- ಗುರುಪ್ರಸಾದ ಭಟ್, ಉಡುಪಿ
ಪ್ರತಿ ಬಾರಿಯೂ ಗುರುಪೂರ್ಣಿಮೆಯಂದು ತಪ್ಪದೆ ನೆನಪಾಗುವುದು ಶಿವಾಜಿ, ಪಾವನಕಿಂಡ, ಮತ್ತು ಅಂದು ಹುತಾತ್ಮರಾದ ಬಾಜಿ ಪ್ರಭು ದೇಶಪಾಂಡೆ, ಮುನ್ನೂರು ಬಾಂದಳ ಸೈನಿಕರು ಮತ್ತು ಕ್ಷೌರಿಕ ಶಿವಾ ಕಾಶಿದ್. ಛತ್ರಪತಿ ಶಿವಾಜಿ ಮಹಾರಾಜರ ಜೀವನದಲ್ಲಿ ಗುರುಪೂರ್ಣಿಮೆಯ ದಿನ ಅತ್ಯಂತ ಮಹತ್ವದ್ದು. ಅವರು ಪನ್ಹಾಳ ಕೋಟೆಯಿಂದ ಸುಮಾರು ಮೂವತ್ತಾರು ಮೈಲು ದೂರವಿರುವ ವಿಶಾಲಗಡ ಕೋಟೆಗೆ ರಾತ್ರೋರಾತ್ರಿ ಪಲಾಯನ ಮಾಡಿದ್ದು ಗುರು ಪೂರ್ಣಿಮೆಯ ದಿನ, ಅಂದರೆ ಶಾಲಿವಾಹನ ಶಕೆ 1581, ಶುಕ್ಲ ಪಕ್ಷ, ಆಷಾಢ ಪೂರ್ಣಿಮೆ; ಜುಲೈ 13, 1660 ರಂದು.
ದಿಗ್ಬಂಧನದಲ್ಲಿ ಶಿವಾಜಿ:
ಬಿಜಾಪುರದ ಸುಲ್ತಾನ ಆದಿಲ ಶಾಹಿಯ ಆಣತಿಯ ಮೇರೆಗೆ ಜಂಜೀರಾದ ಸಿದ್ದಿ ಜೌಹರ್ ನು ಶಿವಾಜಿ ಮಹಾರಾಜರು ವಿಶ್ರಮಿಸುತ್ತಿದ್ದ ಪನ್ಹಾಳ ಕೋಟೆಗೆ ನಾಲ್ಕು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದನು. ಒಂದು ಹಕ್ಕಿಯೂ ಕೋಟೆಯಿಂದ ತಪ್ಪಿಸಿಕೊಂಡು ಹೋಗದಂತಹ ಕಟ್ಟುನಿಟ್ಟಿನ ಪಹರೆ. ಸಿದ್ದಿ ಮಸೂದ್, ಫಜಲ್ ಮಹಮ್ಮದ್, ಫತೇಹ್ ಖಾನ್, ಫಜಲ್ ಖಾನ್, ಮತ್ತಿತರ ಘಟಾನುಘಟಿ ಸರದಾರರ ಹದಿನಾಲ್ಕುಸಾವಿರ ಪದಾತಿದಳ ಸೈನಿಕರು, ಹತ್ತುಸಾವಿರ ಅಶ್ವಸೈನಿಕರು ಸಿದ್ಧಿಗಳ ನಿಗ್ರಹಣೆಯಲ್ಲಿ ಪನ್ಹಾಳ ಕೋಟೆಯನ್ನು ಸುತ್ತುವರಿದಿದ್ದರು. ಕೇವಲ ಒಂದು ಸಾವಿರ ಬಾಂದಳ ವಂಶಜ ಸೈನಿಕರ ಜೊತೆಗೆ ಪನ್ಹಾಳ ಕೋಟೆಯಲ್ಲಿದ್ದ ಶಿವಾಜಿಗೆ ಏನೂ ಮಾಡಲಾಗದ ದಿಗ್ಬಂದನ. ದವಸಧಾನ್ಯಗಳ ಉಗ್ರಾಣವು ಖಾಲಿಯಾಗುತ್ತಿದ್ದರಿಂದ ಎಲ್ಲರಿಗೂ ಒಪ್ಪತ್ತಿನ ಊಟ ಮಾತ್ರ. ಆಷಾಡ ಕಳೆದು ಭಾದ್ರಪದ ಬಂತೆಂದರೆ, ಮಳೆ ಗಮನೀಯವಾಗಿ ನಿಂತು, ವಾತಾವರಣ ಶುಷ್ಕವಾಗುವ ಸಂದರ್ಭ. ವೈರಿ ಸೈನಿಕರು ಪನ್ಹಾಳ ಕೋಟೆಯನ್ನು ಮೇಲೇರಿ, ಒಡೆದು ಒಳನುಗ್ಗಿ ಬರಬಹುದಾದ ಸಂಭವ. ಮಹಾರಾಜರನ್ನು ಬಂಧಿಸಿ ಹೆಡೆಮುರಿ ಕಟ್ಟಿ ಬಿಜಾಪುರಕ್ಕೆ ಕರೆದೊಯ್ಯುವ ಸಿದ್ದಿ ಜೌಹರನ ಹುನ್ನಾರ ಸಫಲವಾಗುವ ಚಿಹ್ನೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಮಹಾರಾಜರಿಗೆ ಈ ಸಂದಿಗ್ದ ಪರಿಸ್ಥಿತಿಯಿಂದ ತಪ್ಪಿಸಿಕೊಂಡು ಹೋಗಲು ಏನಾದರೊಂದು ಉಪಾಯ ಮಾಡಲೇಬೇಕಿತ್ತು.
ಅಪಾಯ ನಿಶ್ಚಿತವಾದಾಗಲೆಲ್ಲ ಚಾಣಕ್ಷ ಶಿವಾಜಿಯಿಂದ ಚತುರ ಉಪಾಯಗಳು ಉದ್ಭವಗೊಳ್ಳುತ್ತಿದ್ದವು. ತಾವು ಇನ್ನೂ ಮೂರು ದಿನಗಳಲ್ಲಿ ಸಿದ್ದಿ ಜೌಹರನಿಗೆ ಶರಣಾಗತರಾಗುವ ಇಂಗಿತವನ್ನು ಶಿವಾಜಿ ತಿಳಿಸಿದಾಕ್ಷಣ ತಮಗೆ ಜಯ ಲಭಿಸಿಯೇ ಬಿಟ್ಟಿತು, ಬೆಟ್ಟದ ಹುಲಿ ತಾನಾಗಿಯೇ ಬೋನು ಪ್ರವೇಶಿಸಲಿದೆ ಎಂದು ಆದಿಲ್ ಶಾಹಿಯ ಸೈನಿಕರು ಸಂಭ್ರಮಿಸಿದರು. ಒಂದೆರಡು ದಿನಗಳಲ್ಲಿಯೇ ಪಹರೆಯ ಬಿಗು ಬಹಳಷ್ಟು ಕಡಿಮೆಯಾಯಿತು. ವೈರಿಸೇನೆಯಲ್ಲಿ ಒಂದು ತರಹದ ಸಂತಸದ ಮತ್ತು ಹಬ್ಬದ ಸಂಭ್ರಮದ ವಾತಾವರಣ. ಇದು ಶಿವಾಜಿ ಮಹಾರಾಜರು ಹೂಡಿದ ಮಾನಸಿಕ ಯುದ್ಧತಂತ್ರವು (psychological warfare ಅಥವಾ mind game) ಅಪೇಕ್ಷಿತ ಫಲಿತಾಂಶ ನೀಡುವ ಸಂಕೇತವಾಗಿತ್ತು! ಮಾರನೆಯ ದಿನವೇ ಗುರುಪೂರ್ಣಿಮೆ!
ಧಾರಾಕಾರವಾಗಿ ಸಿಡಿಲು ಮಳೆ ಸುರಿಯುತ್ತಿತ್ತು. ಮಧ್ಯ ರಾತ್ರಿಯಾದಂತೆ, ತಮ್ಮ ಗುರು ಸ್ವಾಮಿ ಶ್ರೀ ಸಮರ್ಥ ರಾಮದಾಸರನ್ನು ಮನದಲ್ಲೇ ಪ್ರಾರ್ಥಿಸಿದ ಶಿವಾಜಿ ಮಹಾರಾಜರು, ತಮ್ಮ ಸೈನ್ಯವನ್ನು ಎರಡು ಪಾಲಾಗಿ ಹಂಚಿಕೊಂಡರು. ನಾನೂರು ಜನ ಸೈನಿಕರನ್ನು ಕೋಟೆಯಲ್ಲೇ ತಂಗಿದ್ದು ಅದನ್ನು ರಕ್ಷಿಸುವಂತೆ ನಿರ್ದೇಶಿಸಿ, ಆಯ್ದ ಆರುನೂರು ಜನ ಬಾಂದಳ ಸೈನಿಕರನ್ನು ತಮ್ಮೊಡನೆ ಬರಲು ಹೇಳಿದರು. ಅವರೆಲ್ಲರ ನಾಯಕ ಬಾಜಿಪ್ರಭು ದೇಶಪಾಂಡೆ ಮತ್ತು ಅವನ ಸಹೋದರ ಫುಲ್ಲಾಜಿ ಪ್ರಭು!
ಶಿವಾಜಿ ಮತ್ತು ಆರುನೂರು ಜನ ಸೈನಿಕರು ಕೋಟೆಯಿಂದ ಮೆಲ್ಲಗೆ, ಸದ್ದಿಲ್ಲದೇ ಒಂದು ಕಡಿದಾದ ಕಳ್ಳದಾರಿಯಿಂದ ಕೆಳಗಿಳಿದರು (ಈಗದನ್ನು ‘ಶಿವಾಜಿಯ ಕಿಟಕಿ’ ಎಂದು ಕರೆಯುತ್ತಾರೆ). ದೇವರ ದಯೆಯೆಂಬಂತೆ ಮಳೆ ತೀವ್ರವಾಯಿತು. ಕಂಬಳಿ ಹೊದ್ದುಕೊಂಡು ತೂಕಡಿಸುತ್ತಿದ್ದ ನೂರಾರು ಸೈನಿಕರ ನಡುವಿನಿಂದಲೇ ಸದ್ದಿಲ್ಲದೇ ಪಾರಾದ ಅವರು, ಪಶ್ಚಿಮ ದಿಕ್ಕಿನಲ್ಲಿ ಮೂವತ್ತಾರು ಮೈಲು ದೂರವಿರುವ ವಿಶಾಲಗಡ ಕೋಟೆಯ ಕಡೆ ವೇಗವಾಗಿ ನಡೆಯಲು ಪ್ರಾರಂಭಿಸಿದರು. ಕಡಿದಾದ ಪರ್ವತ ಕಾಡುಗಳ ಮೂಲಕ ನಡುರಾತ್ರಿ ಅಷ್ಟೊಂದು ದೂರ ಕ್ರಮಿಸುವುದು ಯಾವ ದೃಷ್ಟಿಯಿಂದಲೂ ಸುಲಭವಲ್ಲ. ಪೂರ್ಣಿಮೆಯ ಚಂದ್ರನ ಹೊಂಬೆಳಕಿನಲ್ಲಿ ವಿಶ್ರಮಿಸದೇ ನಿರಂತರವಾಗಿ ಒಂದು ತಾಸಿನಲ್ಲಿ ಮೂರ್ನಾಲ್ಕು ಮೈಲು ದೂರವನ್ನು ಕ್ರಮಿಸಿದರೂ, ವಿಶಾಲಗಡವನ್ನು ತಲುಪಲು ಏನಿಲ್ಲವೆಂದರೂ ಹತ್ತು-ಹನ್ನೆರಡು ತಾಸುಗಳಾದರೂ ಬೇಕು. ಅನೇಕ ತಿಂಗಳುಗಳಿಂದ ಸುರಿದ ಮಳೆಯಿಂದಾಗಿ ಕಲ್ಲುಬಂಡೆಗಳ ಮೇಲೆ ಹಸಿರು ಪಾಚಿ ಕಟ್ಟಿ, ನಡೆಯುವಾಗ ಜಾರಿಬೀಳುವ ಭೀತಿ ಬೇರೆ. ಸುರಕ್ಷಿತೆಗಾಗಿ ಬೇರೆ ಉಪಾಯವೇ ಇರಲಿಲ್ಲವಾದ ಕಾರಣ, ಮುತ್ತಿಗೆಯಿಂದ ಮುಕ್ತರಾಗಲು ಈ ದುರ್ಗಮ ಸಾಹಸವನ್ನು ಶಿವಾಜಿ ಮಹಾರಾಜರು ಕೈಗೆತ್ತಿಕೊಳ್ಳಲೇಬೇಕಾಯಿತು.
ಮೊದಲ ಬಲಿದಾನಿ ಶಿವಾ ಕಾಶಿದ್
ಶಿವಾಜಿ ಮಹಾರಾಜರು ಇನ್ನೊಂದು ತಂತ್ರವನ್ನು ಹೂಡಿದ್ದರು. ಧಾರಾಕಾರ ಮಳೆಯಲ್ಲಿ ಪಲಾಯನ ಮಾಡುವಾಗ, ಒಂದು ಪಲ್ಲಕ್ಕಿಯಲ್ಲಿ ತಮ್ಮಂತೆ ಕಾಣುವ ಒಬ್ಬ ಕ್ಷೌರಿಕ, ಅವನ ಹೆಸರು ಶಿವ ಕಾಶಿದ್ ಯಾನೆ, ಸಿವಾಜಿ ನೈಯ್ಯಿ, ಕೋಟೆ ಮೇಲಣ ಒಬ್ಬ ಕ್ಷೌರಿಕನನ್ನು ಅವರ ರಾಜಪೋಷಾಕುಗಳನ್ನು ಧರಿಸುವಂತೆ ಮಾಡಿ, ಒಂದು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಪೂರ್ವ ದಿಕ್ಕಿನಲ್ಲಿ ಕಳುಹಿಸಿದರು. ಪಶ್ಚಿಮದ ದಾರಿಯಲ್ಲಿ, ವಿಶಾಲಗಡವಿರುವ ದಿಕ್ಕಿನಲ್ಲಿ ಶಿವಾಜಿ ಮಹಾರಾಜರು ಕಾಲ್ನಡಿಗೆಯಲ್ಲಿ ಸಾಗಿದರು. ತುಸು ದೂರದ ಅನಂತರ ಶಿವಾಜಿ ಮಹಾರಾಜರು ತಪ್ಪಿಸಿಕೊಂಡ ಸಮಾಚಾರ ಸೈನಿಕರಿಗೆ ಅರಿವಾದಾಗ, ಎಲ್ಲರೂ ಮೊದಲು ಮುಗಿ ಬಿದ್ದಿದ್ದು ಪಂಜು ಹಿಡಿದು ಓಡುತ್ತಿರುವ ಸಿವಾಜಿ ನೈಯ್ಯಿಯ ಪಲ್ಲಕ್ಕಿಯನ್ನು! ಅಂತೂ, ಫಜಲ್ ಖಾನನು ಬಹಳ ಹುಮ್ಮಸ್ಸಿನಿಂದ ಕ್ಷೌರಿಕನನ್ನು ಬಂಧಿಸಿ, ಸಿದ್ದಿ ಜೌಹರನ ಕಾಲ್ಕೆಳಗೆ ಕೆಡವಿದಾಗಲೇ ಬಾಯ್ಬಿಟ್ಟ ಶಿವ ಕಾಶಿದನ ಮಾತುಗಳಿಂದ ಸತ್ಯದ ಅರಿವಾದದ್ದು ಮತ್ತು ಮೋಸಹೋದ ಪರಿಹಾಸ್ಯ! ಇದರಿಂದಾದ ಒಂದೆರಡು ಗಂಟೆಗಳ ವಿಳಂಬ, ಕಾಲ್ನಡಿಗೆಯಲ್ಲಿ ಓಡುತ್ತಿದ್ದ ಶಿವಾಜಿಯ ಸೈನಿಕರಿಗೆ ಅತ್ಯಮೂಲ್ಯ ಸಮಯವಾಗಿತ್ತು. ಶಿವ ಕಾಶಿದ್ ಸುಮ್ಮನೆ ಕೋಟೆಯ ಮೇಲೇ ಇದ್ದಿದ್ದರೆ ಅವನ ಪ್ರಾಣಕ್ಕೇನೂ ಅಪಾಯವಿರಲಿಲ್ಲ. ಆದರೂ, ತನ್ನ ಸ್ವಾಮಿಯ ಪ್ರಾಣರಕ್ಷಣೆಗಾಗಿ ಏನೇನೂ ಯೋಚಿಸದೆ, ಸಾವು ನಿಶ್ಚಿತವೆಂದು ತಿಳಿದೂ, ನಗುನಗುತ್ತಾ ಶಿವಾಜಿಯ ಪಡಿಯಚ್ಚು ವೇಷಹಾಕಿದ ಶಿವ ಕಾಶಿದ್, ಯಾನೆ, ಸಿವಾಜಿ ನೈಯ್ಯಿಯ ತ್ಯಾಗಕ್ಕೆ ಸರಿಸಾಟಿಯಿಲ್ಲ.
ವಿಶಾಲಗಡದ ದಿಕ್ಕಿನಲ್ಲಿ ಹೋಗಿರಬಹುದಾದ ಶಿವಾಜಿಯನ್ನು ಬೆಂಬತ್ತಿ ಹೋಗಲು ವ್ಯಾಘ್ರನಖದಿಂದ ಹತನಾಗಿದ್ದ ಅಫ್ಜಲ್ ಖಾನನ ಪುತ್ರ, ಫಜಲ್ ಖಾನನು ಸಿದ್ದಿ ಜೌಹರನ ಅಪ್ಪಣೆಯ ಮೇರೆಗೆ, ಒಂದು ನೂರು ಜನ ಅಶ್ವಸೇನೆಯೊಂದಿಗೆ ಹಿಂಬಾಲಿಸಿದನು. ಆದರೆ, ದಟ್ಟ ಮರಗಿಡಗಳೇ ತುಂಬಿದ ಗೊಂಡಾರಣ್ಯದಲ್ಲಿ, ಪಳಗಿದ ಪರ್ವತವಾಸಿಗಳು ಕುದುರೆಗಳಿಗಿಂತಲೂ ವೇಗವಾಗಿ ನಡೆಯಬಲ್ಲರು. ಸಿದ್ದಿ ಜೌಹರನು ಫಜಲ್ ಖಾನನ ಹಿಂದೆಯೇ ಅಪಾರ ಸೈನ್ಯವನ್ನು ಕಳುಹಿಸಲು ಆದೇಶಿಸಿದ! ಆದರೆ, ವಿರಮಿಸುತ್ತಿದ್ದ ಹನ್ನೆರಡುಸಾವಿರ ಸೈನಿಕರನ್ನು ಒಗ್ಗೂಡಿಸಿ, ಸಶಸ್ತ್ರ ಸನ್ನದ್ಧರಾಗಿ ಕಳುಹಿಸಲು ಒಂದೆರಡು ತಾಸಾದರೂ ಬೇಕು. ಸಿದ್ದಿ ಜೌಹರನು ಪರಿಸ್ಥಿತಿಯನ್ನು ಅರಿತು, ಹತೋಟಿಗೆ ತರಲು ಕಾರ್ಯ ಆರಂಭಿಸುವಾಗ, ಶಿವಾಜಿಯೊಡನೆ ಆರು ನೂರು ಜನ ಸೈನಿಕರು ವಿಶಾಲಗಡದ ಕಡೆ ದಾಪುಗಾಲು ಹಾಕುತ್ತಾ ನಡೆಯುತ್ತಿದ್ದರು. ಮಳೆ ನಿಲ್ಲದೇ ಸುರಿಯುತ್ತಲಿತ್ತು.
ಪಾವನಕಿಂಡದ ಹುತಾತ್ಮರು:
ಸುಮಾರು ಮಧ್ಯಾಹ್ನವಾಗುವಾಗ, ಓಡುತ್ತಿದ್ದ ಶಿವಾಜಿಯ ಸೈನಿಕರು ಫಜಲ್ ಖಾನನ ಕಣ್ಣಿಗೆ ಬಿದ್ದರು. ವಿಶಾಲಗಡವು ಇನ್ನೂ ಆರು ಮೈಲು ದೂರವಿತ್ತು. ಅಂದರೆ, ಶಿವಾಜಿ ಮಹಾರಾಜರು ನಲುವತ್ತು ಮೈಲು ದೂರವನ್ನು ಸುಮಾರು ಹನ್ನೆರಡು ಗಂಟೆಗಳಲ್ಲಿ ನಿರಂತರವಾಗಿ ನಡೆದು ಕ್ರಮಿಸಿದ್ದರು. ಅವರ ದೇಹ ದಾರ್ಢ್ಯತೆ ಮತ್ತು ಶಾರೀರಿಕ ಕ್ಷಮತೆ ಮೆಚ್ಚಬೇಕು. ಕಡಿದಾದ ಬೆಟ್ಟವೇರಲು, ಸರಿಯಾದ ನಿದ್ರೆ ಮತ್ತು ಆಹಾರವಿಲ್ಲದೇ, ಸೈನಿಕರ ಶಕ್ತಿ ಮತ್ತು ವೇಗವೂ ಕುಂಠಿತವಾಗಿತ್ತು. ಆದರೆ, ಶಿವಾಜಿ ಮಹಾರಾಜರ ಸಮಯ ಪ್ರಜ್ಞೆ ಮೆಚ್ಚಬೇಕು. ಅಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕ್ಲೇಶಗೊಳ್ಳದೆ, ಶಾಂತಿಯಿಂದ ಶಿವಾಜಿ ಮಹಾರಾಜರು ಹೊಸದೊಂದು ರಣತಂತ್ರವನ್ನು ಹೂಡಿದರು. ಅದರಂತೆ, ಮುನ್ನೂರು ಜನ ಸೈನಿಕರು ಬಾಜೀಪ್ರಭು ದೇಶಪಾಂಡೆಯ ನೇತೃತ್ವದಲ್ಲಿ ಹಿಂರಕ್ಷಣಾ ಪಡೆಯ ಕಾರ್ಯ ನಿರ್ವಹಿಸುತ್ತಾ, ಘೋಡಕಿಂಡ ಕಣಿವೆಯನ್ನು ವೈರಿ ಸೇನೆ ದಾಟದಂತೆ ತಡೆ ಹಿಡಿಯಬೇಕು ಮತ್ತು ಉಳಿದ ಮುನ್ನೂರು ಜನ ಸೈನಿಕರೊಂದಿಗೆ ಶಿವಾಜಿ ಮಹಾರಾಜರು ವಿಶಾಲಗಡದ ಕಡೆ ತಮ್ಮ ಪ್ರಯಾಣ ಮುಂದುವರೆಸುವ ಒಂದು ರಣತಂತ್ರವನ್ನು ಹೂಡಿದರು. ಘೋಡಕಿಂಡ ಕಣಿವೆಯನ್ನು ಬಿಟ್ಟರೆ ವಿಶಾಲಗಡಕ್ಕೆ ಹೋಗಲು ಆಗ ಬೇರೆ ದಾರಿಯಿರಲಿಲ್ಲ. ಅದರಂತೆ, ಶಿವಾಜಿ ಮಹಾರಾಜರು ವಿಶಾಲಗಡವನ್ನು ಸುರಕ್ಷಿತವಾಗಿ ತಲುಪಿದ ಸಂಕೇತವಾಗಿ ಐದು ಬಾರಿ (ಕೆಲವರು ಇತಿಹಾಸಕಾರರು ಮೂರು ಬಾರಿ ಎಂದು ಬರೆದಿದ್ದಾರೆ) ತೋಪನ್ನು ಉಡಾಯಿತ್ತೇವೆ. ಆಗ, ಬಾಜೀಪ್ರಭುವಿನ ಹಿಂರಕ್ಷಣಾ ಪಡೆಯು ಚದುರಿ ಸುರಕ್ಷಿತ ಜಾಗಗಳಿಗೆ ಪಲಾಯನ ಮಾಡಬೇಕು ಎನ್ನುವ ರಣನೀತಿ ತಯಾರಾಯಿತು. ಎಲ್ಲರೂ ಝಳಪಿಸುವ ಖಡ್ಗಗಳನ್ನು ಹಿರಿದು, ಶತ್ರುಗಳ ರಕ್ತದೋಕುಳಿ ಹರಿಸಿ, ಸ್ವಾಗತಿಸಲು ಸನ್ನದ್ಧರಾದರು.
ಈ ಘೋಡಕಿಂಡ ಕಣಿವೆಯಿಂದ ಒಮ್ಮೆ ಹೆಚ್ಚೆಂದರೆ ಒಂದು ಕುದುರೆ, ಅಥವಾ ಇಬ್ಬರು – ಮೂವರು ಸೈನಿಕರು ಕಾಲ್ನಡಿಗೆಯಲ್ಲಿ ಕ್ರಮಿಸುವಷ್ಟು ಮಾತ್ರ ಅಗಲವಿತ್ತು. ಎರಡೂ ಬದಿಯಲ್ಲಿ ಕಡಿದಾದ ಬಂಡೆಗಲ್ಲಿನ ಗುಡ್ಡಗಳು. ಘೋಡಕಿಂಡ ಕಣಿವೆ ತಲುಪಿದ ಬಾಜೀಪ್ರಭು, ಮೇಲೊಂದಷ್ಟು ಸೈನಿಕರನ್ನು ನಿಯೋಜಿಸಿ, ತನ್ನ ಸಹೋದರ ಫುಲ್ಲಾಜಿ ಪ್ರಭು ದೇಶಪಾಂಡೆಯೊಂದಿಗೆ, ಎರಡೂ ಕೈಗಳಲ್ಲಿ ‘ದಂಡಪಟ್ಟಾ’ ಎನ್ನುವ ಉದ್ದದ, ಅತ್ಯಂತ ಮೊನಚಾದ, ತಳುಕು-ಬಳುಕುವಂತಹದೊಂದು ಖಡ್ಗ ಹಿಡಿದು ಸಿಂಹದಂತೆ ಗರ್ಜಿಸುತ್ತಾ, ಘೋಡಕಿಂಡ ಕಣಿವೆಯ ದ್ವಾರದೆದುರು ಹೋರಾಡಲು ಸನ್ನದ್ಧನಾದನು.
ಅಕ್ಕಪಕ್ಕದ ಕಡಿದಾದ ಬಂಡೆಗಲ್ಲಿನ ಬೆಟ್ಟಗಳ ಮೇಲೆ ನಿಂತಿದ್ದ ಬಾಂದಳ ಸೈನಿಕರು, ಸಿದ್ದಿ ಜೌಹರನ ಸೈನ್ಯದ ಮೇಲೆ ಕಲ್ಲು ಬಂಡೆಗಳ ಮಳೆ ಸುರಿದರೆ, ಕಣಿವೆಯಲ್ಲಿ ನಿಂತ ಬಾಂದಳ ಸೈನಿಕರ ಖಡ್ಗಗಳು ಥಳಥಳಿಸುತ್ತಿದ್ದವು. ಕೆಲವು ಶತ್ರುಗಳು ತಲೆಯೊಡದು ಬಿದ್ದರೆ, ಬಹಳಷ್ಟು ವೈರಿ ಸೈನಿಕರು ಕುದುರೆಗಳ ಕಾಲ್ತುಳಿತಕ್ಕೆ ಸಿಲುಕಿ ಒದ್ದಾಡಿದರು. ಈ ಗೊಂದಲ ಘರ್ಷಣೆಗಳ ನಡುವೆ ಅನೇಕರು ಆಯ ತಪ್ಪಿ ಪ್ರಪಾತಕ್ಕೆ ಬಿದ್ದರು. ಎಲ್ಲೆಲ್ಲೂ ಹಾಹಾಕಾರ. ಮುನ್ನುಗ್ಗಿ ವ್ಯೂಹ ಛೇದಿಸಲು ಪ್ರಯತ್ನಿಸುತ್ತಿದ್ದ ಎಲ್ಲ ವೈರಿ ಸೈನಿಕರನ್ನು ಕೊಚ್ಚಿಹಾಕುತ್ತಲೇ ಇದ್ದ ಬಾಜೀಪ್ರಭುವಿನ ದೇಹವಿಡೀ ಖಡ್ಗ, ಭರ್ಜಿಗಳ ಗಾಯಗಳೇ ತುಂಬಿ ಬಹಳಷ್ಟು ರಕ್ತ ಸೋರಿತ್ತು. ವೈರಿಗಳ ಸಹಸ್ರಾರು ಕಂಠಗಳ ‘ಅಲ್ಲಾಹು ಅಕ್ಬರ್!’ ರಣಘೋಷಕ್ಕೆ ಪ್ರತ್ಯತ್ತರವಾಗಿ “ಹರ ಹರ ಮಹಾದೇವ್….!” ರಣಘೋಷ ಬಾಜೀಪ್ರಭುವಿನ ಸೈನಿಕರ ಬಾಯಲ್ಲಿ ನಿರಂತರವಾಗಿ ಮೊಳಗುತಿತ್ತು. ಬಾಜೀಪ್ರಭುವಿನ ಸೈನಿಕರು ಒಬ್ಬೊಬ್ಬರಾಗಿ ವೀರ ಮರಣಹೊಂದಿದರು. ಬಾಜೀಪ್ರಭುವಿನ ಶರೀರದ ಮೇಲೆ ಸುಮಾರು ಎಂಬತ್ತು ಗಾಯಗಳಾದರೂ, ರಕ್ತ ಸುರಿಯುತ್ತಿದ್ದರೂ, ಅವನು ತನ್ನ ದಂಡಪಟ್ಟಾ ಖಡ್ಗ ಬೀಸುವುದನ್ನು ಮಾತ್ರ ನಿಲ್ಲಿಸಲೇ ಇಲ್ಲ. ಜೀವವಿರುವವರೆಗೂ ವೈರಿಯ ಒಬ್ಬ ಸೈನಿಕನನ್ನೂ ಘೋಡಕಿಂಡ ಕಣಿವೆಯನ್ನು ದಾಟಲು ಬಿಡಲಿಲ್ಲ. ಒಂದೇಸಮನೆ ಖಡ್ಗ ಬೀಸುತ್ತ ರಕ್ತದೋಕುಳಿಯಾಡುತ್ತಿದ್ದ ಬಾಜೀಪ್ರಭುವಿನ ನೆತ್ತರುಮಯ ಶರೀರವನ್ನು ಕಂಡ ಸೈನಿಕರಿಗೆ ಸಾಕ್ಷಾತ್ ಶಿವನೇ ತಾಂಡವವಾಡುತ್ತಿರಬಹುದೆಂದು ದಿಗ್ಭ್ರಮೆಯಾಯಿತು.
ಅತ್ತ ವಿಶಾಲಗಡವನ್ನು ಬಿಜಾಪುರಿ ಸರದಾರರಾದ ಸೂರ್ಯರಾವ್ ಸುರ್ವೆ ಮತ್ತು ಜಸ್ವಂತರಾವ್ ದಳ್ವಿ ತಮ್ಮ ಸೇನೆಯೊಂದಿಗೆ ಮುತ್ತಿಗೆ ಹಾಕಿದ್ದರು. ಶಿವಾಜಿ ಮಹಾರಾಜರು ಮೊದಲು ಅವರನ್ನು ಸೆಣಸಾಡಿ, ಸೋಲಿಸಿ ಅನಂತರವೇ ಕೋಟೆಯ ಒಳ ಪ್ರವೇಶ ಮಾಡಬೇಕಿತ್ತು. ರಂಗೋ ನಾರಾಯಣ, ಯಾನೆ, ರಂಗನಾಥ ನಾರಾಯಣ ಓರ್ಪೆ ಒಬ್ಬ ಮರಾಠ ಯೋಧ ಮತ್ತು ಕೋಟೆಯ ಆಡಳಿತಾತ್ಮಕ ಅಧಿಕಾರಿ, ಮಹಾರಾಜರನ್ನು ಸ್ವಾಗತಿಸಲು ವಿಶಾಲಗಡದೊಳಗೆ ಕೌತುಕನಾಗಿ ತನ್ನ ಸೈನಿಕರೊಡನೆ ಕಾಯುತ್ತಿದ್ದನು. ಮಹಾರಾಜರು ಕೋಟೆಯ ಬಳಿ ಬಂದತೆಯೇ, ಅವನು ತನ್ನ ಸೈನ್ಯದೊಂದಿಗೆ ದುಮುಕಿ ಅದಿಲಶಾಹಿಯ ಸೈನಿಕರನ್ನು ಓಡಿಸಿದನು. ಮಹಾರಾಜರು ವಿಶಾಲಗಡವನ್ನು ಸುರಕ್ಷಿತವಾಗಿ ಒಳಹೊಕ್ಕಂತೆಯೇ, ಕೋಟೆಯ ಮುಖ್ಯದ್ವಾರವನ್ನು ಭದ್ರವಾಗಿ ಮುಚ್ಚಿ, ಅಟ್ಟಿಸಿಕೊಂಡು ಬಂದಂತಹ ಬಿಜಾಪುರ ಅದಿಲಶಾಹಿಯ ಅಪಾರ ಸೈನಿಕರನ್ನು ಹಿಮ್ಮೆಟ್ಟಿಸಿ, ಹಿಂತಿರುಗಿ ಓಡಿ ಹೋಗುವಂತೆ ಮಾಡಿ, ವಿಶಾಲಗಡವನ್ನು ಮತ್ತು ಅದರಲ್ಲಿ ತಂಗಿದ್ದ ಶಿವಾಜಿ ಮಹಾರಾಜರನ್ನು ಕಾಪಾಡಿದ್ದು ರಂಗೋ ನಾರಾಯಣನ ಒಂದು ಮಹತ್ತ್ವದ ಕೊಡುಗೆ.
ಬಾಜೀಪ್ರಭು ಶಿವಾಜಿ ಮಹಾರಾಜರಿಗಿಂತ ಸುಮಾರು ಹದಿನೈದು ವರ್ಷಗಳಷ್ಟು ಹಿರಿಯ ವ್ಯಕ್ತಿ. ಚಂದ್ರಸೇನಿಯ ಕಾಯಸ್ಥ ಪ್ರಭು ಬ್ರಾಹ್ಮಣ ಕುಟುಂಬ. ಬಾಂದಳ ವಂಶಜರು. ಜನನ: 1615 ವೀರ ಮರಣ: 1660. ಅಂದರೆ ಪಾವನಕಿಂಡ ಯುದ್ಧ ನಡೆಯುವಾಗ ಬಾಜೀಪ್ರಭುವಿಗೆ ಸುಮಾರು ನಲುವತೈದು ವರ್ಷ ವಯಸ್ಸು, ಆದರೂ ತರುಣರಂತೆ ಹುಮ್ಮಸ್ಸಿನಿಂದ ಕೊನೆಯುಸಿರಿರುವ ತನಕ ಹೋರಾಡುತ್ತಲೇ ಇದ್ದು, “ಧೂಮ್, ಧೂಮ್, ಧೂಮ್” ಫಿರಂಗಿಯ ಶಬ್ದ ಕೇಳಿದ ಅನಂತರವೇ ಖಡ್ಗ ಇಳಿಸಿದನು. ಬಾಜಿಪ್ರಭುವಿನ ಬಲಿದಾನ ಅಜರಾಮರ.
ಘೋಡಕಿಂಡದಲ್ಲಿ ಎರಡು-ಮೂರು ತಾಸುಗಳಷ್ಟು ಕಾಲ ನಿರಂತರವಾಗಿ ಹೋರಾಡಿದ ಬಾಜೀಪ್ರಭುವಿಗೆ ಕೊನೆಗೂ, ಸುರಕ್ಷತೆಯ ಸಂಕೇತವೆಂಬಂತೆ ಮೂರು ಬಾರಿ “ಧೂಮ್ ಧೂಮ್ ಧೂಮ್” ಎಂದು ತೋಪಿನ ಸದ್ದು ಕೇಳಿಸಿತು. ತನ್ನ ಮಹಾರಾಜರು ಸುರಕ್ಷಿತರಾಗಿ ವಿಶಾಲಗಡ ತಲುಪಿದರೆಂದು ತಿಳಿದು ಸಂತೃಪ್ತನಾಗಿ ಕುಸಿದು ವೀರಮರಣ ಅಪ್ಪಿದನು. ಆದರೆ ಕೈಯಲ್ಲಿ ಹಿಡಿದಿದ್ದ ದಂಡಪಟ್ಟಾ ಖಡ್ಗಗಳ ಮೇಲಿನ ಬಿಗಿಹಿಡಿತ ಸಡಿಲಗೊಳ್ಳಲಿಲ್ಲ. ರಕ್ತಸಿಕ್ತವಾಗಿದ್ದ ಬಾಜೀ ಪ್ರಭುವಿನ ಮೃತ ದೇಹವನ್ನು ದಾಟಿ ಮುಂದೆ ಹೋಗಲು ಸಿದ್ದಿ ಜೌಹರನ ಸೈನಿಕರು ಬೆದರಿ, ದೂರದಿಂದಲೇ ಭರ್ಜಿಯಿಂದ ಚುಚ್ಚಿ ಅವನು ದಿಟವಾಗಿಯೂ ಅಸು ನೀಗಿದ್ದಾನೆಂದು ಖಾತ್ರಿಪಡಿಸಿಕೊಂಡು, ಅನಂತರವೇ ಘೋಡಕಿಂಡಿಯನ್ನು ದಾಟಿದರಂತೆ!
ಅಂದಿನಿಂದ 366 ಗುರುಪೂರ್ಣಿಮೆಗಳು ಕಳೆದವು. ಬಾಜೀಪ್ರಭು, ಸಹೋದರ ಫುಲ್ಲಾಜಿ ಪ್ರಭು ಮತ್ತವರ ಮುನ್ನೂರು ಜನ ಬಾಂದಳ ಸೈನಿಕರಲ್ಲಿ ಒಬ್ಬರೂ ಉಳಿಯಲಿಲ್ಲ. ಎಲ್ಲರ ಮುಖದಲ್ಲಿ ತಮ್ಮ ಮಹಾರಾಜರ ಪ್ರಾಣ ರಕ್ಷಿಸಿದ ಧನ್ಯತೆ ಇತ್ತು!
