ಭಾರತೀಯ ಸೈನಿಕ ಇತಿಹಾಸ ಕಂಡ ಅಪ್ರತಿಮ ತಂತ್ರಜ್ಞರಲ್ಲಿ ಒಬ್ಬರಾದ ಪೇಷ್ವಾ ಒಂದನೇ ಬಾಜೀರಾವ್, ತಮ್ಮ ದಿಟ್ಟ ದಂಡಯಾತ್ರೆ ಹಾಗೂ ರಣರಂಗದ ಚಾಣಾಕ್ಷತೆಯಿಂದ ಮರಾಠಾ ಸ್ವರಾಜ್ಯದ ಗಡಿಯನ್ನು ವಿಶಾಲ ಭೂಪ್ರದೇಶಗಳಿಗೆ ವಿಸ್ತರಿಸಿದವರು. ಯುದ್ಧಭೂಮಿಯಲ್ಲಿ ಎಂದೂ ಸೋಲನ್ನೇ ಕಾಣದ ಈ ವೀರನ ಸಾಹಸಗಾಥೆ, ಧೈರ್ಯ, ಮಿಂಚಿನ ವೇಗ ಹಾಗೂ ಸ್ವರಾಜ್ಯದ ಕಲ್ಪನೆಗೆ ಅವರಿಗಿದ್ದ ಅಚಲ ಬದ್ಧತೆಯ ಸಂಕೇತವಾಗಿ ಇಂದಿಗೂ ಅಮರವಾಗಿದೆ.
ಉತ್ತರ ಭಾರತದ ಬಹುತೇಕ ಭಾಗಗಳನ್ನು ಮೊಘಲ್ ಸಾಮ್ರಾಜ್ಯವು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳಲು ಹೆಣಗಾಡುತ್ತಿದ್ದ ಕಾಲವದು. ಅಂತಹ ಸಮಯದಲ್ಲಿ ಮರಾಠಾ ಸೇನಾಪತಿಯೊಬ್ಬರು ಯುದ್ಧಕಲೆಯನ್ನೇ ರಾಜ್ಯ ವಿಸ್ತರಣೆಯ ಹರಿತವಾದ ಅಸ್ತ್ರವನ್ನಾಗಿ ಮಾಡಿಕೊಂಡು, ಭಗವಾ ಧ್ವಜವನ್ನು ವಿಜೃಂಭಿಸುತ್ತಿದ್ದ ಸ್ವರಾಜ್ಯದ ಸಂಕೇತವನ್ನಾಗಿ ಮಾಡಿದರು. 1700 ರ ಆಗಸ್ಟ್ 18 ರಂದು ಜನಿಸಿದ ಪೇಷ್ವಾ ಒಂದನೇ ಬಾಜೀರಾವ್, ಭಾರತದ ಇತಿಹಾಸದಲ್ಲೇ ಅತ್ಯಂತ ಧೀರ ನಾಯಕರಲ್ಲಿ ಒಬ್ಬರಾಗಿ ನೆನಪಿನಲ್ಲಿ ಉಳಿಯುತ್ತಾರೆ.
ದುಬೇರ್ಗ್ನಲ್ಲಿ ಜನ್ಮತಾಳಿದ ಬಾಜೀರಾವ್ಗೆ ವೀರತ್ವದ ರಕ್ತವೇ ಬಳುವಳಿಯಾಗಿ ಬಂದಿತ್ತು. ಅವರ ತಂದೆ ಬಾಲಾಜಿ ವಿಶ್ವನಾಥ್, ಛತ್ರಪತಿ ಶಾಹು ಮಹಾರಾಜರ ಆಸ್ಥಾನದಲ್ಲಿ ಪೇಷ್ವಾರಾಗಿ ಸೇವೆ ಸಲ್ಲಿಸಿದವರು. ಕುಟುಂಬಕ್ಕೆ ಮರಾಠಾ ಸ್ವರಾಜ್ಯದ ಹೋರಾಟದೊಂದಿಗೆ ಸುದೀರ್ಘ ನಂಟಿತ್ತು. ಆದರೆ ಬಾಜೀರಾವ್ ಆ ಪರಂಪರೆಯನ್ನು ಕೇವಲ ಕಾಪಾಡಿಕೊಳ್ಳಲಷ್ಟೇ ಇಲ್ಲ; ಮಿಂಚಿನ ವೇಗ, ಅದ್ಭುತ ಯುದ್ಧತಂತ್ರ ಹಾಗೂ ಮರಾಠಾ ಆಶಯಗಳ ಮೇಲಿನ ನಿಷ್ಠೆಯಿಂದ ಅದನ್ನು ದಿಕ್ಕುದಿಕ್ಕುಗಳಿಗೂ ಹರಡಿದರು.
ಬಾಲ್ಯದಿಂದಲೇ ಅವರಿಗೆ ಕತ್ತಿ-ಕಾಳಗಗಳೆಂದರೆ ಎಣೆ ಇಲ್ಲದ ಪ್ರೀತಿ. ಚೌಲಕರ್ಮ (ಉಪನಯನ) ಮುಂಜಿಯ ಸಮಯದಲ್ಲಿ ಇಷ್ಟವಾದ ಉಡುಗೊರೆ ಆರಿಸಿಕೊಳ್ಳಲು ಹೇಳಿದಾಗ, ಬಾಲಕ ಬಾಜೀರಾವ್ ಆರಿಸಿಕೊಂಡದ್ದು ಹರಿತವಾದ ಖಡ್ಗವನ್ನು! ಇನ್ನೊಮ್ಮೆ ಶಾಹು ಮಹಾರಾಜರು ಬೆಲೆಬಾಳುವ ಮುತ್ತಿನ ಹಾರವನ್ನು ಕೊಡಹೋದಾಗ, “ನನಗೆ ಹಾರ ಬೇಡ, ಕುದುರೆ ಬೇಕು” ಎಂದರಂತೆ. ಲಾಯಕ್ಕೆ ಕರೆದೊಯ್ದಾಗ, ಅಲ್ಲಿದ್ದ ಅತ್ಯಂತ ವೇಗದ ಹಾಗೂ ಪಳಗಿಸಲು ಪಟಾಪಟನೇ ಸಿಗದ ಮೊಂಡು ಕುದುರೆಯನ್ನು ಆಯ್ದುಕೊಂಡು ತಕ್ಷಣವೇ ಏರಿ ಸವಾರಿ ಮಾಡಿದರು. ಮುಂದೆ ರಣರಂಗದಲ್ಲಿ ಅವರು ಮೆರೆಯಲಿದ್ದ ಸಾಹಸಕ್ಕೆ ಈ ಘಟನೆ ಮುನ್ಸೂಚನೆಯಾಗಿತ್ತು.
ಕೇವಲ ಹದಿನಾಲ್ಕರ ಹರಯದಲ್ಲೇ ಬಾಜೀರಾವ್ ದಂಡಯಾತ್ರೆಗಳಲ್ಲಿ ಹೆಜ್ಜೆಹಾಕ ತೊಡಗಿದ್ದರು. ಪಾಂಡವಗಢ ಕೋಟೆಯನ್ನು ಅದರ ಹಿಂಭಾಗದ ಕಡಿದಾದ ಬೆಟ್ಟದ ದಾರಿಯಲ್ಲೇ ಏರಿ ವಶಪಡಿಸಿಕೊಂಡ ಅವರ ಸಾಹಸ, ಮುಂದೆ ರಣರಂಗದಲ್ಲಿ ಅವರು ತೋರಿಸಿದ ಎದೆಗಾರಿಕೆಗೆ ನಾಂದಿಯಾಯಿತು. ಅವರ ಈ ಚಾಣಾಕ್ಷತೆಯನ್ನು ಮೆಚ್ಚಿದ ಶಾಹು ಮಹಾರಾಜರು ಅವರಿಗೆ ‘ಸರ್ದಾರ್’ ಎಂಬ ಪಟ್ಟವನ್ನು ನೀಡಿದರು.
ಇದಾದ ಬಳಿಕ ಮರಾಠಾ ಇತಿಹಾಸದ ಹಾದಿಯನ್ನೇ ಬದಲಿಸಿದ ಮಹತ್ವದ ತಿರುವು ಬಂದಿತು.
1720 ರ ಏಪ್ರಿಲ್ 2 ರಂದು ತಂದೆ ತೀರಿಕೊಂಡಾಗ, 20 ವರ್ಷದ ಹಸಗೂಸಿನಂತಿದ್ದ ಬಾಜೀರಾವ್ರನ್ನು ಏಪ್ರಿಲ್ 17 ರಂದು ಛತ್ರಪತಿ ಶಾಹು ಮಹಾರಾಜರು ‘ಪೇಷ್ವಾ’ (ಪ್ರಧಾನಮಂತ್ರಿ) ಹುದ್ದೆಗೆ ನೇಮಿಸಿದರು. ಇನ್ನು ಅನುಭವ ಸಾಲದು ಎನ್ನುವ ವಯಸ್ಸಿನಲ್ಲೇ, ಶತ್ರುಗಳಿಂದ ಸುತ್ತುವರಿದಿದ್ದ ಹಾಗೂ ಬೆಳೆಯುತ್ತಿದ್ದ ಸಾಮ್ರಾಜ್ಯದ ಭಾರೀ ಜವಾಬ್ದಾರಿ ಅವರ ಹೆಗಲೇರಿತು.
ಆದರೆ ಬಾಜೀರಾವ್ ಹಿಂಜರಿಯಲಿಲ್ಲ; ಬದಲಿಗೆ ಎದೆಸೆಟೆದು ನಿಂತರು.
ಅವರ ದಂಡಯಾತ್ರೆಗಳು ಹೈದರಾಬಾದ್ನ ನಿಜಾಮ ಹಾಗೂ ಮೊಘಲರ ಅಧಿಕಾರಕ್ಕೆ ನಡುಕ ಹುಟ್ಟಿಸಿದವು. 1728 ರ ಪಾಲ್ಖೇಡ್ ಕಾದಾಟದಲ್ಲಿ, ಬಾಜೀರಾವ್ ತಮ್ಮ ಚುರುಕುತನ, ಮಿಂಚಿನ ಚಲನವಲನ ಹಾಗೂ ಶ್ರೇಷ್ಠ ಯುದ್ಧತಂತ್ರದಿಂದ ನಿಜಾಮ್-ಉಲ್-ಮುಲ್ಕ್ನನ್ನು ಕಟ್ಟಿಹಾಕಿ, ಕಾಲಿಗೆ ಬಿದ್ದು ಶಾಂತಿ ಒಪ್ಪಂದ ಮಾಡಿಕೊಳ್ಳುವಂತೆ ಮಾಡಿದರು. ಈ ಯುದ್ಧವು ಭಾರತೀಯ ಸೈನಿಕ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿ, ಬಾಜೀರಾವ್ರ ಕೀರ್ತಿಯನ್ನು ಮರಾಠಾ ಗಡಿಯ ಆಚೆಗೂ ಪಸರಿಸಿತು.
ಅವರ ಪಡೆಗಳು ಮಾಳವ, ಗುಜರಾತ್ನಿಂದ ಹಿಡಿದು ಬುಂದೇಲ್ಖಂಡ ಹಾಗೂ ಡೆಕ್ಕನ್ ಪ್ರಾಂತ್ಯದವರೆಗೂ ಮುನ್ನುಗ್ಗಿ ಶತ್ರುಗಳನ್ನು ಧೂಳಿಪಟ ಮಾಡಿದವು. ಸ್ವರಾಜ್ಯದ ಎಲ್ಲೆಯನ್ನು ವಿಸ್ತರಿಸುತ್ತಾ ಹೋದರು. ಬರಿ ಸೈನ್ಯವಿದ್ದರಷ್ಟೇ ಸಾಲದು, ಸೈನ್ಯಕ್ಕೆ ಸಮರ್ಥ ದಂಡನಾಯಕರೂ ಬೇಕು ಎಂಬುದನ್ನು ಅರಿತಿದ್ದ ಅವರು ರಾನೋಜಿ ಶಿಂದೆ, ಮಲ್ಹಾರರಾವ್ ಹೋಳ್ಕರ್ ಹಾಗೂ ಉದಾಜಿ ಪವಾರ್ ಅವರಂತಹ ಯುವ ರಕ್ತವನ್ನು ಬೆಳೆಸಿದರು. ಮುಂದೆ ಇವರೇ ಮರಾಠಾ ಸಾಮ್ರಾಜ್ಯದ ಗಡಿಗಳನ್ನು ಕಾಯುವ ಪ್ರಬಲ ಕಂಬಗಳಾದರು.
ಬಾಜೀರಾವ್ರ ಯುದ್ಧಕಲೆ ಕೇವಲ ನೇರ ಕಾಳಗಕ್ಕೆ ಸೀಮಿತವಾಗಿರಲಿಲ್ಲ. ಶತ್ರುವಿಗೆ ಸುಳಿವು ಸಿಗದಂತೆ ವೇಗವಾಗಿ ನುಗ್ಗುವುದು, ಚದುರಿ ದಾಳಿ ಮಾಡುವುದು ಹಾಗೂ ಶತ್ರುವಿನ ಅತಿ ದೌರ್ಬಲ್ಯದ ಜಾಗಕ್ಕೇ ಪೆಟ್ಟುಕೊಡುವುದು ಅವರ ಶೈಲಿಯಾಗಿತ್ತು. ಅವರ ಪ್ರಸಿದ್ಧ ಯುದ್ಧ ಸೂತ್ರ ಸರಳವಾಗಿತ್ತು: “ಮರದ ಬೇರಿಗೇ ಏಟು ಕೊಡಿ, ಕೊಂಬೆ-ರೆಂಬೆಗಳು ತಾವಾಗಿಯೇ ಉದುರಿಬೀಳುತ್ತವೆ.”
ಮೊಘಲ್ ದರ್ಬಾರು ನಾದಿರ್ ಶಾನ ರಕ್ತಸಿಕ್ತ ಆಕ್ರಮಣಕ್ಕೆ ನಲುಗಿಹೋಗಿದ್ದಾಗ, ಬಾಜೀರಾವ್ ದೆಹಲಿಯತ್ತ ಹೆಜ್ಜೆಹಾಕಲು ಸಿದ್ಧರಾಗುತ್ತಿದ್ದರು. ರಣರಂಗದಲ್ಲಿ ಅವರ ವಿಕ್ರಮವನ್ನು ಕಣ್ಣಾರೆ ಕಂಡಿದ್ದ ಮೊಘಲರಿಗೆ, ಬಾಜೀರಾವ್ ದೆಹಲಿಯತ್ತ ಬರುತ್ತಿದ್ದಾರೆ ಎಂಬ ಸುದ್ದಿಯೇ ಎದೆಯಲ್ಲಿ ನಡುಕ ಹುಟ್ಟಿಸಲು ಸಾಕಾಗಿತ್ತು.
ಇನ್ನೊಂದೆಡೆ, ಮುಹಮ್ಮದ್ ಖಾನ್ ಬಂಗಾಶ್ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧ ಛತ್ರಸಾಲ್ ಬುಂದೇಲನ ಕೂಗಿಗೆ ಓಗೊಟ್ಟು ಧಾವಿಸಿದವರು ಇದೇ ಬಾಜೀರಾವ್. ಬುಂದೇಲನನ್ನು ಆಪತ್ತಿನಿಂದ ಪಾರುಮಾಡಿ, ಉತ್ತರ ಭಾರತದಲ್ಲೂ ಮರಾಠರ ದಬ್ಬಾಳಿಕೆಯನ್ನು ಕಟ್ಟಿಹಾಕಲಾಗದಂತೆ ಗಟ್ಟಿಮಾಡಿದರು.
ಆದರೆ, ಈ ಸೋಲರಿಯದ ಸರದಾರನ ಕಥೆ ನಿರೀಕ್ಷಿಸದ ರೀತಿಯಲ್ಲಿ ಮುಕ್ತಾಯವಾಯಿತು.
ದೆಹಲಿಯತ್ತ ಪಯಣಿಸುತ್ತಿದ್ದಾಗ, ನರ್ಮದಾ ನದಿಯ ದಂಡೆಯ ರಾವೇರ್ಖೇಡಿಯಲ್ಲಿ ಸುಡುವ ಬಿಸಿಲಿಗೆ ತುತ್ತಾಗಿ ಬಾಜೀರಾವ್ ತೀವ್ರ ಅಸ್ವಸ್ಥರಾದರು. 1740 ರ ಏಪ್ರಿಲ್ 28 ರಂದು, ಕೇವಲ 40 ರ ಹರೆಯದಲ್ಲೇ, ಯುದ್ಧಭೂಮಿಯಲ್ಲಿ ಶತ್ರುಗಳಿಗೆ ಸೋಲದ ಆ ಯೋಧ ವಿಧಿಯ ಆಟಕ್ಕೆ ಶರಣಾಗಿ ಕೊನೆಯುಸಿರೆಳೆದರು.
ಅವರ ಅಗಲಿಕೆ ಅವರು ಕಟ್ಟಿದ ಸಾಧನೆಯನ್ನೇನೂ ಅಳಿಸಿಹಾಕಲಿಲ್ಲ. ಕೇವಲ ಎರಡು ದಶಕಗಳ ಆಡಳಿತದಲ್ಲಿ, ಬಾಜೀರಾವ್ ಮರಾಠರನ್ನು ಒಂದು ಪ್ರಾದೇಶಿಕ ಶಕ್ತಿಯಿಂದ ಇಡೀ ಭಾರತದಾದ್ಯಂತ ಮೊಘಲ್ ಸಾಮ್ರಾಜ್ಯವನ್ನೇ ನಡುಗಿಸುವ ಅಪ್ರತಿಮ ಸಾಮ್ರಾಜ್ಯವನ್ನಾಗಿ ಬೆಳೆಸಿದರು.
ಒಮ್ಮೆ ಮರಾಠಾ ಅಧಿಕಾರದ ಗಂಗೋತ್ರಿಯಾಗಿದ್ದ ಪುಣೆಯ ‘ಶನಿವಾರ್ ವಾಡಾ’, ಗಾಳಿಯ ವೇಗದಲ್ಲಿ ನುಗ್ಗುತ್ತಿದ್ದ ಸೈನ್ಯವನ್ನು ಮುನ್ನಡೆಸಿ 18 ನೇ ಶತಮಾನದ ಭಾರತದ ರಾಜಕೀಯ ಸ್ವರೂಪವನ್ನೇ ಬದಲಿಸಿದ ಆ ಪೇಷ್ವಾ ಅವರ ಶೌರ್ಯವನ್ನು ಇಂದಿಗೂ ಮೆಲಕುಹಾಕುತ್ತದೆ.
ಪೇಷ್ವಾ ಬಾಜೀರಾವ್ ಅವರ ಬದುಕು ಎಂದರೆ—ಶತ್ರು ಗೆರೆ ಎಳೆದಂತೆ ಆಟವಾಡದೆ, ತಾನೇ ಗೆರೆ ಎಳೆದು ರಣರಂಗವನ್ನು ಗೆದ್ದ ನಾಯಕನ ರೋಮಾಂಚಕ ಕಥನ. ಅವರು ಶತ್ರುಗಳಿಗಿಂತ ವೇಗವಾಗಿ ಮುನ್ನಡೆದರು, ಆಳವಾಗಿ ಪೆಟ್ಟುಕೊಟ್ಟರು ಹಾಗೂ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ ಯೋಚಿಸಿದರು.
