯನ್ನು ಬಳಸುತ್ತಿರುವುದರಿಂದ, ಅಕ್ರಮಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ” ಎಂದು ಉಲ್ಲೇಖಿಸಿದ್ದಾರೆ.
ಉದ್ಯಮ ವಲಯದ ಸಂಸ್ಥೆಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಸರ್ಕಾರಿ ವೆಚ್ಚಗಳನ್ನು ಪತ್ತೆಹಚ್ಚಲು ಡಿಜಿಟಲ್ ಉಪಕರಣಗಳ ವ್ಯಾಪಕ ಬಳಕೆಯನ್ನು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ಎರಡೂ ಬೆಂಬಲಿಸಿವೆ. ಕಿಸ್ಫ್ಲೋ (Kissflow) ಸಂಸ್ಥೆಯ ಸಂಸ್ಥಾಪಕ ಸುರೇಶ್ ಸಂಬಂಧಂ ಮಾತನಾಡಿ, “ಗುತ್ತಿಗೆದಾರರ ವರ್ತನೆಯಲ್ಲಿ ಈಗಾಗಲೇ ಬದಲಾವಣೆ ಕಾಣಿಸುತ್ತಿದೆ. ಪಾವತಿಗಳನ್ನು ಕುಶಲತೆಯಿಂದ ಬದಲಾಯಿಸಲು (Manipulate) ಅವಕಾಶವಿಲ್ಲದ ಇಂತಹ ಪಾರದರ್ಶಕ ವ್ಯವಸ್ಥೆಗಳನ್ನೇ ಗುತ್ತಿಗೆದಾರರು ಈಗ ಹೆಚ್ಚು ಇಷ್ಟಪಡುತ್ತಿದ್ದಾರೆ” ಎಂದಿದ್ದಾರೆ.
ಆದಾಗ್ಯೂ, ತಂತ್ರಜ್ಞಾನವೇ ಎಲ್ಲದಕ್ಕೂ ತಕ್ಷಣದ ಪರಿಹಾರವಲ್ಲ. ಭ್ರಷ್ಟಾಚಾರವು ಈ ಡಿಜಿಟಲ್ ವ್ಯವಸ್ಥೆಯ ಹೊರಗೂ ತನ್ನ ದಾರಿ ಹುಡುಕಿಕೊಳ್ಳಬಹುದು. ಲಂಚ ಅಥವಾ ಕಿಕ್ಬ್ಯಾಕ್ಗಳನ್ನು ಇಂದಿಗೂ ನಗದು ರೂಪದಲ್ಲೇ ಬೇಡಿಕೆ ಇಡಬಹುದು.
ಇನ್ನೊಂದೆಡೆ, ಪ್ರತಿಯೊಂದು ವ್ಯವಹಾರದ ಮೇಲೂ ನಿರಂತರ ನಿಗಾ ಇಡುವುದು ಸದಾ ಕಣ್ಗಾವಲಿನಲ್ಲಿಟ್ಟಂತೆ ಭಾಸವಾಗಬಹುದು ಮತ್ತು ಇದು ಪ್ರಾಮಾಣಿಕ ಉದ್ಯಮಿಗಳ ಉತ್ಸಾಹವನ್ನು ಕುಗ್ಗಿಸಬಹುದು ಎಂದು ಕೆಲವು ವ್ಯವಹಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಗೌಪ್ಯತೆ (Privacy) ಮತ್ತೊಂದು ಪ್ರಮುಖ ಕಾಳಜಿಯಾಗಿದೆ — ಪ್ರತಿಯೊಂದು ವಹಿವಾಟನ್ನು ಸರ್ಕಾರ ಗಮನಿಸುತ್ತಿದ್ದರೆ, ನಾಗರಿಕರ ಖಾಸಗಿತನದ ಮೇಲೆ ಸರ್ಕಾರ ಎಷ್ಟು ನಿಯಂತ್ರಣ ಸಾಧಿಸಬಹುದು ಎಂಬ ಪ್ರಶ್ನೆಗಳು ಏಳುತ್ತವೆ.
ಆದರೆ, ನಮಗೆ ಉತ್ತೇಜನ ನೀಡುವಂತಹ ಕೆಲವು ಉದಾಹರಣೆಗಳು ಕಣ್ಣಮುಂದಿವೆ. ಭಾರತವು ಈಗಾಗಲೇ ‘ನೇರ ನಗದು ವರ್ಗಾವಣೆ’ (Direct Benefit Transfer – DBT) ವ್ಯವಸ್ಥೆಗೆ ಬದಲಾದಾಗಿನಿಂದ, ಮಧ್ಯವರ್ತಿಗಳ ಸೋರಿಕೆಯನ್ನು ತಡೆದು ದೊಡ್ಡ ಪ್ರಮಾಣದ ಹಣವನ್ನು ಉಳಿಸಿದೆ. ಗುಜರಾತ್ನಲ್ಲಿ 2026ರ ಫೆಬ್ರವರಿಯಲ್ಲಿ ಆಹಾರ ಸಬ್ಸಿಡಿಗಾಗಿ ಪ್ರೋಗ್ರಾಮಬಲ್ ಇ-ರೂಪಾಯಿಯನ್ನು ಬಳಸಿದಾಗ, ಧಾನ್ಯಗಳು ಬೇರೆಡೆಗೆ ವರ್ಗಾವಣೆಯಾಗುವುದು ಗಣನೀಯವಾಗಿ ಕಡಿಮೆಯಾಗಿತ್ತು.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಈ ವಿಷಯದಲ್ಲಿ ಅತ್ಯಂತ ಜಾಗರೂಕ ಹೆಜ್ಜೆಯನ್ನು ಇಟ್ಟಿದ್ದಾರೆ. ತಂತ್ರಜ್ಞಾನವು ಸಂಪೂರ್ಣವಾಗಿ ಸ್ಥಿರಗೊಂಡು, ಬಳಕೆದಾರರು ಅದಕ್ಕೆ ಒಗ್ಗಿಕೊಂಡು, ಖಾಸಗಿತನಕ್ಕೆ ಬಲವಾದ ರಕ್ಷಣೆ ಸಿಕ್ಕಾಗ ಮಾತ್ರವೇ ಇದನ್ನು ಬೃಹತ್ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂಟರ್ನೆಟ್ ಇಲ್ಲದೆಯೂ ಬಳಸುವ ‘ಆಫ್ಲೈನ್’ ಸೌಲಭ್ಯ, ಯುಪಿಐ (UPI) ವ್ಯವಸ್ಥೆಯೊಂದಿಗೆ ಇದರ ಜೋಡಣೆ ಮತ್ತು ಸಣ್ಣ ಬಳಕೆದಾರರ ಹಿತರಕ್ಷಣೆಗಾಗಿ ಕೆಲಸಗಳು ಪ್ರಸ್ತುತ ನಡೆಯುತ್ತಿವೆ. ಸಾವಿರಾರು ಸರ್ಕಾರಿ ಇಲಾಖೆಗಳನ್ನು ಒಟ್ಟಿಗೆ ಜೋಡಿಸುವಾಗ ‘ಸೈಬರ್ ಭದ್ರತೆ’ (Cybersecurity) ಕೂಡ ಒಂದು ಪ್ರಮುಖ ಸವಾಲಾಗಿದೆ.
ಗುತ್ತಿಗೆದಾರರ ಪಾವತಿಗಳಿಗಾಗಿ ಡಿಜಿಟಲ್ ರೂಪಾಯಿಯನ್ನು ಯಶಸ್ವಿಯಾಗಿ ಬಳಸಿದ್ದೇ ಆದಲ್ಲಿ, ಭ್ರಷ್ಟಾಚಾರದಲ್ಲಿ ಆಗುವ ಒಂದು ಸಣ್ಣ ಇಳಿಕೆಯೂ ಸಹ ದೇಶದ ನೈಜ ಅಭಿವೃದ್ಧಿಗೆ ಭಾರಿ ಪ್ರಮಾಣದ ಹಣವನ್ನು ಒದಗಿಸಬಲ್ಲದು. ಇದು ಸಾರ್ವಜನಿಕ ಟೆಂಡರ್ಗಳಲ್ಲಿ ಪ್ರಾಮಾಣಿಕ ಗುತ್ತಿಗೆದಾರರು ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತದೆ ಮತ್ತು ಇಡೀ ನಿರ್ಮಾಣ ಕ್ಷೇತ್ರವನ್ನು ಸಂಘಟಿತ ಆರ್ಥಿಕತೆಯ (Formal Economy) ವ್ಯಾಪ್ತಿಗೆ ತರಲು ಸಹಾಯ ಮಾಡುತ್ತದೆ.
ಆದರೆ ಇದರ ಯಶಸ್ಸು ಸಂಪೂರ್ಣವಾಗಿ ಅನುಷ್ಠಾನದ (Execution) ಮೇಲೆಯೇ ನಿರ್ಧರಿತವಾಗಿದೆ. ಸಣ್ಣ ಗುತ್ತಿಗೆದಾರರು ಮತ್ತು ಗ್ರಾಮೀಣ ವ್ಯಾಪಾರಿಗಳಿಗೆ ಸೂಕ್ತ ತರಬೇತಿಯ ಅಗತ್ಯವಿದೆ. ತಾಂತ್ರಿಕ ವ್ಯವಸ್ಥೆಗಳು ಸರಳವಾಗಿರಬೇಕು ಮತ್ತು ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು. ಪೂರಕ ಸಿದ್ಧತೆಗಳಿಲ್ಲದೆ ಈ ಯೋಜನೆಯನ್ನು ಗಡಿಬಿಡಿಯಲ್ಲಿ ಜಾರಿಗೆ ತಂದರೆ, ಪ್ರಾಮಾಣಿಕ ವ್ಯವಹಾರಗಳು ನಷ್ಟ ಅನುಭವಿಸಬಹುದು ಅಥವಾ ಜನರು ಈ ವ್ಯವಸ್ಥೆಯಿಂದಲೇ ದೂರ ಸರಿಯಬಹುದು.
ರಿಸರ್ವ್ ಬ್ಯಾಂಕ್ ಒಳಗಡೆ, ಕೇವಲ ಸಬ್ಸಿಡಿಗಳಿಗೆ ಸೀಮಿತವಾಗದೆ ಇ-ರೂಪಾಯಿಯನ್ನು ಸರ್ಕಾರದ ಇತರ ವಿಸ್ತೃತ ಪಾವತಿಗಳಿಗೂ ವಿಸ್ತರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಿಗಾಗಿ ಹಂತ-ಹಂತದ ಜಾರಿ ಪ್ರಕ್ರಿಯೆಯು ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗಬಹುದು. ಆದರೆ ಗುತ್ತಿಗೆದಾರರ ಪಾವತಿಗಾಗಿ ಇದು ಸಂಪೂರ್ಣವಾಗಿ ಬಳಕೆಗೆ ಬರಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು.
ಅಧಿಕಾರಿಯೊಬ್ಬರು ಹೇಳಿದಂತೆ, “ಡಿಜಿಟಲ್ ರೂಪಾಯಿಯು ಭ್ರಷ್ಟಾಚಾರವನ್ನು ರಾತ್ರಿಯಿಂದ ಬೆಳಗಾಗುವುದರೊಳಗೆ ನಿರ್ಮೂಲನೆ ಮಾಡಲಾರದು. ಆದರೆ ಪ್ರತಿಯೊಂದು ಹಂತದಲ್ಲೂ ಹಣದ ಚಲನೆಯನ್ನು ಪತ್ತೆಹಚ್ಚುವ ಮೂಲಕ, ಭ್ರಷ್ಟಾಚಾರ ಮಾಡುವುದನ್ನು ಅತ್ಯಂತ ಕಠಿಣ ಮತ್ತು ಅಪಾಯಕಾರಿಯನ್ನಾಗಿ ಮಾಡಬಲ್ಲದು”. ಭಾರತವು ಈಗಾಗಲೇ ಪ್ರಬಲವಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು (Digital Public Infrastructure) ಹೊಂದಿದೆ. ಡಿಜಿಟಲ್ ರೂಪಾಯಿಯು ಇದರ ಮುಂದಿನ ಹೆಜ್ಜೆಯಾಗಬಲ್ಲದು. ಆದರೆ ಇದರ ಯಶಸ್ಸು ಕೇವಲ ತಂತ್ರಜ್ಞಾನದ ಮೇಲಷ್ಟೇ ಅಲ್ಲ, ವಾಸ್ತವ ಪ್ರಪಂಚದ ಸವಾಲುಗಳನ್ನು ಅದು ಎಷ್ಟು ಸಮರ್ಥವಾಗಿ ಎದುರಿಸುತ್ತದೆ ಎಂಬುದರ ಮೇಲೆ ನಿಂತಿದೆ.
- ಮೂಲ ಲೇಖಕರು: ಎಂ. ರಘುರಾಮ್
- ಅಸೀಮಾಕ್ಕಾಗಿ ಬರೆದ ಇಂಗ್ಲಿಷ್ ಲೇಖನದ ಕನ್ನಡಾನುವಾದ – ಚಂದ್ರಶೇಖರ ಕುಳಮರ್ವ
