ಅಂಕಣ – ದೃಶ್ಯ
- ದೃಶ್ಯಕಲೆಯಲ್ಲೂ ಇದಕ್ಕಿದೆ ಆಸಕ್ತಿದಾಯಕ ಇತಿಹಾಸ
- ಸಮಕಾಲೀನ ಸಂದರ್ಭದ ಕಲೆಯ ‘ರೂಪಕಾಲಂಕಾರ’
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
ಇದು ಕುರ್ಚಿ ವಿಷ್ಯ! ಕುರ್ಚಿ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇವರದ್ದೇನು ಕುರ್ಚಿ ವಿಚಾರ ಅಂದುಕೊಂಡಿರಬಹುದು. ಸಹಜ, ಇಂದು ಕುರ್ಚಿಗಾಗಿ ಏನೇನೆಲ್ಲಾ ಮಾಡಿಯಾರು ಎನ್ನುವುದು ಓಪನ್ ಸೀಕ್ರೆಟ್. ಸಣ್ಣ ಕುರ್ಚಿಯಿಂದ ಹಿಡಿದು ದೊಡ್ಡ ಕುರ್ಚಿಯ ತನಕವೂ ಭಲೇ ಭಲೇ ಎನ್ನುವಷ್ಟು ವಿರಾಮವಿಲ್ಲದ ಕದನ ನಡೆಯುವುದು ಸಾರ್ವಕಾಲಿಕ ಎನ್ನುವಂತಾಗಿದೆ. 21ನೇ ಶತಮಾನದ ವಿಶೇಷ ಗುಣವೋ ಏನೊ, ಕುರ್ಚಿ ಅಷ್ಟು ಮಹತ್ವ ಪಡೆದುಕೊಂಡಿದೆ. ರಾಜಕಾರಣ ಕ್ಷೇತ್ರ ಎಂದೇನಿಲ್ಲ, ಕುರ್ಚಿ ಇರುವಲ್ಲೆಲ್ಲಾ ಕುರ್ಚಿಗಾಗಿ ರಾಜಕಾರಣ. ಕುರ್ಚಿ ಅನ್ನೋದರ ಮಹತ್ವ ಆ ಮಟ್ಟದ್ದಿರುವಾಗ ಚರ್ಚೆ ಆಗುವುದರಲ್ಲಿ ತಪ್ಪೇನಿಲ್ಲ. ಚರ್ಚೆ ಆಗದೇ ಕುರ್ಚಿ ಗಿಟ್ಟಿಸಿಕೊಳ್ಳುವುದೂ ಕಷ್ಟ. ಕುರ್ಚಿ ಗಿಟ್ಟಿದ ಮೇಲೂ ಚರ್ಚೆಮಾಡುವುದು ಇಂದಿನ ಮೊಬೈಲ್ ಯುಗದಲ್ಲಿ ಸರ್ವೇಸಾಮಾನ್ಯ.
ಈ ಲೇಖನ ಮುಖೇನ ಚರ್ಚಿಸಬಯಸುತ್ತಿರುವ ಕುರ್ಚಿಯೂ ಬೇರೆ, ಕದನವೂ ಬೇರೆ. ದೃಶ್ಯಕಲಾ ಕ್ಷೇತ್ರದ ಅವಲೋಕನ ಸಂದರ್ಭದಲ್ಲಿ ಕಲಾವಿದರೇಕೆ ಕುರ್ಚಿಯ ಬಗ್ಗೆ ಇಷ್ಟೊಂದು ಆಸಕ್ತಿ ಹೊಂದುತ್ತಾರೆ ಎನ್ನುವುದು ಗಮನ ಸೆಳೆಯಿತು. ಇತಿಹಾಸದಲ್ಲಿ ನೂರಾರು ಕಲಾವಿದರ ಕಲಾಕೃತಿಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುವಂತಿವೆ. ಇನ್ನು, ಕುರ್ಚಿಯಲ್ಲೇನಿದೆ ಅಂತಹ ಆಕರ್ಷಣೆ ಎನ್ನುವ ಪ್ರಶ್ನೆಗೆ ಅವಕಾಶವೇ ಇಲ್ಲ. ಯಾಕೆಂದರೆ ಕುರ್ಚಿಯ ಮಹತ್ವ ಎಲ್ಲರಿಗೂ ಗೊತ್ತಿರುವಂತದ್ದೆ. ನನ್ನ ಆತ್ಮೀಯ ರಾಜಕಾರಣಿಯೊಬ್ಬರು ಅನೇಕ ಸಂದರ್ಭಗಳಲ್ಲಿ “ಕುರ್ಚಿ ರುಚಿ ಉಂಡವರಿಗೆ ಗೊತ್ತು ಮಾರಾಯಾ” ಎನ್ನುವುದನ್ನು ಕೇಳಿಸಿಕೊಂಡಿದ್ದೆ. ಇರಬಹುದು, ಕುರ್ಚಿ ಮಹಿಮೆ ಗೊತ್ತಿರುವವರಿಗೆ ಗೊತ್ತು. ಇದನ್ನೆಲ್ಲ ಅರಿತ ಕಲಾವಿದರು ಎಷ್ಟು ಕಿಲಾಡಿಗಳು ಅಂದರೆ ಕುರ್ಚಿಯ ಮಹತ್ವವನ್ನು ತಮ್ಮ ಕಲಾಕೃತಿಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಕುರ್ಚಿಯನ್ನು ಬೇರೆ ಬೇರೆ ವಿಚಾರಗಳಿಗೆ ವಸ್ತು ವಿಷಯವಾಗಿಸಿಕೊಂಡಿದ್ದಾರೆ. ಇಂತಹ ಕಲಾವಿದರಲ್ಲಿ ಎಲ್ಲಾ ತಲೆಮಾರಿನ ಕಲಾವಿದರೂ ಸಿಗುತ್ತಾರೆ. ಇವೆಲ್ಲದರ ನಡುವೆ ಕುರ್ಚಿಯ ಸೌಂದರ್ಯ, ಕುರ್ಚಿಯ ಜೊತೆಗಿನ ಅನುಬಂಧ, ಕುರ್ಚಿಯ ಮೇಲಿನ ಪ್ರೀತಿಗಾಗಿಯೂ ಕಲಾಕೃತಿ ರಚಿಸಿದವರಿದ್ದಾರೆ.
ಇತಿಹಾಸ ಮೆಲುಕು ಹಾಕಿದರೆ ಕುರ್ಚಿಯ ಬಗ್ಗೆ ಅನೇಕ ವಿಚಾರಗಳು ಬೇರೆ ಬೇರೆ ಕಾರಣಗಳಿಂದ ಮಹತ್ವ ಪಡೆದುಕೊಂಡಿತ್ತು ಎನ್ನುವುದು ಅರಿವಾಗುತ್ತದೆ. ರಾಮಾಯಣ, ಮಹಾಭಾರತ ಸಂದರ್ಭದಲ್ಲೇ ಸಿಂಹಾಸನ, ಪೀಠ, ಆಸನ ಎಂಬೆಲ್ಲಾ ಹೆಸರಲ್ಲಿ ಕುರ್ಚಿ ಸಾಕಷ್ಟು ಮಹತ್ವ ಪಡೆದುಕೊಂಡಿರುವುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗಿವೆ. ಆದರೆ, ಕಲಾ ಇತಿಹಾಸದ ಪುಟಗಳನ್ನು ತಿರುವಿದಾಗ ಹೆಚ್ಚು ಗಮನ ಸೆಳೆಯುವಂತೆ ಮಾಡುವುದು 1860ರಲ್ಲಿ ಫ್ರೆಂಚ್ ಇಂಪ್ರೇಶನಿಸ್ಟ್ ಎಡ್ಗರ್ ಡೇಗಾಸ್ ರಚಿಸಿರುವ Le Fauteuil ಶೀರ್ಷಿಕೆಯ ಕಲಾಕೃತಿ, 1888ರಲ್ಲಿ ಡಚ್ ಕಲಾವಿದ ವಿನ್ಸೆಂಟ್ ವ್ಯಾನ್ ಗೋ (Vincent van Gogh) ಚಿತ್ರಿಸಿದ Chair ಶೀರ್ಷಿಕೆಯ ಕಲಾಕೃತಿ, 1919ರಲ್ಲಿ ಫ್ರೆಂಚ್ ಕಲಾವಿದ ಹೆನ್ರಿ ಮ್ಯಾಥಿಸ್ (Henri Matisse) ರಚಿಸಿರುವ Lorrain chair ಶೀರ್ಷಿಕೆಯ ಕಲಾಕೃತಿ, 1961ರಲ್ಲಿ ಸ್ಪೆನಿಷ್ ಕಲಾವಿದ ಪಾಬ್ಲೊ ಪಿಕಾಸೊ (Pablo Picasso) ರಚಿಸಿರುವ Chair ಶೀರ್ಷಿಕೆಯ ಕಲಾಕೃತಿ, 1962ರಲ್ಲಿ ಜಪಾನ್ ಕಲಾವಿದೆ ಯಯೋಯಿ ಕುಸುಮಾ (Yayoi Kusuma) ರಚಿಸಿದ Accumulation No. 1 ಶೀರ್ಷಿಕೆಯ ಕಲಾಕೃತಿ, 1964ರಲ್ಲಿ ಜರ್ಮನಿಯ ಕಲಾವಿದ ಜೋಸೆಫ್ ಬ್ಯೂಸ್ (Joseph Beuys) ರಚಿಸಿರುವ Fat Chair ಶೀರ್ಷಿಕೆಯ ಕಲಾಕೃತಿ, 1965ರಲ್ಲಿ ಅಮೆರಿಕದ ಕಲಾವಿದ ಜೋಸೆಫ್ ಕೊಸುತ್ (Joseph Kosuth) ರಚಿಸಿರುವ One and Three Chairs ಶೀರ್ಷಿಕೆಯ ಕಲಾಕೃತಿ, 1971ರಲ್ಲಿ ಅಮೆರಿಕದ ಕಲಾವಿದ ಆಂಡಿ ವಾರ್ಹೋಲ್ (Andy Warhol) ರಚಿಸಿರುವ Electric Chair ಶೀರ್ಷಿಕೆಯ ಕಲಾಕೃತಿ, 2002ರಲ್ಲಿ ಅಮೆರಿಕದ ಕಲಾವಿದ ಟಾಮ್ ಫ್ರೀಡ್ಮನ್ (Tom Friedman) ರಚಿಸಿರುವ Wooden School Chair ಶೀರ್ಷಿಕೆಯ ಕಲಾಕೃತಿ, 2013ರಲ್ಲಿ ಜಪಾನ್ ಕಲಾವಿದ ತಡಶಿ ಕವಮಾತಾ (Tadashi Kawamata) ರಚಿಸಿರುವ Please Take a Seat ಶೀರ್ಷಿಕೆಯ ಕಲಾಕೃತಿಗಳು. ಇದಕ್ಕೂ ಮೊದಲು ಅಂದರೆ 1659ರಲ್ಲಿ ಸ್ಪೇನ್ನ ಡಿಗೊ ವೆಲಾಸ್ಕ್ವೆಜ್ (Diego Velasquez) ರಚಿಸಿರುವ Portrait of Prince Phillip Prospero ಶೀರ್ಷಿಕೆಯ ಕಲಾಕೃತಿಯಲ್ಲಿ ಬಳಸಿದ ಕುರ್ಚಿ ಕೂಡ ಆ ಕಾಲಘಟ್ಟದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಹೀಗೆ ಬೇರೆ ಬೇರೆ ಕಾಲಘಟ್ಟದಲ್ಲಿ ಕುರ್ಚಿಗೆ ಸಾಕಷ್ಟು ಮಹತ್ವನೀಡಿ ಕಲಾವಿದರು ಅನೇಕ ಕಲಾಕೃತಿಗಳನ್ನು ರಚಿಸಿರುವುದನ್ನು ಕಾಣಬಹುದು. ಇಲ್ಲೋರ್ವ ಖ್ಯಾತ ಕಲಾವಿದರ ಕಲಾಕೃತಿಯ ಬಗ್ಗೆ ಪ್ರಸ್ತಾಪಿಸಲೇಬೇಕು. ಅವರು ಚೀನಾದ ಐ ವೀವೀ (Ai Weiwei). ತಮ್ಮ ಕಲಾಕೃತಿಯ ಸಾಮಾಜಿಕ ಮತ್ತು ರಾಜಕೀಯ ಸಂದೇಶಗಳಿಗೆ ಕುರ್ಚಿಗಳನ್ನು ಊಹಿಸಲಾಗದ ರೀತಿಯಲ್ಲಿ ಬಳಸಿಕೊಂಡಿದ್ದಾರೆ.
ಇವೆಲ್ಲಾ ವಿದೇಶಿ ಕಲಾವಿದರ ಇತಿಹಾಸ ಎಂದು ಮೂಗು ಮುರಿಯುವಂತಿಲ್ಲ. ಭಾರತೀಯ ಕಲೆಯಲ್ಲೂ ಇಂತಹುದೇ ಮಹತ್ವ ಸಿಕ್ಕಿದೆ. ಸಾಂಪ್ರದಾಯಿಕ (Traditional), ಆಧುನಿಕ (Modern Art) ಮತ್ತು ಸಮಕಾಲೀನ (contemporary) ಕಲಾ ಪರಂಪರೆಯಲ್ಲೂ ಕುರ್ಚಿಯನ್ನು ಅನೇಕ ಕಲಾವಿದರು ವಸ್ತು ವಿಷಯವಾಗಿ ದುಡಿಸಿಕೊಂಡಿದ್ದಾರೆ. ರಾಜಕೀಯ ವಿದ್ಯಮಾನಗಳನ್ನು ಆಧರಿಸಿ ರಚಿಸಿರುವ ಅನೇಕ ಕಲಾಕೃತಿಗಳಲ್ಲಿ ಅಧಿಕಾರ ಮತ್ತು ದುರಹಂಕಾರವನ್ನು ಬಿಂಬಿಸಲು, ಬಲ ಮತ್ತು ದುರ್ಬಲತೆಗಳನ್ನು ಪ್ರತಿಬಿಂಬಿಸಲು ಹಾಗೂ ಇನ್ನೇನೇನೋ ವಿಚಾರಗಳನ್ನು ಅಭಿವ್ಯಕ್ತಿಸಲು ಕುರ್ಚಿಯನ್ನು ರೂಪಕವಾಗಿ (metaphor) ಬಳಸಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಇತ್ತೀಚಿನ ಅಂದರೆ, ಸಮಕಾಲೀನೋತ್ತರ (post-contemporary) ಸಂದರ್ಭದಲ್ಲಿಯೂ ಕುರ್ಚಿಯೊಂದು ಬಲುದೊಡ್ಡ ರೂಪಕವಾಗಿ ಬಳಕೆ ಆಗುತ್ತಿರುವುದನ್ನು ಕಾಣಬಹುದಾಗಿದೆ. ಭಾರತೀಯ ಆಧುನಿಕ ಸಂದರ್ಭದ ಕಲಾಕೃತಿಗಳನ್ನು ಗಮನಿಸುವುದಾದರೆ, ಅಂಜೋಲಿ ಎಲಾ ಮೆನನ್ (Anjolie Ela Menon) ಅವರು ತಮ್ಮ ಕಲಾಕೃತಿಗಳಲ್ಲಿ ಕುರ್ಚಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಖ್ಯಾತ ಕಲಾವಿದ ಸುಭೋದ್ ಗುಪ್ತಾ (Subodh Gupta) ಅವರು 2002ರಲ್ಲಿ ರಚಿಸಿದ IMPERIAL CHAIR ಶೀರ್ಷಿಕೆಯ ಕಲಾಕೃತಿಯನ್ನು ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದರು. ಹಾಗೆ, ಮೈಸೂರಿನವರಾದ ಎನ್.ಎಸ್. ಹರ್ಷ ಅವರು ಕೂಡ ತಮ್ಮ Emission Test ಶೀರ್ಷಿಕೆಯ ಕಲಾಕೃತಿಯಲ್ಲಿ ಬಹಳ ವಿಭಿನ್ನವಾಗಿ ಪ್ಲಾಸ್ಟಿಕ್ ಕುರ್ಚಿಗಳನ್ನು ಬಳಸಿಕೊಂಡಿದ್ದಾರೆ. ರಿಯಾಸ್ ಕೊಮು (Riyas Komu) ಅವರ OUT OF PLACE ಕಲಾಕೃತಿ, ಮಂಜುನಾಥ್ ಕಾಮತ್ (Manjunath Kamath) ಅವರ TEETH POLITICS ಶೀರ್ಷಿಕೆಯ ಕಲಾಕೃತಿ ಕೂಡ ಇದಕ್ಕೊಂದು ಉದಾಹರಣೆಯಾಗಿ ನಿಲ್ಲುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಸಮಕಾಲೀನ ಸಂದರ್ಭದ ಅನೇಕ ವಿಚಾರಗಳನ್ನು ಹೇಳುವ ಸಂದರ್ಭಗಳಲ್ಲಿ, ಅದರಲ್ಲೂ ರಾಜಕಾರಣದ ತಲ್ಲಣಗಳ ಬಗ್ಗೆ ತಮ್ಮ ಅಭಿವ್ಯಕ್ತಿಗೆ ವಿಭಿನ್ನ ಕುರ್ಚಿಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಗುಜರಾತ್ ಮೂಲದ ಮನ್ಸೂರ್ ಅಲಿ ಅವರು 2014ರಲ್ಲಿ ತಮ್ಮ ಚೊಚ್ಚಲ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಕುರ್ಚಿಯನ್ನು (The Anatomy of an Unknown Chair) ಬಹಳ ಅರ್ಥಪೂರ್ಣವಾಗಿ ಬಳಸಿಕೊಂಡಿದ್ದರು. ಕರ್ನಾಟಕದಲ್ಲಿಯೂ ಇಂತಹ ಒಂದಿಷ್ಟು ಪ್ರಯತ್ನಗಳು ನಡೆದಿವೆ. ಖ್ಯಾತ ಕಲಾವಿದರಾದ ದಿವಂಗತ ಯೂಸುಫ್ ಅರಕ್ಕಲ್ ಅವರು ತಮ್ಮ ಕಲಾಕೃತಿಗಳಲ್ಲಿ ಬಹಳ ಮಾರ್ಮಿಕವಾಗಿ ಬಳಸಿಕೊಂಡಿದ್ದರು. ಹಿರಿಯ ಕಲಾವಿದರಾದ ಚಿ.ಸು. ಕೃಷ್ಣ ಸೆಟ್ಟಿ, ಯುವ ಕಲಾವಿದರಾದ ವೇಣುಗೋಪಾಲ್ ವಿ.ಜಿ, ಗಣೇಶ್ ಧಾರೇಶ್ವರ್, ಮಂಜುನಾಥ್ ಹೊನ್ನಾಪುರ ಹೀಗೆ ಇನ್ನೂ ಅನೇಕ ಕಲಾವಿದರ ಕಲಾಕೃತಿಗಳಲ್ಲಿಯೂ ಕುರ್ಚಿ ಬಳಕೆ ಆಗಿರುವುದನ್ನು ಕಾಣಬಹುದಾಗಿದೆ.
