ವರದಿ: ದು.ಗು. ಲಕ್ಷ್ಮಣ
ಬೆಂಗಳೂರು: ಮೊನ್ನೆ ಆ.15 ರಂದು ಶನಿವಾರ ದೇಶಾದ್ಯಂತ, ರಾಜ್ಯದಾದ್ಯಂತದ 80ನೇ ಸ್ವಾತಂತ್ರ್ಯ ದಿನೋತ್ಸವದ ಸಡಗರ, ಸಂಭ್ರಮಕ್ಕೆ ಇಡೀ ದೇಶವೇ ಸಾಕ್ಷಿಯಾಗಿದ್ದು ಈಗ ಇತಿಹಾಸ.
ಅದೇ ದಿನ ಆರೆಸ್ಸೆಸ್, ವಿಶ್ವಹಿಂದು ಪರಿಷತ್ ನ ಜ್ಯೇಷ್ಠ ಕಾರ್ಯಕರ್ತರಾಗಿದ್ದ ಸ್ವರ್ಗೀಯ ಬಿ.ಎನ್.ಮೂರ್ತಿ ಮತ್ತು ಅವರ ಸೋದರ, ಸ್ವರ್ಗೀಯ ಬಿ.ಎನ್. ವಿಜಯಕುಮಾರ್ (ಮಾಜಿ ಶಾಸಕರು)-ಅವರ ನೆನಪಿಗಾಗಿ ಈಚೆಗೆ ಸ್ಥಾಪಿಸಲಾಗಿರುವ ಸಮರ್ಪಣಾ ಟ್ರಸ್ಟ್ (ರಿ), ಬೆಂಗಳೂರು 80ನೇ ಸ್ವಾತಂತ್ರ್ಯ ದಿನವನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸಿತು.
ಅಂದು ಬೆಳಿಗ್ಗೆಯೇ ಟ್ರಸ್ಟ್ ನ ಪದಾಧಿಕಾರಿಗಳು ಟ್ರಸ್ಠ್ ನ ಅಧ್ಯಕ್ಷರಾಗಿರುವ ಪದ್ಮಶ್ರೀ ಪುರಸ್ಕೃತ ಡಾ.ಬಿ.ಎನ್.ಗಂಗಾಧರ, ಕಾರ್ಯದರ್ಶಿ ಶ್ರೀ ನರಸಿಂಹಸ್ವಾಮಿಯವರ ಸಾರಥ್ಯದಲ್ಲಿ ಬೆಂಗಳೂರಿಗೆ 50 ಕಿ.ಮೀ. ದೂರದ ಮಾಗಡಿ ತಾಲ್ಲೂಕಿನ ಬಂಡೆಮಠ ಶ್ರೀ ಸಿದ್ದಗಂಗಾ ಪ್ರೌಢಶಾಲೆಗೆ ತೆರಳಿದಾಗ ಅಲ್ಲಿ ವಿದ್ಯಾರ್ಥಿ-ಅಧ್ಯಾಪಕರಿಂದ ಆತ್ಮೀಯ ಸ್ವಾಗತ. ಮುಖ್ಯೋಪಾಧ್ಯಾಯರಾದ ಶ್ರೀ ಶಿವಕುಮಾರ್ ಅವರಂತೂ ಟ್ರಸ್ಟ್ ನ ಪದಾಧಿಕಾರಿಗಳಿಗೆ ಕರಮುಗಿದು, ಶಿರಬಾಗಿ ಬರಮಾಡಿಕೊಂಡಿದ್ದು ಮರೆಯಲಾಗದ ಅನುಭವ.
ಟ್ರಸ್ಟ್ ನ ಅಧ್ಯಕ್ಷ ಡಾ.ಗಂಗಾಧರ್, ಕಾರ್ಯದರ್ಶಿ ನರಸಿಂಹ ಸ್ವಾಮಿ, ಖಜಾಂಚಿ ಬಿ.ಎನ್.ಪ್ರಹ್ಲಾದ್, ಟ್ರಸ್ಟಿಗಳಾದ ದು.ಗು.ಲಕ್ಷ್ಮಣ, ಶ್ರೀಕಾಂತ ಭಾರ್ಗವ (ಇಂಜಿನಿಯರ್), ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ವಸಂತಾ ಸ್ವಾಮಿ (ಬಿ.ಎನ್.ಮೂರ್ತಿಯವರ ಸೋದರಿ) ಮತ್ತು, ಕುಮಾರ್ ಬಾನವಾಡಿ ಅವರನ್ನು ವೇದಿಕೆಗೆ ಆಹ್ವಾನಿಸಿ, ಎಲ್ಲರ ಪರಿಚಯ, ಸ್ವಾಗತ, ಮಾಲಾರ್ಪಣೆಯ ಬಳಿಕ ಖಜಾಂಚಿ ಬಿ.ಎನ್.ಪ್ರಹ್ಲಾದ್ ಸಮರ್ಪಣಾ ಟ್ರಸ್ಟ್ ನ ಧ್ಯೇಯೋದ್ದೇಶಗಳನ್ನು ವಿವರಿಸಿದರು.
.
ಕಳೆದ 25 ವರ್ಷಗಳಿಂದ ತಮ್ಮ ಹುಟ್ಟೂರಾದ ಬಾನವಾಡಿಯ ಬಂಡೆಮಠ ಸಿದ್ದಗಂಗಾ ಪ್ರೌಢಶಾಲೆಯ ಮಕ್ಕಳಿಗೆ ಸ್ವಾತಂತ್ರ್ಯ ದಿನದಂದು ಬಿ.ಎನ್. ಮೂರ್ತಿಯವರು ಅಲ್ಲಿಯ ಮಕ್ಕಳಿಗೆ ಪಾಠ ಮಾಡುವುದಲ್ಲದೆ (ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ) ಪುಸ್ತಕ, ಪೆನ್ನು, ಮತ್ತಿತರ ಅಗತ್ಯ ಕಲಿಕೆಯ ಸಾಧನಗಳನ್ನು ಕೊಡುಗೆಯಾಗಿ ನೀಡುತ್ತಿದ್ದುದನ್ನು ಸ್ಮರಿಸಿದರು. ಬಿ.ಎನ್.ಮೂರ್ತಿ ಮತ್ತು ಬಿ.ಎನ್. ವಿಜಯಕುಮಾರ್ ಅವರ ಈ ಸಾಮಾಜಿಕ ಸೇವಾ ಮನೋಭಾವವನ್ನು ಜೀವಂತವಾಗಿಡುವ ಹಿನ್ನಲೆಯಲ್ಲಿ ಈಚೆಗೆ ಸಮರ್ಪಣಾ ಟ್ರಸ್ಟ್(ರಿ) ಸ್ಥಾಪಿಸಲಾಗಿದೆ ಎಂದರು.
ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಳೆಯರ ರಾಮಾಯಣ, ಕಿಶೋರ ಭಾರತ ಹಾಗೂ ಕನ್ನಡ ನಿಘಂಟು ಪುಸ್ತಕದ ಕೊಡುಗೆ, ಜೊತೆಗೆ ಆಧುನಿಕ ಶಿಕ್ಷಣ ಕಲಿಕೆಗೆ ಅಗತ್ಯವಾಗಿರುವ ಒಂದು ಉತ್ತುಮ ಗುಣಮಟ್ಟದ ಲ್ಯಾಪ್ ಟಾಪ್- ಹೀಗೆ ಒಟ್ಟು ಒಂದು ಲಕ್ಷ ರೂ.ಮೊತ್ತದ ಕೊಡುಗೆ ನೀಡಲು ಟ್ರಸ್ಟ್ ನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಾಗಿ ಹೇಳಿದರು.
ಟ್ರಸ್ಟ್ ನ ಅಧ್ಯಕ್ಷ ಡಾ.ಗಂಗಾಧರ್ ಸಾಂಕೇತಿಕವಾಗಿ ಎಸ್ಸೆಸ್ಸೆಲ್ಸಿ ಟಾಪರ್ ಗಳಿಗೆ ಪುಸ್ತಕಗಳನ್ನು ಹಾಗೂ ಶಾಲೆಗೆ ಗುಣಮಟ್ಟದ ಲ್ಯಾಪ್ ಟಾಪ್ (80 ಸಾವಿರ ಮೌಲ್ಯದ್ದು) ವಿತರಿಸಿದರು. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಡಾ.ಶಿವಕುಮಾರ ಸ್ವಾಮಿಗಳು ಸ್ಥಾಪಿಸಿದ ಈ ಶಾಲೆಯ ಮಕ್ಕಳು ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನ, ಅಭಯ, ಆಶೀರ್ವಾದ ಪಡೆದು ಉತ್ತಮ ಪ್ರಜೆಗಳಾಗಲಿ ಎಂದು ಆಶಿಸಿದರು. ದು.ಗು.ಲಕ್ಷ್ಮಣ, ಶ್ರೀಮತಿ ವಸಂತಾ ಸ್ವಾಮಿ, ಪ್ರಹ್ಲಾದ ಬಾಬು ಮಾತನಾಡಿ, ಶಾಲೆಯ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಅಧ್ಯಾಪಕ ವೃಂದ ನಿಸ್ವಾರ್ಥವಾಗಿ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ಗ್ರಾಮೀಣ ಪ್ರದೇಶದ ಬಡ ಮಕ್ಕಳ ಏಳಿಗೆಗಾಗಿ ಸಮರ್ಪಣಾ ಟ್ರಸ್ಟ್ ಅಗತ್ಯವಿರುವ ಎಲ್ಲ ಬಗೆಯ ನೆರವನ್ನೂ ನೀಡುವುದಾಗಿ ಟ್ರಸ್ಟ್ ಪರವಾಗಿ ಪ್ರಹ್ಲಾದ ಬಾಬು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ಧಗಂಗಾ ಪ್ರೌಢಶಾಲೆಯ ಮಕ್ಕಳು, ಅಧ್ಯಾಪಕರೊಂದಿಗೆ ಟ್ರಸ್ಟ್ ನ ಪದಾಧಿಕಾರಿಗಳು ಪರಸ್ಪರ ಮುಕ್ತವಾಗಿ ಬೆರೆತು ವಿಶ್ವಾಸ ತುಂಬಿದ್ದಲ್ಲದೆ ಅವರೊಂದಿಗೇ ಉಪಾಹಾರ ಸೇವಿಸಿದರು. ಕಾರ್ಯಕ್ರಮದ ಬಳಿಕ ಮುಪ್ಪೇನಹಳ್ಳಿಯಿಂದ ಶಾಲೆಗೆ ಬರುವ ಲಕ್ಷ್ಮಿ ಎಂಬ ಪ್ರತಿಭಾವಂತ ವಿದ್ಯಾರ್ಥಿನಿಯ ಮನೆಗೆ ತೆರಳಿ, ಆಕೆಯ ತಂದೆ-ತಾಯಿ ಜೊತೆ ಕುಶಲೋಪರಿ ನಡೆಸಲಾಯಿತು. ಲಕ್ಷ್ಮಿ ಯ ತಂದೆ ಗಾರೆ ಕೆಲಸ ನಿರ್ವಹಿಸಿ ಬದುಕು ಕಟ್ಟಿಕೊಂಡವರು. ತನ್ನ ಮನೆಯವರೆಗೆ ಬಂದ ಸಮರ್ಪಣಾ ಟ್ರಸ್ಟ್ ನ ಪದಾಧಿಕಾರಿಗಳಿಗೆ ಹಣ್ಣುಹಂಪಲು ನೀಡಿ ಪ್ರೀತಿಯಿಂದ ಸತ್ಕರಿಸಿದ ದೃಶ್ಯ ಮರೆಯಲಾಗದಂತಹುದು.
ಅನಂತರ ಮತ್ತೆ 5 ಕಿ.ಮೀ. ದೂರದ ವೀರಾಪುರ (ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಪಾವನ ಜನ್ಮಸ್ಥಳ) ದಲ್ಲಿ ವಾಸವಾಗಿರುವ ಅದೇ ಪ್ರೌಢಶಾಲೆಯ ಅಧ್ಯಾಪಕ ಗುರುದೇವ್ ಅವರ ಮನೆಗೆ ಭೇಟಿ. ಅವರು ಊರವರ ನೆರವಿನಿಂದ ಮನೆಯ ಸಮೀಪ ಸ್ಥಾಪಿಸಿರುವ ನೂತನ ಶಿಲಾಮಯ ಶ್ರೀ ನಾಗಲಕ್ಷ್ಮೀ ರಾವಳೇಶ್ವರ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ, ಟ್ರಸ್ಟ್ ನ ಅಧ್ಯಕ್ಷ ಡಾ.ಗಂಗಾಧರ್ ವಿತರಿಸಿದ ತೀರ್ಥ ಸ್ವೀಕಾರ. ಸನಿಹದಲ್ಲೇ ಇರುವ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ 147 ಅಡಿ ಎತ್ತರದ ಡಾ.ಶಿವಕುಮಾರ ಸ್ವಾಮಿಗಳ ಭವ್ಯ ಕಾಂಕ್ರೀಟ್ ಪುತ್ಥಳಿಯ ವೀಕ್ಷಣೆ. ಆ ಪುತ್ಥಳಿ ನಿರ್ಮಾಣ ಕಾರ್ಯ ಪೂರ್ತಿಯಾಗಿಲ್ಲ. ಸರ್ಕಾರದಿಂದ ಬರಬೇಕಾದ ಅನುದಾನ ಇನ್ನೂ ಬಿಡುಗಡೆಯಾಗದಿರುವುದೇ ಕಾರಣ ಎಂದು ಅಧ್ಯಾಪಕ ಗುರುದೇವ ಅವರ ನೋವಿನ ನುಡಿ.
ಪದಾಧಿಕಾರಿಗಳು ಆ ಊರಿನಿಂದ ತೆರಳುವವರೆಗೂ ಮುಖ್ಯೋಪಾ ಧ್ಯಾಯರು ಜೊತೆಗೇ ಇದ್ದು ಶಾಲೆ, ಊರಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದು ಗಮನಾರ್ಹವಾಗಿತ್ತು.
ಸದಾ ಗಿಜಿಗುಡುವ ಬೆಂಗಳೂರಿನ ಟ್ರಾಫಿಕ್ ಜಾಂ ರಸ್ತೆಗಳು, ಕಲುಷಿತ ಗಾಳಿ, ಜನಸಾಗರದಿಂದ ದೂರವಾಗಿ ಬಂಡೆಮಠ ಬಾನವಾಡಿ, ವೀರಾಪುರ, ಮುಪ್ಪೇನಹಳ್ಳಿ ಮೊದಲಾದ ಹಸಿರು ನಳ ನಳಿಸುವ ಗ್ರಾಮೀಣ ಪ್ರದೇಶಗಳಲ್ಲಿ ತಿರುಗಾಡಿ, ಅಲ್ಲಿನ ಪರಿಶುದ್ಧ ಗಾಳಿ ಸೇವಿಸಿ, ಮುಗ್ಧ ರೈತರ ಆದರಾತಿಥ್ಯ ಸವಿದ ಸಮರ್ಪಣಾ ಟ್ರಸ್ಟ್ ನ ಪದಾಧಿಕಾರಿಗಳು ಬೆಂಗಳೂರೆಂಬ ಮಹಾನ್ ಬೆಂಗಳೂರಿಗೆ ತಲಪಿದ್ದು ಸಂಜೆ 4 ಘಂಟೆಗೆ. ಆದರೂ ಎಲ್ಲರ ಮೈಮನಗಳಲ್ಲಿ ಉತ್ಸಾಹ, ಚೈತನ್ಯ ಕಿಂಚಿತ್ತೂ ಉಡುಗಿರಲಿಲ್ಲ. ಮತ್ತೆ ಮುಂದಿನ ಸ್ವಾತಂತ್ರ್ಯ ದಿನೋತ್ಸವಾಚರಣೆಗಾಗಿ ಬಂಡೆಮಠ ಸಿದ್ಧಗಂಗಾ ಪ್ರೌಢಶಾಲೆಗೆ ತೆರಳಲು ಎಲ್ಲರೂ ಆಗಲೇ ಸಂಕಲ್ಪ ಮಾಡಿದ್ದರು.
ಪ್ರತಿವರ್ಷ ಆ ಶಾಲೆಯಲ್ಲಿ ವಿತರಿಸಲು ಪುಸ್ತಕ, ಪೆನ್ನು ಇತ್ಯಾದಿ ಪೂರೈಸುತ್ತಿದ್ದ ಗಿರಿನಗರ ನಿವಾಸಿ ಶ್ರೀ ಎನ್.ಎಸ್.ಮುರಳಿ ಅವರು ಈ ಎಲ್ಲ ಮಾಹಿತಿ ತಿಳಿದೊಡನೆಯೇ, ತಾವಾಗಿಯೆ ಆ ಶಾಲೆಗೆ ಅಗತ್ಯವಿರುವ ಪ್ರಿಂಟರ್ ಅನ್ನು ಉದಾರವಾಗಿ ಕೊಡುತ್ತೇನೆಂದು ಖುಷಿಯಿಂದ ಹೇಳಿದರು. ದೀಪದಿಂದ ದೀಪ ಬೆಳಗುವುದು ಎಂದರೆ ಇದೇ ಅಲ್ಲವೇ? ಮುರಳಿಯಂಥವರ ಸಂತತಿ ಸಾವಿರವಾಗಲಿ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
