- ವಾಣಿಶ್ರೀ ಶರತ್ ಆಲದಕಟ್ಟಿ
15ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಮೊಘಲ್ ಆಡಳಿತವಿದ್ದರೆ,ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತವಿರುತ್ತದೆ. ಇಂತಹ ದೊಡ್ಡ ಸಾಮ್ರಾಜ್ಯದ ಆಡಳಿತದ ಅವಧಿಯಲ್ಲಿಯೇ ಅಪಾರ ದೈವಿಕ ಭಕ್ತಿ ಹೊಂದಿರುವ, ಮತ್ತು ದೈವ ಭಕ್ತಿಯನ್ನು ತಮ್ಮ ಹಾಡುಗಳ ಮೂಲಕ ಜನಸಾಮಾನ್ಯರಿಗೆ ತಿಳಿಸುವ ಸಂತರು,ದಾಸರು ಪ್ರಖ್ಯಾತಿಗೆ ಬಂದಿರುತ್ತಾರೆ. ಉತ್ತರ ಭಾರತದಲ್ಲಿ ಇವರನ್ನು ಸಂತರು ಎಂದು ಕರೆದರೆ, ದಕ್ಷಿಣ ಭಾರತದಲ್ಲಿ ಇವರನ್ನು ದಾಸರು, ಕೀರ್ತನಾಕಾರರು ಎಂದು ಕರೆಯುತ್ತಾರೆ.
ಇವರಿಂದ ರಚಿತವಾದ ಎಷ್ಟೊಂದು ದೋಹೆಗಳು, ಕೀರ್ತನೆಗಳು, ದಾಸ ಪದಗಳ ಮೂಲಕ ಇಂದಿಗೂ ನಮ್ಮ ಭಕ್ತಿಯನ್ನು ದೇವರಿಗೆ ಅರ್ಪಿಸುತ್ತಿದ್ದೇವೆ. ಅದರಲ್ಲೂ ಮುಖ್ಯವಾಗಿ “ಹನುಮಾನ್ ಚಾಲೀಸಾ” ಯಾವುದನ್ನು ಪಠಿಸಿದರೆ ಆರೋಗ್ಯ,ಧೈರ್ಯ, ಸಕಾರಾತ್ಮಕ ಯೋಚನೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಇರುವ ಹನುಮಾನ್ ಚಾಲೀಸಾ ಕೂಡ ರಚನೆಯಾಗಿದ್ದು 15ನೇ ಶತಮಾನದಲ್ಲಿಯೇ ಒಬ್ಬ ದಾಸ ಶ್ರೇಷ್ಠರಿಂದ.
ಜಯ ಹನುಮಾನ ಜ್ಞಾನ ಗುಣಸಾಗರ
ಜಯ ಕಪಿಶ ತಿಹು ಲೋಕ ಉಜಾಗರ
ರಾಮದೂತ ಅತುಲಿತ ಬಲದಾಮ
ಅಂಜನಿಪುತ್ರ ಪವನಸುತನಾಮ.
ಅಂದರೆ ಜ್ಞಾನ ಮತ್ತು ಗುಣಗಳ ಸಾಗರನಾದ ಹನುಮಂತನಿಗೆ ಜಯವಾಗಲಿ, ಮೂರು ಲೋಕಗಳಲ್ಲಿ ಪ್ರಖ್ಯಾತನಾದ ವಾನರ ಶ್ರೇಷ್ಠನಿಗೆ ಜಯವಾಗಲಿ. ನೀನು ರಾಮನ ಧೂತ ಹಾಗೂ ಅಪ್ರತಿಮ ಬಲದ ಆವಾಸಸ್ಥಾನ, ಅಂಜನಾದೇವಿಯ ಪುತ್ರನಾದ ನಿನ್ನನ್ನು ಪವನ ಸುತ ಎಂಬ ಹೆಸರಿನಿಂದ ಕರೆಯುತ್ತಾರೆ.
ಹೀಗೆ ಭಗವಾನ್ ಹನುಮನ ಅಪಾರ ಶಕ್ತಿಯನ್ನು ಬಣ್ಣಿಸುವ ಪವಿತ್ರ ಗೀತೆ ಹನುಮಾನ್ ಚಾಲೀಸಾ. ಈ ಹನುಮಾನ್ ಚಾಲೀಸಾ ಎಂಬುದು ಅವಧಿ ಭಾಷೆಯ ಭಕ್ತಿ ಗೀತೆಯಾಗಿದೆ.ಅವಧಿ ಭಾಷೆಯಂದರೆ ಹಿಂದಿ ಭಾಷೆಯ ಹಳೆಯ ಆವೃತ್ತಿ.( ಹಿಂದಿ ಭಾಷೆಯನ್ನು ಹೋಲುವ ಭಾಷೆ). ಹನುಮಾನ್ ಚಾಲೀಸವನ್ನು 15ನೇ ಶತಮಾನದ ಕವಿ ಸಂತ ತುಳಸಿದಾಸರು ಸಂಯೋಜಿಸಿದಾರೆ.ಮೂರನೇ ಮೊಘಲ್ ಚಕ್ರವರ್ತಿ ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್, ತುಳಸಿದಾಸರನ್ನು ಜೈಲಿನಲ್ಲಿ ಇಟ್ಟಾಗ ಅವರು 40 ದಿನಗಳಲ್ಲಿ ಹನುಮಾನ್ ಚಾಲೀಸವನ್ನು ಸಂಯೋಜಿಸಿದರು. ಸಂತ ತುಳಸಿದಾಸರು ಅಕ್ಬರ್ ಗೆ ನಮಸ್ಕರಿಸಲು ನಿರಾಕರಿಸಿದ್ದಕ್ಕೆ ಅವರನ್ನು ಅಕ್ಬರ್ ಜೈಲಿನಲ್ಲಿರಿಸಿರುತ್ತಾನೆ. ಅಲ್ಲಿ ತುಳಸಿದಾಸರು ಹನುಮನನ್ನು ನೆನೆಸಿ ಈ ಚಲಿಸವನ್ನು ಬರೆಯುತ್ತಾರೆ ಮತ್ತು 40 ದಿನಗಳ ಕಾಲ ಜಪಿಸಿದರು. 40ನೇ ದಿನ ದೈತ್ಯ ಮಂಗಗಳ ಸೈನ್ಯವು ಪಟ್ಟಣದ ಮೂಲೆ ಮೂಲೆಗೂ ಪ್ರವೇಶಿಸಿ ಹನಿಯನ್ನುಂಟು ಮಾಡುತ್ತವೆ. ಅಕ್ಬರನಿಗೆ ಇದು ಹಿಂದೂ ಸಂತ ತುಳಸಿದಾಸರ ಪವಾಡವೆಂದು ತಿಳಿದು ತಕ್ಷಣ ಕ್ಷಮೆ ಯಾಚಿಸಿ ಜೈಲಿನಿಂದ ಬಿಡುಗಡೆ ಮಾಡುತ್ತಾನೆ.
ಇಷ್ಟೇ ಅಲ್ಲದೆ ಹನುಮಾನ್ ಚಾಲೀಸಾದಲ್ಲಿನ ಅತ್ಯಂತ ಆಸಕ್ತಿದಾಯಕ ಮತ್ತು ವೈಜ್ಞಾನಿಕವಾಗಿ ಆಧರಿತವಾದ ಸಂಗತಿ ಅಂದರೆ ಸೂರ್ಯ ಮತ್ತು ಭೂಮಿಯ ನಡುವಿನ ನಿಖರವಾದ ಅಂತರವನ್ನು ಹೇಳುತ್ತದೆ. ಈ ಚಾಲೀಸಾ ರಚನೆಯಾಗಿದ್ದು ಸುಮಾರು 15ನೇ ಶತಮಾನದಲ್ಲಿ, ಆದರೆ ಸೂರ್ಯ ಮತ್ತು ಭೂಮಿಯ ನಡುವಿನ ಅಂತರವನ್ನು 17ನೇ ಶತಮಾನದ ವಿಜ್ಞಾನಿಗಳಿಗಿಂತ ಹೆಚ್ಚು ನಿಖರವಾಗಿ ಹನುಮಾನ ಚಾಲೀಸಾದಲ್ಲಿ ಲೆಕ್ಕ ಹಾಕಲಾಗಿದೆ.
ಪವಿತ್ರ ಹನುಮಾನ್ ಚಾಲೀಸಾ 45 ಪದ್ಯಗಳನ್ನು ಒಳಗೊಂಡಿದ್ದು, ಅದು ಎರಡು ಪರಿಚಯಾತ್ಮಕ ದೋಹ, 40 ಚೌಪಾಸ್ ಮತ್ತು ಕೊನೆಯಲ್ಲಿ ಒಂದು ದೋಹವನ್ನು ಹೊಂದಿದೆ. ಹನುಮಂತನ ಶುಭರೂಪ, ಜ್ಞಾನ, ಸದ್ಗುಣಗಳು, ಶಕ್ತಿ ಮತ್ತು ಶೌರ್ಯವನ್ನು ವಿವರಿಸಲಾಗಿದೆ.
ಜೋ ಶತ ವಾರ ಪಾಠ ಕರ ಕೋಯೀ
ಛೂಟಹಿ ಬಂದಿ ಮಹಾಸುಖ ಹೋಯಿ
ಜೋ ಯಹ ಪಡೈ ಹನುಮಾನ್ ಚಾಲೀಸಾ
ಹೋಯ ಸಿದ್ದಿ ಸಾಕಿ ಗೌರೀಶ
ಈ ಮೇಲಿನವು ಹನುಮಾನ್ ಚಾಲೀಸ್ದ ಒಂದು ಭಾಗವಾಗಿದೆ. ಇದು ಹೇಳುವಂತೆ ಹನುಮಾನ್ ಚಾಲೀಸವನ್ನು ಜಪಿಸುವ ವ್ಯಕ್ತಿಯು ಎಲ್ಲ ಬಂಧನಗಳಿಂದ ಮುಕ್ತಿ ಹೊಂದುತ್ತಾನೆ ಜೊತೆಗೆ ಆನಂದವನ್ನು ಅನುಭವಿಸುತ್ತಾನೆ. ಮತ್ತು ಹನುಮಾನ್ ಚಾಲೀಸಾ ವನ್ನು ಪಠಿಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ಶಾಂತತೆಯ ಪರಿಣಾಮ ಕಂಡುಬರುತ್ತದೆ. ಅನೇಕ ರೋಗಗಳು ಮಾನಸಿಕ ಸಮಸ್ಯೆಗಳನ್ನು ಗುಣ ಪಡಿಸಲು ಹನುಮಾನ್ ಚಾಲೀಸ್ ಹೆಸರುವಾಸಿಯಾಗಿದೆ.
ಈಗ ಪ್ರಸ್ತುತ ಕಾಲಮಾನದಲ್ಲಿ ನಾವುಗಳು ನಮ್ಮ ಕನಸನ್ನು ಬೆನ್ನೆಟ್ಟುವ ಪ್ರಯತ್ನದಲ್ಲಿ ಹಲವಾರು ಮಾನಸಿಕ ಸಮಸ್ಯೆಗಳಾದ ಆತಂಕ, ಭಯ, ಒತ್ತಡ,ಜೊತೆಗೆ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ನಮ್ಮ ಹಿರಿಯರು ಹೇಳುವಂತೆ ಪ್ರತಿಯೊಂದು ಸಮಸ್ಯೆಗೂ ನಮ್ಮ ಮನೆ ಅಂಗಳದಲ್ಲಿ ಪರಿಹಾರವಿದೆ. ಎನ್ನುವಂತೆ ಈ ತಾಂತ್ರಿಕ ಯುಗದಲ್ಲಿ ಕನಸಿನ ಹಿಂದೆ ಓಡುತ್ತಿರುವ ನಾವು ನಮ್ಮ ಮಾನಸಿಕ ಅಭಿವೃದ್ಧಿಗಾಗಿ ಹೆಚ್ಚು ಹೆಚ್ಚು ಹನುಮಾನ ಚಾಲೀಸಾ ಪಠಿಸೋಣ,ಜೊತೆಗೆ ಇಂತಹ ಇನ್ನೂ ಅನೇಕ ದೈವ ಭಕ್ತಿ ಗೀತೆಗಳನ್ನು ನೆನೆಯುವುದನ್ನು ನಮ್ಮ ಪ್ರಾರ್ಥನೆಯ ಭಾಗವಾಗಿಸಿ ಕೊಳ್ಳೋಣ.
