- ಮಂಜುನಾಥ ಅಜ್ಜಂಪುರ, ಗೌರವ ಸಂಪಾದಕ, “ವಾಯ್ಸ್ ಆಫ್ ಇಂಡಿಯಾ” ಕನ್ನಡ ಸರಣಿ
ಕಮ್ಯುನಿಸ್ಟ್ ಮಾಫಿಯಾ ಇತಿಹಾಸಕಾರರು ಭಾರತೀಯ ಅಸ್ಮಿತೆಗೆ ಮಾಡಿರುವ ಅನ್ಯಾಯಕ್ಕೆ ಇತಿಮಿತಿಯೇ ಇಲ್ಲ. ಇಸ್ಲಾಮೀ ದಾಳಿಕೋರರಿಗಿಂತ, ಬ್ರಿಟಿಷ್ ವಸಾಹತುಶಾಹೀ ರಾಕ್ಷಸರಿಗಿಂತ ಹೆಚ್ಚಿನ ಹಾನಿ ಮಾಡಿರುವವರು ಇವರೇ ಎನಿಸುತ್ತದೆ. ಎಂತೆಂತಹ ದಾಳಿ, ಆಕ್ರಮಣಗಳಾದಾಗಲೂ ಭಾರತೀಯ ಜನಮಾನಸವು ತನ್ನ ಸ್ವಾತಂತ್ರ್ಯಪ್ರೀತಿಯನ್ನು ಕಳೆದುಕೊಂಡಿರಲಿಲ್ಲ. ನಮ್ಮ ಹೋರಾಟವೂ ನಿರಂತರವಾಗಿತ್ತು. ಹಾಗೆ ನೋಡಿದರೆ, ಈ ಭಾರತದ್ರೋಹಿ ಕಮ್ಯುನಿಸ್ಟರು ಬುದ್ಧಿವಂತರೇ! ಸ್ವಾತಂತ್ರ್ಯಾನಂತರದ ಜವಾಹರಲಾಲರ ಮಂತ್ರಿಮಂಡಲದಲ್ಲಿ ಇವರು ತೆಗೆದುಕೊಂಡಿದ್ದು ಗೃಹಖಾತೆಯನ್ನೂ ಅಲ್ಲ, ಹಣಕಾಸನ್ನೂ ಅಲ್ಲ. ಅವರು ಲಗ್ಗೆ ಹಾಕಿದ್ದು ಶಿಕ್ಷಣ ಖಾತೆಗೆ. ಅದರ ಪ್ರಾಮುಖ್ಯ ಅಂದು ಯಾರಿಗೂ ಗೊತ್ತಿರಲಿಲ್ಲ, ಇಂದು ಸಹ ನಮಗೆ ಗೊತ್ತಿಲ್ಲ. ಅವರು ಇತಿಹಾಸ, ಸಮಾಜಶಾಸ್ತ್ರ, ರಾಜಕೀಯ ವಿಜ್ಞಾನ ಮೊದಲಾದ ಎಲ್ಲಾ ಜ್ಞಾನಶಾಖೆಗಳ ಪಠ್ಯ ಮತ್ತು ಪಠ್ಯಕ್ರಮಗಳನ್ನು ಬುಡಮೇಲು ಮಾಡಿಬಿಟ್ಟರು. ಕಳೆದ ಆರೇಳು ದಶಕಗಳಲ್ಲಿ ಭಾರತದ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಯಾರಿಗೂ ಭಾರತದ ಬಗೆಗೆ, ಭಾರತೀಯ ಸಮಾಜದ ಬಗೆಗೆ, ಹಿಂದೂಧರ್ಮದ ಬಗೆಗೆ ಒಳ್ಳೆಯ ಅಭಿಪ್ರಾಯ ರೂಪುಗೊಳ್ಳುವುದೇ ಇಲ್ಲ. “…..ಇಸ್ಲಾಮೀ ಆಕ್ರಮಣಕಾರಿಗಳೇ ಇಲ್ಲಿ ಸಮಾನತೆಯನ್ನು ತಂದರು. ಇಲ್ಲಿನ ಕಲೆ, ಸಾಹಿತ್ಯ, ಸಂಗೀತಗಳನ್ನು ಪೋಷಿಸಿದರು. ಅವರ ಆಡಳಿತವೆಂದರೆ, ಹಿಂದೂ ಮುಸ್ಲಿಂ ಭಾವೈಕ್ಯದ – ಸೌಹಾರ್ದದ ಕಾಲಯುಗ. ಇನ್ನು ಬ್ರಿಟಿಷರು ಇಲ್ಲಿ ಶಿಕ್ಷಣ, ಆಡಳಿತ, ರೈಲು, ರಸ್ತೆ, ಆಸ್ಪತ್ರೆಗಳನ್ನು ನಿರ್ಮಿಸಿದವರು – ರೂಪಿಸಿದವರು. ಇನ್ನು ನಮ್ಮ ಸನಾತನ ಧರ್ಮ ಮತ್ತು ಸಮಾಜಗಳೆಂದರೆ, ಕೇವಲ ಕೇವಲ ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆ, ಭೇದಭಾವ, ಸತಿ ಸಹಗಮನ, ಮೂಢನಂಬಿಕೆಗಳು ಮಾತ್ರವೇ…”. ಇದು ಏನೆಲ್ಲಾ ಮಾಡಿಬಿಟ್ಟಿದೆಯೆಂದರೆ, ಎಂತಹ ಮಾನಸಿಕತೆಯನ್ನು ರೂಪಿಸಿದೆಯೆಂದರೆ, ಎಲ್ಲ ರಾಜಕೀಯ ಪಕ್ಷಗಳೂ, ನ್ಯಾಯಾಲಯಗಳೂ, ವಿಶ್ವವಿದ್ಯಾನಿಲಯಗಳೂ ಈ ಹಾಡನ್ನೇ ಹಾಡಿವೆ, ಈಗಲೂ ಹಾಡುತ್ತಿವೆ.
“….ಎಲ್ಲೆಡೆ ಜೈನ – ಬೌದ್ಧ ವಿಹಾರಗಳನ್ನು ಧ್ವಂಸ ಮಾಡಿದವರು ಹಿಂದೂಗಳೇ. ಬೌದ್ಧ ಮತವನ್ನು ಭಾರತದಲ್ಲಿ ನಿರ್ಮೂಲ ಮಾಡಿದ್ದು ಹಿಂದೂಗಳೇ….” ಇತ್ಯಾದಿ, ಇತ್ಯಾದಿ. ಯಾರೆಷ್ಟೇ ಸತ್ಯನಿಷ್ಠ ಪುರಾವೆಗಳನ್ನು ಒದಗಿಸಿದರೂ ಯಾರೂ ಈ ಮಾನಸಿಕತೆಯಿಂದ ಪಾರಾಗಿಲ್ಲ. ಡಾ || ಬಿ.ಆರ್. ಅಂಬೇಡ್ಕರ್ ಅವರು ತಜ್ಞ ಲೇಖಕರು, ಸಂಶೋಧಕರು, ಚಿಂತಕರು.
ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿರುವ “ಡಾ || ಬಾಬಾಸಾಹೇಬ್ ಅಂಬೇಡ್ಕರ್: ಲೇಖನಗಳು ಮತ್ತು ಭಾಷಣಗಳು, ಸಂಪುಟ 3, “ಬೌದ್ಧಮತದ ಪತನ ಮತ್ತು ಅವಸಾನ” (ಇಂಗ್ಲಿಷ್ ಆವೃತ್ತಿಯ ಪುಟ 229ರಿಂದ 238) ಲೇಖನದಲ್ಲಿ ಈ ವಿವರ ಓದಬಹುದು:
“ಭಾರತದಲ್ಲಿ ಬೌದ್ಧಮತದ ಅಳಿವಿಗೆ, ವಿನಾಶಕ್ಕೆ ಮುಸ್ಲಿಮರ ಆಕ್ರಮಣಗಳೇ ಕಾರಣ ಎನ್ನುವುದರಲ್ಲಿ ಯಾವ ಸಂದೇಹವೂ ಬೇಡ. ‘ಬುತ್’ಗೆ ಇಸ್ಲಾಂ ಶತ್ರುವಾಯಿತು. ‘ಬುತ್’ ಎಂದರೆ ಅರೇಬಿಕ್ ಭಾಷೆಯಲ್ಲಿ ‘ವಿಗ್ರಹ’. ಅದು ‘ಬುದ್ಧ’ ಪದದ ಅಪಭ್ರಂಶ. ಈ ಪದದ ಮೂಲವೇ ಹೇಳುವಂತೆ, ಮುಸ್ಲಿಮರಿಗೆ ವಿಗ್ರಹಾರಾಧನೆ ಎಂದರೆ ಬೌದ್ಧಮತವೇ ಕಣ್ಣೆದುರಿಗೆ ಮೂಡುತ್ತದೆ. ಅವರಿಗೆ ಅವೆರಡೂ ಒಂದೇ ಎನ್ನಿಸುತ್ತದೆ. ಇಸ್ಲಾಮಿನ ವಿಗ್ರಹಭಂಜನೆಯ ಸಿದ್ಧಾಂತವು, ಮುಸ್ಲಿಮರಿಗೆ ಬೌದ್ಧಮತವನ್ನು ನಾಶಪಡಿಸುವ ಸಿದ್ಧಾಂತವೇ ಆಗಿಬಿಟ್ಟಿತು. ಬರಿಯ ಭಾರತದಲ್ಲಿ ಮಾತ್ರವಲ್ಲ, ಇಸ್ಲಾಂ ಹೆಜ್ಜೆಯಿಟ್ಟ ಕಡೆಯೆಲ್ಲಾ ಬೌದ್ಧಮತವು ನಾಶವಾಯಿತು. ಬ್ಯಾಕ್ಟ್ರಿಯಾ, ಪಾರ್ಥಿಯಾ, ಅಫ್ಘಾನಿಸ್ಥಾನ, ಗಾಂಧಾರ, ಚೈನಾದ ಟರ್ಕೆಸ್ಥಾನ, ಅಷ್ಟೇಕೆ, ಈ ಇಸ್ಲಾಂ ಕಾಲಿಡುವ ಮೊದಲು ಇಡಿಯ ಏಷ್ಯಾ ಖಂಡದ ಮತಧರ್ಮವು ಬೌದ್ಧಮತವೇ ಆಗಿತ್ತು….”
“ಇಸ್ಲಾಮಿನ ದಾಳಿ ಬೌದ್ಧಮತಕ್ಕೆ ಮಾತ್ರ ಸೀಮಿತಗೊಳ್ಳದೆ ಹಿಂದೂಧರ್ಮದ ಮೇಲೂ ಆಯಿತು. ಹಾಗಿದ್ದಲ್ಲಿ, ಭಾರತದಲ್ಲಿ ಬೌದ್ಧಮತ ನಾಶವಾದರೂ, ಹಿಂದೂಧರ್ಮ ಉಳಿಯಿತಾದರೂ ಹೇಗೆ? ಹಿಂದೂಧರ್ಮಕ್ಕೆ ಪ್ರಭುತ್ವದ ಪೋಷಣೆ-ಸಹಕಾರಗಳಿದ್ದವು. ಇಸ್ಲಾಮಿನ ಪ್ರವೇಶವಾಗುತ್ತಿದ್ದಂತೆಯೇ, ಈ ಬೌದ್ಧರೆಲ್ಲಾ ಮುಸ್ಲಿಮರಾಗಿ ಮತಾಂತರಗೊಂಡರು. ಹೀಗಾಗಿ ಬೌದ್ಧರ ಸಂಖ್ಯೆ ಕ್ಷೀಣಿಸಿ, ಮುಸ್ಲಿಮರ ಸಂಖ್ಯೆ ಹೆಚ್ಚುತ್ತಾಹೋಯಿತು. ಇಲ್ಲಿ ಮುಖ್ಯವಾದುದೆಂದರೆ, ಮುಸ್ಲಿಂ ಆಕ್ರಮಣಕಾರಿಗಳು ಬ್ರಾಹ್ಮಣರನ್ನೂ ಕೊಂದುಹಾಕಿದರು, ಬೌದ್ಧಸನ್ಯಾಸಿಗಳನ್ನೂ ಕೊಂದುಹಾಕಿದರು. ಆದರೆ ಎರಡೂ ಧರ್ಮಗಳ ಪುರೋಹಿತಶಾಹಿಯ ಕ್ರಮದಲ್ಲಿ ವ್ಯತ್ಯಾಸವಿತ್ತು. ಈ ಮಹತ್ತ್ವದ ವ್ಯತ್ಯಾಸದಿಂದಲೇ ಬೌದ್ಧಮತ ನಾಶವಾದರೂ ಬ್ರಾಹ್ಮಣಧರ್ಮ ಉಳಿಯಲು ಸಾಧ್ಯವಾಯಿತು. ಹಿಂದೂಗಳಿಗೆ ಪ್ರತಿಯೊಬ್ಬ ಬ್ರಾಹ್ಮಣನೂ ಪುರೋಹಿತನೇ. ದೀಕ್ಷೆ ಪಡೆದಿರಬೇಕೆಂದೇನೂ ಇಲ್ಲ. ಎಲ್ಲ ಹಿಂದೂಗಳ ಮನೆಯಲ್ಲಿಯೂ ಮಂತ್ರೋಚ್ಚಾರಣೆ, ನೈವೇದ್ಯ, ಯಾತ್ರೆಗಳಿಗೆ ಹೋಗುವುದು ಮುಂತಾದ ಆಚರಣೆಗಳು ಇದ್ದೇ ಇರುತ್ತವೆ. ಪ್ರತಿಯೊಂದು ಬ್ರಾಹ್ಮಣ ಕುಟುಂಬವೂ ಯಾವುದಾದರೊಂದು ವೇದಪಠಣ ಮಾಡುವ ಅಭ್ಯಾಸ ಮುಂದುವರಿಸಿಕೊಂಡು ಬಂದಿರುತ್ತದೆ. ತದ್ವಿರುದ್ಧವಾಗಿ, ಬೌದ್ಧಮತವು ಬೌದ್ಧಸನ್ಯಾಸಿ ವರ್ಗಕ್ಕೆ ಮಾತ್ರ ದೀಕ್ಷಾ ಪದ್ಧತಿ, ತರಬೇತಿಗಳನ್ನು ನೀಡುವುದನ್ನು ಬೆಳೆಸಿಕೊಂಡು ಬಂದಿತು. ಹಾಗಾಗಿ ಮುಸ್ಲಿಂ ಆಕ್ರಮಣಕಾರಿಗಳು ಬ್ರಾಹ್ಮಣರ ಕಗ್ಗೊಲೆ ಮಾಡಿದರೂ ಹಿಂದೂಧರ್ಮ ಉಳಿಯಿತು. ಮುಸ್ಲಿಮರ ದಾಳಿಗೆ ಸಿಕ್ಕಿದ ಬೌದ್ಧಸನ್ಯಾಸಿಗಳ ಕಗ್ಗೊಲೆಯಾದಾಗ, ಇಡೀ ಬೌದ್ಧಮತದ ಕಗ್ಗೊಲೆಯೇ ಆಗಿಬಿಟ್ಟಿತು”.
ಬೌದ್ಧಮತೀಯರ ಕಗ್ಗೊಲೆ ಮತ್ತು ಅವರ ಬೌದ್ಧವಿಹಾರಗಳ – ವಿಶ್ವವಿದ್ಯಾನಿಲಯಗಳ – ದೇವಾಲಯಗಳ ವಿಧ್ವಂಸ – ವಿನಾಶ ಕುರಿತು, ಅಂಬೇಡ್ಕರ್ ಹೀಗೆ ಹೇಳುತ್ತಾರೆ:
“ಸುವಿಖ್ಯಾತ ಬೌದ್ಧ ವಿಶ್ವವಿದ್ಯಾನಿಲಯಗಳಾದ ನಳಂದ, ವಿಕ್ರಮಶಿಲಾ, ಜಗದ್ದಾಲ, ಓದಂತಪುರಿ ಮುಂತಾದ ಅನೇಕ ವಿಶ್ವವಿದ್ಯಾನಿಲಯಗಳನ್ನು ಮುಸ್ಲಿಂ ಆಕ್ರಮಣಕಾರಿಗಳು ಧ್ವಂಸ ಮಾಡಿದರು. ದೇಶದಾದ್ಯಂತ ಹರಡಿಕೊಂಡಿದ್ದ ಬೌದ್ಧದೇವಾಲಯಗಳನ್ನು ನೆಲಸಮ ಮಾಡಿದರು. ಜೀವ ಉಳಿಸಿಕೊಳ್ಳಲು ಸಾವಿರಾರು ಜನ ಬೌದ್ಧಸನ್ಯಾಸಿಗಳು ನೇಪಾಳ, ಟಿಬೆಟ್ ಮುಂತಾದ ಕಡೆ ಓಡಿಹೋದರು. ಆದರೂ ಬಹಳ ದೊಡ್ಡ ಸಂಖ್ಯೆಯ ಬೌದ್ಧಸನ್ಯಾಸಿಗಳು ಮುಸ್ಲಿಮರಿಂದ ಕೊಲ್ಲಲ್ಪಟ್ಟರು. ಮುಸ್ಲಿಂ ಆಕ್ರಮಣಕಾರಿಗಳ ಖಡ್ಗಗಳಿಗೆ ಸಿಕ್ಕಿ ಹೇಗೆ ಬೌದ್ಧಸನ್ಯಾಸಿಗಳು ಕಗ್ಗೊಲೆಯಾದರೆಂಬುದನ್ನು, ಮುಸ್ಲಿಂ ಇತಿಹಾಸಕಾರರೇ ದಾಖಲಿಸಿದ್ದಾರೆ, ಬರೆದಿಟ್ಟಿದ್ದಾರೆ. ಸಾಮಾನ್ಯ ಯುಗದ (Common Era) 1197ರಲ್ಲಿ ಬಿಹಾರದಲ್ಲಿ ನಡೆದ ಆಕ್ರಮಣ, ನರಹತ್ಯೆ, ಲೂಟಿಗಳ ದಾಖಲೆಗಳನ್ನು ಸಂಗ್ರಹಿಸಿದ, ಇತಿಹಾಸಕಾರರಾದ ವಿನ್ಸೆಂಟ್ ಸ್ಮಿತ್ ಹೀಗೆ ಹೇಳಿದ್ದಾರೆ: “…..ಅಗಾಧ ಪ್ರಮಾಣದ ಐಶ್ವರ್ಯದ ಲೂಟಿ ಸಂಗ್ರಹವಾಗಿತ್ತು. ತಲೆ ಬೋಳಿಸಿದ ಬೌದ್ಧ ಸನ್ಯಾಸಿಗಳ ತಲೆಬುರುಡೆಗಳು ಅದೆಷ್ಟು ರಾಶಿರಾಶಿ ಬಿದ್ದಿದ್ದುವೆಂದರೆ, ವಿಶ್ವವಿದ್ಯಾನಿಲಯಗಳ ಗ್ರಂಥಾಲಯಗಳಲ್ಲಿದ್ದ ಪುಸ್ತಕಗಳಲ್ಲಿ ಏನಿದೆ ಎಂದು ಓದಿ ಹೇಳುವ ಒಬ್ಬನೇ ಒಬ್ಬ ಮನುಷ್ಯನೂ ಸಿಕ್ಕುತ್ತಿರಲಿಲ್ಲ, ಆ ರೀತಿಯಲ್ಲಿ ಬೌದ್ಧ ಸನ್ಯಾಸಿಗಳ ಮೂಲೋತ್ಪಾಟನೆ ಮಾಡಲಾಗಿತ್ತು….”. “…. (ಮುಸ್ಲಿಂ ಇತಿಹಾಸಕಾರರ ನುಡಿಗಳಲ್ಲಿ) ಅಲ್ಲಿ ಏನಿತ್ತು ಎಂದಾಗ ಅದು ಬೌದ್ಧ ವಿಹಾರ ಮತ್ತು ಬೌದ್ಧ ವಿಶ್ವವಿದ್ಯಾನಿಲಯ ಇದ್ದ ದೊಡ್ಡ ನಗರದ ಕೋಟೆಯ ಒಳಭಾಗ ಎಂಬುದು ತಿಳಿಯಿತು…..”. “…….ಹಾಗಿತ್ತು ಮುಸ್ಲಿಂ ಆಕ್ರಮಣಕಾರಿಗಳು ಬೌದ್ಧ ಸನ್ಯಾಸಿಗಳ ಮೇಲೆ ನಡೆಸಿದ ದೌರ್ಜನ್ಯ, ಹಿಂಸೆ, ನರಹತ್ಯೆ. ಕೊಡಲಿಯ ಏಟು ಮೂಲಕ್ಕೇ ಬಿದ್ದಿತ್ತು. ಹೀಗೆ ಬೌದ್ಧ ಸನ್ಯಾಸಿಗಳನ್ನು ಪೂರ್ಣವಾಗಿ ಕೊಂದುಹಾಕುವುದರ ಮೂಲಕ ಇಸ್ಲಾಂ ಮತವು ಬೌದ್ಧಮತವನ್ನೇ ನಾಶಮಾಡಿಬಿಟ್ಟಿತು. ಭಾರತದಲ್ಲಿ ಬೌದ್ಧಮತ ನೆಲಸಮವಾಗಲು, ನಿಶ್ಶೇಷವಾಗಲು ಈ ಮಹಾನ್ ದುರಂತವೇ ಕಾರಣ….”.
ಡಾ || ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ತಜ್ಞರು, ಆರ್ಥಿಕ ತಜ್ಞರು ಅಷ್ಟೇ ಅಲ್ಲ. ಮಹತ್ತ್ವದ ಇತಿಹಾಸಕಾರರೂ ಆಗಿದ್ದರು. ಅವರ ಈ ಮೇಲಿನ ಸಾಲುಗಳು ಮಹತ್ತ್ವದ ದಾಖಲೆಗಳೂ ಹೌದು. ಹೀಗಿದ್ದೂ ಈ ಎಲ್ಲ ಸಂಗತಿಗಳನ್ನೂ, ಅವರು ಸಲಹೆ ನೀಡಿದ ಭಾರತ ಮತ್ತು ನಿಯೋಜಿತ ಪಾಕಿಸ್ತಾನಗಳಲ್ಲಿ ಮಾಡಬೇಕಾಗಿದ್ದ ಹಿಂದೂ – ಮುಸ್ಲಿಂ ಜನಸಂಖ್ಯಾ ವಿನಿಮಯವನ್ನೂ, ನಮ್ಮ ಮಾಫಿಯಾ ಇತಿಹಾಸಕಾರರು ಉಲ್ಲೇಖಿಸುವುದೇ ಇಲ್ಲ. ಕರ್ನಾಟಕದಲ್ಲಿಯೂ ಕಮ್ಯುನಿಸ್ಟರು ಮತ್ತು ಸಮಾಜವಾದಿಗಳು ಅಂಬೇಡ್ಕರ್ ಅವರ ಈ ಎಲ್ಲ ಸಂಗತಿಗಳನ್ನು ಮರೆಮಾಚಿ, ಕೇವಲ ಹಿಂದೂಧರ್ಮದ ಬಗೆಗಿನ ಅವರ ಟೀಕೆಗಳನ್ನು ಮಾತ್ರವೇ ಹೇಳುತ್ತಾ ಬಂದಿದ್ದಾರೆ. ಕೆಲವರು ಆಗಾಗ ಆದಿಶಂಕರರೇ ನಾಗಾರ್ಜುನ ಕೊಂಡದಲ್ಲಿ ಬೌದ್ಧ ವಿಹಾರಗಳನ್ನು ನೆಲಸಮ ಮಾಡಿದರು ಇತ್ಯಾದಿ ಗಳಹುವುದಿದೆ. ಇಂತಹ ಅಬದ್ಧಗಳನ್ನೇ ಉದುರಿಸುತ್ತಾ ಬಂದಿರುವ ಅಂತಹ ‘ಸೋಕಾಲ್ಡ್’ ಸಾಹಿತಿಗಳು ಯಾವ ಪುರಾವೆಗಳನ್ನೂ ನೀಡುವುದಿಲ್ಲ ಮತ್ತು ಯಾವ ಸಾಕ್ಷ್ಯಾಧಾರಗಳಿಗೂ ಉತ್ತರಿಸುವುದಿಲ್ಲ.
ತುಂಬ ಸರಳವಾದ ಸಂಗತಿಯೆಂದರೆ, ಶಂಕರರ ಬಳಿ ಅಂತಹ ಸಜ್ಜಿತ ವಿಧ್ವಂಸಕ ಪಡೆ ಇತ್ತೇ? ಭಾರತಾದ್ಯಂತ ಪ್ರವಾಸ ಮಾಡಿದ ಅವರು, ತಮ್ಮ ಶಿಷ್ಯರಲ್ಲದೇ ಇಂತಹ ವಿಧ್ವಂಸಕರನ್ನೂ ಕರೆದೊಯ್ಯುತ್ತಿದ್ದರೇ? ಹಾರೆ, ಪಿಕಾಸಿ ಇತ್ಯಾದಿ ಸಾಧನಗಳೂ ಅವರ ಬಳಿ ಇದ್ದವೇ? ‘ಸೋಕಾಲ್ಡ್’ ಸಾಹಿತಿಗಳು ಆಗಾಗ ಹಿಂದೂ – ದ್ವೇಷದಿಂದ ಅಸತ್ಯಗಳನ್ನು ಒದರುವುದು, ಮಾಧ್ಯಮಗಳು ಅವರಿಗೆ ಪ್ರಚಾರ ನೀಡುವುದು ಮತ್ತು ‘ಜನಪರ’ ಸರ್ಕಾರಗಳು ಅವರಿಗೆ ವಿಶೇಷ ಪೊಲೀಸ್ ಭದ್ರತೆ ನೀಡುವುದು ಇಂತಹುದು ನಡೆಯುತ್ತಲೇ ಇದೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಬೇರೆಡೆಯೂ ನಡೆಯುತ್ತಿದೆ.
ನೋಡಿ, ನಮ್ಮದೇ ಹಂಪಿಯಿದೆ. ಅದೊಂದು ಅದ್ಭುತ ನಗರಿಯಾಗಿತ್ತು. ಅಲ್ಲಿ ಬೃಹತ್ ಗಾತ್ರದ ನೂರಾರು ಅರಮನೆಗಳು, ದೇವಾಲಯಗಳು ಇದ್ದವು. ಜಿಹಾದಿಗಳು ಅಲ್ಲಿ ಅನೇಕ ತಿಂಗಳ ಕಾಲ ಎಲ್ಲವನ್ನೂ ಧ್ವಂಸ ಮಾಡಿದರು, ಸುಟ್ಟು ಹಾಕಿದರು. ವಿಜಯವಿಠ್ಠಲ ದೇವಾಲಯ ಅದೆಂತಹ ಭಾರೀ ನಿರ್ಮಾಣ ಎಂದರೆ ಹಾರೆ, ಪಿಕಾಸಿ ಇತ್ಯಾದಿ ಸಾಧನಗಳೂ ಸಾಲದೇ ಮರದ ದೊಡ್ಡ ತೊಲೆಗಳನ್ನೂ ಬಳಸಿದರು. ಆದರೂ, ಕಂಬಗಳು ಮತ್ತು ಮೇಲ್ಭಾಗದಿಂದ ಭಾರೀ ಗಾತ್ರದ ಕಲ್ಲಿನ ತೊಲೆಗಳು ಬೀಳುತ್ತವೆ, ಎಂದಾಗ ಹೆದರಿ ಧ್ವಂಸಕಾರ್ಯವನ್ನು ನಿಲ್ಲಿಸಿ ಓಡಿಹೋದರು. ರಾಜಸ್ಥಾನದ ಮೇವಾಡ ಸಂಸ್ಥಾನದ ಪಾತ್ರ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬಹಳ ಪ್ರಧಾನವಾದುದು. ಚಿತ್ತೋರಗಢವು ರಾಜಧಾನಿಯಾಗಿತ್ತು. ವಿದೇಶೀ ಆಕ್ರಮಣಕಾರಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ, ಸಾಮಾನ್ಯ ಯುಗದ 1440ರಲ್ಲಿ ಗೆಲುವು ಸಾಧಿಸಿದ ಮಹಾರಾಣಾ ಕುಂಭನು ಒಂಬತ್ತು ಅಂತಸ್ತುಗಳ ಅತ್ಯದ್ಭುತವಾದ ವಿಜಯ ಸ್ತಂಭವನ್ನು ನಿರ್ಮಿಸಿದ. ಅದೊಂದು ವಿಶಿಷ್ಟ ಶಿಲ್ಪಕಲಾಕೃತಿ. ಯುದ್ಧ ಗೆದ್ದ ಅನಂತರ, ಅಕ್ಬರನು ಸಾಮಾನ್ಯ ಯುಗದ 1568ರಲ್ಲಿ ಇಡೀ ಚಿತ್ತೋರಗಢವನ್ನು ಅರಮನೆ ಕೋಟೆ ಇತ್ಯಾದಿ ಎಲ್ಲವನ್ನೂ ಸುಟ್ಟುಹಾಕಿದ, ಧ್ವಂಸ ಮಾಡಿದ. ಆದರೆ, ಈ ಭವ್ಯದಿವ್ಯ ವಿಜಯಸ್ತಂಭವನ್ನು ಏನೂ ಮಾಡಲಾಗಲಿಲ್ಲ. 122 ಅಡಿಗಳ, ಒಂಬತ್ತು ಅಂತಸ್ತಿನ ಈ ಶಿಲಾನಿರ್ಮಾಣವನ್ನು ಧ್ವಂಸ ಮಾಡಲು ಹೊರಟಿದ್ದರೆ, ಅದು ವಿಧ್ವಂಸಕರ ಮೇಲೆಯೇ ಬೀಳುತ್ತದೆ. ಹಾಗಾಗಿ ಈ ನಿರ್ಮಾಣವು ಈಗಲೂ ಹಾಗೆಯೇ ಇದೆ. ಸಾರಾಂಶ ಇಷ್ಟೇ. ವಿಧ್ವಂಸಕ್ಕೆ ಅನೇಕ ಸಾಧನಗಳು ಬೇಕು ಮತ್ತು ಕೆಲವು ನಿರ್ಮಾಣಗಳಿಗೆ ಅಂತಹ ಸಾಧನಗಳು ಇದ್ದರೂ ಧ್ವಂಸಕಾರ್ಯ ಸುಲಭವಲ್ಲ. ವಿಗ್ರಹಾರಾಧನೆಯನ್ನು ಇಸ್ಲಾಂ ವಿರೋಧಿಸುತ್ತದೆ ಮತ್ತು ನಾಶ ಮಾಡಲು ಆದೇಶ ನೀಡಿದೆ. ಹೀಗಿದ್ದೂ ಕೆಲವು ಶಿಲಾನಿರ್ಮಾಣಗಳು ಈಗಲೂ ಉಳಿದಿವೆ ಎಂದರೆ, ಅದು ಜಿಹಾದಿಗಳ ಔದಾರ್ಯದಿಂದಲ್ಲ, ಅವರಿಗೆ ಧ್ವಂಸ ಮಾಡಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ. ಶಂಕರರು ಬೌದ್ಧ ಮತ್ತು ಇನ್ನಿತರ ಅವೈದಿಕ ಮತಗಳನ್ನು ಸೈದ್ಧಾಂತಿಕವಾಗಿ, ಶಾಸ್ತ್ರಾಧಾರಿತ ವಾದದಿಂದ ಎದುರಿಸಿದರೇ ಹೊರತು, ಅವರು ಬೌದ್ಧವಿಹಾರಗಳನ್ನು ಸ್ವತಃ ಕೆಡವಿದರು, ಧ್ವಂಸ ಮಾಡಿದರು, ಎಂಬ ವಾದವು ಅವೈಜ್ಞಾನಿಕವಾದುದು ಮತ್ತು ಅಸತ್ಯದ ಪರಮಾವಧಿ. ಸರಿಯಾದ ಮತ್ತು ಪುರಾವೆಗಳ ಆಧಾರದ ನಿಜ – ಇತಿಹಾಸ ನಮ್ಮ ಶಾಲಾ ಕಾಲೇಜುಗಳ ಇತಿಹಾಸ ಪಠ್ಯಕ್ರಮದಲ್ಲಿ ಬೆಳಗಬೇಕು.
