ಸಂಗ್ರಹದ ಕಲಾಕೃತಿಗಳ ಪ್ರದರ್ಶನ | ಅಚ್ಚುಕಟ್ಟಾದ ಪ್ರಸ್ತುತಿ
ಅಂಕಣ – ದೃಶ್ಯ
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
ಭಾರತೀಯ ಕಲಾ ಪರಂಪರೆಯ ಇತಿಹಾಸವನ್ನು ಅವಲೋಕಿಸಿದಾಗ ಆಧುನಿಕ ಕಲೆಯ ಆರಂಭ ಅನೇಕ ವಿಚಾರಗಳಿಂದ ಕುತೂಹಲ ಸೃಷ್ಟಿಸುವಂತಿದೆ. ಸ್ವಾತಂತ್ರ್ಯ ಪೂರ್ವದ ಅಂದರೆ 19ನೇ ಶತಮಾನದಲ್ಲಾದ ಗಮನಾರ್ಹ ಮತ್ತು ಕ್ರಾಂತಿಕಾರಿ ಬದಲಾವಣೆ ಕಲಾಕ್ಷೇತ್ರದಲ್ಲೊಂದು ಸಂಚಲನವನ್ನೇ ಸೃಷ್ಟಿಸಿತ್ತು. ಮುಂದೆ 20ನೇ ಶತಮಾನದುದ್ದಕ್ಕೂ ಹೊಸ ತಲೆಮಾರಿನ ಕಲಾವಿದರ ಮೇಲೆ ಗಂಭೀರ ಪ್ರಭಾವವನ್ನೆ ಬೀರಿತು. ಪರಿಣಾಮ ಭಾರತೀಯ ಕಲೆಯಲ್ಲಾದ ಕ್ರಾಂತಿಕಾರಿ ಬದಲಾವಣೆಗಳು ಒಂದಲ್ಲ ಎರಡಲ್ಲ. ಸೈದ್ಧಾಂತಿಕವಾದ ಭಿನ್ನಾಭಿಪ್ರಾಯಗಳ ನಡುವೆಯೂ ಕಲೆ ನಿರಂತರವಾಗಿ ನದಿಯಂತೆ ಅನಂತದೆಡೆಗೆ ಸಾಗಿದೆ, ಸಾಗುತ್ತಿದೆ. ಸಮಕಾಲೀನ ಸಂದರ್ಭದಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತಹ ಸಾಧ್ಯತೆಗಳೆಲ್ಲವೂ ಭಾರತದಲ್ಲಾಗಿದೆ. ಯಾವೆಲ್ಲ ಕಲಾವಿದರು ಆಧುನಿಕ ನೆಲೆಯಿಂದ ಸಮಕಾಲೀನ ಸಂದರ್ಭದ ತನಕ ಹೇಗೆಲ್ಲಾ ಕಲಾಕೃತಿಗಳನ್ನು ರಚಿಸಿಕೊಂಡು ಬಂದರು. ಕಲಾವಿದರ ಅಭಿಪ್ರಾಯಗಳಲ್ಲಿ ಏನೆಲ್ಲಾ ಬದಲಾವಣೆ ಆದವು. ಕಲಾಕೃತಿಗಳಲ್ಲಿ ನವ್ಯ ಹೇಗೆ ನಲಿಸಲಾರಂಭಿಸಿದವು ಎನ್ನುವುದೇ ರೋಚಕ ಸಂಗತಿ.
ಖ್ಯಾತ ಕಲಾವಿದೆ ಅಮೃತ ಶೇರ್ಗಿಲ್ ಅವರ ಮಾತೊಂದು ಇಲ್ಲಿ ಸಮಯೋಚಿತ ಅನಿಸುತ್ತದೆ. “Modern art has led me to the comprehension and appreciation of Indian painting and sculpture. It seems paradoxical but I know for certain that had we not come away to Europe, I should perhaps never have realised that a fresco from Ajanta or a small piece of sculpture in the Musee Guimet is worth more than a whole Renaissance”.
ಎಷ್ಟು ಸತ್ಯದ ಮಾತು ಅನಿಸಬಹುದು. ಭಾರತೀಯ ಆಧುನಿಕ ಪರಂಪರೆಯನ್ನು ಸೂಕ್ಷ್ಮವಾಗಿ ಗಮಿಸಿದಾಗ ಇಂತಹ ಅನೇಕ ಸತ್ಯಗಳ ಅರಿವು ಮೂಡುವುದರಲ್ಲಿ ಸಂದೇಹವಿಲ್ಲ.
ಇದಕ್ಕೆ ಅನೇಕ ಉದಾಹರಣೆಯಾಗಿ ನಿಲ್ಲಬಲ್ಲ ಪ್ರದರ್ಶನ ‘1 World- The Divine Thread That Binds Humanity and Nature’ ಬೆಂಗಳೂರಿನಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್ಜಿಎಂಎ)ನಲ್ಲಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್ಜಿಎಂಎ ತನ್ನ ಸಂಗ್ರಹದಲ್ಲಿರುವ ಈ ಕಾಲಘಟ್ಟದ ಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿದೆ. ಸಮಕಾಲೀನ ಕಾಲಘಟ್ಟದಲ್ಲಿ, ಸದ್ದು ಮಾಡುತ್ತಿರುವ ಜೆನ್ ಝೀಗಳ ವೀಕ್ಷಣೆ ದೃಷ್ಟಿಯಿಂದ ಇದೊಂದು ಮಹತ್ವದ ಕಲಾಪ್ರದರ್ಶನವಾಗಿದೆ. 19 ಮತ್ತು 20ನೇ ಶತಮಾನದ ಭಾರತೀಯ ಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶವಾಗಿದೆ. ಹಿಂದಿನ ತಲೆಮಾರಿನ ಕಲಾವಿದರ ಬಗ್ಗೆ ಹೇಳಿ ಎಂದು ಜೆನ್ ಝೀಗಳನ್ನು ಪ್ರಶ್ನೆ ಮಾಡಿದರೆ ಯಾವ ಮಟ್ಟದ ಉತ್ತರ ಸಿಕ್ಕೀತು ಎನ್ನುವುದನ್ನು ಇಂದಿನ ಪೋಷಕರು, ಗುರುವೃಂದವೇ ನೇರವಾಗಿ ಹೇಳಿಬಿಡಬಹುದಾದ ಕಾಲಘಟ್ಟದಲ್ಲಿ ತಲೆಮಾರಿನ ಕಲಾ ಇತಿಹಾಸ ಮತ್ತು ಕಲಾವಿದರನ್ನು ಪರಿಚಯಿಸಿಕೊಳ್ಳಲು ಇದೊಂದು ಸುಸಂದರ್ಭ ಎನ್ನಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕಲಾವಿದ್ಯಾರ್ಥಿಯೂ ನೋಡಬೇಕಾದ ಕಲಾಪ್ರದರ್ಶನವಾಗಿದೆ.
ಈ ಪ್ರದರ್ಶನದ ಇನ್ನೊಂದು ವಿಶೇಷತೆ ಏನೆಂದರೆ, ಝೆನ್ ವೈ ಕೇಳರಿಯದ ಅನೇಕ ಕಲಾವಿದರ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಇದರಿಂದ ಈ ಪೀಳಿಗೆಗೆ ಹಿಂದಿನ ಕಲಾವಿದರ ಬಗ್ಗೆ ಅರಿಯುವ, ಪರಿಚಯಿಸಿಕೊಳ್ಳುವ ಅವಕಾಶವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆಧುನಿಕ ಕಲೆಯನ್ನು ಅಳವಡಿಸಿಕೊಳ್ಳುವ ಕಾಲಘಟ್ಟದಲ್ಲಿ ಕಲಾವಿದ ಹೇಗೆ ಅರ್ಥೈಸಿಕೊಂಡಿದ್ದಾನೆ ಎನ್ನುವುದರ ಅರಿವು ಈ ಪ್ರದರ್ಶನದಿಂದ ಸಾಧ್ಯವಾಗಿಸಿಕೊಳ್ಳಬಹುದಾಗಿದೆ. ಕ್ಯುರೇಟರ್ ಅವರ ಪ್ರಸ್ತುತಿಯ ಪ್ರಯತ್ನಕ್ಕೆ ಯಶಸ್ಸು ದಕ್ಕಿದೆ. ಧ್ಯಾನಸ್ಥರನ್ನಾಗಿಸುವ ಅನೇಕ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬಲ್ಲ ಪ್ರದರ್ಶನ ಇದಾಗಿದ್ದು, ಸಕಾಲಿಕ ಪ್ರದರ್ಶನ ಎನ್ನುವುದನ್ನು ಗಟ್ಟಿಯಾಗಿ ಹೇಳಬಹುದು.
ಇದೇ ವೇಳೆ ಇನ್ನೊಂದು ಪ್ರದರ್ಶನ ಕುರಿತು ಪ್ರಸ್ತಾಪಿಸದಿದ್ದರೆ ಅಪೂರ್ಣ ಅನಿಸಬಹುದು. ಎನ್ಜಿಎಂಎ ತನ್ನದೇ ಸಂಗ್ರಹದಲ್ಲಿರುವ ಶಿಲ್ಪ ಕಲಾಕೃತಿಗಳನ್ನು ‘ಪ್ರತಿಭಾ/ PRATIBHA’ ಶೀರ್ಷಿಕೆಯಡಿ ಪ್ರದರ್ಶಿಸಿತ್ತು. ಅನೇಕ ಭಾರತೀಯ ಶಿಲ್ಪ ಕಲಾವಿದರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದ್ದವು. ಆಧುನಿಕ ಸಂದರ್ಭದಿಂದ ಸಮಕಾಲೀನ ಸಂದರ್ಭದ ವರೆಗಿನ ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಲೋಹ, ಶಿಲೆ ಮತ್ತು ಮರವನ್ನು ಮಾಧ್ಯಮವನ್ನಾಗಿಸಿಕೊಂಡು ರಚನೆಯಾಗಿರುವ ಕಲಾಕೃತಿಗಳು ಎಷ್ಟು ಮಹತ್ವ ಪಡೆದುಕೊಳ್ಳಲು ಸಾಧ್ಯವೆನ್ನುವುದಕ್ಕೆ ಈ ಪ್ರದರ್ಶನ ಉದಾಹರಿಸಬಹುದು ಎನ್ನುವುದರಲ್ಲಿ ಯಾವು ಸಂದೇಹವಿಲ್ಲ.
ಒಟ್ಟಾರೆ ಈ ಎರಡು ಪ್ರದರ್ಶನಗಳು ಕರ್ನಾಟಕದ ಕಲಾವಿದರಿಗೆ ಸಂಭ್ರಮವನ್ನೇ ಸೃಷ್ಟಿಸಿತ್ತು ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಅದರಲ್ಲೂ ಕಲಾ ವಿದ್ಯಾರ್ಥಿಗಳ ಅಧ್ಯಯನಕ್ಕೆ ಇದಕ್ಕಿಂತ ಇನ್ನೊಂದು ಪ್ರದರ್ಶನ ಸಿಗಲಿಕ್ಕಿಲ್ಲ. ಎನ್ಜಿಎಂಎ ತನ್ನ ಸಂಗ್ರಹದಲ್ಲಿ ಕಲಾಕೃತಿಗಳನ್ನು ಹೇಗೆ ಇರಿಸಿಕೊಂಡಿದೆ ಎನ್ನುವುದಕ್ಕೂ ಈ ಪ್ರದರ್ಶನಗಳು ನಿದರ್ಶನ. ಇಂತಹ ಪ್ರದರ್ಶನಗಳು ಇನ್ನಷ್ಟು ಆಯೋಜನೆಯಾಗಲಿ. ಭಾರತೀಯ ಕಲಾ ಇತಿಹಾಸ ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಿ.
