ಅಂಕಣ – ಜ್ಞಾನಭಂಡಾರ
- ವಾಣಿ ಮೈಸೂರು, ಲೇಖಕಿ
ಕಾಯಕವೇ ಕೈಲಾಸ ಎನ್ನುತ್ತೇವೆ. ಶ್ರಮ ಮತ್ತು ನಿಷ್ಠೆ ಬದುಕನ್ನು ಬದಲಾಯಿಸುತ್ತದೆ, ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು, ನಾವು ಮಾಡುವ ವೃತ್ತಿ ನಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ, ಬದುಕು ಕಟ್ಟಿಕೊಳ್ಳಲು ಕೆಲಸಬೇಕು… ಅದು ಸ್ವಂತದ್ದೋ ಅಥವಾ ಕಂಪನಿಗಳೋ ಒಟ್ಟಿನಲ್ಲಿ ಬದುಕಲು ಕೆಲಸಬೇಕು ಇತ್ಯಾದಿ ಯೋಚನೆಗಳು, ಯೋಜನೆಗಳು ದಿನನಿತ್ಯ ನಮ್ಮ ಮನಸ್ಸಿನಲ್ಲಿ ಹಾದುಹೋಗುತ್ತಿರುತ್ತವೆ. ಇವುಗಳಿಗೆ ಉತ್ತರವನ್ನು ಕಂಡುಕೊಳ್ಳಲು ʼ51 ಬಿಸಿನೆಸ್ ಐಡಿಯಾಗಳು’ ಒಂದು ಉತ್ತಮ ಕೃತಿಯಾಗಿ ನಿಲ್ಲುತ್ತದೆ.
ಕೆಲಸವೇ ಬದುಕೋ? ಬದುಕೇ ಕೆಲಸವೇ? ಅನ್ನುವ ಸ್ಥಿತಿ ಇಂದಿನ ಒತ್ತಡದ ಕಾರ್ಪೊರೇಟ್ ವಲಯದಲ್ಲಿದೆ. ಉಸಿರುಕಟ್ಟಿಸುವಂತಹ ಬಿಡುವಿಲ್ಲದ ವಾತಾವರಣಕ್ಕೆ ಇಷ್ಟವಿಲ್ಲದೇ ಹೊಂದಿಕೊಂಡು ಹೋಗುವ ಅದೆಷ್ಟೋ ಮಂದಿ ಐಟಿ – ಬಿಟಿ ಕಂಪನಿಗಳ, ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ಮತ್ತು ಸಣ್ಣ ಪುಟ್ಟ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಈ ಉದ್ಯೋಗಿಗಳ ಮನಸ್ಸಿನಲ್ಲಿ ಹಾದು ಹೋಗುವ ವಿಷಯ ಸ್ವಂತ ಬಿಸಿನೆಸ್! ನಾವೇ ಸ್ವಂತ ಬಿಸಿನೆಸ್ ಮಾಡಿಕೊಂಡು ಲೈಫ್ನಲ್ಲಿ ಸೆಟ್ಲ್ ಆಗಬೇಕು ಎನ್ನುವ ಮೈಂಡ್ ಸೆಟ್ ಪ್ರತಿಯೊಬ್ಬರಲ್ಲೂ ರಿಂಗಣಿಸುವುದು ಸಹಜವೇ. ಏಕೆಂದರೆ ಸ್ವಂತ ಬಿಸಿನೆಸ್ನಲ್ಲಿ ನಾವು ಅಂದುಕೊಂಡದ್ದೇ ಸಮಯದಲ್ಲಿ ಕೆಲಸ ಮಾಡಬಹುದು ಮತ್ತು ಯಾರಿಂದ ಏನೂ ಕೇಳುವ ಹಾಗಿರುವುದಿಲ್ಲ. ಅದೇ ಬೇರೆ ಕಡೆ ಮಾಡುವ ಕೆಲಸ ಹಾಗಲ್ಲ, ಬೇರೆಯವರ ಅಧೀನದಲ್ಲಿದ್ದಾಗ ನಮ್ಮ ಬೇಕು ಬೇಡಗಳು ಅವರನ್ನು ಅವಲಂಭಿಸಿರುತ್ತವೆ. ಮತ್ತೊಬ್ಬರ ಕೈ ಕೆಳಗಡೆ ಕೆಲಸ ಮಾಡಬೇಕು ಎನ್ನುವಾಗ ಅಸಮಾಧಾನವಿರುತ್ತದೆ. ಸ್ವಂತ ಬಿಸಿನೆಸ್ ಮಾಡಲು ಬಯಸುವವರು ಈ ಪುಸ್ತಕವನ್ನು ಆರಿಸಿಕೊಳ್ಳಬಹುದು.
ವೀರಕಪುತ್ರ ಶ್ರೀನಿವಾಸ ಅವರು ಬರೆದಿರುವ ‘51 ಬಿಸಿನೆಸ್ ಐಡಿಯಾಗಳು’ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಪುಸ್ತಕದ ಪ್ರತಿ ಪುಟವೂ, ಯಾವ ಯಾವ ರೀತಿಯ ಬಿಸಿನೆಸ್ ಐಡಿಯಾಗಳು ಇವೆ ಮತ್ತು ಅದರ ಗುಣಲಕ್ಷಣಗಳನ್ನೂ ಬಿಡಿಸಿ ಬರೆದಿರುತ್ತಾರೆ. ಕೆಲಸ ಇಲ್ಲದೇ ಇರುವವರಿಗೆ ಉಪಯುಕ್ತ ಪುಸ್ತಕ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಬಿಸಿನೆಸ್ ಮಾಡಬೇಕು ಎಂದುಕೊಂಡಾಗ ಯಾವ ಬಿಸಿನೆಸ್ ಪ್ರಾರಂಭಿಸಬೇಕು ಎನ್ನುವ ಗೊಂದಲ, ಎಷ್ಟು ವೆಚ್ಚ ಆಗಬಹುದು, ಯಶಸ್ವಿಯಾಗುತ್ತೇವೆಯೇ? ಭಯವನ್ನು ಹೇಗೆ ನಿವಾರಿಸಿಕೊಳ್ಳುವುದು? ಇತ್ಯಾದಿ ಪ್ರಶ್ನೆಗಳು ಮೂಡುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಬೇಕಾಗಿರುವುದು ತಾಳ್ಮೆ, ಯಾವುದೇ ಬಿಸಿನೆಸ್ ಮಾಡಲು ಬೇಕಾಗುವ ಸಾಮಾನ್ಯ ಪರಿಜ್ಞಾನ. ಮೇಲಿನ ಎಲ್ಲ ಪ್ರಶ್ನೆಗಳು ಮತ್ತು ಗೊಂದಲಗಳಿಗೆ ಉತ್ತರ ಸಿಗುವ ಪುಸಕ್ತವು ಇದಾಗಿದೆ ಎಂದರೆ ತಪ್ಪಾಗಲಾರದು.
ಒಟ್ಟು 50 ಸ್ವಂತ ಬಿಸಿನೆಸ್ ಐಡಿಯಾಗಳ ಕಿರು ಲೇಖನಗಳನ್ನು ಈ ಹೊತ್ತಗೆ ಒಳಗೊಂಡಿದೆ. ಹೆಚ್ಚು ಓದಿದವರು, ಕಡಿಮೆ ಓದಿದವರು ಮತ್ತು ಕೆಲಸ ಸಿಗದೇ ಇರುವವರು ಸ್ವಂತ ಬಿಸಿನೆಸ್ ಮಾಡುವ ಆಲೋಚನೆಗಳಿಗೆ ಈ ಪುಸ್ತಕ ಉಪಯುಕ್ತ ಕೈಪಿಡಿಯಾಗಿದೆ. ಯಾವ ಬಿಸಿನೆಸ್ ಮಾಡಬೇಕು..? ಯಾರು ಆರಂಭಿಸಬಹುದು, ಅಗತ್ಯ ಕೌಶಲ್ಯ, ಹೂಡಿಕೆ, ಆದಾಯ ಮತ್ತು ಲಾಭ, ಮುನ್ನೆಚ್ಚರಿಕೆಗಳು, ಸಾಲ ಮತ್ತು ಸರ್ಕಾರಿ ಯೋಜನೆಗಳು, ನೋಂದಣಿ, ಬೆಳವಣಿಗೆಯ ಅವಕಾಶಗಳು, ಬ್ರೇಕ್ ಇನ್ ಸಮಯ ಮತ್ತು ಒಟ್ಟಾರೆ ಮೌಲ್ಯ ಮಾಪನಗಳನ್ನು ಒಳಗೊಂಡಿರುವ ಈ ಪುಸ್ತಕ ಸ್ವಂತ ಬಿಸಿನೆಸ್ ಮಾಡಲು ಬಯಸುವವರಿಗೆ ಉಪಯುಕ್ತವಾಗಿದೆ.
ಕೃ: 51 ಬಿಸಿನೆಸ್ ಐಡಿಯಾಗಳು ಲೇ: ವೀರಕಪುತ್ರ ಶ್ರೀನಿವಾಸ
ಪ್ರ: ವೀರಲೋಕ ಪ್ರಕಾಶನ ಬೆ: 150 ರೂ. ಸಂ: 7022122121
