ಅಂಕಣ – ಜ್ಞಾನ ಭಂಡಾರ
- ಚೇತನ ಭಾರ್ಗವ, ಲೇಖಕಿ
ಮಹಾಭಾರತ ಮಹಾಕಾವ್ಯದಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ವೈಶಿಷ್ಟ್ಯತೆ ಇದೆ. ಆದರೆ ಕೆಲವೊಂದು ಪಾತ್ರಗಳು ಎಲೆಮರೆಯ ಕಾಯಿಯಂತೆ ಉಳಿದುಹೋಗುತ್ತವೆ. ಪುನರ್ನವ ಕಾದಂಬರಿಯಲ್ಲಿ ಲೇಖಕರು ಆ ರೀತಿಯ ಪಾತ್ರವಾದ ಕಾಶಿಯ ರಾಜಕುಮಾರಿ ‘ಬಲಂಧರೆ’ಯ ಸುತ್ತ ಕಥೆಯನ್ನು ಹೆಣೆದಿದ್ದಾರೆ. ಗಂಗೆಯ ತಟದಲ್ಲಿ ಹುಟ್ಟಿ ಬೆಳೆದು, ಜೀವನದ ಬಹುಭಾಗವನ್ನು ಗಂಗಾಸಖಿಯಾಗಿಯೇ ಕಳೆದ ಕಾಶಿ ಮಹಾರಾಜ ಸುಬಾಹುವಿನ ಮಗಳು, ಭೀಮನ ಪತ್ನಿ ಬಲಂಧರೆಯ ಕಥೆಯನ್ನು ಲೇಖಕರು ತಮ್ಮ ಕೈ ಕುಂಚದಲ್ಲಿ ಅರಳಿದ ಚಿತ್ರದೊಂದಿಗೆ ಮನೋಜ್ಞವಾಗಿ ವಿವರಿಸಿದ್ದಾರೆ.
ಮುಂಜಾನೆಯ ಹೊಂಬೆಳಕಿನಲ್ಲಿ ಬಂಗಾರದ ಹೊಳಪಿನಿಂದ ಕಂಗೊಳಿಸಿ, ಮಧ್ಯಾಹ್ನದ ಬಿಸಿಲಿಗೆ ರಜತ ಫಲಕದಂತೆ ಕಾಣುತ್ತಾ, ಸೂರ್ಯಾಸ್ತದ ಸಮಯಕ್ಕೆ ತಾಮ್ರವರ್ಣೆಯಾಗಿ ಶಾಂತ ಭಾವದಿಂದ ಹೇಗೆ ಗಂಗೆ ಹರಿಯುತ್ತಾಳೋ ಹಾಗೆಯೇ ಬಲಂಧರೆಯ ವ್ಯಕ್ತಿತ್ವವೂ ಕಂಗೊಳಿಸುತ್ತದೆ. ಅವಳ ಬದುಕಿನಲ್ಲಿ ನಡೆದ ಘಟನೆಗಳನ್ನು ಲೇಖಕರು ಸೂಕ್ಷ್ಮವಾಗಿ ಗ್ರಹಿಸಿ ಅವಲೋಕಿಸಿದ್ದಾರೆ. ಗಂಗೆಯ ದಡದಲ್ಲಿ ಕುಳಿತು ಹರಿಯುವ ನೀರಿನ ಜೊತೆ ತನ್ನ ಜೀವನವನ್ನು ಎಳೆಎಳೆಯಾಗಿ ತೆರೆದಿಡುವ ಆಕೆಯ ಮನೋಗತವನ್ನು ಸುಂದರವಾಗಿ ಬಿಂಬಿಸಿದ್ದಾರೆ. ಬಲಂಧರೆ ತನ್ನ ತಂದೆಯನ್ನು ಕಳೆದುಕೊಂಡು ಪಟ್ಟ ನೋವು, ಅಣ್ಣ ಸೇನೇಶನ ಮಮತೆ, ಆಕೆಯ ಸ್ವಯಂವರ, ದ್ವೀತಿಯ ಪಾಂಡವ ಭೀಮನಿಗೆ ಮನಸೋತ ರೀತಿ, ಅವರ ವಿವಾಹ ಮಹೋತ್ಸವ, ಖಾಂಡವಪ್ರಸ್ಥದೆಡೆಗೆ ಪಯಣ, ವಿಶೋಕನನ್ನು ಭೇಟಿಯಾದ ಪ್ರಸಂಗ, ಉಳಿದ ಪಾಂಡವ ಮೈದುನರು, ಕುಂತಿ, ದ್ರೌಪದಿ ಹಾಗೂ ಸುಭದ್ರೆ ಸೇರಿದಂತೆ ಎಲ್ಲರೂ ಆಕೆಯನ್ನು ಬರಮಾಡಿಕೊಂಡ ರೀತಿ, ಇಂದ್ರಪ್ರಸ್ಥದ ವೈಭವದ ವರ್ಣನೆ ಇವೆಲ್ಲವೂ ಕಣ್ಣಿಗೆ ಕಟ್ಟುವ ಹಾಗೆ ಲೇಖಕರ ಪದಪುಂಜಗಳಲ್ಲಿ ಮೂಡಿಬಂದಿದೆ.
ಬಲಂಧರೆ ಗರ್ಭಿಣಿಯಾಗಿ ಈ ವಿಷಯವನ್ನು ಭೀಮನಿಗೆ ಅರುಹಲು ಸಮಯ ನೋಡುತ್ತಿದ್ದಾಗ ರಾಜಸೂಯದ ದಿಗ್ವಿಜಯದ ಮೆಟ್ಟಿಲಾಗಿ ಜರಾಸಂಧವಧೆಗೆ ಭೀಮ ತೆರಳಿರುವುದನ್ನು ತಿಳಿದು ಆಕೆ ಪಡುವ ವೇದನೆ, ಧರ್ಮರಾಜನ ಕೀರ್ತಿ ಮತ್ತು ರಾಜ್ಯಭೌಮತ್ವಕ್ಕಾಗಿ ತನ್ನ ಪ್ರಾಣವನ್ನೇ ಪಣಕ್ಕೊಡ್ಡಿದ ಗಂಡನ ಬಗೆಗಿನ ಅಭಿಮಾನ, ರಾಜ್ಯಕೀರ್ತಿಗೆ ತನ್ನ ಪತಿಯನ್ನು ಅಪಾಯಕೊಡ್ಡುವ ಧರ್ಮರಾಯನ ಮೇಲೆ ಸಹಜ ನಾರಿಯಂತೆ ಪಡುವ ಮುನಿಸು, ಈ ಮಾನುಷಿ ದ್ವಂದ್ವಭಾವಗಳಲ್ಲಿ ತೊಳಲುವ ಆಕೆಯ ಮನೋಸ್ಥಿತಿ ಇವುಗಳನ್ನು ಓದಿಯೇ ಅನುಭವಿಸಬೇಕು. ಭೀಮನ ಮೈ ಬೆವರಿನ ಗಂಧವಿರುವ ಉತ್ತರೀಯವನ್ನು ಪ್ರೀತಿಯಿಂದ ಜೋಪಾನ ಮಾಡುವ ಮುಗ್ಧತೆ, ಸ್ತ್ರೀ ಸಂವೇದನೆ ಹೀಗೆ ಹತ್ತು ಹಲವು ಭಾವಗಳನ್ನು ಬಲಂಧರೆಯ ಪಾತ್ರದಲ್ಲಿ ಕಟ್ಟಿಕೊಡುವ ಲೇಖಕರು ಓದುಗರ ಮನಸೂರೆಗೊಳ್ಳುವುದು ಸುಳ್ಳಲ್ಲ.
ನಂತರ ಬರುವ ಯುದ್ಧ ಸನ್ನಿವೇಶಗಳು ರಣರಂಗದಲ್ಲೇ ಇರುವಂತಹ ಅನುಭವ ನೀಡುತ್ತವೆ. 18ನೇ ದಿನದ ರಾತ್ರಿ ಅಶ್ವತ್ಥಾಮನಿಂದ ಕೊಲೆಗೀಡಾಗುವ ಉಪಪಾಂಡವರ ಜೊತೆ ಮಗ ಸರ್ವಗನ ಹತ್ಯೆ, ಕಾಡುವ ಪುತ್ರಶೋಕ, ಇದರೊಂದಿಗೆ ಬಲಂಧರೆಯ ನಡೆಯೇನು? ಭೀಮ – ಬಲಂಧರೆಯರ ಪುನರ್ನವ ಮಿಲನ ಸಂಧಿಸುತ್ತದೆಯೇ? ಇದಕ್ಕಾಗಿ ಇನ್ನೊಂದು ಮನ್ವಂತರ ಕಾಯಬೇಕೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಈ ಹೊತ್ತಗೆಯನ್ನು ಓದಲೇಬೇಕು.
ಸರಳ ಭಾಷೆಯಲ್ಲಿ ಓದುಗರನ್ನು ಮುಟ್ಟುವ ಕೃತಿ, ಮಹಾಭಾರತದ ನಿತ್ಯ ಓದುಗರಿಗೂ ಅಪರಿಚಿತವೇ ಎನ್ನಬಹುದಾದ ಆಕೆಯ ಪಾತ್ರದ ಸುತ್ತಲಿನ ಕಥೆಯನ್ನು ವಿಶದೀಕರಿಸುವ ಲೇಖಕರ ತಾಕತ್ತು ಬೆರಗುಗೊಳಿಸುತ್ತದೆ. ಆಕೆಯ ಕಣ್ಣಲ್ಲಿ, ಮನಸ್ಸಿನ ಭಾವದ ಕನ್ನಡಿಯಲ್ಲಿ ಮಹಾಭಾರತದ ಘಟನೆಗಳನ್ನು ವಿಮರ್ಶಾತ್ಮಕವಾಗಿ ನೋಡುವ ಅನೂಹ್ಯ ನೋಟವನ್ನು ಓದುಗರಿಗೆ ತೆರೆದಿಡುವ ‘ಪುನರ್ನವ’ ಕಾದಂಬರಿ ಓದುಗರೆಲ್ಲರ ಹೃನ್ಮನ ತಣಿಸುವುದು ದಿಟ.
ಪು: ಪುನರ್ನವ ಲೇ: ಸಚಿನ್ ನಾಯಕ್ ಪ್ರ: BFC ಪಬ್ಲಿಕೇಶನ್ ಪುಟ: 174 ಬೆಲೆ: 280 ಸಂ: 8652050510
