- ಮಹಿಮ ಸಾಮಂತ್, ರಸಾಯನಶಾಸ್ತ್ರ ಪ್ರಾಧ್ಯಾಪಕಿ, ಬೆಂಗಳೂರು
ಮಳೆಯ ಮೊದಲ ಹನಿಗಳು ಭೂಮಿಯನ್ನು ತಾಕಿದಾಗ ಅರಣ್ಯದೊಳಗೆ ಒಂದು ಮನೋಹರ ದೃಶ್ಯ ಮೂಡುತ್ತದೆ. ಬಣ್ಣಬಣ್ಣದ ರೆಕ್ಕೆಗಳನ್ನು ಹರಡಿಕೊಂಡು ನವಿಲು ಸಂತೋಷದಿಂದ ನೃತ್ಯ ಮಾಡುತ್ತದೆ. ಆ ಕ್ಷಣದಲ್ಲಿ ಪ್ರಕೃತಿಯ ಸೌಂದರ್ಯವೇ ಜೀವಂತವಾಗಿ ಕಣ್ಣಿಗೆ ಕಟ್ಟುತ್ತದೆ. ನವಿಲುಗರಿ ಕೇವಲ ಒಂದು ಸುಂದರವಾದ ರೆಕ್ಕೆ ಮಾತ್ರವಲ್ಲ. ಅದು ಪುರಾಣಗಳ ಕಥೆಗಳು, ಜನಪದ ನಂಬಿಕೆಗಳು ಮತ್ತು ಪ್ರಕೃತಿಯ ಅದ್ಭುತ ವಿಜ್ಞಾನವನ್ನು ಒಂದೇ ಸಮಯದಲ್ಲಿ ನಮ್ಮ ಮುಂದೆ ತೆರೆದಿಡುವ ಸಂಕೇತವಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯ ಪ್ರತಿಯೊಂದು ಅಂಶಕ್ಕೂ ಒಂದು ಆಧ್ಯಾತ್ಮಿಕ ಅರ್ಥ ನೀಡಲಾಗಿದೆ. ಮರಗಳು, ನದಿಗಳು, ಪ್ರಾಣಿಗಳು ಮತ್ತು ಪಕ್ಷಿಗಳು ಕೇವಲ ಪರಿಸರದ ಭಾಗವಲ್ಲ; ಅವು ನಮ್ಮ ಜೀವನದ ಮೌಲ್ಯಗಳನ್ನು ನೆನಪಿಸುವ ಸಂಕೇತಗಳಾಗಿವೆ. ನವಿಲುಗರಿಯ ಕಥೆಯೂ ಅಂತಹದ್ದೇ — ಅದು ಸೌಂದರ್ಯ, ವಿನಯ, ತ್ಯಾಗ ಮತ್ತು ಕೃತಜ್ಞತೆಯ ಸಂದೇಶವನ್ನು ನೀಡುತ್ತದೆ.
ಶ್ರೀಕೃಷ್ಣ ಮತ್ತು ನವಿಲುಗರಿ
ನವಿಲುಗರಿ ಎಂದಾಗ ಎಲ್ಲರಿಗೂ ಮೊದಲು ನೆನಪಾಗುವುದು ಶ್ರೀಕೃಷ್ಣನ ಕಿರೀಟ. ಕೃಷ್ಣನ ಚಿತ್ರಗಳಲ್ಲಿ ತಲೆಯ ಮೇಲೆ ಹೊಳೆಯುವ ನವಿಲುಗರಿ ಕೇವಲ ಅಲಂಕಾರವಲ್ಲ; ಅದರ ಹಿಂದೆ ಒಂದು ಸುಂದರ ಕಥೆಯಿದೆ. ವೃಂದಾವನದಲ್ಲಿ ಕೃಷ್ಣನು ತನ್ನ ಬಾನ್ಸುರಿಯನ್ನು ನುಡಿಸುತ್ತಿದ್ದಾಗ, ಆ ಮಧುರ ನಾದವನ್ನು ಕೇಳಿ ಅರಣ್ಯದ ನವಿಲುಗಳು ಸಂತೋಷದಿಂದ ನೃತ್ಯ ಮಾಡುತ್ತಿದ್ದವು ಎಂದು ಹೇಳಲಾಗುತ್ತದೆ. ಆ ನೃತ್ಯವನ್ನು ನೋಡಿ ಕೃಷ್ಣನು ತುಂಬಾ ಸಂತೋಷಪಟ್ಟನು. ನವಿಲುಗಳು ತಮ್ಮ ಸಂತೋಷದ ಸಂಕೇತವಾಗಿ ಒಂದು ರೆಕ್ಕೆ ನೆಲಕ್ಕೆ ಬಿಟ್ಟವು. ಅದನ್ನು ಗೌರವದಿಂದ ತೆಗೆದುಕೊಂಡ ಕೃಷ್ಣನು ತನ್ನ ಕಿರೀಟದಲ್ಲಿ ಧರಿಸಿದನು ಎನ್ನಲಾಗುತ್ತದೆ.
ಇನ್ನೊಂದು ಅರ್ಥಪೂರ್ಣ ವಿವರಣೆಯ ಪ್ರಕಾರ, ಕೃಷ್ಣನು ನವಿಲುಗರಿಯನ್ನು ಧರಿಸಿದ್ದು ಸರಳತೆಯ ಸಂಕೇತವಾಗಿ. ರಾಜರು ಸಾಮಾನ್ಯವಾಗಿ ಬಂಗಾರದ ಕಿರೀಟಗಳು ಮತ್ತು ಅಮೂಲ್ಯ ರತ್ನಗಳನ್ನು ಧರಿಸುತ್ತಿದ್ದರು. ಆದರೆ ಕೃಷ್ಣನು ಪ್ರಕೃತಿಯ ಒಂದು ಸರಳ ಅಲಂಕಾರವಾದ ನವಿಲುಗರಿಯನ್ನು ಆಯ್ಕೆ ಮಾಡಿಕೊಂಡನು. ಇದರಿಂದ ಅಹಂಕಾರವಿಲ್ಲದ ಜೀವನವೇ ನಿಜವಾದ ಸೌಂದರ್ಯ ಎಂಬ ಸಂದೇಶವನ್ನು ನೀಡಿದನು ಎಂದು ಹೇಳಲಾಗುತ್ತದೆ.
ರಾಮ–ಸೀತೆಯರಿಗೆ ದಾರಿ ತೋರಿಸಿದ ನವಿಲು – ಒಂದು ಜನಪದ ಕಥೆ
ಜನಪದ ಕಥೆಗಳಲ್ಲಿ ನವಿಲಿನ ದಯೆ ಮತ್ತು ಸಹಾಯವನ್ನು ವಿವರಿಸುವ ಒಂದು ಸುಂದರ ಕಥೆ ಇದೆ. ಅರಣ್ಯವಾಸದ ಸಮಯದಲ್ಲಿ ಒಂದು ದಿನ ರಾಮ ಮತ್ತು ಸೀತಾ ಅರಣ್ಯದಲ್ಲಿ ಬಹಳ ದೂರ ನಡೆದಿದ್ದರು. ಬಿಸಿಲಿನ ತಾಪದಿಂದ ಅವರಿಗೆ ತುಂಬಾ ದಾಹವಾಗಿತ್ತು. ಆದರೆ ಎಲ್ಲೆಡೆ ನೋಡಿದರೂ ನೀರು ಕಾಣಿಸಲಿಲ್ಲ. ಅಲ್ಲಿದ್ದ ಒಂದು ನವಿಲು ಅವರ ಸಂಕಷ್ಟವನ್ನು ಗಮನಿಸಿತು. ಅವರಿಗೆ ನೀರು ಸಿಗುವ ಸ್ಥಳವನ್ನು ತೋರಿಸಬೇಕೆಂದು ಯೋಚಿಸಿತು. ಆದರೆ ನೇರವಾಗಿ ದಾರಿ ತೋರಿಸಿದರೆ ಅವರು ಗಮನಿಸದಿರಬಹುದು ಎಂದನಿಸಿ, ಒಂದು ವಿಶಿಷ್ಟ ವಿಧಾನವನ್ನು ಆಯ್ಕೆ ಮಾಡಿತು. ನೀರು ಇರುವ ದಿಕ್ಕಿನ ಕಡೆಗೆ ಸಾಗುತ್ತಾ ತನ್ನ ಗರಿಗಳನ್ನು ಒಂದೊಂದಾಗಿ ನೆಲಕ್ಕೆ ಬಿಡತೊಡಗಿತು. ಆ ಸುಂದರ ನವಿಲುಗರಿಗಳನ್ನು ನೋಡಿದ ರಾಮನು ಆಶ್ಚರ್ಯಗೊಂಡನು. ಆ ಗರಿಗಳ ಹಾದಿಯನ್ನು ಅನುಸರಿಸಿ ರಾಮ ಮತ್ತು ಸೀತಾ ಮುಂದೆ ಸಾಗಿದರು. ಕೊನೆಗೆ ಅವರು ಒಂದು ಸಣ್ಣ ಜಲಾಶಯದ ಬಳಿ ತಲುಪಿದರು ಮತ್ತು ತಮ್ಮ ದಾಹವನ್ನು ನೀಗಿಸಿಕೊಂಡರು. ಆದರೆ ಅನೇಕ ಗರಿಗಳನ್ನು ಕಳೆದುಕೊಂಡ ನವಿಲು ತುಂಬಾ ದುರ್ಬಲಗೊಂಡಿತು. ಕೊನೆಗೆ ಅದು ಅಲ್ಲಿ ಜೀವತ್ಯಾಗ ಮಾಡಿತು ಎಂದು ಕಥೆ ಹೇಳುತ್ತದೆ.
ಆ ನವಿಲಿನ ತ್ಯಾಗವನ್ನು ನೋಡಿ ರಾಮನು ತುಂಬಾ ವಿಷಾದಪಟ್ಟನು. ತನ್ನ ಜೀವವನ್ನೇ ತ್ಯಾಗ ಮಾಡಿ ಸಹಾಯ ಮಾಡಿದ ಆ ನವಿಲಿನ ಮಹತ್ವವನ್ನು ಗೌರವಿಸಿ ಆಶೀರ್ವದಿಸಿದ ರಾಮನು ಹೀಗೆ ಹೇಳಿದನೆಂದು ಜನಪದ ಕಥೆ ಹೇಳುತ್ತದೆ: “ನಿನ್ನ ನಿಷ್ಕಾಮ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ಮುಂದಿನ ಅವತಾರದಲ್ಲಿ ನಿನ್ನ ಗರಿಗಳನ್ನು ಗೌರವದಿಂದ ಧರಿಸುತ್ತೇನೆ.” ಹೀಗಾಗಿ ಶ್ರೀರಾಮನು ತನ್ನ ಮುಂದಿನ ಅವತಾರವಾದ ಶ್ರೀಕೃಷ್ಣನ ರೂಪದಲ್ಲಿ ಜನಿಸಿದಾಗ, ತನ್ನ ಕಿರೀಟದಲ್ಲಿ ನವಿಲುಗರಿಯನ್ನು ಧರಿಸಿದನು ಎಂದು ಈ ಕಥೆ ವಿವರಿಸುತ್ತದೆ. ಆದ್ದರಿಂದ ಕೃಷ್ಣನ ಕಿರೀಟದಲ್ಲಿರುವ ನವಿಲುಗರಿ ಕೇವಲ ಅಲಂಕಾರವಲ್ಲ; ಅದು ತ್ಯಾಗ, ಕೃತಜ್ಞತೆ ಮತ್ತು ಪ್ರಕೃತಿಗೆ ನೀಡಿದ ಗೌರವದ ಸಂಕೇತವೆಂದು ಈ ಕಥೆ ಸಾರುತ್ತದೆ.
ಸುಬ್ರಹ್ಮಣ್ಯ ಮತ್ತು ನವಿಲು
ನವಿಲಿನೊಂದಿಗೆ ಸಂಬಂಧ ಹೊಂದಿರುವ ಮತ್ತೊಂದು ದೇವತೆ ಸುಬ್ರಹ್ಮಣ್ಯ ಸ್ವಾಮಿ. ಅವನ ವಾಹನವೇ ನವಿಲು. ಪುರಾಣಗಳ ಪ್ರಕಾರ ಕಾರ್ತಿಕೇಯನು ದುಷ್ಟ ರಾಕ್ಷಸನಾದ ತಾರಕಾಸುರನನ್ನು ಸಂಹರಿಸಿದನು. ಈ ವಿಜಯದ ನಂತರ ನವಿಲು ಅವನ ವಾಹನವಾಗಿ ಉಳಿಯಿತು ಎಂದು ಹೇಳಲಾಗುತ್ತದೆ. ಇಲ್ಲಿ ನವಿಲು ಧೈರ್ಯ, ಜಾಗೃತಿ ಮತ್ತು ದುಷ್ಟಶಕ್ತಿಗಳ ಮೇಲಿನ ಜಯದ ಸಂಕೇತವಾಗಿದೆ.
ನವಿಲುಗರಿಯ ಉಪಯೋಗಗಳು
ಹಳೆಯ ಕಾಲದಲ್ಲಿ ನವಿಲುಗರಿಯನ್ನು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ, ಕೆಲವರು ನವಿಲುಗರಿಯನ್ನು ಬರೆಯುವ ಸಾಧನದಂತೆ ಬಳಸುತ್ತಿದ್ದರು ಎಂಬ ಉಲ್ಲೇಖಗಳಿವೆ. ಅದರ ಮೃದುವಾದ ಮತ್ತು ಸೂಕ್ಷ್ಮ ತುದಿ ಮಸಿಯನ್ನು ಹಿಡಿದು ಬರೆಯಲು ಅನುಕೂಲವಾಗುತ್ತಿತ್ತು. ಇನ್ನೂ ಕೆಲವು ಮನೆಗಳಲ್ಲಿ ನವಿಲುಗರಿಯನ್ನು ಪುಸ್ತಕಗಳಲ್ಲಿ ಇಡುವ ಪದ್ಧತಿ ಇತ್ತು. ಇದರಿಂದ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದು ಹಿರಿಯರು ಹೇಳುತ್ತಿದ್ದರು.
ನವಿಲುಗರಿಯ ವೈಜ್ಞಾನಿಕ ಮತ್ತು ರಸಾಯನಿಕ ದೃಷ್ಟಿಕೋನ
ವಿಜ್ಞಾನಿಗಳ ಪ್ರಕಾರ ನವಿಲುಗರಿಯ ಸೌಂದರ್ಯ ಕೇವಲ ಬಣ್ಣದಿಂದ ಮಾತ್ರವಲ್ಲ, ಅದರ ಸೂಕ್ಷ್ಮರಚನೆಯಿಂದ ಬೆಳಕು ಪ್ರತಿಫಲಿಸುವ ವಿಧಾನದಿಂದ ಉಂಟಾಗುತ್ತವೆ. ನವಿಲುಗರಿಯ ರಚನೆಯಲ್ಲಿ ಇರುವ ಕೆರಾಟಿನ್ ಮತ್ತು ಸೂಕ್ಷ್ಮಪದರಗಳು ಬೆಳಕನ್ನು ವಿಭಿನ್ನ ರೀತಿಯಲ್ಲಿ ಪ್ರತಿಫಲಿಸುತ್ತವೆ. ಇದನ್ನು ವಿಜ್ಞಾನದಲ್ಲಿ ‘ರಚನಾತ್ಮಕ ಬಣ್ಣ ನಿರ್ಮಾಣ’ ಎಂದು ಕರೆಯುತ್ತಾರೆ. ಬೆಳಕಿನ ವಕ್ರಣ ಮತ್ತು ವಿಕಿರಣಗಳ ಪರಿಣಾಮದಿಂದ ನೀಲಿ, ಹಸಿರು ಮತ್ತು ಬಂಗಾರದಂತಹ ಬಣ್ಣಗಳು ಹೊಳೆಯುತ್ತವೆ. ಅದಕ್ಕಾಗಿ ನವಿಲುಗರಿಯನ್ನು ಬೇರೆ ಬೇರೆ ಕೋನಗಳಲ್ಲಿ ನೋಡಿದಾಗ ಅದರ ಬಣ್ಣಗಳು ಬದಲಾಗುತ್ತಿರುವಂತೆ ಕಾಣುತ್ತವೆ.
ನವಿಲುಗರಿಯ ರಚನೆ ವಿಜ್ಞಾನಿಗಳಿಗೂ ಪ್ರೇರಣೆಯಾಗಿದೆ. ಇದರ ಸೂಕ್ಷ್ಮರಚನೆಯನ್ನು ಅಧ್ಯಯನ ಮಾಡಿ ವಿಜ್ಞಾನಿಗಳು ಆಪ್ಟಿಕಲ್ ವಸ್ತುಗಳು-ಸಂವೇದಕಗಳು ಮತ್ತು ಬಣ್ಣ ಬದಲಿಸುವ ಮೇಲ್ಮೈಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಪ್ರಕೃತಿಯ ಸೌಂದರ್ಯವು ವಿಜ್ಞಾನಕ್ಕೆ ಹೊಸ ಆಲೋಚನೆಗಳನ್ನು ನೀಡುತ್ತದೆ ಎಂಬುದಕ್ಕೊಂದು ಸುಂದರ ಉದಾಹರಣೆ.
ಶ್ರೀಕೃಷ್ಣನ ಕಿರೀಟದಲ್ಲಿ ಹೊಳೆಯುವ ನವಿಲುಗರಿ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ — ಸೌಂದರ್ಯವು ಕೇವಲ ಬಾಹ್ಯ ಅಲಂಕಾರದಲ್ಲಿಲ್ಲ; ಅದು ವಿನಯ, ಕೃತಜ್ಞತೆ ಮತ್ತು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವ ಮನೋಭಾವದಲ್ಲಿದೆ. ಪ್ರಕೃತಿಯ ಪ್ರತಿಯೊಂದು ಸಣ್ಣ ಅಂಶದಲ್ಲೂ ಒಂದು ಪಾಠ ಅಡಗಿದೆ. ಪ್ರಕೃತಿಯನ್ನು ಗೌರವಿಸಿದಾಗ ಮಾತ್ರ ಜೀವನದ ನಿಜವಾದ ಸೌಂದರ್ಯ ನಮ್ಮ ಕಣ್ಣಿಗೆ ಕಾಣಿಸುತ್ತದೆ ಎಂಬುದನ್ನು ನವಿಲುಗರಿಯ ಕಥೆ ಸಾರುತ್ತದೆ.
