ಅಂಕಣ – ಕೃಷಿಯಿಂದ ಬದುಕು
- ಸಂದೀಪ್ ಮಂಜುನಾಥ್, ಎಂ.ಎಸ್ಸಿ. ಕೃಷಿ, ಹುಣಸೂರು
ಹಾಸನ ಜಿಲ್ಲೆ, ಅರಕಲಗೂಡು ತಾ. ರಾಮನಾಥಪುರದ ಬಳಿಯ ಮುತ್ತುಗದ ಹೊಸೂರು ಗ್ರಾಮದ ರಂಗರಾಜ ಐಯ್ಯಂಗಾರ್ ಅವರ ತೋಟ ನೋಡುವ ಅವಕಾಶವಾಯಿತು. ಅರೆಮಲೆನಾಡು ಪ್ರದೇಶವಾದ್ದರಿಂದ ಬಹುತೇಕರು ಇಲ್ಲಿ ಅಡಕೆ ಕೃಷಿ ಮಾಡುತ್ತಾರೆ. ಇವರು ದಶಕಗಳಿಂದ ನೈಸರ್ಗಿಕವಾಗಿ ಅಡಕೆ ಬೆಳೆಯುತ್ತಿದ್ದಾರೆ. ವಿಸ್ಮಯದ ಸಂಗತಿಯೆಂದರೆ ಸುತ್ತಮುತ್ತಲಿನ ಕೃಷಿಕರು ರಾಸಾಯನಿಕ ಗೊಬ್ಬರ ಬಳಸಿದರೂ ಇವರಷ್ಟು ಇಳುವರಿ ಪಡೆಯಲು ಸಾಧ್ಯವಾಗದಿರುವುದು. ಸರಾಸರಿಯಾಗಿ ಎಕರೆಗೆ 90-100 ಕ್ವಿಂಟಲ್ ಹಸಿ ಅಡಕೆ ಬೆಳೆಯುತ್ತಿದ್ದಾರೆ ರಂಗರಾಜನ್. ಈ ಹಸಿ ಅಡಕೆ ಸಿಪ್ಪೆ ತೆಗೆದು, ಬೇಯಿಸಿ, ಒಣಗಿಸಿದರೆ ಶೇ.18-20 ಇಳುವರಿ ಪಡೆಯುತ್ತಿರುವುದೂ ಇವರ ತೋಟದ ವೈಶಿಷ್ಟ್ಯವಾಗಿದೆ. ಈ ರೀತಿ ಆಗಲು ಏನು ಕಾರಣ ಎಂದು ಅವರಿಂದಲೇ ತಿಳಿಯೋಣ.
ʼʻಬಾಲ್ಯದಿಂದಲೂ ನನಗೆ ವ್ಯವಸಾಯ ಎಂದರೆ ಆಸಕ್ತಿ. ಮನೆಯಲ್ಲಿ ಹಸುಗಳಿದ್ದವು. ಹಾಲು ಕರೆದು ಶಾಲೆಗೆ ಹೋಗುತ್ತಿದ್ದೆ. ನಂತರ ಇಂಜಿನಿಯರಿಂಗ್ ಸೇರಿದರೂ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಸರಿಯಾದ ಸಮಯಕ್ಕೆ ಓದು ಮುಗಿಸಲು ಸಾಧ್ಯವಾಗಲಿಲ್ಲ. ಹಾಗೋ ಹೀಗೋ ಮಾಡಿ ಓದಿ, ಊರಿನಲ್ಲೇ ಏನಾದರೂ ಮಾಡಬೇಕು ಎಂದು ಅಡಕೆ ಬೆಳೆಯತ್ತ ಗಮನಹರಿಸಿದೆ. ಆ ಸಮಯದಲ್ಲಿ ತೂಕದ ಲೆಕ್ಕದಲ್ಲಿ ಅಡಕೆ ಮಾರುತ್ತಿರಲಿಲ್ಲ, ಬದಲಿಗೆ ಚೀಲದ ಲೆಕ್ಕದಲ್ಲಿ ಮಾರಾಟ ಮಾಡಬೇಕಿತ್ತು. ನಮಗೆ ಪರಿಚಯದವರೇ ನಾವು ಬೆಳೆದ ಅಡಕೆಯನ್ನು ನಮ್ಮ ಬಳಿ ಕಡಿಮೆ ಬೆಲೆಗೆ ಖರೀದಿಸಿ ಅವರು ಹೆಚ್ಚಿನ ಬೆಲೆಗೆ ಮಾರುತ್ತಿದ್ದುದನ್ನು ಗಮನಿಸಿದೆ. ನಾವೂ ಯಾಕೆ ವ್ಯಾಪಾರ ಮಾಡಬಾರದು ಎಂದು ಅವರಿವರ ಬಳಿ ಸಾಲ ಮಾಡಿ 90ರ ದಶಕದಲ್ಲಿ ಅಡಕೆವ್ಯಾಪಾರ ಪ್ರಾರಂಭಿಸಿದೆ. ವ್ಯಾಪಾರದಲ್ಲಿ ಏನೂ ಜ್ಞಾನ ಇರದ ನನಗೆ ಭಂಡ ಧೈರ್ಯವಷ್ಟೇ ಇತ್ತು. ಒಂದು ವೇಳೆ ನಷ್ಟವಾದರೆ ಊರು ಬಿಟ್ಟು ಕೆಲಸ ಸೇರುವುದು, ಇಲ್ಲವಾದರೆ ಇದನ್ನೇ ಮುಂದುವರಿಸೋಣ ಎಂದು ಅಡಕೆವ್ಯಾಪಾರಕ್ಕೆ ಕೈ ಹಾಕಿದೆ. ನನ್ನ ಅದೃಷ್ಟಕ್ಕೆ ನಾನು 6000 ರೂ.ಗೆ ಖರೀದಿಸಿದ ಅಡಕೆದರ ಏಕಾಏಕಿ ದ್ವಿಗುಣವಾಗಿ 12000 ತಲುಪಿತು. ನನ್ನ ಅದೃಷ್ಟದ ಬಾಗಿಲು ತೆರೆಯಿತು ಎಂದುಕೊಂಡೆ. ಅಲ್ಲಿಂದ ಮುಂದೆ ಹಿಂದೆ ನೋಡಲಿಲ್ಲ. ವ್ಯಾಪಾರ ಒಂದು ಕಡೆಯಾದರೆ ಇನ್ನೊಂದೆಡೆ ಕೃಷಿ ಎಂದರೆ ನನಗೆ ಅಪಾರ ಆಸಕ್ತಿ. ಪಿತ್ರಾರ್ಜಿತವಾಗಿ ಸುಮಾರು 20 ಎಕರೆ ಜಮೀನು ನನ್ನ ಪಾಲಿಗೆ ಬಂದಿದೆ.
ನೈಸರ್ಗಿಕ ಕೃಷಿಗೆ ಫುಕುವೋಕಾ ಪ್ರೇರಣೆ
ಪ್ರಾರಂಭದಿಂದಲೂ ಪರಿಸರದ ಮೇಲೆ ಕಾಳಜಿ ಇರುವ ನಮಗೆ ರಾಸಾಯನಿಕ ಬಳಸುವುದು ಇಷ್ಟವಿರಲಿಲ್ಲ. ಫುಕುವೋಕಾ ಅವರ ಪುಸ್ತಕ, ನಂತರ ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿ ಪುಸ್ತಕದ ಕನ್ನಡ ಅವತರಿಣಿಕೆ ಓದಿದ ಮೇಲೆ ಜೀವಾಮೃತ, ಹೊದಿಕೆ ಇತ್ಯಾದಿ ವಿಷಯಗಳು ಚೆನ್ನಾಗಿ ಅರ್ಥವಾದವು. 1996ರಲ್ಲಿ ನಮ್ಮ ಜಮೀನಿಗೆ ಬೋರ್ವೆಲ್ ಹಾಕಿಸಿದೆವು. ಸಪೋಟ, ಮಾವು, ಇತ್ಯಾದಿ ಹಣ್ಣಿನ ಗಿಡ ನೆಟ್ಟೆವು. ಆದರೆ ಆಡು, ಕುರಿ ಮೇಯಿಸುವವರ ಉಪಟಳ ಹೆಚ್ಚಾಯಿತು. ನಾವು ನಮ್ಮ ತೋಟಕ್ಕೆ ಬೇಲಿ ಹಾಕಿಸಿದ್ದು ಅವರಿಗೆಲ್ಲಾ ಮಹಾಪರಾಧದಂತೆ ಕಾಣಿಸಿತು. ಆದರೂ ಧೃತಿಗೆಡದೆ ತಂತಿ ಬೇಲಿ ಭದ್ರಪಡಿಸಿ ನೀರಾವರಿಗೆ ಡ್ರಿಪ್ ಅಳವಡಿಸಿದೆವು. ಕೆಲ ವರ್ಷಗಳು ಎಲ್ಲಾ ಚೆನ್ನಾಗಿತ್ತು. ಉತ್ತಮ ಇಳುವರಿ ಬರುತ್ತಿತ್ತು. ಮಾರುಕಟ್ಟೆ ಬೆಲೆಗೆ ಅನುಸಾರವಾಗಿ ಸ್ವಲ್ಪ ಆದಾಯವೂ ಸಿಗುತ್ತಿತ್ತು.
ನೈಸರ್ಗಿಕ ಕೃಷಿಕರು ಡ್ರಿಪ್ ಬದಲು ಸ್ಪ್ರಿಂಕ್ಲರ್ ಅಳವಡಿಸಿದರೆ ಉತ್ತಮ
2006ರ ಸಮಯದಲ್ಲಿ ತೀವ್ರ ಬರಗಾಲ ಎದುರಾಗಿ ನೀರಿಗೆ ಬಹಳ ಸಮಸ್ಯೆಯಾಯಿತು. ನೈಸರ್ಗಿಕ ತೋಟವಾದ್ದರಿಂದ ಕಳೆ ಸಸ್ಯಗಳು, ತರಗೆಲೆಗಳು ಹೆಚ್ಚಾಗಿತ್ತು. ಯಾರೋ ಬೀಡಿ ಸೇದಿ ಎಸೆದ ಪರಿಣಾಮ ಬಹುತೇಕ ತೋಟ ಬೆಂಕಿಗೆ ಆಹುತಿಯಾಯಿತು. ಹನಿ ನೀರಾವರಿ ಬದಲಿಗೆ ತುಂತುರು ನೀರಾವರಿ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎನಿಸಿತು. ಸುಟ್ಟು ಕರಕಲಾದ ಪೈಪ್ಗಳನ್ನು ತೆಗೆದು ತುಂತುರು ನೀರಾವರಿಗೆ ವ್ಯವಸ್ಥೆ ಮಾಡಿದೆವು.
ಬೇಲಿಯ ಸುತ್ತಾ ಅರಣ್ಯ ಕೃಷಿ
ತೋಟದ ಬೇಲಿಯ ಸುತ್ತಲೂ ಸಾಗುವಾನಿ, ಅಂಟುವಾಳ, ಶ್ರೀಗಂಧ, ಹೆಬ್ಬೇವು ಸಿಲ್ವರ್ ರೀತಿಯ ಅರಣ್ಯ ಪ್ರಭೇದಗಳ ಸಸಿಗಳನ್ನು ಬೆಳೆಸಿದ್ದೇವೆ. ಅವುಗಳೀಗ ಹೆಮ್ಮರಗಳಾಗಿವೆ. ತೋಟದ ಒಳಗೂ ಅಗರ್ ವುಡ್ ಮರಗಳಿವೆ.
ಕಲ್ಲು ಬಂಡೆಯ ಜಮೀನಿನಲ್ಲಿ ಅಡಿಕೆ ಕೃಷಿ
ನಮ್ಮ ಜಮೀನಿನ ಒಂದು ಭಾಗದಲ್ಲಿ ಸುಮಾರು 6-7 ಎಕರೆಯಷ್ಟು ಕಲ್ಲು ಬಂಡೆಗಳಿದ್ದವು. ಅದು ಯಾವ ಪರಿ ಎಂದರೆ 6-7 ಅಡಿ ತೆಗೆದರೂ ಮಣ್ಣು ಸಿಗುತ್ತಿರಲಿಲ್ಲ. ಹಾಗೂ ಹೀಗೂ ಬಂಡೆ ಒಡೆಯುವರನ್ನು ಕರೆಸಿ ಸಾಕಷ್ಟು ಬಂಡೆಗಳನ್ನು ತೆರವುಗೊಳಿಸಿದೆವು. ಅಲ್ಲಿಗೆ ಕೆರೆ ಹೂಳು ಮತ್ತು ಕೆಂಪು ಮಣ್ಣು ಹೊಡೆಸಿ ಮಣ್ಣನ್ನು ಫಲವತ್ತಾಗಿಸಿದೆವು. ಅಲ್ಲಿ ಅಡಕೆ ಕೃಷಿ ಪ್ರಾರಂಭಿಸಿದೆವು.
ಜೀವಾಮೃತಕ್ಕಾಗಿ ನಾಟಿ ಗೋ ಸಾಕಾಣಿಕೆ
ರಾಮಚಂದ್ರಾಪುರ ಮಠದವರು 2008-09ರ ಸಮಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಅಭಯಮಂಗಲ ಗೋ ಯಾತ್ರೆ’, ‘ವಿಶ್ವಮಂಗಲ ಗೋಯಾತ್ರೆ’ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಭಾರತೀಯ ಗೋ ತಳಿಗಳನ್ನು ಉಳಿಸುವ ಅಭಿಯಾನ ಮಾಡಿದರು. ಆಗ ನನಗೆ ಗಿರ್ ತಳಿಯ ಹಸುವಿನ ಪರಿಚಯವಾಯಿತು. ನಮ್ಮ ಸ್ಥಳೀಯ ತಳಿಗಳಿಗಿಂತ ಹೆಚ್ಚು ಹಾಲು ಕೊಡುತ್ತವೆ ಮತ್ತು ಸಗಣಿ ಗಂಜಲವನ್ನು ಕೃಷಿಗೆ ಬಳಸಬಹುದು ಎಂದು ಆಲೋಚಿಸಿ ಒಂದೆರಡು ಗೀರ್ ಹಸುಗಳನ್ನು ತಂದೆವು. ಆದರೆ ಇವು ಬಹಳ ಸೂಕ್ಷ್ಮ. ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯವಾಯಿತು. ಬೆದೆಗೆ ಬಂದು ಕೃತಕ ಗರ್ಭದಾರಣೆ ಮಾಡಿಸಿದರೂ ಗರ್ಭವಾಗುತ್ತಿರಲಿಲ್ಲ. ಹಿರಿಯರೊಬ್ಬರ ಸೂಚನೆಯಂತೆ ಹೋರಿ ಸಾಕಲು ಮುಂದಾದೆವು. ಕೊಣನೂರು ಸಮೀಪದ ಸಿದ್ಧಲಿಂಗೇಶ್ವರ ಅವರ ಬಳಿ ಹೋರಿ ಖರೀದಿಸಿದೆವು. ಅದು ಚೆನ್ನಾಗಿ ಬೆಳೆದು ಭೀಮಕಾಯ ಪಡೆದಿದೆ. ಅಂದಿನಿಂದ ಇಲ್ಲಿಯವರೆಗೆ ನಮ್ಮ ಹಸುಗಳಿಗೆ ಕೃತಕ ಗರ್ಭದಾರಣೆ ಮಾಡಿಸಿಲ್ಲ. ಉತ್ತಮ ಕರುಗಳು ಜನಿಸುತ್ತಿದ್ದು ಅವುಗಳನ್ನು ಆಸಕ್ತರಿಗೆ ಮಾರಾಟ ಮಾಡುತ್ತಿದ್ದೇವೆ. ಸಗಣಿ ಗಂಜಲ ಸಂಗ್ರಹಿಸಿ ಜೀವಾಮೃತ ಮಾಡುತ್ತೇವೆ. ತೋಟಕ್ಕೆ ಇದನ್ನು ಬಿಟ್ಟು ಮತ್ತೇನೂ ಬಳಸುವುದಿಲ್ಲ. ಅಡಕೆಕಾಯಿ ಕಟಾವು ಸಮಯದಲ್ಲಷ್ಟೇ ಕಳೆ ತೆಗೆಸುತ್ತೇವೆ. ಉಳಿದಂತೆ ಕಳೆ ಸಹ ತೆಗೆಸುವುದಿಲ್ಲ. ಉಳಿಮೆಯಂತೂ ಇಲ್ಲವೇ ಇಲ್ಲ. ಹಸುಗಳನ್ನು ತೋಟದ ಒಳಗೆ ಮೇಯಲು ಬಿಡುತ್ತೇವೆ.
ರಾಸಾಯನಿಕ ಕೃಷಿಗಿಂತ ನೈಸರ್ಗಿಕ ಕೃಷಿಯಲ್ಲೇ ಹೆಚ್ಚು ಲಾಭ
ನಾವು ಯಾವುದೇ ರೀತಿ ಹೆಚ್ಚಿನ ನಿರ್ವಹಣೆ ಮಾಡದಿದ್ದರೂ ಇಳುವರಿಯಲ್ಲಿ ಯಾವುದೇ ಮೋಸವಿಲ್ಲ. ಪ್ರಕೃತಿ ನಮಗೆ ಚೆನ್ನಾಗಿಯೇ ನೀಡುತ್ತಿದ್ದಾಳೆ. ಎಕರೆಗೆ 90-110 ಕ್ವಿಂಟಲ್ ಹಸಿ ಅಡಕೆ ದೊರೆಯತ್ತಿದೆ. ನಾವೇ ಅಡಕೆ ಸುಲಿದು ಬೇಯಿಸುವ ಕಾರಣ, ಒಣ ಅಡಕೆಯ ಗುಣಮಟ್ಟವೂ ತಿಳಿದಿದೆ. ಸಿಪ್ಪೆ ತೆಗೆದು ಸಂಸ್ಕರಿಸಿದ ಅಡಕೆ 18-20 ಕೆಜಿ ತೂಗುತ್ತದೆ. ಕೆಲವರು ರಾಸಾಯನಿಕ ಗೊಬ್ಬರ ನೀಡಿ ಅಡಕೆ ಬೆಳೆದರೂ ಇಷ್ಟು ಇಳುವರಿ ಪಡೆಯಲು ಸಾಧ್ಯವಾಗಿಲ್ಲ. ಎರಡು ವರ್ಷಗಳ ಹಿಂದೆ ಮಳೆ ಹೆಚ್ಚಾಗಿ ಕೊಳೆರೋಗ ಕಾಣಿಸಿತು. ನಾವು ಜೀವಾಮೃತ ಬಳಸಿದ್ದು ಬಿಟ್ಟರೆ ಯಾವುದೇ ಸಿಂಪರಣೆ ಇಲ್ಲ. ಅಕ್ಕ ಪಕ್ಕದವರು ರಾಸಾಯನಿಕಗಳನ್ನು ಬಳಸಿದರೂ ರೋಗ ನಿಯಂತ್ರಿಸಲು ಕಷ್ಟಪಟ್ಟರು. ಉಳಿದ ಬೆಳೆಗಳಲ್ಲಿ ಹೇಗೋ ತಿಳಿಯದು. ಆದರೆ ಅಡಕೆಗೆ ಮಾತ್ರ ನೈಸರ್ಗಿಕ ಕೃಷಿ ಹೇಳಿಮಾಡಿಸಿದ ಹಾಗಿದೆ.
ಮನೆಯ ಪಕ್ಕದಲ್ಲೇ ಸೋಲಾರ್ ಡ್ರಯರ್
ನಮ್ಮಲ್ಲಿ ಅಡಕೆ ಸುಲಿಯುವ ಯಂತ್ರವಿದ್ದು ಬೇಯಿಸಿದ ಅಡಕೆಯನ್ನು ಒಣಗಿಸಲು ಸೋಲಾರ್ ಡ್ರಯರ್ ಬಳಸುತ್ತೇವೆ. ಬೇರೆಯವರಿಗೂ ಬಾಡಿಗೆ ರೂಪದಲ್ಲಿ ಯಂತ್ರವನ್ನು ಉಪಯೋಗಿಸಲು ನೀಡುತ್ತೇವೆ. ಇದರಿಂದಲೂ ಸ್ವಲ್ಪ ಆದಾಯ ಸಿಗುತ್ತದೆ. ಅಡಕೆ ಸಿಪ್ಪೆಯನ್ನು ಬೆಂಕಿಗೆ ಹಾಕುವುದಿಲ್ಲ. ಅಡಕೆ ಸಿಪ್ಪೆಯಲ್ಲಿ ಹೆಚ್ಚಿನ ನಾರಿನಾಂಶವಿರುವ ಕಾರಣ ಸಾಮಾನ್ಯವಾಗಿ ಯಾರೂ ಇದನ್ನು ಗೊಬ್ಬರಕ್ಕಾಗಲೀ ಹೊದಿಕೆ ರೀತಿ ಹೊಲದಲ್ಲಾಗಲೀ ಬಳಸದೆ ಸುಟ್ಟುಹಾಕುತ್ತಾರೆ. ಆದರೆ ನಾವು ಸಿಪ್ಪೆಯನ್ನು ಒಂದು ಕಡೆ ಸಂಗ್ರಹಿಸಿ ಅದರ ಮೇಲೆ ಜೀವಾಮೃತ ಸಿಂಪಡಿಸುತ್ತೇವೆ. 2-3 ತಿಂಗಳಲ್ಲಿ ಅದು ಮೃದುವಾಗಿ ಬಿಸಿ ಹೋಗಿ ತಂಪಾಗಿರುತ್ತದೆ. ಆಗ ಎಲ್ಲವನ್ನೂ ತೋಟದಲ್ಲಿ ಗಿಡಗಳ ಬುಡಕ್ಕೆ ಹಾಕಿಸುತ್ತೇವೆ. ನಿರಂತರ ನೀರು, ಜೀವಾಮೃತ ಕೊಡುವ ಕಾರಣ 7-8 ತಿಂಗಳಲ್ಲಿ ಬಹುತೇಕ ಸಿಪ್ಪೆ ಗೊಬ್ಬರವಾಗಿರುತ್ತದೆ. ಎಲ್ಲರೂ ಹೀಗೆ ಮಾಡಿದರೆ ಒಳಿತುʼʼ ಎನ್ನುತ್ತಾರೆ ರಂಗರಾಜ್ ಅಯ್ಯಂಗಾರ್.
ಇನ್ನು ಇವರ ಶ್ರೀಮತಿಯವರು ಮನೆಯ ಸುತ್ತ ಸೊಗಸಾದ ಕೈತೋಟ ನಿರ್ಮಿಸಿದ್ದಾರೆ. ಅಡಕೆ ಸಸಿಗಳ ನರ್ಸರಿ ಮಾಡಿ ಮಾರಾಟಮಾಡುತ್ತಾರೆ. ಮಗಳು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ. ಒಟ್ಟಿನಲ್ಲಿ ನೈಸರ್ಗಿಕ ಕೃಷಿಯಲ್ಲೂ ಉತ್ತಮ ಇಳುವರಿ ಪಡೆಯುತ್ತಾ ಸಮೃದ್ಧ ಜೀವನ ಸಾಗಿಸುತ್ತಿದ್ದಾರೆ ರಂಗರಾಜನ್. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 99450 81700.
