- ಸಿಂಚನ ಎಂ.ಕೆ. ಮಂಡ್ಯ, ಲೇಖಕಿ
ಈ ಪ್ರಪಂಚದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ನಿಷ್ಕಲ್ಮಶವಾಗಿ ಪ್ರೀತಿಸಲು ಹೆತ್ತವರಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ತಾವು ಕಷ್ಟಪಟ್ಟು ಮಕ್ಕಳನ್ನು ಖುಷಿಯಾಗಿರಿಸುವ, ಲೋಕದ ಕಣ್ಣಿಗೆ ತಾವು ತಪ್ಪಾಗಿ ಕಾಣಿಸಿಕೊಂಡರೂ ಮಕ್ಕಳನ್ನು ಅನೇಕ ತೊಂದರೆಗಳಿಂದ ರಕ್ಷಾಕವಚದಂತಿದ್ದು ಪೊರೆಯುವ ಶಕ್ತಿ ಹೆತ್ತವರಿಗೆ ಅದೆಲ್ಲಿಂದಲೋ ಲಭಿಸಿರುತ್ತದೆ. ಅಪ್ಪ – ಅಮ್ಮನ ಸಾನಿಧ್ಯ ಈ ಪ್ರಪಂಚದ ಸುರಕ್ಷಿತ ಸ್ಥಳ; ಅವರ ಬಲ ಜಗತ್ತಿನಲ್ಲಿ ಸಿಗುವ ಪ್ರಚಂಡ ಬಲ, ಅಪ್ಪ – ಅಮ್ಮನ ಆಶೀರ್ವಾದ ಈ ಜಗತ್ತಿನಲ್ಲಿ ಸಿಗುವ ಶ್ರೇಷ್ಠ ಆಶೀರ್ವಾದ, ಅವರು ಕೊಡುವ ಬೆಂಬಲ ಈ ಜಗತ್ತಿನಲ್ಲಿ ಸಿಗುವ ದೊಡ್ಡ ವರ, ಅವರ ಆನಂದ ಈ ಜಗತ್ತಿನಲ್ಲಿ ಕಾಣಸಿಗುವ ಪರಮಾನಂದ ಎಂದು ನಮ್ಮ ಸಂಸ್ಕೃತಿಯ ಮೂಲದಿಂದಲೂ ಹೇಳಲಾಗುತ್ತದೆ. ಇದನ್ನು ಇಂದಿನ ಎಲ್ಲ ಮಕ್ಕಳಲ್ಲೂ ಕಾಣಲು ಸಾಧ್ಯವಿಲ್ಲ. ಈ ಪೀಳಿಗೆಯವರು ತಮಗರ್ಥವಾದ ರೀತಿಯಲ್ಲಿ ಹೆತ್ತವರನ್ನು ವಿವರಿಸುತ್ತಾರೆ. ವಿಧಾನ ಬೇರೆಯದಾದರೂ ಆ ಸ್ಥಾನಕ್ಕಿರುವ ಗೌರವಾದರ ಕಡಿಮೆಯಾಗಿಲ್ಲ.
ಒಂದು ದಿನ ರಜೆ ಸಿಕ್ಕರೂ ಇಂದು ಹಲವರು ಆರಾಮವಾಗಿ, ತಡವಾಗಿ ಎದ್ದೇಳುತ್ತಾರೆ. ಆದರೆ ಒಂದು ದಿನವೂ ನಮ್ಮ ತಂದೆ – ತಾಯಿ ಏನೋ ಹುಷಾರಿಲ್ಲದಿದ್ದಾಗ ತಡವಾಗಿ ಏಳುವುದನ್ನು ಬಿಟ್ಟರೆ ಬೇರೆ ಯಾವ ದಿನವೂ ರೆಸ್ಟ್ ಮಾಡುವ ಸಲುವಾಗಿ ಲೇಟ್ ಆಗಿ ಏಳುವುದನ್ನು ಸಾಧಾರಣವಾಗಿ ನೋಡಿರಲು ಸಾಧ್ಯವಿಲ್ಲ. ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುವ ಜವಾಬ್ದಾರಿ ಹೊತ್ತಿರುವ ನಮ್ಮ ತಾಯಿ ಎಂದಿಗೂ ತನಗಾಗಿ ಬದುಕುವುದಿಲ್ಲ, ತಂದೆ ಎಂದಿಗೂ ತನಗಾಗಿ ದುಡಿಯುವುದಿಲ್ಲ. ಈ ಪ್ರಪಂಚದಲ್ಲಿ ತೀರಿಸಲಾಗದ ಋಣ, ಕಡಿದುಕೊಳ್ಳಲಾಗದ ಸಂಬಂಧ ಎಂದರೆ ತಂದೆ – ತಾಯಿ ಜೊತೆಗಿನ ಸಂಬಂಧವೇ ಎಂದು ಕೇಳಿರುತ್ತೇವೆ. ಅಣ್ಣ – ತಂಗಿ, ಗಂಡ – ಹೆಂಡತಿ, ಬಂಧು – ಮಿತ್ರರು ಹೀಗೆ ಯಾವ ಸಂಬಂಧಿಕರೇ ಆದರೂ ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ಗಂಡ ಕುಟುಂಬಕ್ಕಾಗಿ ದುಡಿಯುತ್ತಾನೆ, ಹೆಂಡತಿ ಕುಟುಂಬದ ಪೋಷಣೆ ಮಾಡುತ್ತಾಳೆ. ಹೀಗೆ ಎಲ್ಲಾ ಸಂಬಂಧಗಳಲ್ಲೂ ಪರಸ್ಪರ ಸಹಕಾರವಿರುತ್ತದೆ. ಆದರೆ ತಂದೆ – ತಾಯಿ ಮಕ್ಕಳಿಗಾಗಿ ಏನೆಲ್ಲಾ ಮಾಡುತ್ತಾರೆ!? ತಾಯಿ ಅಂತೂ ತನ್ನ ಪ್ರಾಣವನ್ನು ಅಡವಿಟ್ಟು ಮಕ್ಕಳಿಗೆ ಜನ್ಮ ನೀಡುತ್ತಾಳೆ, ತಂದೆ ತನ್ನ ಪ್ರಾಣವನ್ನು ಲೆಕ್ಕಿಸದೆ ಮಕ್ಕಳನ್ನು ಕಾಪಾಡುತ್ತಾರೆ.
ಆದರೆ ಮಕ್ಕಳು ತಮ್ಮ ಪ್ರಾಣದಂತೆ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುತ್ತಾರೆಯೇ? ಎಂಬುದನ್ನು ಪ್ರಶ್ನಿಸಿಕೊಳ್ಳಲೇಬೇಕು. ತಂದೆ ತಾಯಿ ಕಣ್ಣಲ್ಲಿ ಕಣ್ಣಿಟ್ಟು ಮಕ್ಕಳನ್ನು ಕಣ್ಣ ರೆಪ್ಪೆಯಂತೆ ಸಲಹುತ್ತಾರೆ. ಎಷ್ಟೋ ಬಡ ಅಥವಾ ಮಧ್ಯಮ ವರ್ಗದ ಹೆತ್ತವರು ತಾವು ಹೊಸ ಬಟ್ಟೆ, ಒಡವೆಗಳನ್ನು ತೆಗೆದುಕೊಳ್ಳದಿದ್ದರೂ ತಮ್ಮ ಮಕ್ಕಳಿಗೆ ತೆಗೆದುಕೊಡುತ್ತಾರೆ. ಮಕ್ಕಳಿಗಾಗಿ ತಮ್ಮ ವೈಯಕ್ತಿಕ ಬಯಕೆಗಳನ್ನೆಲ್ಲಾ ತ್ಯಾಗ ಮಾಡುತ್ತಾರೆ. ಪ್ರತಿಕ್ಷಣ ಮಕ್ಕಳಿಗಾಗಿಯೇ ಬದುಕಿ, ಮಕ್ಕಳ ಖುಷಿಯಲ್ಲೇ ತಮ್ಮ ಖುಷಿಯನ್ನು ಕಾಣುತ್ತಾರೆ. ಪ್ರಕೃತಿ ಸಹಜವಾಗಿ ಈ ಲೋಕದಲ್ಲಿ ಯಾವುದೇ ಜೀವಿಯಾದರೂ ತನ್ನ ಹೊಸ ಚಿಗುರನ್ನು ನೋಡಿಕೊಳ್ಳುವಂತೆ, ಚಿಗುರು ತನ್ನ ಮೂಲ ಪೋಷಕರನ್ನು ನೋಡಿಕೊಳ್ಳಲಾಗುವುದಿಲ್ಲ. ಮನುಷ್ಯರು ತಮ್ಮಿಂದ ಜನಿಸಿದ ಹೊಸ ಜೀವವನ್ನು ಸಹಜವಾಗಿ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಆ ಹೊಸ ಜೀವ ಪೋಷಕರು ತೋರಿಸಿದಷ್ಟು ಪ್ರೀತಿಯಿಂದ ಅವರನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ತಂದೆ ತಾಯಿಯನ್ನು ನೋಡಿಕೊಳ್ಳುವುದು ತಮ್ಮ ಕರ್ತವ್ಯ ಎಂಬುದನ್ನು ಅರಿತು ಅವರನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಈ ಕಟುವಾಸ್ತವ ಸಂಗತಿಯನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು.
ಆದರೆ ಇತ್ತೀಚೆಗೆ ಬಹಳ ಮಂದಿ ತಮ್ಮ ಕರ್ತವ್ಯ ಪಾಲನೆಯಿಂದ ಹಿಂದಡಿ ಇಡುತ್ತಿದ್ದಾರೆ. ಮಕ್ಕಳು ತಂದೆ-ತಾಯಿಯನ್ನು ನೋಡಿಕೊಳ್ಳುವುದರಿಂದ ಹಿಂದೆ ಸರಿಯುತ್ತಿರುವುದಕ್ಕೆ ಹಲವು ಕಾರಣಗಳಿರಬಹುದು. ಹೊಂದಾಣಿಕೆ, ಸಮಯ, ಕೆಲಸ, ದೂರ ಇತ್ಯಾದಿಯಾಗಿ ಪಟ್ಟಿ ಮಾಡುತ್ತಾ ಹೋಗಬಹುದು. ಆದರೆ ಅವರು ನಮ್ಮನ್ನು ಸಾಕಿಸಲಹಿದ ಪರಿಯನ್ನು ಮರೆಯಬಾರದಲ್ಲವೇ? ಹೆತ್ತವರನ್ನು ಆದಷ್ಟು ಕೃತಜ್ಞತೆಯಿಂದ ಸಲಹಿದಾಗ ಮಾತ್ರ ನಮ್ಮ ಕರ್ತವ್ಯದ ಹಾದಿ ಸುಲಭವಾಗಲು ಸಾಧ್ಯ ಎಂದು ಹಲವರು ಹೇಳುತ್ತಾರೆ. ಈ ಜಗತ್ತಿನಲ್ಲಿ ಕೇವಲ ಊಟ, ನಿದ್ದೆ, ಸಂತಾನೋತ್ಪತ್ತಿಯಂತಹ ಸಂತತಿಯ ಉಳಿವಿನ ಪ್ರಕ್ರಿಯೆಯನ್ನು ಮಾತ್ರ ಮಾಡಲಾಗುವ ಜೀವಿಗಳ ಮಧ್ಯೆ ಮಾನವ ಮಾತ್ರ ತನ್ನ ಉಳಿವಿನ ಪ್ರಕ್ರಿಯೆಯ ಜೊತೆಗೆ ಪರರ ಉಳಿಸುವಿಕೆಗೆ ಅಗತ್ಯವಾದ ಸಂವೇದನೆಯನ್ನು ಹೊಂದಿರುವ ಭಾವನಾ ಜೀವಿ.

ತಂದೆ-ತಾಯಿಯ ಪ್ರೀತಿ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ನಿಸ್ವಾರ್ಥ ಪ್ರೀತಿ. ಈ ಪ್ರೀತಿ ಎಷ್ಟೇ ಪರಮೋಚ್ಛವಾದರೂ ಪ್ರಪಂಚದ ಕಟುವಾಸ್ತವವನ್ನು ಮೀರಲಾಗುವುದಿಲ್ಲ. ಅವರು ತಮ್ಮ ಮಕ್ಕಳ ಮೇಲೆ ತೋರುವ ಪ್ರೀತಿ ಎಷ್ಟು ಸತ್ಯವೋ, ಅವರು ನೋಡಿಕೊಳ್ಳುವಂತೆ ಮಕ್ಕಳು ತಮ್ಮ ತಂದೆ ತಾಯಿಯನ್ನು ನೋಡಿಕೊಳ್ಳಲಾಗದು ಎಂಬುದು ಅಷ್ಟೇ ಸತ್ಯ. ಆದ್ದರಿಂದ ದೇವರೂ ಮಕ್ಕಳು ಹಿಂತಿರುಗಿ ಆ ಪ್ರೀತಿಯನ್ನು ತಂದೆ-ತಾಯಿಗೆ ಕೊಡುವಂತೆ ಮನಸ್ಸಿನಲ್ಲಿ ಪ್ರೀತಿಯನ್ನು ತುಂಬಿಸಿಲ್ಲ, ತಂದೆ-ತಾಯಿಯನ್ನು ನೋಡಿಕೊಳ್ಳುವುದು ತಮ್ಮ ಕರ್ತವ್ಯ ಎಂಬ ಕರ್ತವ್ಯ ಪಾಲನೆಯ ಭಾವನೆಯನ್ನು ಮಾತ್ರ ತುಂಬಿದ್ದಾನೆ.
ಹೆತ್ತವರು ಕಣ್ಣಿಗೆ ಕಾಣುವ ದೇವರು ಎಂದು ನಮಗೆ ಚಿಕ್ಕಂದಿನಿಂದಲೂ ಪಾಠ ಮಾಡುತ್ತಾರೆ, ಅದನ್ನು ಎಲ್ಲರೂ ನಂಬುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮಕ್ಕಳನ್ನು ಹಡೆದವರು ಮಾತ್ರ ಮಕ್ಕಳನ್ನು ದೇವರೇ ಅಥವಾ ದೇವರ ವರವೆಂದೇ ನಂಬುತ್ತಾರೆ. ಮಕ್ಕಳ ಮೇಲೆ ಹೊಂದಿರುವ ಅತೀವ ಪ್ರೀತಿಯೇ ಅತೀವ ನಿರೀಕ್ಷೆ, ಫಲಾಪೇಕ್ಷೆಗಳಿಗೂ ಕಾರಣವಾಗುತ್ತದೆ. ಮಕ್ಕಳು ತಮ್ಮ ಇಷ್ಟದಂತೆ ಓದಬೇಕು, ವೃತ್ತಿಯನ್ನು ಆರಿಸಿಕೊಳ್ಳಬೇಕು ಎಂಬಲ್ಲಿಂದ ಶುರುವಾಗುವ ಈ ನಿರೀಕ್ಷೆ, ಫಲಾಪೇಕ್ಷೆಗಳು ತಾವು ಇಷ್ಟ ಪಡುವವರ ಜೊತೆಯೇ ತಮ್ಮ ಮಕ್ಕಳು ಮದುವೆಯಾಗಬೇಕು, ಜೀವನ ನಡೆಸಬೇಕು ಎಂಬ ಹಂತವನ್ನೂ ತಲುಪುತ್ತದೆ.
ಕೆಲವೊಮ್ಮೆ ಮಕ್ಕಳ ಕನಸು, ಗುರಿಗಳು ಹೆತ್ತವರ ಆಶಯಗಳಿಗೆ ವಿರುದ್ಧವಾಗಿರುತ್ತವೆ. ಪರಸ್ಪರ ಪ್ರೀತಿ, ಗೌರವವಿದ್ದರೂ ಹಠದಿಂದ ಅಥವಾ ಇನ್ನಾವುದೋ ಕಾರಣದಿಂದ ಮನೆಯವರಿಂದ ಮಕ್ಕಳು ಬೇರೆಯಾಗುವ ಸಂದರ್ಭ ಹಲವು ಬಾರಿ ಒದಗುತ್ತದೆ. ಆರ್ಟ್ಸ್ ವಿಭಾಗದಲ್ಲಿ ಆಸಕ್ತಿ ಹೊಂದಿ ಆರ್ಟಿಸ್ಟ್ ಆಗಬೇಕು ಎಂದುಕೊಂಡಿರುವ ಮಗು ತನ್ನ ಇಷ್ಟವನ್ನು ಬಲಿಕೊಟ್ಟು ತಂದೆ-ತಾಯಿಗೆ ಸೈನ್ಸ್ ಇಷ್ಟವೆಂದು ಸೈಂಟಿಸ್ಟ್ ಆಗಲು ಹೊರಟರೆ ಆ ಮಗು ಮಾನಸಿಕವಾಗಿ ಎಷ್ಟೆಲ್ಲಾ ತೊಂದರೆ ಅನುಭವಿಸಬೇಕಾಗಬಹುದು? ಆ ದಾರಿಯಲ್ಲಿ ಸಾಗಲು ಸಾಧ್ಯವೇ ಆಗದೆ ತನ್ನ ಬದುಕನ್ನೇ ಅಂತ್ಯ ಮಾಡಿಕೊಳ್ಳಬಹುದು (ಉದಾಹರಣೆಗೆ ಪೋಷಕರ ಒತ್ತಾಯದಿಂದ ನೀಟ್ ಬರೆದು ಫೇಲ್ ಆದ ವಿದ್ಯಾರ್ಥಿಗಳು ತಮ್ಮ ಬದುಕನ್ನು ಅಂತ್ಯ ಮಾಡಿಕೊಂಡಿರುವುದನ್ನು ಕಾಣಬಹುದು). ಎಷ್ಟೇ ಕಷ್ಟ ಆದರೂ ಆ ಮಗು ಸೈಂಟಿಸ್ಟ್ ಆದರೂ ಆ ಕ್ಷೇತ್ರದಲ್ಲೇ ಮುಂದುವರಿಯಲಾಗದೆ ಯಶಸ್ವಿಯಾಗದೆ ತನ್ನ ಮೇಲಿನ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳಬಹುದು. ಇದು ವಿದ್ಯೆಯ ವಿಷಯಕ್ಕೆ ಮಾತ್ರ ಸೀಮಿತವಲ್ಲ, ಜೀವನದ ಪ್ರತಿಯೊಂದು ಹಂತದಲ್ಲೂ ಇಂತಹ ಸವಾಲುಗಳು ರೂಪುಗೊಳ್ಳುತ್ತವೆ.
ಇಂತಹ ಸಮಸ್ಯೆಗಳು ಬಗೆಹರಿಯದೆ ಎಷ್ಟೋ ಬಾರಿ ದುರಂತಗಳಾಗುತ್ತವೆ. ಮಕ್ಕಳು ಹೆತ್ತವರೊಂದಿಗೆ, ಹೆತ್ತವರು ಮಕ್ಕಳೊಂದಿಗೆ ಪರಸ್ಪರ ಹೊಂದಾಣಿಕೆಯಿಂದ ಅರಿತು ತೀರ್ಮಾನ ಕೈಗೊಂಡಾಗ ಸಮಸ್ಯೆ ಉಲ್ಬಣವಾಗುವುದೇ ಇಲ್ಲ, ಎಲ್ಲರ ಜೀವನವೂ ಚೆನ್ನಾಗಿರುತ್ತದೆ. ಮಕ್ಕಳಿಗೆ ತಂದೆ – ತಾಯಿ ಹಾಗೂ ಪ್ರೀತಿಯ ಮಧ್ಯೆ ಆಯ್ಕೆ ಎಂಬುದಿರುವುದಿಲ್ಲ, ಪರಸ್ಪರ ಎಲ್ಲರೂ ಅರ್ಥ ಮಾಡಿಕೊಳ್ಳುವ ಅಗತ್ಯವಿರುತ್ತದೆ.
ತಂದೆ-ತಾಯಿ ಕೂಡ ತಮ್ಮ ಮಕ್ಕಳ ಬದುಕಿನಲ್ಲೇ ಮುಳುಗಿ ತಮಗೂ ಒಂದು ಬದುಕಿದೆ ಎಂಬುದನ್ನು ಮರೆಯಬಾರದು. ಮಕ್ಕಳನ್ನು ದಡ ಸೇರಿಸುವ ತಮ್ಮ ಪ್ರೀತಿಯ ಹಡಗಿನಲ್ಲಿ ತಮ್ಮ ಬದುಕನ್ನು ಮುಳುಗಿಸಿಕೊಳ್ಳಬಾರದು. ಒಳ್ಳೆಯ ಮಕ್ಕಳು ತಂದೆ-ತಾಯಿಯನ್ನು ನೋಡಿಕೊಳ್ಳುವ ತಮ್ಮ ಕರ್ತವ್ಯ ಪಾಲನೆಯನ್ನು ಮಾಡಿಯೇ ಮಾಡುತ್ತಾರೆ. ಹೆತ್ತವರ ಮತ್ತು ಮಕ್ಕಳ ಪರಸ್ಪರ ಸೌಹಾರ್ದಯುತ ಸಹಕಾರ ಜೀವನ ಇದಕ್ಕೆ ಅತ್ಯಗತ್ಯ.
