ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಈ ಸಂದರ್ಭದಲ್ಲಿ, ಶಿಕ್ಷಕರು ಸಮಾಜದ ಅಜ್ಞಾತ ನಾಯಕರು (ಅನ್-ಸಂಗ್ ಹೀರೋಗಳು) ಎಂಬುದನ್ನು ಸ್ಮರಿಸುವುದು ಅತ್ಯಗತ್ಯ. ಶಾಲೆಯಲ್ಲಿ ಮಕ್ಕಳು ಕಲಿಯಲು ಮತ್ತು ಬೆಳೆಯಲು ಸಹಾಯ ಮಾಡಲು ಅವರು ತಮ್ಮ ಸ್ವಂತ ಜೀವನವನ್ನೇ ಮುಡಿಪಾಗಿಡುತ್ತಾರೆ.
ಶಿಕ್ಷಕರು ಸಮಾಜಕ್ಕೆ ಅತ್ಯಗತ್ಯ. ಅವರು ತರಗತಿಯಿಂದಲೇ ರಾಷ್ಟ್ರಗಳನ್ನು ಪರಿವರ್ತಿಸಬಹುದು, ಆನಂದಮಯ ನಾಗರಿಕರನ್ನು ನಿರ್ಮಿಸಬಹುದು ಮತ್ತು ಅರ್ಥವ್ಯವಸ್ಥೆಯನ್ನು ಬಲಪಡಿಸಬಹುದು. ದೇಶದ ಭವಿಷ್ಯದ ಅಭಿವೃದ್ಧಿಯು ನಿಜವಾಗಿಯೂ ಉತ್ತಮ ಶಿಕ್ಷಕರ ಕೈಯಲ್ಲಿದೆ; ಏಕೆಂದರೆ ಮಕ್ಕಳು ದೇಶದ ಭವಿಷ್ಯದ ನಾಯಕರಾಗಲು ಶಿಕ್ಷಕರು ಬೆನ್ನೆಲುಬಾಗಿ ನಿಲ್ಲುತ್ತಾರೆ. ಹೆತ್ತವರ ಹೊರತಾಗಿ, ಒಬ್ಬ ಶಿಕ್ಷಕನು ಕಲಾಕಾರನಂತೆ ಮೃದುವಾದ ಮತ್ತು ಬೆಳೆಯುತ್ತಿರುವ ಮಕ್ಕಳನ್ನು ಹೃದಯ ಮತ್ತು ಮನಸ್ಸಿನಿಂದ ನಿರ್ವಹಿಸುತ್ತಾನೆ ಮತ್ತು ಮಗುವಿಗೆ ಸರಿಯಾದ ಶಿಕ್ಷಣವನ್ನು ನೀಡುವ ಮೂಲಕ ಆಕಾರವಿಲ್ಲದ ಕಲ್ಲನ್ನು ಸುಂದರವಾದ ಮೂರ್ತಿಯಾಗಿ ಬದಲಾಯಿಸುತ್ತಾನೆ.
ಶಿಕ್ಷಣದ ಹಳೆಯ ಸಾಂಪ್ರದಾಯಿಕ ಶೈಲಿಗಳು ಅಗಾಧ ಬದಲಾವಣೆಗಳಿಗೆ ಒಳಪಟ್ಟಿವೆ. ಶಿಕ್ಷಕರ ಪಾತ್ರವು ಈಗ ಕೇವಲ ತರಗತಿಯ ನಾಲ್ಕು ಗೋಡೆಗಳ ಒಳಗೆ ಸೂಚನೆಗಳನ್ನು ಮತ್ತು ಪಠ್ಯಕ್ರಮದ ಜ್ಞಾನವನ್ನು ಹಂಚಿಕೊಳ್ಳಲು ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅವರ ಜವಾಬ್ದಾರಿಗಳು ವ್ಯಾಪಕವಾದ ಕ್ಷೇತ್ರಗಳಲ್ಲಿ ವಿಸ್ತರಿಸಿವೆ. ಅವರು ಮಾರ್ಗದರ್ಶಕರಾಗಿ (Mentor), ಸುಗಮಕಾರರಾಗಿ (Facilitator), ಪ್ರೇರಕರಾಗಿ, ಮಾದರಿ ವ್ಯಕ್ತಿಯಾಗಿ (Role model), ಆಲೋಚಕರಾಗಿ ಮತ್ತು ಸಂಸ್ಕೃತಿಯನ್ನು ರವಾನಿಸುವವರಾಗಿ ಕೆಲಸ ಮಾಡುತ್ತಾರೆ. ಇದು ವಿದ್ಯಾರ್ಥಿಗಳಲ್ಲಿ ಸಹೋದ್ಯೋಗಿ ಭಾವನೆ, ಕರುಣೆ, ವ್ಯಕ್ತಿತ್ವ ರೂಪಿಸುವಿಕೆ, ಸಂವಹನ ಕೌಶಲ್ಯಗಳು, ಜೀವನ ಕೌಶಲ್ಯಗಳು, ಆರೋಗ್ಯ ಮತ್ತು ಯೋಗಕ್ಷೇಮದಂತಹ ಅನನ್ಯ ಗುಣಗಳನ್ನು ಬೆಳೆಸಲು ಸಹಾಯ ಮಾಡುತ್ತದೆ, ಇದು ಅವರ ಸರ್ವಾಂಗೀಣ ಅಭಿವೃದ್ಧಿಗೆ ದಾರಿಮಾಡಿಕೊಡುತ್ತದೆ.
ಶಿಕ್ಷಕರು ಎಲ್ಲೆಡೆ ಅಥವಾ ಎಲ್ಲಾ ಸಮಯದಲ್ಲಿ ಒಂದೇ ರೀತಿಯ ವಿದ್ಯಾರ್ಥಿಗಳನ್ನು ಎದುರಿಸುವುದಿಲ್ಲ; ಬದಲಾಗಿ ಅವರು ವೈವಿಧ್ಯಮಯ ವ್ಯಕ್ತಿತ್ವದ ಲಕ್ಷಣಗಳೊಂದಿಗೆ ವ್ಯವಹರಿಸುತ್ತಾರೆ. ಯುವಜನರು ಉತ್ತಮ ಸಾಧನೆ ಮಾಡಲು ಮತ್ತು ಸಮಾಜ ಹಾಗೂ ರಾಷ್ಟ್ರಕ್ಕೆ ಧನಾತ್ಮಕ ಮನೋಭಾವದಿಂದ ಸೇವೆ ಸಲ್ಲಿಸಲು ಪ್ರೇರೇಪಿಸಲು ಶಿಕ್ಷಕರು ‘ಸಾಮಾಜಿಕ ಎಂಜಿನಿಯರ್ಗಳಾಗಿ’ ಕಾರ್ಯನಿರ್ವಹಿಸುತ್ತಾರೆ.
ಪ್ರಸ್ತುತ ಸನ್ನಿವೇಶದಲ್ಲಿ, ತಂತ್ರಜ್ಞಾನವು ಕಲಿಕೆಗೆ ಹಲವಾರು ವೇದಿಕೆಗಳನ್ನು ಒದಗಿಸಿದೆ ಮತ್ತು ಶಿಕ್ಷಣದ ಪ್ರಕ್ರಿಯೆಯನ್ನು ಪರಿವರ್ತಿಸಿದೆ. ಆದಾಗ್ಯೂ, ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸುವ ಮತ್ತು ಮಾನವೀಯ ಸಂವಹನವನ್ನು ಉಂಟುಮಾಡುವ ಹಾಗೂ ಭಾವನಾತ್ಮಕ ಶಕ್ತಿಯನ್ನು (Emotional Quotient) ಹೆಚ್ಚಿಸುವ ಕಲಿಕೆಯ ಕಿಡಿಯನ್ನು ಹೊತ್ತಿಸುವ ಶಕ್ತಿ ಇನ್ನೂ ಶಿಕ್ಷಕರಿಗಿದೆ. ಶಿಕ್ಷಣ ಕ್ಷೇತ್ರದಲ್ಲಿನ ಜಾಗತಿಕ ಸವಾಲುಗಳನ್ನು ಎದುರಿಸಲು ಇಡೀ ಶಿಕ್ಷಣ ವ್ಯವಸ್ಥೆಯು ಮರುಸಂಘಟನೆಯಾಗುತ್ತಿರುವಂತೆ ತೋರುತ್ತಿದೆ. ಶಾಲೆಗಳು, ವಿದ್ಯಾರ್ಥಿಗಳು ಮತ್ತು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಶಿಕ್ಷಕರು ವೃತ್ತಿಪರ ಅಭಿವೃದ್ಧಿಗಾಗಿ ತಮ್ಮನ್ನು ಮತ್ತು ತಮ್ಮ ವೃತ್ತಿಯನ್ನು ಮರು-ಆವಿಷ್ಕರಿಸಿಕೊಳ್ಳುತ್ತಿದ್ದಾರೆ.
ಈಗ ಶಿಕ್ಷಕರ ಮೂಲಭೂತ ಕೆಲಸವೆಂದರೆ ಕೇವಲ ತಥ್ಯಗಳು ಮತ್ತು ಅಂಕಿಅಂಶಗಳ ಬಗ್ಗೆ ಜ್ಞಾನವನ್ನು ಹಂಚುವುದು ಅಥವಾ ಒದಗಿಸುವುದು ಮಾತ್ರವಲ್ಲ, ಬದಲಾಗಿ ತಾರ್ಕಿಕವಾಗಿ, ವಿಮರ್ಶಾತ್ಮಕವಾಗಿ ಮತ್ತು ಸೃಜನಶೀಲವಾಗಿ ಆಲೋಚಿಸುವ ಸಾಮರ್ಥ್ಯಗಳನ್ನು ಬೆಳೆಸುವ ಮೂಲಕ ಮಕ್ಕಳು ತಮ್ಮ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳಬೇಕೆಂದು ಕಲಿಯಲು ಸಹಾಯ ಮಾಡುವುದು. ಇದು ಅಂತಿಮವಾಗಿ ವಿದ್ಯಾರ್ಥಿಗಳ ಉತ್ಪಾದಕತೆಯನ್ನು ಸುಧಾರಿಸುತ್ತದೆ. ಮಕ್ಕಳ ಜೀವನದಲ್ಲಿ ಶ್ರೇಷ್ಠತೆ ಮತ್ತು ಸದ್ಗುಣಗಳನ್ನು ಬಲಪಡಿಸುವ ಉದ್ದೇಶದಿಂದ ಭಾವೋದ್ರಿಕ್ತ ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವ ಮೂಲಕ, ಎಲ್ಲಾ ಶಿಕ್ಷಕರು ತಮ್ಮ ಬದ್ಧತೆಗಳನ್ನು ಮತ್ತು ಜವಾಬ್ದಾರಿಗಳನ್ನು ಈಡೇರಿಸುತ್ತಿದ್ದಾರೆ ಮತ್ತು ತಮ್ಮ ವೃತ್ತಿಯನ್ನು ಮಹಿಮಾನ್ವಿತಗೊಳಿಸುತ್ತಿದ್ದಾರೆ. ಏನೇ ಆದರೂ, ಬೋಧನೆಯು ಇತರೆ ಎಲ್ಲಾ ವೃತ್ತಿಗಳನ್ನು ಮತ್ತು ವ್ಯಾಪಾರಗಳನ್ನು ಸೃಷ್ಟಿಸುವ ಒಂದು ಪವಿತ್ರ ವೃತ್ತಿಯಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
