ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತೀಯ ಕುಟುಂಬದ ಆರ್ಥಿಕ ಜಾಣ್ಮೆಯೇ ನಿಜವಾದ ಭದ್ರತೆ
- ಡಾ. ಎ. ಜಯಕುಮಾರ ಶೆಟ್ಟಿ, ನಿವೃತ್ತ ಪ್ರಾಂಶುಪಾಲ, ಶ್ರೀ ಧ.ಮಂ. ಪದವಿ ಕಾಲೇಜು (ಸ್ವಾಯತ್ತ) ಉಜಿರೆ
ಇಂದು ಜಗತ್ತಿನಲ್ಲಿ ನಡೆಯುವ ಯಾವುದೇ ಮಹತ್ವದ ಬೆಳವಣಿಗೆ ನಮ್ಮಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ ಅದರ ಪರಿಣಾಮ ನಮ್ಮ ಮನೆಯ ಬಜೆಟ್ನವರೆಗೂ ತಲುಪುವ ಕಾಲ ಬಂದಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದರೆ ನಮ್ಮ ದೇಶದಲ್ಲಿ ಇಂಧನ ಬೆಲೆಗಳ ಬಗ್ಗೆ ಆತಂಕ ಮೂಡುತ್ತದೆ. ಯುರೋಪಿನಲ್ಲಿ ಹವಾಮಾನ ವೈಪರೀತ್ಯ ಉಂಟಾದರೆ ಕೃಷಿ ಉತ್ಪನ್ನಗಳ ಜಾಗತಿಕ ಬೆಲೆಗಳಲ್ಲಿ ಏರಿಳಿತ ಕಾಣಿಸುತ್ತದೆ. ಒಂದು ದೇಶದ ರಾಜಕೀಯ ಅಸ್ಥಿರತೆ ಮತ್ತೊಂದು ದೇಶದ ಮಾರುಕಟ್ಟೆಯನ್ನು ಅಲುಗಾಡಿಸುತ್ತದೆ.
ಜಾಗತೀಕರಣದ ಈ ಯುಗದಲ್ಲಿ ಜಗತ್ತು ಆರ್ಥಿಕವಾಗಿ ಪರಸ್ಪರ ಅವಲಂಬಿತವಾಗಿದೆ. ಆದ್ದರಿಂದ ಜಾಗತಿಕ ಘಟನೆಗಳನ್ನು ಕೇವಲ ಅಂತಾರಾಷ್ಟ್ರೀಯ ಸುದ್ದಿಗಳೆಂದು ನೋಡುವ ಕಾಲ ಮುಗಿದಿದೆ. ಅವು ನಮ್ಮ ಕುಟುಂಬದ ಆರ್ಥಿಕ ಬದುಕಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಅರ್ಥಮಾಡಿಕೊಳ್ಳುವುದು ಇಂದಿನ ನಾಗರಿಕ ಪ್ರಜ್ಞೆಯ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿರುವುದು ವಿಶ್ವ ಆರ್ಥಿಕತೆಯಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಅದರೊಂದಿಗೆ ಹವಾಮಾನ ವೈಪರೀತ್ಯ, ಜಾಗತಿಕ ವ್ಯಾಪಾರದಲ್ಲಿನ ವ್ಯತ್ಯಯ ಮತ್ತು ಇಂಧನ ಮಾರುಕಟ್ಟೆಯ ಅಸ್ಥಿರತೆ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಹೊಸ ಸವಾಲುಗಳನ್ನು ತಂದೊಡ್ಡಿವೆ. ಆದರೆ ಇಂತಹ ಬೆಳವಣಿಗೆಗಳಿಂದ ಆತಂಕಕ್ಕೆ ಒಳಗಾಗುವುದಕ್ಕಿಂತ ಜಾಗೃತರಾಗುವುದು ಹೆಚ್ಚು ಮುಖ್ಯ. ಜಗತ್ತಿನ ಘಟನೆಗಳನ್ನು ನಾವು ನಿಯಂತ್ರಿಸಲು ಸಾಧ್ಯವಾಗದಿದ್ದರೂ, ನಮ್ಮ ಕುಟುಂಬದ ಹಣಕಾಸಿನ ನಿರ್ವಹಣೆಯನ್ನು ಮಾತ್ರ ವಿವೇಕದಿಂದ ರೂಪಿಸಬಹುದು. ಅನಿಶ್ಚಿತ ಕಾಲದಲ್ಲಿ ಅದುವೇ ನಮ್ಮ ದೊಡ್ಡ ಶಕ್ತಿಯಾಗುತ್ತದೆ. ಭಗವದ್ಗೀತೆಯ ‘ಉದ್ಧರೇ ದಾತ್ಮನಾತ್ಮಾನಂ’ ಎಂಬ ಸಂದೇಶ ವ್ಯಕ್ತಿಯು ತನ್ನ ಜವಾಬ್ದಾರಿಯನ್ನು ತಾನೇ ಹೊರುವಂತೆ ಕರೆ ನೀಡುತ್ತದೆ. ಜಾಗತಿಕ ಅನಿಶ್ಚಿತತೆಯ ನಡುವೆಯೂ ನಮ್ಮ ಆರ್ಥಿಕ ಭದ್ರತೆಯನ್ನು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ.
ಯುದ್ಧದ ಪರಿಣಾಮ ಗಡಿಗಳಲ್ಲೇ ನಿಲ್ಲುವುದಿಲ್ಲ
ಒಂದು ಕಾಲದಲ್ಲಿ ಯುದ್ಧದ ಪರಿಣಾಮ ಯುದ್ಧ ನಡೆಯುವ ದೇಶಗಳಿಗೆ ಮಾತ್ರ ಸೀಮಿತವಾಗುತ್ತಿತ್ತು. ಆದರೆ ಇಂದಿನ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ವ್ಯಾಪಾರ, ಸಾಗಣೆ, ಇಂಧನ, ಹೂಡಿಕೆ ಮತ್ತು ಹಣಕಾಸು ಮಾರುಕಟ್ಟೆಗಳ ಮೂಲಕ ಒಂದು ರಾಷ್ಟ್ರದ ಸಂಕಷ್ಟವು ಅನೇಕ ದೇಶಗಳಿಗೆ ಹರಡುತ್ತದೆ. ವಿಶೇಷವಾಗಿ ಮಧ್ಯಪ್ರಾಚ್ಯವು ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಕೇಂದ್ರವಾಗಿದೆ. ಅಲ್ಲಿನ ಉದ್ವಿಗ್ನತೆ ಹೆಚ್ಚಿದಾಗ ಕಚ್ಚಾತೈಲದ ಬೆಲೆ ಏರಬಹುದು ಎಂಬ ನಿರೀಕ್ಷೆಯೇ ಮಾರುಕಟ್ಟೆಯಲ್ಲಿ ಆತಂಕ ಮೂಡಿಸುತ್ತದೆ. ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಿದ್ದರೂ ಅನಿಶ್ಚಿತತೆಯ ವಾತಾವರಣವೇ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಅರ್ಥಶಾಸ್ತ್ರದಲ್ಲಿ ಇದನ್ನು ನಿರೀಕ್ಷೆಗಳ ಪರಿಣಾಮವೆಂದು ವಿವರಿಸಲಾಗುತ್ತದೆ.
ತೈಲ ದುಬಾರಿಯಾದರೆ ಎಲ್ಲವೂ ದುಬಾರಿ
ತೈಲವು ಕೇವಲ ವಾಹನಗಳಿಗೆ ಬಳಸುವ ಇಂಧನವಲ್ಲ. ಅದು ಆಧುನಿಕ ಆರ್ಥಿಕತೆಯ ಜೀವನಾಡಿಯಾಗಿದೆ. ತೈಲದ ಬೆಲೆ ಏರಿದಾಗ ಮೊದಲಿಗೆ ಸಾರಿಗೆ ವೆಚ್ಚ ಹೆಚ್ಚುತ್ತದೆ. ಅದರ ಪರಿಣಾಮ ಕೈಗಾರಿಕೆ, ಕೃಷಿ, ಉತ್ಪಾದನೆ ಹಾಗೂ ಸೇವಾ ಕ್ಷೇತ್ರಗಳ ವೆಚ್ಚವೂ ಏರುತ್ತದೆ. ಅಂತಿಮವಾಗಿ ಗ್ರಾಹಕರು ಖರೀದಿಸುವ ದಿನನಿತ್ಯದ ಬಹುತೇಕ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀಳುತ್ತದೆ. ಇದುವೇ ಹಣದುಬ್ಬರದ ಸರಪಳಿ ಪರಿಣಾಮ. ಆದ್ದರಿಂದ ದೂರದ ದೇಶದಲ್ಲಿ ನಡೆಯುವ ಸಂಘರ್ಷದ ಪರಿಣಾಮ ನಮ್ಮ ಮನೆಯ ದಿನಸಿ ಖರ್ಚಿನಲ್ಲಿಯೂ ಕಾಣಿಸಿಕೊಳ್ಳುವುದು ಅಚ್ಚರಿಯ ಸಂಗತಿಯಲ್ಲ.
ಭಾರತದ ಸಿದ್ಧತೆ ಆತ್ಮವಿಶ್ವಾಸ ನೀಡುತ್ತದೆ
ಭಾರತವು ವಿಶ್ವದ ಪ್ರಮುಖ ಕಚ್ಚಾ ತೈಲ ಆಮದು ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ಅಂತಾರಾಷ್ಟ್ರೀಯ ಬೆಲೆ ಏರಿಳಿತದ ಪರಿಣಾಮವನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಭಾರತ ತನ್ನ ಆರ್ಥಿಕ ನೆಲೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಇಂಧನ ಮೂಲಗಳ ವೈವಿಧ್ಯೀಕರಣ, ವಿದೇಶಿ ವಿನಿಮಯ ಮೀಸಲು ಬಲವರ್ಧನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಮತೋಲಿತ ಆರ್ಥಿಕ ನೀತಿಗಳ ಮೂಲಕ ಜಾಗತಿಕ ಆಘಾತಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಭಾರತದ ಆರ್ಥಿಕತೆ ಇಂದು ಸದೃಢ ಅಡಿಪಾಯದ ಮೇಲೆ ನಿಂತಿದ್ದು, ಜಾಗತಿಕ ಆರ್ಥಿಕ ವೇದಿಕೆಯಲ್ಲಿ ಪ್ರಮುಖ ಪಾತ್ರವಹಿಸುವತ್ತ ಮುನ್ನಡೆಯುತ್ತಿದೆ.
ಭಾರತೀಯ ಕುಟುಂಬದ ಶಕ್ತಿಯೇ ಹಣಕಾಸಿನ ಶಿಸ್ತು
ಭಾರತೀಯ ಸಮಾಜದ ದೊಡ್ಡ ಶಕ್ತಿಯೆಂದರೆ ಅದರ ಕುಟುಂಬ ವ್ಯವಸ್ಥೆ. ಉಳಿತಾಯ, ಮಿತವ್ಯಯ, ಸಂಯಮ ಮತ್ತು ದೂರದೃಷ್ಟಿ ನಮ್ಮ ಜೀವನ ಸಂಸ್ಕೃತಿಯ ಭಾಗವಾಗಿವೆ. ಅನಿಶ್ಚಿತ ಕಾಲದಲ್ಲಿ ಇದೇ ಮೌಲ್ಯಗಳು ಕುಟುಂಬವನ್ನು ರಕ್ಷಿಸುತ್ತವೆ. ಅನಗತ್ಯ ಖರ್ಚು, ಸಾಲ ಅಥವಾ ವಸ್ತುಗಳ ಸಂಗ್ರಹ—ಯಾವುದರಲ್ಲೂ ಅತಿರೇಕ ಒಳ್ಳೆಯದಲ್ಲ. ‘ಅತಿ ಸರ್ವತ್ರ ವರ್ಜಯೇತ್’ ಎಂಬ ಭಾರತೀಯ ಜೀವನಸೂತ್ರವು ಹಣಕಾಸಿನ ನಿರ್ವಹಣೆಯಲ್ಲಿಯೂ ಅಷ್ಟೇ ಪ್ರಸ್ತುತವಾಗಿದೆ.
ಭಾರತೀಯ ಸಮಾಜದ ದೊಡ್ಡ ಶಕ್ತಿಯೆಂದರೆ ಅದರ ಕುಟುಂಬ ವ್ಯವಸ್ಥೆ. ಉಳಿತಾಯ, ಮಿತವ್ಯಯ, ಸಂಯಮ ಮತ್ತು ದೂರದೃಷ್ಟಿ ನಮ್ಮ ಜೀವನ ಸಂಸ್ಕೃತಿಯ ಭಾಗವಾಗಿವೆ. ಅನಿಶ್ಚಿತ ಕಾಲದಲ್ಲಿ ಇದೇ ಮೌಲ್ಯಗಳು ಕುಟುಂಬವನ್ನು ರಕ್ಷಿಸುತ್ತವೆ. ಕುಟುಂಬದ ಮಾಸಿಕ ಬಜೆಟ್ನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಉತ್ತಮ ಅಭ್ಯಾಸ. ಆದಾಯ ಮತ್ತು ವೆಚ್ಚದ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮತ್ತು ಅನಗತ್ಯ ಖರ್ಚುಗಳನ್ನು ಪ್ರತ್ಯೇಕಿಸಬೇಕು. ತುರ್ತು ಅಗತ್ಯವಿಲ್ಲದ ಖರೀದಿಗಳನ್ನು ಮುಂದೂಡುವುದರಿಂದ ಭವಿಷ್ಯದ ಅನಿರೀಕ್ಷಿತ ಸಂದರ್ಭಗಳನ್ನು ಹೆಚ್ಚು ಆತ್ಮವಿಶ್ವಾಸದಿಂದ ಎದುರಿಸಬಹುದು. ಪಂಚತಂತ್ರದ ಸುಭಾಷಿತವೊಂದು ಈ ಸಂದರ್ಭದಲ್ಲಿ ಅತ್ಯಂತ ಅರ್ಥಪೂರ್ಣವಾಗಿದೆ—‘ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ’. ಅಂದರೆ ಕೇವಲ ಆಶೆ ಅಥವಾ ಕನಸುಗಳಿಂದಲ್ಲ; ನಿರಂತರ ಪ್ರಯತ್ನ, ಸೂಕ್ತ ಯೋಜನೆ ಮತ್ತು ಜಾಣ್ಮೆಯ ಕಾರ್ಯಾಚರಣೆಯಿಂದಲೇ ಯಶಸ್ಸು ದೊರೆಯುತ್ತದೆ. ಈ ತತ್ತ್ವವು ವೈಯಕ್ತಿಕ ಹಣಕಾಸಿನ ನಿರ್ವಹಣೆಯಲ್ಲಿಯೂ ಸಮಾನವಾಗಿ ಅನ್ವಯಿಸುತ್ತದೆ.
ಉಳಿತಾಯವೇ ಸಂಕಷ್ಟದ ಕಾಲದ ಕವಚ
ನಮ್ಮ ಪೂರ್ವಜರು ಉಳಿತಾಯವನ್ನು ಕೇವಲ ಆರ್ಥಿಕ ಅಭ್ಯಾಸವಾಗಿ ನೋಡಲಿಲ್ಲ; ಅದನ್ನು ಜೀವನದ ಭದ್ರತೆಯ ಭಾಗವೆಂದು ಪರಿಗಣಿಸಿದರು. ಚಾಣಕ್ಯನು ಹೇಳುತ್ತಾನೆ—‘ಆಪದರ್ಥಂ ಧನಂ ರಕ್ಷೇತ್’. ಅಂದರೆ ಆಪತ್ಕಾಲಕ್ಕಾಗಿ ಧನವನ್ನು ಸಂರಕ್ಷಿಸಬೇಕು. ಇಂದಿನ ಅನಿಶ್ಚಿತ ಆರ್ಥಿಕ ಪರಿಸ್ಥಿತಿಯಲ್ಲಿ ಈ ಸಂದೇಶ ಇನ್ನಷ್ಟು ಪ್ರಸ್ತುತವಾಗಿದೆ. ಪ್ರತಿಯೊಂದು ಕುಟುಂಬವೂ ಕನಿಷ್ಠ ಮೂರುರಿಂದ ಆರು ತಿಂಗಳ ಅಗತ್ಯ ವೆಚ್ಚವನ್ನು ನಿಭಾಯಿಸಬಲ್ಲ ತುರ್ತು ನಿಧಿಯನ್ನು ರೂಪಿಸಿಕೊಳ್ಳಬೇಕು. ನಿಯಮಿತ ಉಳಿತಾಯವು ಕೇವಲ ಹಣದ ಸಂಗ್ರಹವಲ್ಲ; ಅದು ಆತ್ಮವಿಶ್ವಾಸ ಮತ್ತು ಭದ್ರತೆಯ ಸಂಕೇತವಾಗಿದೆ. ನಮ್ಮ ಪ್ರಾಚೀನ ಜ್ಞಾನಪರಂಪರೆಯು ಭವಿಷ್ಯದ ಸವಾಲುಗಳಿಗೆ ಮುನ್ನವೇ ಸಿದ್ಧರಾಗುವ ಸಂಸ್ಕೃತಿಯನ್ನು ಬೋಧಿಸಿದೆ. ಪಂಚತಂತ್ರದ ‘ಅನಾಗತವಿಧಾತಾ ಚ ಪ್ರತ್ಯುತ್ಪನ್ನಮತಿಸ್ತಥಾ’ ಎಂಬ ಸೂಕ್ತಿ, ದೂರದೃಷ್ಟಿಯಿಂದ ಯೋಜನೆ ರೂಪಿಸುವವನೂ ಸಂದರ್ಭಕ್ಕೆ ತಕ್ಕಂತೆ ವಿವೇಕದಿಂದ ನಡೆದುಕೊಳ್ಳುವವನೂ ಸಂಕಷ್ಟಗಳನ್ನು ಯಶಸ್ವಿಯಾಗಿ ಎದುರಿಸುತ್ತಾನೆ ಎಂಬ ಸಂದೇಶವನ್ನು ನೀಡುತ್ತದೆ. ಇಂದಿನ ಅನಿಶ್ಚಿತ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಈ ಮಾರ್ಗದರ್ಶನ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ.
ಸಾಲದಲ್ಲಲ್ಲ, ಸಂಯಮದಲ್ಲಿ ಭದ್ರತೆ
ಅನಿವಾರ್ಯವಲ್ಲದ ಸಾಲಗಳನ್ನು ಸಾಧ್ಯವಾದಷ್ಟು ತಪ್ಪಿಸುವುದು ಇಂದಿನ ಕಾಲದ ಪ್ರಮುಖ ಆರ್ಥಿಕ ಪಾಠವಾಗಿದೆ. ಹೊಸ ಸಾಲ ಪಡೆಯುವ ಮುನ್ನ ಅದರ ಅವಶ್ಯಕತೆ, ಬಡ್ಡಿದರ ಮತ್ತು ಮರುಪಾವತಿ ಸಾಮರ್ಥ್ಯವನ್ನು ಸಮಗ್ರವಾಗಿ ಪರಿಶೀಲಿಸಬೇಕು. ಇಂಧನ, ವಿದ್ಯುತ್, ನೀರು ಸೇರಿದಂತೆ ಪ್ರತಿಯೊಂದು ಸಂಪನ್ಮೂಲವನ್ನು ಮಿತವ್ಯಯದಿಂದ ಬಳಸುವುದು ಕೇವಲ ಕುಟುಂಬದ ಹಣಕಾಸಿಗಷ್ಟೇ ಅಲ್ಲ, ರಾಷ್ಟ್ರದ ಆರ್ಥಿಕ ಹಿತಕ್ಕೂ ಸಹಕಾರಿಯಾಗಿದೆ. ವೈಯಕ್ತಿಕ ಮಿತವ್ಯಯವು ರಾಷ್ಟ್ರೀಯ ಆರ್ಥಿಕ ಶಕ್ತಿಯನ್ನು ಬಲಪಡಿಸುವ ಒಂದು ಸಣ್ಣ ಆದರೆ ಮಹತ್ವದ ಕೊಡುಗೆಯಾಗಿದೆ.
ಆತಂಕವಲ್ಲ, ಆತ್ಮವಿಶ್ವಾಸ ಬೇಕು
ಬೆಲೆ ಏರಬಹುದು ಎಂಬ ಆತಂಕದಿಂದ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸುವುದು ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಬಹುದು. ವದಂತಿಗಳಿಗೆ ಕಿವಿಗೊಡುವ ಬದಲು ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದು ಪ್ರಜ್ಞಾವಂತ ನಾಗರಿಕನ ಲಕ್ಷಣವಾಗಿದೆ. ಭಾರತವು ಹಲವು ಜಾಗತಿಕ ಆರ್ಥಿಕ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ಎದುರಿಸಿದೆ. ಇಂದು ದೇಶದ ಆರ್ಥಿಕತೆ ಬಲಿಷ್ಠ ನೆಲೆಯ ಮೇಲೆ ಮುನ್ನಡೆಯುತ್ತಿದೆ. ಆದ್ದರಿಂದ ಅನವಶ್ಯಕ ಭಯಕ್ಕಿಂತ ವಿವೇಕ, ಸಂಯಮ ಮತ್ತು ಯೋಜನೆಗೆ ಆದ್ಯತೆ ನೀಡುವುದು ಸೂಕ್ತ. ಬೆಲೆ ಏರಿಕೆಯ ಆತಂಕದಿಂದ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸುವುದು ಸಮಂಜಸವಲ್ಲ. ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ವಿವೇಕಪೂರ್ಣ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. ಸಂಕಷ್ಟದ ಸಂದರ್ಭಗಳಲ್ಲಿ ಆತಂಕಕ್ಕಿಂತ ಆತ್ಮವಿಶ್ವಾಸ ಮತ್ತು ಯೋಜನೆಯೇ ಉತ್ತಮ ಮಾರ್ಗ.
ಜಾಗತಿಕ ಅರಿವು – ರಾಷ್ಟ್ರೀಯ ಜವಾಬ್ದಾರಿ
ಇಂದಿನ ಯುಗದಲ್ಲಿ ಜಾಗತಿಕ ಘಟನೆಗಳನ್ನು ಅರ್ಥಮಾಡಿಕೊಳ್ಳುವುದು ಕೇವಲ ಸುದ್ದಿಗಳನ್ನು ಓದುವುದಲ್ಲ; ಅದು ಆರ್ಥಿಕ ಸಾಕ್ಷರತೆಯ ಭಾಗವಾಗಿದೆ. ವಿಶ್ವದ ಬೆಳವಣಿಗೆಗಳನ್ನು ಅರಿತು ಅದರ ಬೆಳಕಿನಲ್ಲಿ ಕುಟುಂಬದ ಹಣಕಾಸನ್ನು ಶಿಸ್ತಿನಿಂದ ನಿರ್ವಹಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
ಭಾರತೀಯ ಸಂಸ್ಕೃತಿಯು ನಮಗೆ ಸದಾ ಒಂದು ಮಹತ್ವದ ಪಾಠವನ್ನು ಕಲಿಸಿದೆ. ಸಂಕಷ್ಟ ಬಂದಾಗ ಆತಂಕದಿಂದಲ್ಲ, ಆತ್ಮವಿಶ್ವಾಸದಿಂದ; ಅಪವ್ಯಯದಿಂದಲ್ಲ, ಮಿತವ್ಯಯದಿಂದ; ಅಜಾಗರೂಕತೆಯಿಂದಲ್ಲ, ವಿವೇಕದಿಂದ ನಡೆದುಕೊಳ್ಳಬೇಕು.
ದೂರದ ಯುದ್ಧಗಳನ್ನು ನಾವು ತಡೆಯಲು ಸಾಧ್ಯವಿಲ್ಲ. ಆದರೆ ಅವುಗಳ ಆರ್ಥಿಕ ಪರಿಣಾಮಗಳನ್ನು ವಿವೇಕದಿಂದ ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು. ಸ್ವಾವಲಂಬನೆ, ಉಳಿತಾಯ, ಹಣಕಾಸಿನ ಶಿಸ್ತು, ಕುಟುಂಬದ ಜವಾಬ್ದಾರಿ ಮತ್ತು ರಾಷ್ಟ್ರಹಿತದ ಪ್ರಜ್ಞೆ ಇವುಗಳೇ ಭಾರತೀಯ ಸಮಾಜದ ನಿಜವಾದ ಶಕ್ತಿ. ಇಂದು ವಿಶ್ವವು ಅನಿಶ್ಚಿತತೆಯ ಅಂಚಿನಲ್ಲಿ ನಿಂತಿದ್ದರೆ, ಭಾರತೀಯ ಜೀವನದರ್ಶನ ನಮಗೆ ಸ್ಥೈರ್ಯದ ಮಾರ್ಗವನ್ನು ತೋರಿಸುತ್ತದೆ. ಪ್ರತಿಯೊಂದು ಮನೆಯ ಆರ್ಥಿಕ ಶಿಸ್ತು ರಾಷ್ಟ್ರದ ಆರ್ಥಿಕ ಸ್ಥಿರತೆಗೆ ಬಲ ನೀಡುತ್ತದೆ. ಸ್ವಾವಲಂಬಿ ಕುಟುಂಬಗಳೇ ಸ್ವಾವಲಂಬಿ ಭಾರತದ ಭದ್ರ ಅಡಿಗಲ್ಲು. ಭಯದಿಂದಲ್ಲ, ಜಾಣ್ಮೆಯಿಂದ ತೆಗೆದುಕೊಳ್ಳುವ ಆರ್ಥಿಕ ನಿರ್ಧಾರಗಳೇ ಕುಟುಂಬದ ಸುಭದ್ರ ಭವಿಷ್ಯಕ್ಕೂ ರಾಷ್ಟ್ರದ ಸಮೃದ್ಧಿಗೂ ಭದ್ರ ಬುನಾದಿಯಾಗುತ್ತವೆ.
ಸದೃಢ ಭಾರತ, ವಿಶ್ವಮುಖಿ ಚಿಂತನೆ
ಭಾರತ ಇಂದು ಸದೃಢ ಆರ್ಥಿಕ ಅಡಿಪಾಯದ ಮೇಲೆ ನಿಂತಿದೆ. ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳ ಸಾಲಿನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿರುವ ಭಾರತ, ಜಾಗತಿಕ ನಾಯಕತ್ವದತ್ತ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ. ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಪರಿವರ್ತನೆ, ಉತ್ಪಾದನಾ ಸಾಮರ್ಥ್ಯದ ವಿಸ್ತರಣೆ ಮತ್ತು ನವೋದ್ಯಮಕ್ಕೆ ಉತ್ತೇಜನ ಇವುಗಳು ಭಾರತದ ಬೆಳವಣಿಗೆಗೆ ಹೊಸ ವೇಗ ನೀಡಿವೆ. ಜಾಗತಿಕತೆಗೆ ತೆರೆದುಕೊಳ್ಳುವುದು ಭಾರತಕ್ಕೆ ಹೊಸದೇನಲ್ಲ. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಋಷಿಗಳು ‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ ಎಂದು ಪ್ರಾರ್ಥಿಸಿದ್ದರು. ಎಲ್ಲ ದಿಕ್ಕುಗಳಿಂದಲೂ ಉತ್ತಮ ವಿಚಾರಗಳು ಬರಲಿ ಎಂಬ ಈ ಸಂದೇಶವು ಭಾರತದ ಶಾಶ್ವತ ವಿಶ್ವದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.
ಭಾರತೀಯ ಆರ್ಥಿಕ ಚಿಂತನೆಯು ಕೇವಲ ವೈಯಕ್ತಿಕ ಸಂಪತ್ತಿನ ಸಂಗ್ರಹಕ್ಕೆ ಸೀಮಿತವಾಗಿಲ್ಲ; ಅದು ಸಮಷ್ಟಿಯ ಕಲ್ಯಾಣವನ್ನು ಒಳಗೊಂಡಿದೆ. ‘ಸರ್ವೇ ಭವಂತು ಸುಖಿನಃ’ ಎಂಬ ಆಶಯವು ಆರ್ಥಿಕ ಜೀವನದಲ್ಲಿಯೂ ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುತ್ತದೆ. ಚಾಣಕ್ಯನ ‘ಧರ್ಮಸ್ಯ ಮೂಲಮ್ ಅರ್ಥಃ’ ಎಂಬ ಸಂದೇಶದಂತೆ, ಆರ್ಥಿಕ ಸದೃಢತೆ ವ್ಯಕ್ತಿ, ಕುಟುಂಬ ಮತ್ತು ರಾಷ್ಟ್ರದ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ. ನಮ್ಮ ಮನೆಯ ಹಣಕಾಸಿನ ಶಿಸ್ತು, ಉಳಿತಾಯ ಮತ್ತು ಜವಾಬ್ದಾರಿಯುತ ಬಳಕೆ ಕೇವಲ ಕುಟುಂಬದ ಭದ್ರತೆಗಷ್ಟೇ ಅಲ್ಲ; ರಾಷ್ಟ್ರದ ಆರ್ಥಿಕ ಶಕ್ತಿಗೂ ಕೊಡುಗೆ ನೀಡುತ್ತದೆ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಭಾರತೀಯ ಚಿಂತನೆಯಂತೆ, ನಮ್ಮ ವೈಯಕ್ತಿಕ ಆರ್ಥಿಕ ನಡೆ ಕೂಡ ರಾಷ್ಟ್ರದ ಹಿತದೊಂದಿಗೆ ಸಂಬಂಧ ಹೊಂದಿದೆ. ಸದೃಢ ಕುಟುಂಬಗಳೇ ಸದೃಢ ಸಮಾಜವನ್ನು ನಿರ್ಮಿಸುತ್ತವೆ; ಸದೃಢ ಸಮಾಜವೇ ಸದೃಢ ರಾಷ್ಟ್ರದ ಭದ್ರ ಬುನಾದಿಯಾಗಿದೆ.
