ಬಂಗಾಳದ ಪ್ರಸಿದ್ಧ ಕವಿ ಕಾದಂಬರಿಕಾರರಾದ ಬಂಕಿಮಚಂದ್ರ ಚಟ್ಟೋಪಾಧ್ಯಾಯರವರ ಪ್ರಸಿದ್ಧ ಕಾದಂಬರಿ ಆನಂದಮಠವಾಗಿದೆ. ಜನರಿಗೆ ಆನಂದಮಠ ಕಾದಂಬರಿಯ ಹೆಸರು ತಿಳಿದಿದೆಯೋ ಇಲ್ಲವೂ ಆದರೆ ಅದರಲ್ಲಿ ಬರುವ ವಂದೇ ಮಾತರಂ ಗೀತೆ ಬಂಕಿಮಚಂದ್ರರು ಕಾದಂಬರಿಯನ್ನು ಬರೆದ ಕಾಲದಿಂದ ಇಂದಿನವರೆಗೂ ಪ್ರಸಿದ್ಧವಾಗಿದೆ. ವಂದೇ ಮಾತರಂ ಗೀತೆಯನ್ನು ಬಂಕಿಮರು ರಚಿಸಿ 150 ವರ್ಷಗಳಾಗಿವೆ. ಇಂದಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಆ ಕಾಲದಲ್ಲಿ ಜನರಲ್ಲಿ ದೇಶಾಭಿಮಾನವನ್ನು ಬಿತ್ತಿದ ಗೀತೆಯನ್ನು ಆ ಗೀತೆಯನ್ನು ಬರೆಯುವಾಗ ಕವಿಯ ಮನದಲ್ಲಿದ್ದ ಭಾವನೆಯನ್ನು ಸ್ವಾತಂತ್ರ ಸಂಗ್ರಾಮದಲ್ಲಿ ಆನಂದಮಠ ಕಾದಂಬರಿ ಮತ್ತು ವಂದೇ ಮಾತರಂ ಗೀತೆ ಬೀರಿದ ಪ್ರಭಾವವನ್ನು ತಿಳಿಯಲೇ ಬೇಕು.
ಕವಿ ಬಂಕಿಮಚಂದ್ರದ ಪರಿಚಯ:
ಬಂಕಿಮರು ಇಂದಿನ ಪಶ್ಚಿಮ ಬಂಗಾಳದ ನೈಹಾಟಿ ಬಳಿಯ ಕಂತಾಲಪಾರ ಎಂಬ ಹಳ್ಳಿಯಲ್ಲಿ 26 ಜೂನ್ 1838ರಲ್ಲಿ ಬಂಗಾಳಿ ಸಂಪ್ರದಾಯನಿಷ್ಠ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಯಾದವ ಚಂದ್ರ ಚಟ್ಟೋಪಾಧ್ಯಾಯರು ಸರಕಾರಿ ಹುದ್ಧೆಯಲ್ಲಿ ಮಿಡ್ನಾಪುರದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದವರು. ತಾಯಿಯವರು ದುರ್ಗಾದೇವಿ ಇವರ ಮೂವರು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದವರೇ ಬಂಕಿಮರು. ಇವರ ಸಹೋದರ ಸಂಜೀವ ಚಂದ್ರ ಚಟ್ಟೋಪಾಧ್ಯಾಯರು ಕೂಡ ಕಾದಂಬರಿಕಾರರಾಗಿದ್ದರು. ಇವರ ಅವರು ಹುಟ್ಟಿದ ಕೆಲವೇ ಸಮಯದಲ್ಲಿ ಭಾರತದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮವು ಆರಂಭವಾಗಿತ್ತು. ಇವರ ಕಾಲೇಜು ವಿದ್ಯಾಭ್ಯಾಸ ಪ್ರೆಸಿಡೆನ್ಸಿ ಕಾಲೇಜಿನಲ್ಲಿ 1857ರಲ್ಲಿ ಬಿಎ ಪದವಿಯನ್ನು ಪಡೆದರು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಮೊದಲಿಬ್ಬರು ವಿದ್ಯಾರ್ಥಿಗಳಲ್ಲಿ ಬಂಕಿಮರು ಕೂಡ ಒಬ್ಬರು.
1869ರಲ್ಲಿ ಬಂಕಿಮರು ಕಾನೂನಿನ ಪದವಿಯನ್ನು ಪೂರೈಸಿದ್ದರು. ತಂದೆಯವರಂತೆ ಸರಕಾರದಿಂದ ಜೆಸ್ಸೋರ್ ಜಿಲ್ಲೆಗೆ ಉಪಜಿಲ್ಲಾಧಿಕಾರಿಯಾಗಿ ಮತ್ತು ಉಪ ನ್ಯಾಯಾಧಿಪತಿಯಾಗಿ ಕೆಲಸ ನಿರ್ವಹಿಸಿದವರು ನಂತರ 1891ರಲ್ಲಿ ಸರಕಾರಿ ಕೆಲಸದಿಂದ ನಿವೃತ್ತಿ ಹೊಂದಿದರು. ನಂತರ 1894ರಲ್ಲಿ ಇವರಿಗೆ ಸಾಮಾನ್ಯ ಸಹಯೋಗಿ ದರ್ಜೆಯ ಹುದ್ದೆಯನ್ನು ನೀಡಲಾಯಿತು. ಬ್ರಿಟಿಷರ ಆಡಳಿತದಲ್ಲಿ ನಡೆಯುತ್ತಿದ್ದ ದೌರ್ಜನ್ಯ ಮತ್ತು ಪ್ರಥಮ ಸ್ವಾತಂತ್ರ್ಯದ ಹೋರಾಟ ಅವರ ಮನಸ್ಸಿಗೆ ಪರಿಣಾಮ ಬೀರಿದವು. ಅವರ ಜೀವನದ ಮೇಲೆ ಪರಿಣಾಮ ಬೀರಿದ ಪ್ರಮುಖ ವ್ಯಕ್ತಿಗಳೆಂದರೆ ವಾಸುದೇವ ಬಲವಂತ ಫಡಕೆಯವರ ಜೀವನ, ಚಾಪೇಕರ್ ಸಹೋದರರ ಚಳುವಳಿ ಬಂಕಿಮರಿಗೆ ಇವರಿಗೆ ಪ್ರೇರಣೆಯಾಯಿತು.
ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಬರೆದ ಆನಂದಮಠ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿಯಾದ ಐತಿಹಾಸಿಕ ಕಾದಂಬರಿಯಾಗಿದೆ. 1882ರಲ್ಲಿ ಪ್ರಕಟಗೊಂಡ ಈ ಕೃತಿಯು 1770ರ ಬಂಗಾಳದ ಭೀಕರ ಕ್ಷಾಮ ಹಾಗೂ ಬ್ರಿಟಿಷರು ಮತ್ತು ಸ್ಥಳೀಯ ನವಾಬರ ವಿರುದ್ಧ ನಡೆದ ‘ಸನ್ಯಾಸಿಗಳ ದಂಗೆ’ಯ ಹಿನ್ನೆಲೆಯನ್ನು ಹೊಂದಿದೆ. ಆನಂದ ಮಠ ಕಾದಂಬರಿಯು ಮೊದಲಬಾರಿಗೆ ‘ಬಂಗದರ್ಶನ್’ ಎಂಬ ನಿಯತಕಾಲಿಕದಲ್ಲಿ ಧಾರಾವಾಹಿ ಸ್ವರೂಪದಲ್ಲಿ ಪ್ರಕಟಿಸಲಾಯಿತು ನಂತರ ಕ್ರಿಶ 1882ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.
18ನೇ ಶತಮಾನದ ಅಂತ್ಯದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ದ ನಡೆದ ಸನ್ಯಾಸಿ ಕ್ರಾಂತಿಯನ್ನು ಆಧಾರವಾಗಿಟ್ಟುಕೊಂಡು ಈ ಕಾದಂಬರಿಯನ್ನು ಹೆಣೆಯಲಾಗಿದೆ. ಬ್ರಿಟೀಷ್ ಸಾಮ್ರಾಜ್ಯದ ವಿರುದ್ದ ನಡೆದ ಸ್ವಾತಂತ್ರ್ಯ ಹೋರಾಟದದಲ್ಲಿ ಈ ಕೃತಿಯು ಮಹತ್ವದ ಪಾತ್ರವನ್ನು ವಹಿಸಿದೆ. ಈ ಗೀತೆಗೆ ಮೊದಲ ಬಾರಿಗೆ ಶ್ರೀ ಜದುನಾಥ ಭಟ್ಟಾಚಾರ್ಯರು ರಾಗ ಸಂಯೋಜನೆಯನ್ನು ನಂತರದಲ್ಲಿ 1896ರಲ್ಲಿ ರವೀಂದ್ರನಾಥ ಟ್ಯಾಗೋರ್ರವರು ಸಂಗೀತ ಸಂಯೋಜಿಸಿದ್ದರು. ಬ್ರಿಟೀಷ್ ಸರ್ಕಾರವು ಈ ಪುಸ್ತಕದ ಮೇಲೆ ನೀಷೇಧ ಹೇರಿದ್ದು 1947ರ, ಭಾರತವು ಸ್ವಾತಂತ್ರ್ಯ ಗಳಿಸಿದ ಮೇಲೆ ಹಿಂತೆಗೆಯಲಾಯಿತು.
ಆನಂದ ಮಠ ಕಾದಂಬರಿಯ ಇತಿಹಾಸ ಮತ್ತು ಕಥಾ ಹಂದರ:
ಆನಂದಮಠ ಎಂಬುದು ಒಂದು ಐತಿಹಾಸಿಕ, ರಾಜಕೀಯ ಕಾದಂಬರಿಯಾಗಿದೆ. 1770ರಲ್ಲಿ ಬಂಗಾಳ ರಾಜ್ಯವು ಎದುರಿಸಿದ ಭೀಕರ ಬರಗಾಲದ ಹಿನ್ನಲೆಯಿಟ್ಟುಕೊಂಡು ಮಹೇಂದ್ರ, ಕಲ್ಯಾಣಿ, ಸತ್ಯಾನಂದ, ಜೀವಾನಂದ, ಭವಾನಂದ ಮತ್ತು ಶಾಂತಿ ಎಂಬ ಮುಖ್ಯ ಪಾತ್ರಗಳ ಸುತ್ತ ಹೆಣೆದಿರುವ ಕತೆಯಾಗಿದೆ. ಮಹೇಂದ್ರ ಮತ್ತು ಕಲ್ಯಾಣಿ ಜಮೀನ್ದಾರರ ಕುಟುಂಬಕ್ಕ ಸೇರಿದ ದಂಪತಿ, ಬರಗಾಲದ ಪರಿಣಾಮ, ತಮ್ಮ ಊರಾದ ಪದಚಿನ್ಹವನ್ನು ಬಿಟ್ಟು ನಗರವನ್ನು ಸೇರಿ ಬದುಕುಳಿಯುವ ಸಲುವಾಗಿ ತಮ್ಮ ಸಂಪತ್ತನ್ನು ಬಿಟ್ಟು ವಲಸೆ ಹೋಗುವ ಸಂದರ್ಭ ಬರುತ್ತದೆ. ಊರು ಬಿಟ್ಟು ನಗರ ಸೇರುವಾಗ ಪುಟ್ಟ ಮಗು ಸುಕುಮಾರಿಯ ಜೊತೆ ಕಾಡು ಮೇಡು ಅಲೆಯುತ್ತ ದರೋಡೆಕೋರರ ಕೈ ಸಿಕ್ಕು ಸಂಕಷ್ಟಕ್ಕೆ ಒಳಗಾದಾಗ ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ದ ಬಂಡಾಯವೆದ್ದಿರುವ ಕ್ರಾಂತಿಕಾರಿ ಸನ್ಯಾಸಿಗಳ ತಂಡದವರಿಂದ ರಕ್ಷಿಸಲ್ಪಡುತ್ತಾರೆ. ಮಹೇಂದ್ರನೂ ಕೂಡ ಆ ತಂಡದೊಡನೆ ಸೇರಿಕೊಂಡು, ಆನಂದ ಮಠ ಮಠದ ಮುಖ್ಯಸ್ಥ ಸತ್ಯಾನಂದರ ಶ್ರೀರಕ್ಷೆಯಲ್ಲಿ, ಸನ್ಯಾಸಿ ಕ್ರಾಂತಿಯಲ್ಲಿ ಪಾಲ್ಗೊಳ್ಳುತ್ತಾನೆ. ತನ್ನ ಸಂಸಾರಿ ಜೀವನ ಬಿಟ್ಟು ದೇಶದ ಸ್ವಾತಂತ್ರಕ್ಕೆ ಜೀವನ ಮುಡಿಪಾಗಿ ಇಡುವ ನಿರ್ಧಾರ ಮಾಡುತ್ತಾನೆ. ಆನಂದ ಮಠವೆಂಬ ಸನ್ಯಾಸಿಗಳ ಈ ಗುಂಪಿನ ನಾಯಕ ಸತ್ಯಾನಂದ. ತಾಯ್ನಾಡಿನ ರಕ್ಷಣೆಗಾಗಿ ಮತ್ತು ವಿದೇಶಿ ಆಳ್ವಿಕೆಯನ್ನು ಅಂತ್ಯಗೊಳಿಸಲು ಸತ್ಯಾನಂದರು ಒಂದು ಸೈನ್ಯವನ್ನು ಕಟ್ಟುತ್ತಾರೆ. ಈ ಗುಂಪಿನ ಪ್ರತಿಯೊಬ್ಬ ಸದಸ್ಯನೂ ತನ್ನ ಕುಟುಂಬವನ್ನು ತೊರೆದು ದೇಶಕ್ಕಾಗಿ ಸತ್ಯಾನಂದ ಮತ್ತು ಅವರ ಅನುಯಾಯಿಗಳು ಬ್ರಿಟಿಷ್ ಸೈನ್ಯದ ವಿರುದ್ಧ ಭೀಕರ ಹೋರಾಟ ನಡೆಸಿ ಕೆಲವು ಪ್ರದೇಶಗಳನ್ನು ಗೆಲ್ಲುತ್ತಾರೆ. ಆದರೆ, ಬ್ರಿಟಿಷರ ಆಧುನಿಕ ಶಸ್ತ್ರಾಸ್ತ್ರಗಳ ಮುಂದೆ ಸನ್ಯಾಸಿಗಳ ಸಾಂಪ್ರದಾಯಿಕ ಶಸ್ತ್ರಗಳು ಸೋಲುತ್ತವೆ. ಸಮಯದಲ್ಲಿ ನಡೆದ ಹೋರಾಟದ ಸುಂದರ ವರ್ಣನೆ, ಮನದಲ್ಲಿ ದೇಶ ಭಕ್ತಿ ತುಂಬುವ ಭಾವನೆ ಎಲ್ಲ ಪಾತ್ರಗಳಲ್ಲಿ ಸ್ತ್ರೀ ಪುರುಷ ಭೇದವಿಲ್ಲದೇ ಕಾಣಸಿಗುತ್ತದೆ.
ವಂದೇ ಮಾತರಂ ಗೀತೆ ಮಾತ್ರವಲ್ಲದೇ ಸಂಪೂರ್ಣ ಕಾದಂಬರಿಯಲ್ಲಿ ಭಾರತ ಮಾತೆಯನ್ನು ದುರ್ಗೆ,ಕಾಳಿ ಹಾಗೂ ಜಗದ್ದಾತ್ರಿಯ ಎಂಬ ಮೂರು ರೂಪಗಳಲ್ಲಿ ವರ್ಣಿಸುತ್ತ ಅವಳ ಸಂತಾನರಾದ ಸನ್ಯಾಸಿಗಳ ಹೋರಾಟವನ್ನು ಸೊಗಸಾಗಿ ವರ್ಣಿಸಿ ಎಲ್ಲರ ಮನದಲ್ಲಿ ದೇಶಭಕ್ತಿಯ ಬೀಜವನ್ನು ಬಿತ್ತಿ ಸ್ವಾತಂತ್ರ ಹೋರಾಟಕ್ಕೆ ತಯಾರಿ ಮಾಡುವ ಬಗೆ ಮೈನವಿರೇಳಿಸುತ್ತದೆ.
ಕಾದಂಬರಿಯಲ್ಲಿ ಅಂದಿನ ಭಾರತದ ಬರಗಾಲದ ಬವಣೆಯನ್ನು ಪ್ರಕೃತಿಯ ಮೂಲಕ ಬೆಳದಿಂಗಳು ಕಾಡು ಇವುಗಳ ವರ್ಣನೆಯಲ್ಲಿ ತಿಳಿಸುತ್ತಾರೆ. ಭಾಷೆಯು ಸಂಸ್ಕೃತದ ಪ್ರಭಾವಕ್ಕೆ ಚೆನ್ನಾಗಿ ಇದೆ. ಮಹಿಳೆಯರು ಕೂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಮಾನ್ಯ ಅಧ್ಯಾಪಕರ ಮಗಳಾಗಿ ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಕಷ್ಟ ನಷ್ಟ ಮದುವೆಯಾದರೂ ಸಂತಾನನಾಗಿ ಹೋದ ಪತಿಯ ಹಾದಿಯನ್ನು ಹಿಡಿಯುವ ನಿರ್ಧಾರ ಮಾಡಿ ಶಸ್ತ್ರ ಅಸ್ತ್ರ ಮೊದಲಾದ ತಯಾರಿ ಮಾಡಿ ಕೊಂಡು, ಪುರುಷ ವೇಷದಲ್ಲಿ ಸನ್ಯಾಸಿ ರೂಪದಲ್ಲಿ ಹೋಗಿ ಬಂದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಶಾಂತಿಯ ಪಾತ್ರದ ಮೂಲಕ ವೈರಾಗ್ಯ ಶೌರ್ಯ ಸಂಯಮ ಎಲ್ಲದರಲ್ಲೂ ಮಹಿಳೆ ಸಮಪಾಲು ಹೊಂದಿದ್ದಳು ಎಂದು ತಿಳಿಯುತ್ತದೆ. ಕಲ್ಯಾಣಿ ಪಾತ್ರದ ಮೂಲಕ ಪಾತಿವ್ರತ್ಯ ಮತ್ತು ತ್ಯಾಗದ ಪತಿಯ ಬದುಕಿಗೆ ಒತ್ತಾಸೆಯಾಗಿ ನಿಲ್ಲುವ ಸ್ತ್ರೀ ಯನ್ನು ಕಾಣುತ್ತೇವೆ. ಭವಾನಂದ ಜೀವಾನಂದರ ಪಾತ್ರ ಮೂಲಕ ಉನ್ನತ ಉದ್ದೇಶ ಇದ್ದಾಗಲೂ ಲೌಕಿಕ ಆಸೆ ಮೋಹಗಳಿಗೆ ಬಲಿಯಾಗಿ ತಪ್ಪನ್ನು ಮಾನಸಿಕವಾಗಿ ಮಾಡಿ, ನಂತರ ತಪ್ಪಿನ ಅರಿವಾಗಿ ಗುರಿಯನ್ನು ಸಾಧಿಸುವ ಮಾರ್ಗದಲ್ಲಿ ಸಾಗುವ ಮಾನಸಿಕವಾಗಿ ಮಾಡಿದ ತಪ್ಪಿಗೆ ಸ್ವತಃ ಶಿಕ್ಷೆಯನ್ನು ಪಡೆದುಕೊಳ್ಳುವ ಮಹಾನ್ ಗುಣವನ್ನು ಪ್ರದರ್ಶಿಸಲಾಗುತ್ತದೆ. ಗುರುಗಳು ಶಿಷ್ಯರ ಪ್ರತಿಯೊಂದು ಕಾರ್ಯಕ್ಕೂ ಬೆನ್ನುಲುಬಾಗಿ ನಿಂತು ಸ್ವಾತಂತ್ರ ಸಂಗ್ರಾಮಕ್ಕೆ ಸಿದ್ಧ ಪಡಿಸುವ ಬಗೆ ಅನನ್ಯವಾಗಿದೆ. ಬ್ರಿಟೀಷರ ಸುಸಜ್ಜಿತ ಪಡೆಗಳ ವಿರುದ್ಧ ದೇಸಿಯ ಶಸ್ತ್ರಗಳು ಸೋಲುವುದು. ಮತ್ತು ಸ್ವಾತಂತ್ರ ಸಂಪೂರ್ಣವಾಗಿ ಸಿದ್ಧತೆ ಆಗಿಲ್ಲ ಎಂಬ ಸಂಕೇತದ ಮೂಲಕ ಕಾದಂಬರಿಯು ಮುಗಿಯುತ್ತದೆ.
ಆನಂದ ಮಠ ಕಾದಂಬರಿಯ ಅನುವಾದ ಮತ್ತು ಪ್ರಚಾರ
ಬಂಕಿಮರ ಆನಂದಮಠ ಕಾದಂಬರಿ ಅನೇಕ ಭಾಷೆಗಳಿಗೆ ಅನುವಾದ ಅಥವಾ ಭಾಷಾಂತರಗೊಂಡಿದೆ. ಭಾಷೆಗಳಿಗೆ ಅನುವಾದಿಸಲಾಗಿದೆ . ಅ ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಗುಜರಾತಿ ಮೊದಲಾದ ಭಾರತೀಯ ಭಾಷೆಗಳಿಗೆ ಮತ್ತು ಇಂಗ್ಲಿಷ್ ಭಾಷೆಗೆ ಅನುವಾದಿಸಲಾಗಿದೆ .ಐತಿಹಾಸಿಕವಾಗಿ, ಈ ಪುಸ್ತಕವು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿತ್ತು. ಈ ಕಾರಣದಿಂದಾಗಿ, ರಾಷ್ಟ್ರೀಯತೆಯನ್ನು ಪ್ರೇರೇಪಿಸಲು ಇದನ್ನು ವಿವಿಧ ಪ್ರಾದೇಶಿಕ ಭಾಷೆಗಳು ಮತ್ತು ಇಂಗ್ಲಿಷ್ಗೆ ವ್ಯಾಪಕವಾಗಿ ಅಳವಡಿಸಲಾಯಿತು.
ಪ್ರಮುಖವಾದ ಇಂಗ್ಲಿಷ್ ಅನುವಾದಗಳು:
1906: ನರೇಸ್ ಚಂದ್ರ ಸೇನ್-ಗುಪ್ತರಿಂದ ಆನಂದಮಠ
1909: ಶ್ರೀ ಅರಬಿಂದೋ ಮತ್ತು ಬರೀಂದ್ರ ಕುಮಾರ್ ಘೋಷ್ ಅವರಿಂದ ಭಾಗಶಃ ಅನುವಾದಿಸಲ್ಪಟ್ಟಿದೆ.
1941: ಬಸಂತ ಕುಮಾರ್ ರಾಯ್ ಅವರಿಂದ ಡಾನ್ ಓವರ್ ಇಂಡಿಯಾ ಎಂದು ಅನುವಾದಿಸಲಾಗಿದೆ.
2005: ಜೂಲಿಯಸ್ ಜೆ. ಲಿಪ್ನರ್ ಅವರಿಂದಆನಂದಮಠ ಅಥವಾ ದಿ ಸೇಕ್ರೆಡ್ ಬ್ರದರ್ಹುಡ್ ಎಂದು ಸಮಗ್ರವಾಗಿ ಅನುವಾದಿಸಲಾಗಿದೆ.
ಕನ್ನಡದಲ್ಲಿ ಬಿ ವೆಂಕಟಾಚಾರ್ಯರು 1897ರಲ್ಲಿ ಬಂಗಾಳಿ ಭಾಷೆಯನ್ನು ಕಲಿತು. ಮೂಲ ಕೃತಿಯನ್ನು ಓದಿ 1930ರಲ್ಲಿ ಅನುವಾದಿಸಿದ್ದರು ಎಂಬುದು ಅವರ ಕೃತಿಯಿಂದ ತಿಳಿದು ಬರುತ್ತದೆ. ಅವರ ಭಾಷಾ ಶೈಲಿ ಪದ ಪ್ರಯೋಗವು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅನುಗುಣವಾಗಿ ಆಗಿದೆ. ಇದು ಭಾಷಾಂತರ ಎನಿಸದೇ ರೂಪಾಂತರದಂತೆ ತೋರುತ್ತದೆ. ಕನ್ನಡ ಜನತೆಗೆ ಇದು ದೊಡ್ಡ ಕೊಡುಗೆಯಾಗಿದೆ. ನಂತರದಲ್ಲಿ 2007ರಲ್ಲಿ ಬಂದ ಎಸ್ ಆರ್ ರಾಮಸ್ವಾಮಿಯವರ ಅನುವಾದದಲ್ಲಿ ಬಂಗಾಳಿ ಮೂಲದ ಝಲಕುಗಳು ಕಾಣ ಸಿಗುತ್ತವೆ.
ಆನಂದ ಮಠ ಕಾದಂಬರಿ ಆಧಾರಿತ ಚಲನಚಿತ್ರವು 1952 ರಲ್ಲಿ ಹಿಂದಿ ಭಾಷೆಯಲ್ಲಿ ಆನಂದ ಮಠ ಎಂಬ ಹೆಸರಿನಲ್ಲಿ ಬಿಡುಗಡೆಗೊಂಡಿತು.
ಕಾದಂಬರಿ ಓದಿದಾಗ ಅನಿಸುವ ವಿಷಯಗಳು :
ಬ್ರಿಟಿಷ್ ಆಡಳಿತದಲ್ಲಿ ಕರ ವಸೂಲಿ ಪದ್ಧತಿಯ ದೌರ್ಜನ್ಯ, ಭೀಕರ ಬರಗಾಲದ ಬವಣೆ, ಕಳ್ಳರು ಡಕಾಯಿತರ ಹಾವಳಿ ಬ್ರಿಟಿಷರ ದಬ್ಬಾಳಿಕೆ, ಅಂದಿನ ಕಾಲದಲ್ಲಿ ಮಹಿಳೆಯರ ಸ್ಥಿತಿಗತಿ, ಕೌಟುಂಬಿಕ ಸಂಬಂಧಗಳು, ದಾಂಪತ್ಯ ಮತ್ತು ಸಾಮಾಜಿಕ ಪರಿಸ್ಥಿತಿ, ಸನ್ಯಾಸಿಗಳ ಸಾಮಾಜಿಕ ಬದ್ಧತೆ, ದೇಶ ಭಕ್ತಿ, ತಮ್ಮ ಪೂಜೆ ಆರಾಧನೆಯನ್ನು ಭಗವಂತನ ಕುರಿತಾಗಿ ಮಾತ್ರವಲ್ಲದೇ ದೇಶದ ಬಗೆಗೆ ಸ್ವಾತಂತ್ರದ ಹೋರಾಟದ ಅವರ ಬದ್ಧತೆ, ಎಲ್ಲರಿಗೂ ಪ್ರೇರಣೆ ನೀಡಿ ದೇಶಭಕ್ತಿಯ ಮಾರ್ಗದರ್ಶನ ಮಾಡುವ ಸಂಘಟಿಸುವ ಸನ್ಯಾಸಿಗಳು ಎಂತದ್ದೇ ಇರಲೀ ಕ್ರಾಂತಿಕಾರಿಯಾಗಿ ಎದುರಿಸುವ ವಿಚಾರ ತಿಳಿಸುತ್ತದೆ. ಮಹಿಳಾ ಪಾತ್ರಗಳು ಸ್ತ್ರೀ ಪಾತ್ರಗಳಷ್ಟೇ ಮಹತ್ವ ಪಡೆದಿರುವುದು ವಿಶೇಷ. ಕಾದಂಬರಿ ಕೊನೆಯಲ್ಲಿ ಬ್ರಿಟಿಷ್ ಆಡಳಿತದ ಸಮರ್ಥನೆ ಮಾಡಿದಂತೆ ಕಂಡರೂ ಸ್ವಾತಂತ್ರ ಪಡೆಯುವ ಆಶಯವೂ ಕಾಣುತ್ತದೆ.
ಆನಂದ ಮಠ ಕಾದಂಬರಿ 144 ವರ್ಷಗಳ ನಂತರವೂ ಪ್ರಸ್ತುತತೆ ಇರುವ ಕಾದಂಬರಿಯಾಗಿದೆ. ಅಂದಿನ ಕಾಲದ ಸಮಸ್ಯೆಗಳು ಬೇರೆ ಈಗಿನ ಕಾಲದ ಸಮಸ್ಯೆ ಬೇರೆ ಆದರೂ ದೌರ್ಜನ್ಯ, ದಬ್ಬಾಳಿಕೆ, ಆಕ್ರಾಂತಕಾರಿಗಳ ವಿರುದ್ಧ ಹೋರಾಡುವ ಅನಿವಾರ್ಯತೆ ಈಗಲೂ ಇದೆ. ಸನ್ಯಾಸಿಗಳು ಈಗಲೂ ಕ್ರಾಂತಿ ಮೂಡಿಸುವ ಸಾಮರ್ಥ್ಯ, ದೇಶವನ್ನು ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ ಆದರೆ ಸಾಮಾಜಿಕ ಕ್ರಾಂತಿ ಮಾಡದೇ ಮೌನವಾಗಿರುವದು ವಿಷಾದನೀಯ. ಇನ್ನೂ ಹೆಚ್ಚಿನ ವಿಷಾದ ಸನ್ಯಾಸಿಗಳು ರಾಜಕೀಯ ನಾಯಕರ ಪ್ರಭಾವಕ್ಕೆ ಒಳಗಾಗಿ ಜಾತಿ ರಾಜಕೀಯ ಮಾಡುವುದು ತಮ್ಮ ಸನ್ಯಾಸ ಧರ್ಮದ ಸಂಪೂರ್ಣ ಪಾಲನೆ ಮಾಡದೇ ಸಾಮಾಜಿಕ ಬದ್ಧತೆ ತೋರದೆ ಇರುವುದು. ಯುವ ಜನತೆಗೆ ಸ್ಫೂರ್ತಿಯಾಗಬಲ್ಲ ತಿಳಿಯಲೇ ಬೇಕಾದ ಕಾದಂಬರಿ ಆನಂದ ಮಠವಾಗಿದೆ.
ಮಾಧುರಿ ದೇಶಪಾಂಡೆ, ಬೆಂಗಳೂರು
