ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಂಬಂಧಿಸಿದಂತೆ ಮೈದಾನ ಬುಕಿಂಗ್ ರದ್ದುಗೊಳಿಸಿ, ಆಡಳಿತಾತ್ಮಕ ಗೊಂದಲ ಸೃಷ್ಟಿಸಿದ್ದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಸಮಯೋಚಿತವಾಗಿ ಮಧ್ಯಪ್ರವೇಶಿಸಿದೆ. “ಶ್ರೀಕೃಷ್ಣ ಜನ್ಮಾಷ್ಟಮಿಯಂತಹ ಪವಿತ್ರ ಸಾಂಸ್ಕೃತಿಕ ಹಾಗೂ ನಾಗರಿಕ ಹಬ್ಬವು ಅಧಿಕಾರಿಶಾಹಿಯ ಗೊಂದಲ ಮತ್ತು ನೀತಿಗಳ ಸಂಘರ್ಷದಲ್ಲಿ ಇಲ್ಲವಾಗಬಾರದು” ಎಂದು ನ್ಯಾಯಾಲಯ ಖಡಕ್ ಆಗಿ ಅಭಿಪ್ರಾಯಪಟ್ಟಿದೆ.
ದೆಹಲಿಯ ಮಂಗಳಪುರಿಯ ಕಲಾಮಂದಿರ್ ಪಾರ್ಕ್ನಲ್ಲಿರುವ ರಾಮಲೀಲಾ ಮೈದಾನದಲ್ಲಿ ‘ಫುಡ್ ಆಂಡ್ ಸಪ್ಲೈ ಬಾರ್ ಅಸೋಸಿಯೇಷನ್’ ಸಂಘಟನೆಯು ‘ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ’ವನ್ನು ಆಯೋಜಿಸಲು ನಿರ್ಧರಿಸಿತ್ತು. ಆ ಪ್ರಯುಕ್ತ ಸಂಘಟನೆಯು ದೆಹಲಿ ನಗರ ಸುಧಾರಣಾ ಮಂಡಳಿಗೆ (DUSIB) ಸುಮಾರು ₹4 ಲಕ್ಷ ಶುಲ್ಕವನ್ನು ಪಾವತಿಸಿ, ಆಗಸ್ಟ್ 23 ರಿಂದ ಸೆಪ್ಟೆಂಬರ್ 4 ರವರೆಗೆ ಮೈದಾನವನ್ನು ಕಾಯ್ದಿರಿಸಿತ್ತು. ಆದರೆ, ಆಯೋಜಕರ ನೋಂದಾಯಿತ ಇಮೇಲ್ ಐಡಿಯಿಂದ ಬುಕಿಂಗ್ ರದ್ದತಿ ಕೋರಿ ಇಮೇಲ್ ಬಂದಿದೆ ಎಂಬ ಕಾರಣ ನೀಡಿ DUSIB ಅಧಿಕಾರಿಗಳು ಬುಕಿಂಗ್ ರದ್ದುಗೊಳಿಸಿದ್ದರು. ತಾವು ಯಾವುದೇ ರದ್ದತಿ ಕೋರಿ ಇಮೇಲ್ ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ ಸಂಘಟನೆಯು, ಈ ಏಕಪಕ್ಷೀಯ ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರಿದ್ದ ಪೀಠವು, DUSIB ಯ ಹೊಸ ಮತ್ತು ಹಳೆಯ ನಿಯಮಾವಳಿಗಳ ಜಾರಿಯಲ್ಲಿನ ಗೊಂದಲವನ್ನು ಎತ್ತಿ ತೋರಿಸಿತು. ಹೊಸ ನೀತಿಗಳು ಜಾರಿಯಲ್ಲಿದ್ದರೂ ಅಧಿಕಾರಿಗಳು ಹಳೆಯ ಸುತ್ತೋಲೆಗಳಂತೆ ಕಾರ್ಯಾಚರಿಸುತ್ತಿರುವುದನ್ನು ಪೀಠವು ಗಮನಿಸಿತು. ಬುಕಿಂಗ್ ರದ್ದುಗೊಂಡಿದ್ದರೂ, ಆ ಮೈದಾನವನ್ನು ಬೇರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಹಂಚಿಕೆ ಮಾಡಲಾಗಿರಲಿಲ್ಲ. ರಾಮಲೀಲಾ, ಜನ್ಮಾಷ್ಟಮಿ, ದುರ್ಗಾಪೂಜೆಯಂತಹ ಆಚರಣೆಗಳು ಕೇವಲ ವ್ಯಾಪಾರಿ ಸಮಾರಂಭಗಳಲ್ಲ, ಇವು ಭಾರತೀಯ ನಗರ ಜೀವನದ ಸಾಂಸ್ಕೃತಿಕ ಹಾಗೂ ಸಾಮುದಾಯಿಕ ಭಾಗಗಳಾಗಿವೆ. ನಾಗರಿಕರು ನಿಗದಿತ ಶುಲ್ಕ ಪಾವತಿಸಿ ಸಿದ್ಧತೆ ಮಾಡಿಕೊಂಡಾಗ ಆಡಳಿತಾತ್ಮಕ ಗೊಂದಲದಿಂದ ಹಬ್ಬದ ಆಚರಣೆಗೆ ತೊಂದರೆ ನೀಡುವುದು ಸರಿಯಲ್ಲ ಎಂದು ನ್ಯಾಯಾಲಯ ಉಲ್ಲೇಖಿಸಿತು.
ಹಬ್ಬವು ತೀರಾ ಹತ್ತಿರದಲ್ಲಿರುವುದರಿಂದ, ಅರ್ಜಿ ಸಲ್ಲಿಸಿದ ಸಂಘಟನೆಯ ಮನವಿಯನ್ನು DUSIB ತನ್ನ ನಿಯಮಾವಳಿಗಳಿಗೆ ಅನುಗುಣವಾಗಿ ತಕ್ಷಣವೇ ಮರುಪರಿಶೀಲಿಸಬೇಕು ಮತ್ತು ಆಚರಣೆ ಆರಂಭವಾಗುವ ಮುನ್ನವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಜೊತೆಗೆ, ಆಯೋಜಕರು ಭದ್ರತೆ, ಸುರಕ್ಷತೆ ಮತ್ತು ನೈರ್ಮಲ್ಯದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಸೂಚಿಸಿದೆ. “ಸರ್ಕಾರ ಅಥವಾ ಆಡಳಿತದ ಕಡತಗಳು, ಪೋರ್ಟಲ್ಗಳು ಮತ್ತು ಸಂಘರ್ಷದ ನಿಯಮಾವಳಿಗಳ ನಡುವೆ ದೇಶದ ಶತಮಾನಗಳ ಸಾಂಸ್ಕೃತಿಕ ಪರಂಪರೆಯ ಹಬ್ಬವೊಂದು ಒಂದೇ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಅಲೆಯುತ್ತಾ ಇಲ್ಲವಾಗಲು ಬಿಡಬಾರದು” ಎಂಬ ಹೈಕೋರ್ಟ್ ನಿರ್ದೇಶನವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಬೆಂಬಲ ಪಡೆದುಕೊಂಡಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
