ಅಂಕಣ – ಸ್ವಾಸ್ಥ್ಯ ಸಂಪದ
- ಡಾ. ಶ್ರೀವತ್ಸ ಭಾರದ್ವಾಜ, ದತ್ತಂ ಆಯುರ್ಧಾಮ, ಮಂಗಳೂರು
“ಸರ್ ನನಗೆ ನಿಂತರೆ, ಕೂತರೆ, ಮಾತಾಡುತ್ತಿದ್ದರೆ, ಓದುತ್ತಿದ್ದರೆ, ಟಿ.ವಿ ನೋಡುತ್ತಿದ್ದರೆ ಅಲ್ಲಿಯೇ ನಿದ್ದೆ ಬರುತ್ತದೆ. ನಿದ್ದೆ ಒಂದೇ ಅಲ್ಲ, ಚೆನ್ನಾಗಿ ಗೊರಕೆ ಹೊಡೆಯುವ ಮಟ್ಟಕ್ಕೆ ನಿದ್ದೆ ಬರುತ್ತದೆ. ಅಷ್ಟೇ ಅಲ್ಲ, ರಾತ್ರಿ ಹತ್ತು ಘಂಟೆಗೆ ನಿದ್ದೆ ಶುರು ಮಾಡಿದ್ರೆ ಬೆಳಗ್ಗೆ ಏಳೋದೇ ಏಳು ಘಂಟೆಗೆ. ಇಷ್ಟಾದರೂ ನಿದ್ದೆ ನನ್ನ ಬೆನ್ನು ಬಿಡಲ್ಲ, ಏನಾದರೂ ನಿದ್ದೆ ಬಾರದ ಹಾಗೆ ಔಷಧ ಕೊಡಿ” ಎಂದು ಕೇಳಿಕೊಂಡು ಒಬ್ಬ ವ್ಯಕ್ತಿ ಬಂದಿದ್ದ. ವಿಪರ್ಯಾಸ ನೋಡಿ, ನಿದ್ದೆ ಬರುತ್ತಿಲ್ಲ ಎಂದು ಅನೇಕರು ಔಷಧ ತಿಂದರೆ ಇನ್ನು ಉಳಿದವರು ನಿದ್ದೆ ಹೆಚ್ಚಾಗಿ ಕಡಿಮೆ ಮಾಡಲು ಉಪಾಯವನ್ನು ಹುಡುಕುತ್ತಾರೆ ನೋಡಿ.
ನಿದ್ದೆ ಪ್ರತಿಜೀವಿಗೂ ಅತ್ಯಗತ್ಯ. ಹಿಂದೆಲ್ಲಾ ನಿದ್ದೆ ಮಾಡುವವರನ್ನು ನೋಡಿದರೆ “ಇಡೀ ದಿನ ನಿದ್ದೆ ಮಾಡುತ್ತಿರುತ್ತಾನೆ ಸೋಮಾರಿ!” ಎಂದು ಹೇಳುತ್ತಿದ್ದರು. ಅದೇ ಈಗ ನಿದ್ರಿಸುವವನನ್ನು ನೋಡಿದರೆ “ನಿದ್ದೆ ಮಾಡಲೂ ಯೋಗ ಬೇಕಪ್ಪಾ! ಅವನು ಪುಣ್ಯವಂತ” ಎಂದು ಹೇಳುವ ಮಟ್ಟಕ್ಕೆ ಬಂದಿದೆ. ಅಂದರೆ ನಿದ್ದೆಯನ್ನು ನೋಡಿಕೊಂಡು ಸೋಮಾರಿಯೋ ಅಲ್ಲವೋ ಎಂದು ತೀರ್ಮಾನಿಸುವ ಹೋಲಿಕೆ ಮೊದಲಿಂದಲೂ ನಡೆಯುತ್ತಾ ಬಂದಿದೆ. ನಿದ್ದೆ ಇಲ್ಲದವನಿಗೆ ನಿದ್ದೆಯ ಬೆಲೆ ಗೊತ್ತಿದ್ದರೆ ಅಧಿಕ ನಿದ್ರಿಸುವವನಿಗೆ ಅದರಿಂದಾಗುವ ಮುಜುಗರದ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ನಿದ್ದೆ ಬೀಳದಿರುವುದರಿಂದ ಎಷ್ಟು ರೋಗ ಉತ್ಪಾದನೆಯಾಗುತ್ತದೆಯೋ ಅಷ್ಟೇ ಹಾನಿಕಾರಕ ಹೆಚ್ಚು ನಿದ್ದೆ ಮಾಡುವುದು ಕೂಡ. ಅಲ್ಲಲ್ಲಿ ತೂಕಡಿಸುವುದು ಏತಕ್ಕೆ? ಈ ಸಮಸ್ಯೆಗೆ ಪರಿಹಾರ ಏನು ಎಂದು ನೋಡುವ ಬನ್ನಿ.
ನಮ್ಮ ಆಹಾರ, ವಿಹಾರ, ವಿರಾಮಗಳ ಪ್ರಭಾವದಿಂದಾಗಿ ನಮ್ಮ ನಿದ್ದೆಯ ಸಮಯ ಬದಲಾಗುತ್ತದೆ. ವ್ಯಾಯಾಮ ಮಾಡದಿರುವುದು, ಅಧಿಕ ಮೊಬೈಲ್ – ಕಂಪ್ಯೂಟರ್ ನೋಡುವುದು, ರಾತ್ರಿ ವೇಳೆ ಹೆಚ್ಚಾಗಿ ವಾಹನ ಚಲಾಯಿಸುವುದು, ಆತಂಕ – ಭಯದಲ್ಲಿರುವುದು, ಜೀರ್ಣಿಸಲು ಕಷ್ಟವಾದ ಆಹಾರ ಸೇವಿಸುವುದು- ಉದಾಹರಣೆಗೆ ಮೈದಾ, ಪಾಲಿಶ್ ಮಾಡಿದ ಅಕ್ಕಿ, ಎಣ್ಣೆಯಿಂದ ಕರಿದ ಆಹಾರ, ಸಕ್ಕರೆ, ಬಾಂಬೆ ರವೆ, ತಡರಾತ್ರಿ ಊಟ ಮಾಡುವುದು, ಮಾಂಸಾಹಾರ, ಮದ್ಯಪಾನ, ಆಗಾಗ ತಿನ್ನುವುದು, ಹಸಿವು ಇಲ್ಲದೇ ಇದ್ದರೂ ತಿನ್ನುವುದು ಇತ್ಯಾದಿ ಆಹಾರಕ್ರಮದಿಂದಾಗಿ ತಿಂದ ಆಹಾರವು ಸರಿಯಾಗಿ ಜೀರ್ಣವಾಗದೇ ಹೊಟ್ಟೆಯಲ್ಲೇ ಉಳಿದು, ಕೊಳೆತು ಜೀರ್ಣವಾಗುತ್ತದೆ. ಇದರಿಂದ ಮಲಬದ್ಧತೆಯು ಪ್ರಾರಂಭವಾಗಿ, ರಕ್ತದಲ್ಲಿ ಕಫದ ಅಂಶ ಹೆಚ್ಚಾಗಿ ದೇಹಕ್ಕೆ ಜಡತ್ವ ಶುರುವಾಗುತ್ತದೆ. ಈ ಸಂದರ್ಭದಲ್ಲಿ ಆಲಸ್ಯ, ನಿರುತ್ಸಾಹ ಮತ್ತು ನಿದ್ದೆ ನಮ್ಮ ಬೆನ್ನು ಹಿಡಿಯುತ್ತದೆ.
● ಮೊತ್ತಮೊದಲಿಗೆ ಬಿಸಿನೀರನ್ನು ಕುಡಿಯುವ ಅಭ್ಯಾಸ ರೂಢಿ ಮಾಡಿಕೊಳ್ಳಿರಿ.
● ಹಗಲು ನಿದ್ದೆ ಮಾಡುವುದನ್ನು ನಿಷೇಧಿಸಿರಿ.
● ಬಿಸಿನೀರಿಗೆ ಲಿಂಬೆರಸವನ್ನು ಬೆರೆಸಿ ಕುಡಿಯಿರಿ.
● ಮಲಬದ್ಧತೆಯ ನಿವಾರಣೆಮಾಡಲು ನಾರುಯುಕ್ತ, ನೀರುಯುಕ್ತ ಆಹಾರ ಸೇವಿಸಿರಿ.
● ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದನ್ನು ಕಡಿಮೆಮಾಡಿ.
● ನಿದ್ದೆ ಬರುವ ಸಂದರ್ಭದಲ್ಲಿ ದೀರ್ಘ ಉಸಿರಾಟ ಮಾಡಿ.
● ರಾತ್ರಿ ವೇಳೆ ವಾಹನ ಚಲಾಯಿಸುವುದನ್ನು ಕಡಿಮೆ ಮಾಡಿ.
● ದಾಳಿಂಬೆ, ಮೂಸಂಬಿ, ಕಿತ್ತಾಳೆ, ಪಪ್ಪಾಯ ಹಣ್ಣುಗಳ ಸೇವನೆ ದೇಹದ ಜಡತ್ವವನ್ನು ತೆಗೆಯುವಲ್ಲಿ ಸಹಾಯ ಮಾಡುತ್ತದೆ.
● ಸತತವಾಗಿ ಕಂಪ್ಯೂಟರ್, ಮೊಬೈಲ್ ನೋಡಬೇಡಿ.
● ಆತಂಕ, ಭಯವಿದ್ದಲ್ಲಿ ಮನಸ್ಸಿಗೆ ನೆಮ್ಮದಿ ಕೊಡುವ ವಿಚಾರಗಳನ್ನು ಕೇಳಿರಿ.
● ದಿನನಿತ್ಯ ವ್ಯಾಯಾಮ ಮಾಡುವುದು ಅತ್ಯಗತ್ಯ.
● ಆಗಾಗ ತಿನ್ನುವುದನ್ನು ನಿಲ್ಲಿಸಿರಿ.
● ಒಂದು ಲೀಟರ್ ನೀರಿಗೆ ಏಲಕ್ಕಿ ಮತ್ತು ಲವಂಗ ಹಾಕಿ ಕುದಿಸಿ ದಿನವಿಡೀ ಆಗಾಗ ಸೇವಿಸಿರಿ.
● ಕಾಫಿ, ಚಹಾ, ತಂಪುಪಾನೀಯಗಳನ್ನು ವರ್ಜಿಸಿರಿ.
● ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಿ.
● ತಿನ್ನುವ ಆಹಾರದಲ್ಲಿ ಕರಿಮೆಣಸು ಮತ್ತು ಶುಂಠಿಯನ್ನು ಕಡ್ಡಾಯವಾಗಿ ಬಳಸಿರಿ.
ನಿದ್ದೆ ಅಗತ್ಯವಾದಷ್ಟು ದೇಹಕ್ಕೆ ಲಭಿಸಿದಾಗ ಆರಾಮದಾಯಕವಾದ ಆರೋಗ್ಯವಿರುತ್ತದೆ. ನಿದ್ದೆ ಕಡಿಮೆಯಾದರೂ ಹೆಚ್ಚಾದರೂ ದೇಹಕ್ಕೆ ಸಮಸ್ಯೆಯೇ ಆಗುತ್ತದೆ. ಹಾಗಾಗಿ, ನಿದ್ದೆಯ ಬಗೆಗೂ ನಮ್ಮ ಗಮನವಿರಲಿ.
