ಅಂಕಣ – Xಫ್ಯಾಕ್ಟರ್
- ಪರಪ್ಪ ಶಾನವಾಡ, ಸಾಮಾಜಿಕ ಜಾಲತಾಣ ವಿಶ್ಲೇಷಕ
‘ಇತಿಹಾಸವನ್ನು ಅರಿಯದವ ಇತಿಹಾಸ ಸೃಷ್ಟಿಸಲಾರ’ ಎಂಬ ಮಾತು ಅಕ್ಷರಶಃ ಸತ್ಯ. ಭಾರತದ ಇತಿಹಾಸದ ಪುಟಗಳನ್ನು ತಿರುವಿದಾಗ ಆರ್ಯಭಟನ ಖಗೋಳಶಾಸ್ತ್ರ, ಬ್ರಹ್ಮಗುಪ್ತನ ಬ್ರಹ್ಮಸ್ಫುಟ ಸಿದ್ಧಾಂತ, ವರಾಹಮಿಹಿರನ ಪಂಚ ಸಿದ್ಧಾಂತಿಕ, ಭಾಸ್ಕರನ ಸಿದ್ಧಾಂತ ಶಿರೋಮಣಿ ಮತ್ತು ಮಹರ್ಷಿ ಭಾರದ್ವಾಜರ ವೈಮಾನಿಕ ಶಾಸ್ತ್ರ ಹೀಗೆ ಖಗೋಳ, ಅಂತರಿಕ್ಷ, ಬಾಹ್ಯಾಕಾಶಕ್ಕೆ ಸಂಬಂದಿಸಿದ ಐತಿಹಾಸಿಕ ಶಾಸ್ತ್ರ, ಜ್ಞಾನ ಸಂಪತ್ತುಗಳಿರುವ ಭಾರತಕ್ಕೆ ಬಾಹ್ಯಾಕಾಶ ಸಾಧನೆಗಳು ಕಷ್ಟವೇನಲ್ಲ. ಆದರೂ ಇಂದಿನ ವಿಜ್ಞಾನಯುಗದಲ್ಲಿ ಸರ್ಕಾರೇತರ ಖಾಸಗಿ ಸಂಸ್ಥೆ ʻಸ್ಕೈರೂಟ್ ಏರೋಸ್ಪೇಸ್, ವಿಕ್ರಮ್-1ʼ ಹೆಸರಿನ ರಾಕೆಟ್ ಅನ್ನು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿ ಭೂಮಿಯ ಕಕ್ಷೆಗೆ ತಲುಪಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಇದು ಕೇವಲ ಒಂದು ತಾಂತ್ರಿಕ ಸಾಧನೆಯಷ್ಟೇ ಅಲ್ಲ, ಭಾರತವು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿರುವ ಸಂಕೇತವಾಗಿದೆ ಎಂಬುದು ಒಕ್ಕೊರಲಿನ ಅಭಿಪ್ರಾಯವಾಗಿದೆ.
ಈ ಯಶಸ್ವೀ ಉಡಾವಣೆಯ ನಂತರ ಜಾಲತಾಣದಲ್ಲಿ ರಾಷ್ಟ್ರಪ್ರೇಮ, ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ಹೆಮ್ಮೆ, ಯುವ ಉದ್ಯಮಶೀಲತೆ ಹಾಗೂ ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಲಭ್ಯವಿರುವ ಜಾಲತಾಣ ವಿಶ್ಲೇಷಣೆಯ ರಿಪೋರ್ಟ್ ಪ್ರಕಾರ ಸುಮಾರು ಶೇ.88 ಧನಾತ್ಮಕವಾಗಿದ್ದವು. ಒಟ್ಟಾರೆ 9ರಿಂದ 14 ಕೋಟಿ (90–140 ಮಿಲಿಯನ್) ಸೋಶಿಯಲ್ ಮೀಡಿಯಾ ಇಂಪ್ರೆಷನ್ಗಳು ದಾಖಲಾಗಿರುವುದು ಈ ಸಾಧನೆಯನ್ನು ಇಮ್ಮಡಿಗೊಳಿಸುತ್ತದೆ. #Vikram1, #MissionAagaman, #Skyroot, #IndianSpace ಹಾಗೂ #ProudIndian ಹ್ಯಾಶ್ಟ್ಯಾಗ್ಗಳು ದೇಶಾದ್ಯಂತ ಟ್ರೆಂಡ್ ಆಗಿದ್ದವು. ಎಕ್ಸ್ (X), ಯೂಟ್ಯೂಬ್, ಲಿಂಕ್ಡಿನ್, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಸೇರಿದಂತೆ ಪ್ರಮುಖ ವೇದಿಕೆಗಳಲ್ಲಿ ಲಕ್ಷಾಂತರ ಪೋಸ್ಟ್ ಗಳು, ಚಿತ್ರಗಳು, ವಿಡಿಯೋಗಳು ಮತ್ತು ವಿಶ್ಲೇಷಣೆಗಳನ್ನು ಹಂಚಿಕೊಳ್ಳಲಾಯಿತು.
ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು “ಇದು ಇಸ್ರೋ ನಿರ್ಮಿಸಿದ ಬಲಿಷ್ಠ ಪರಿಸರ ವ್ಯವಸ್ಥೆಯ ಫಲ” ಎಂದು ಅಭಿಪ್ರಾಯಪಟ್ಟರು. ಸ್ಕೈರೂಟ್ ಸಂಸ್ಥೆಯ ಸಹ – ಸ್ಥಾಪಕ ಪವನ್ ಕುಮಾರ್ ಚಂದಾನಾ ಅವರು “ಇದು ಭಾರತದ ಹೊಸ ಬಾಹ್ಯಾಕಾಶ ಅಧ್ಯಾಯದ ಆರಂಭ ಮಾತ್ರ” ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಇಸ್ರೋ ವಿಜ್ಞಾನಿಗಳು ಹಾಗೂ ತಂತ್ರಜ್ಞಾನ ಕ್ಷೇತ್ರದ ಅನೇಕ ಗಣ್ಯರು ಭಾರತದ ಇಂಜಿನಿಯರ್ಗಳು ಮತ್ತು ವಿಜ್ಞಾನಿಗಳ ಸಾಮರ್ಥ್ಯವನ್ನು ಕೊಂಡಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಅಮೆರಿಕ, ಯುರೋಪ್ ಹಾಗೂ ಜಪಾನ್ನ ಬಾಹ್ಯಾಕಾಶ ತಜ್ಞರು ಮತ್ತು ಜಾಗತಿಕ ತಂತ್ರಜ್ಞಾನ ಸಮುದಾಯ ಭಾರತವು ಖಾಸಗಿ ಬಾಹ್ಯಾಕಾಶ ಉಡಾವಣಾ ರಾಷ್ಟ್ರಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅಭಿಪ್ರಾಯಪಟ್ಟರು. Reddit ಸೇರಿದಂತೆ ಹಲವು ಜಾಗತಿಕ ಸಮುದಾಯಗಳಲ್ಲಿ “ಮೊದಲ ಪ್ರಯತ್ನದಲ್ಲೇ ಕಕ್ಷೆಯನ್ನು ತಲುಪಿರುವುದು ಅಪರೂಪದ ಸಾಧನೆ” ಎಂಬ ಅಭಿಪ್ರಾಯಗಳು ಹೆಚ್ಚು ಗಮನ ಸೆಳೆದವು.
ಈ ಯಶಸ್ಸು ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸುವ ಜೊತೆಗೆ, ಉಪಗ್ರಹ ನಿರ್ಮಾಣ, ರಾಕೆಟ್ ತಂತ್ರಜ್ಞಾನ, ಎವಿಯಾನಿಕ್ಸ್, ಕೃತಕ ಬುದ್ಧಿಮತ್ತೆ (AI), ಸಾಫ್ಟ್ ವೇರ್ ಹಾಗೂ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ಸಾವಿರಾರು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಹೈದರಾಬಾದ್, ಬೆಂಗಳೂರು ವೈಮಾನಿಕ, ಬಾಹ್ಯಾಕಾಶದ ಜಾಗತಿಕ ಹಬ್ ಆಗಿ ಬೆಳೆಯುತ್ತಿರುವುದು ಸಂತಸ ಮೂಡಿಸಿದೆ. ವಿಕ್ರಮ್-1ರ ಯಶಸ್ಸು ದೇಶದ ಯುವ ವಿಜ್ಞಾನಿಗಳು, ಇಂಜಿನಿಯರ್ಗಳು ಮತ್ತು ಉದ್ಯಮಿಗಳಿಗೆ ಹೊಸ ಆತ್ಮವಿಶ್ವಾಸವನ್ನು ತುಂಬಿದೆ. ಸರ್ಕಾರ, ಇಸ್ರೋ, ಖಾಸಗಿ ಉದ್ಯಮ ಹಾಗೂ ಯುವ ಪ್ರತಿಭೆಗಳ ಸಮನ್ವಯದಿಂದ ಭಾರತವು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವ ದಿಕ್ಕಿನಲ್ಲಿ ದೃಢ ಹೆಜ್ಜೆ ಇಟ್ಟಿದೆ.

