- ಮಂಜುನಾಥ ಅಜ್ಜಂಪುರ, ಗೌರವ ಸಂಪಾದಕ, “ವಾಯ್ಸ್ ಆಫ್ ಇಂಡಿಯಾ” ಕನ್ನಡ ಸರಣಿ
ಚೀನಾದೇಶದ ಬೌದ್ಧ ಯಾತ್ರಿಕ ಫಹೀಯನ್ (Fahiyan) ಸಾಮಾನ್ಯಯುಗದ 5ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಮತ್ತು ಸುಮಾರು ಹದಿನೈದು ವರ್ಷಗಳ ಕಾಲ ಪ್ರವಾಸ ಮಾಡಿದ. ವೈಶಾಲಿ, ಗಯಾ, ವಾರಾಣಸಿ, ಮಥುರಾ, ಸಾರನಾಥ, ಶ್ರಾವಸ್ತಿ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಮತ್ತು ತಕ್ಷಶಿಲೆ, ಪಂಜಾಬ್, ಹರಿಯಾಣ, ಬಿಹಾರ, ಉತ್ತರ ಪ್ರದೇಶ, ನೇಪಾಳ, ಶ್ರೀಲಂಕಾ ಇತ್ಯಾದಿ ಪ್ರಾಂತಗಳನ್ನೂ ಭೇಟಿ ಮಾಡಿದ. ಸಾ.ಯು. 399ರಿಂದ 414ರವರೆಗೆ ಅವನ ಅಪೂರ್ವ ಯಾತ್ರೆ ನಡೆಯಿತು. ಗುಪ್ತರ ಕಾಲದ ಅನೇಕ ರಾಜಕೀಯ – ಸಾಮಾಜಿಕ ಚಿತ್ರಗಳು, ಅವನ ‘ಎ ರೆಕಾರ್ಡ್ ಆಫ್ ಬುದ್ಧಿಸ್ಟಿಕ್ ಕಿಂಗ್ಡಮ್ಸ್’ (ಇಂಗ್ಲಿಷ್ ಆವೃತ್ತಿಯ ಪ್ರಕಟಣೆ 1886) ಕೃತಿಯಲ್ಲಿ ದೊರೆಯುತ್ತವೆ. ಇಸ್ಲಾಮೀ ದುರಾಕ್ರಮಣಗಳ ಕಾರಣದಿಂದ ನಮ್ಮ ದೇಶದ ಅಪೂರ್ವ ಗ್ರಂಥ ಸಂಪತ್ತು, ದೇವಾಲಯಗಳು ನಾಶವಾದವು. ಜನ ಗುಲಾಮರಾದರು, ಬಲವಂತದ ಮತಾಂತರಕ್ಕೆ – ಅತ್ಯಾಚಾರಗಳಿಗೆ ಸಿಲುಕಿದರು. ಓದಂತಪುರಿ, ವಿಕ್ರಮಶಿಲಾ, ನಳಂದಾ ಮುಂತಾದ ವಿಶ್ವವಿದ್ಯಾನಿಲಯಗಳು ಸಂಪೂರ್ಣ ನಾಶವಾದವು. ಈಗ ಫಹೀಯಾನ್, ಯುವಾನ್ ಚ್ವಾಂಗ್ ಮೊದಲಾದವರ ಗ್ರಂಥಗಳಿಂದ ನಮ್ಮ ದೇಶದ ಇತಿಹಾಸದ ಪುನರ್ಲೇಖನದ ಕಾರ್ಯ ನಡೆಯಬೇಕಿದೆ. ನಮ್ಮ ಶಾಲಾ ಕಾಲೇಜುಗಳ ಇತಿಹಾಸವನ್ನು ಕಮ್ಯುನಿಸ್ಟ್ – ಜಿಹಾದೀ – ಮಿಷನರಿಗಳು ಕಲುಷಿತಗೊಳಿಸಿರುವುದರಿಂದ, ಈ ಫಹೀಯನ್, ಯುವಾನ್ ಚ್ವಾಂಗ್, ಬರ್ನಿಯರ್ ಮೊದಲಾದ ವಿದೇಶೀ ಯಾತ್ರಿಕರ – ಇತಿಹಾಸಕಾರರ ಬರೆಹಗಳೇ ಪ್ರಸ್ತುತ ಆಧಾರ ಗ್ರಂಥಗಳಾಗಬೇಕಿವೆ.
“…….ಭಾರತದಲ್ಲಿ ಕಳೆದ ಐದು ಸಾವಿರ ವರ್ಷಗಳಿಂದ ಒಂದು ಜಾತಿಯ ವಿನಃ, ಉಳಿದವರಿಗೆ ಶಿಕ್ಷಣಾವಕಾಶ ಇರಲಿಲ್ಲ. ಶೂದ್ರರಿಗೆ, ಅಸ್ಪೃಶ್ಯರಿಗೆ, ಮಹಿಳೆಯರಿಗೆ ಶಾಲಾ ಶಿಕ್ಷಣದ ಅವಕಾಶವೇ ಇರಲಿಲ್ಲ ಎಂಬ ಸುಳ್ಳುಗಳನ್ನೇ ನಾವು ಕೇಳಿ ಕೇಳಿ ನಮ್ಮ ಕಿವಿಗಳೇ ತೂತಾಗಿವೆ. ಲೇಖಕ – ಸಂಶೋಧಕ ಧರ್ಮಪಾಲರ ‘ಬ್ಯೂಟಿಫುಲ್ ಟ್ರೀ’ (ಕನ್ನಡದಲ್ಲಿ ‘ಚೆಲುವ ತರು’) ಈ ಅನೃತಪರ್ವಕ್ಕೆ ಅಂತ್ಯ ಹಾಡಿದೆ. ನಾವು ಈ ಕೃತಿಯನ್ನು ಓದಬೇಕು, ಅಷ್ಟೇ. ಬ್ರಾಹ್ಮಣರಿಗಿಂತ ಕಾಯಸ್ಥರು, ಶೂದ್ರರು ಯಾವರೀತಿ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು; ನಾಪಿತ ಧೋಬಿ ಕಮ್ಮಾರ ಗೊಲ್ಲ (ಇಂದಿನ OBC ಸಮುದಾಯದವರು) ಚಂಡಾಲ (ಇಂದಿನ SC) ಮೊದಲಾದ ಸಮುದಾಯದವರು ಅಧ್ಯಾಪಕರೂ ಆಗಿದ್ದರು, ಅಂತೆಯೇ ವಿದ್ಯಾರ್ಥಿಗಳೂ ಆಗಿದ್ದರು ಎಂಬ ತೆಕ್ಕೆ ತೆಕ್ಕೆ (ಕೋಷ್ಟಕಗಳ) ವಿವರಗಳು, ಅಂಕಿ ಅಂಶಗಳು ಇತಿಹಾಸದ ಮರೆಮಾಚಿದ ಸತ್ಯಗಳನ್ನು ತೆರೆದಿಡುತ್ತವೆ ಎಂಬುದು ಇಂತಹ ಗ್ರಂಥಗಳನ್ನು ಓದಿದಾಗ ಮಾತ್ರ ನಮಗೆ ತಿಳಿಯುತ್ತದೆ.
ಫಹೀಯನ್ ದಾಖಲಿಸಿರುವ ಈ ಮೇಲಿನ ಕೃತಿಯಲ್ಲಿ ಅಂದಿನ ಭಾರತದ ಸಾಮಾಜಿಕ ಚಿತ್ರವೂ ದೊರೆಯುತ್ತದೆ. ಗುಪ್ತರ ಸಾಮ್ರಾಜ್ಯದಲ್ಲಿ ಎಲ್ಲಿಯೂ ಪ್ರಾಣಿಹತ್ಯೆ – ಮದ್ಯಪಾನ ಇರಲಿಲ್ಲ. ಅಷ್ಟೇಕೆ, ಕಟುಕರೂ ಇರಲಿಲ್ಲ – ಮದ್ಯ ಮಾರಾಟಗಾರರೂ ಇರಲಿಲ್ಲ ಎನ್ನುತ್ತವೆ ದಾಖಲೆಗಳು. ಕಾನೂನು ಪರಿಪಾಲನೆ ಹೇಗಿತ್ತೆಂದರೆ ಅಪರಾಧದ ಪ್ರಮಾಣಕ್ಕೆ ಅನುಸಾರವಾಗಿ ದಂಡ ವಿಧಿಸಲಾಗುತ್ತಿತ್ತು. ಮತ್ತೆ ಮತ್ತೆ ಮಾಡುವ ಅಪರಾಧಗಳಿಗೆ ಅಂತಹವರ ಬಲಗೈಯನ್ನು ಕತ್ತರಿಸಲಾಗುತ್ತಿತ್ತು. ಮೀನುಗಾರಿಕೆ, ಬೇಟೆ, ಮಾಂಸ ಮಾರಾಟವನ್ನು ಚಂಡಾಲ (ಇಂದಿನ SC) ಸಮುದಾಯದವರು ಮಾತ್ರ ಮಾಡುತ್ತಿದ್ದರು. ರಾಜರು, ವ್ಯಾಪಾರಿಗಳು (ವೈಶ್ಯರು) ಬೌದ್ಧ ವಿಹಾರಗಳಿಗೆ, ಸನ್ಯಾಸಿಗಳಿಗೆ ಉದಾರವಾಗಿ ಧನಸಹಾಯ ಮಾಡುತ್ತಿದ್ದರು, ಪೋಷಿಸುತ್ತಿದ್ದರು. ನಾವಿಲ್ಲಿ ಸರಿಯಾಗಿ ಗಮನಿಸಬೇಕಾದುದೆಂದರೆ, ಆ ಕಾಲದಲ್ಲಿ ಹಿಂದೂಗಳು ಬೇರೆ, ಬೌದ್ಧರು ಬೇರೆ, ಜೈನರು ಬೇರೆ ಎಂಬ ಪರಿಕಲ್ಪನೆಯೇ ಇರಲಿಲ್ಲ. ಇದು ಬ್ರಿಟಿಷರ ಮತ್ತು ಅನಂತರದ ಸುಳ್ಳು ಇತಿಹಾಸಕಾರರ ಕು-ಸೃಷ್ಟಿ, ಅಷ್ಟೇ.
ಅಂದಿನ ಸಮಾಜದ ಇನ್ನೊಂದು ಪ್ರಮುಖವಾದ ನೈಜ ಚಿತ್ರಣವೆಂದರೆ, ಚಂಡಾಲ ಸಮುದಾಯಕ್ಕೆ ಸೇರಿದವನು ಬ್ರಾಹ್ಮಣ ಸಹ ಆಗಬಹುದಿತ್ತು ಎಂದೇ ಫಹೀಯನ್ (ಪುಟ 43) ದಾಖಲಿಸಿದ್ದಾನೆ. ಈ ಮಾಹಿತಿ ಅದ್ಭುತವಾದುದು. ಅಂದರೆ, ಅಂದು ಇದ್ದುದು ವರ್ಣಾಶ್ರಮ ಧರ್ಮ ಎಂದರ್ಥ. ನಮ್ಮ ದೇಶದಲ್ಲಿ ಅಂತಹ ವರ್ಣ ವ್ಯವಸ್ಥೆಯು ಸಾವಿರಾರು ವರ್ಷಗಳ ಕಾಲ ಇತ್ತು. ಹುಟ್ಟಿನಿಂದ ಯಾರೇ ಯಾವ ಸಮುದಾಯಕ್ಕೆ ಸೇರಿದ್ದರೂ, ಅವರು ಬೇರೊಂದು ವರ್ಣಕ್ಕೆ ಹೋಗಬಹುದಿತ್ತು. ವರ್ಣಗಳನ್ನು ಬದಲಿಸಿಕೊಳ್ಳುವುದು ಆ ಕಾಲದಲ್ಲಿ ಒಂದು ಸಹಜ ಪ್ರಕ್ರಿಯೆ ಆಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಈ ದಾಖಲೆಗಳು, ಇಂತಹ ದಾಖಲೆಗಳು ನಮ್ಮೆಲ್ಲರ ಕಣ್ತೆರೆಸಲಿ.
ಜಾತಿ, ಉಪಜಾತಿ, ಪಂಥ, ಬಣ್ಣ, ಜನಾಂಗ ಮೊದಲಾದ ಎಲ್ಲ ರೀತಿಯ ಭೇದಭಾವಗಳು ಜಗತ್ತಿನ ಎಲ್ಲ ಸಮುದಾಯಗಳಲ್ಲಿ, ಎಲ್ಲ ರಿಲಿಜನ್ಗಳಲ್ಲಿ, ಎಲ್ಲ ದೇಶಗಳಲ್ಲಿ ಇವೆ. ಹಾಗೆಂದಮಾತ್ರಕ್ಕೆ ಅವುಗಳನ್ನು ಒಪ್ಪಬೇಕೆಂದಿಲ್ಲ. ಅವು ಖಂಡನೀಯ. ಕ್ರೂರ ತಮಾಷೆಯೆಂದರೆ ಇವು ಭಾರತದಲ್ಲಿ ಮತ್ತು ಹಿಂದೂ ಸಮಾಜದಲ್ಲಿ ಮಾತ್ರ ಇವೆ ಎಂಬಂತೆ ಅಪಪ್ರಚಾರ ಮಾಡಲಾಗುತ್ತಿದೆ. ಭಾರತದಲ್ಲಿನ ಜಾತಿ, ಅಸಮಾನತೆ, ಅಸ್ಪೃಶ್ಯತೆಗಳು ವಿದೇಶೀ ಆಕ್ರಮಣಗಳ ನಂತರದ ಕೆಟ್ಟ ಬೆಳವಣಿಗೆಗಳು. ಕಳೆದ ಒಂದು ಶತಮಾನದ ಅವಧಿಯಲ್ಲಿ, ಧೂರ್ತರಾದ ಕಮ್ಯುನಿಸ್ಟರು ಬೇಕೆಂದೇ ವರ್ಣ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಗಳನ್ನು ಕಲಸುಮೇಲೋಗರ ಮಾಡಿ, ಭಾರತೀಯ ಸಮಾಜದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ವೃತ್ತಿಯಿಂದ ಬರುವ ಜಾತಿ ಇದೀಗ ಅನೇಕ ವಿಕೃತ ಆಯಾಮಗಳನ್ನು ತಳೆದಿದೆ. ಜಾತಿ, ಜಾತೀಯತೆ, ಜಾತಿ ವ್ಯವಸ್ಥೆಗಳನ್ನು ಎಲ್ಲರೂ ಬಾಯಿ ತುಂಬಾ ಟೀಕಿಸಿದರೂ ಆಳದಲ್ಲಿ ಬೆಂಬಲಿಸುವವರೇ ಆಗಿದ್ದಾರೆ. “ತಾವು ಸೆಕ್ಯುಲರ್, ತಾವು ಜಾತ್ಯತೀತ” ಎಂದು ಬಾಯಿ ಬಡಿದುಕೊಳ್ಳುವ ಎಲ್ಲ ರಾಜಕೀಯ ಪಕ್ಷಗಳೂ ಜಾತಿ ವ್ಯವಸ್ಥೆಯನ್ನು – ಭೇದಭಾವದ ಸಮಾಜವನ್ನು ದಿನದಿನಕ್ಕೆ ಗಟ್ಟಿಗೊಳಿಸುತ್ತಿವೆ. ಅದರೊಂದಿಗೆ ಚುನಾವಣೆಗಳು, ಚುನಾವಣಾ ಸಮೀಕ್ಷೆಗಳೂ ಬರಿಯ ಜಾತಿಯ ಲೆಕ್ಕಾಚಾರಗಳೇ ಆಗಿವೆ. ನಾಚಿಕೆಯಿಲ್ಲದ ಎಲ್ಲ ರಾಜಕೀಯ ಪಕ್ಷಗಳವರೂ ಜಾತಿ ಆಧಾರಿತ ಮೀಸಲಾತಿ, ಉಚಿತ ಕೊಡುಗೆಗಳಿಂದ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ. ಒಬ್ಬ ಲೇಖಕರಂತೂ ಸೈನಿಕರ ಜಾತಿ-ಆಧಾರಿತ ‘ವಿಶ್ಲೇಷಣೆ’ ಮಾಡಿ, ಜನರಿಗೆ ಭೇದಭಾವದ ವಿಷ ಉಣಿಸುವುದೇ ತಮ್ಮ ಆದ್ಯತೆಯ ಕೆಲಸ ಎಂಬುದನ್ನು ತೋರಿಸಿಕೊಟ್ಟರು. ಹಿಂದಿನ ಪ್ರಧಾನ ಮಂತ್ರಿಗಳಂತೂ ಸೈನ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ ಇರಬೇಕು ಎಂದು ಆಗ್ರಹಿಸಿದರು. ಪಾಪ, ಕಾಟಾಚಾರಕ್ಕೆ ಸಹ ಅವರು ‘ಅಲ್ಪಸಂಖ್ಯಾತರು’ ಎಂಬ ಪದ ಬಳಸಲಿಲ್ಲ, ‘ಮುಸ್ಲಿಮರು’ ಎಂಬ ಪದವನ್ನೇ ಬಳಸಿದರು.
ಯಾರು ಪ್ರಾಚೀನ ಭಾರತದ ಪ್ರಸ್ತಾಪ ಮಾಡಿದರೂ, “…ಪ್ರಾಚೀನ ಭಾರತ ಎಂದರೆ ಅಂಧಕಾರ, ಅಸಮಾನತೆ, ಜಾತೀಯತೆ, ಭೇದಭಾವ, ಮೂಢನಂಬಿಕೆಗಳು, ಅಸ್ಪೃಶ್ಯತೆ ಮಾತ್ರ…..” ಎಂದೆಲ್ಲಾ ರೋದಿಸುವ ನಮ್ಮ ಖೊಟ್ಟಿ ಇತಿಹಾಸಕಾರರು, ಸೋಕಾಲ್ಡ್ ಬುದ್ಧಿಜೀವಿಗಳು, ಚಿಂತಕರು ಫಹೀಯನ್ ಚಿತ್ರಿಸಿರುವ ಅಂದಿನ ನಿಜ-ಭಾರತವನ್ನು ಸ್ಮರಿಸುವುದೇ ಇಲ್ಲ, ಎಲ್ಲೂ ಪ್ರಸ್ತಾಪಿಸುವುದೇ ಇಲ್ಲ. ಇನ್ನು ನೂರೈವತ್ತು ಕೋಟಿ ಜನ ಭಾರತೀಯರ ವರ್ತಮಾನ, ಭವಿಷ್ಯಗಳನ್ನು ಬದಲಿಸುವ ಶಕ್ತಿಯುಳ್ಳ ಸಾಕ್ಷ್ಯಾಧಾರಗಳನ್ನು ತೆರೆದಿಟ್ಟಿರುವ ಧರ್ಮಪಾಲರ ‘ಬ್ಯೂಟಿಫುಲ್ ಟ್ರೀ’ (ಮೂಲ ಪ್ರಕಾಶಕರು: ‘ವಾಯ್ಸ್ ಆಫ್ ಇಂಡಿಯಾ’ ಖ್ಯಾತಿಯ ಸೀತಾರಾಮ ಗೋಯಲ್) ಉದ್ಗ್ರಂಥವನ್ನು ಉಲ್ಲೇಖಿಸುವುದಿರಲಿ, ಓದುವುದೂ ಇಲ್ಲ.
ಕಳೆದ ಏಳೆಂಟು ದಶಕಗಳಿಂದ ಸೋಕಾಲ್ಡ್ ಸಾಮಾನ್ಯ ವರ್ಗದವರು (General Category) ಏಕಪ್ರಕಾರವಾಗಿ ಏಕನಿಷ್ಠೆಯಿಂದ ಭಾರತೀಯ ಜನಸಂಘ ಮತ್ತು ಅದರ ಇಂದಿನ ಆವೃತ್ತಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. 2026ರ ಜನವರಿ 13ರ ಯುಜಿಸಿ ನಿಯಮಗಳ ಹೆಸರಿನಲ್ಲಿ ಅಂತಹ ಸಾಮಾನ್ಯವರ್ಗವನ್ನು ಶಾಲಾ ಕಾಲೇಜುಗಳಿಂದ ದೂರಮಾಡಿಬಿಡುವ ಮತ್ತು ಸರ್ವನಾಶ ಮಾಡುವ ಕೇಂದ್ರ ಸರ್ಕಾರದ ಹುನ್ನಾರ ಒಳ್ಳೆಯ ಬೆಳವಣಿಗೆಯಲ್ಲ. ಜಾತಿ, OBC, SC, ST, Minorities ಹೆಸರಿನ ರಾಜಕಾರಣ ನಮ್ಮ ಸಮಾಜವನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂಬುದು ಅಕಲ್ಪನೀಯ. ಜಾತಿ – ವರ್ಣಗಳ ಸರಿಯಾದ ಇತಿಹಾಸ, ನಮ್ಮ ಎಲ್ಲ ರಾಜಕಾರಣಿಗಳ ಕಣ್ಣು ತೆರೆಸಲಿ. ಸತ್ಯದ ಬೆಳಕು ಹೊಮ್ಮಲಿ.
