ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ‘ಪದ್ಮಾವತ್’ ಸಿನಿಮಾ, ರಾಣಿ ಪದ್ಮಾವತಿ ಮತ್ತು ಚಿತ್ತೋರ್ನ ಹಿಂದೂ ಮಹಿಳೆಯರ ‘ಜೌಹರ್’ (ಆತ್ಮಬಲಿ) ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಸುಪ್ರೀಂ ಕೋರ್ಟ್ ವಕೀಲೆ ಅಮಿತಾ ಸಚದೇವ್ ದೆಹಲಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಆಗಸ್ಟ್ 31ರಂದು ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸ್ವರಾ ಭಾಸ್ಕರ್, ‘ಪದ್ಮಾವತ್’ ಚಿತ್ರದಲ್ಲಿ ತೋರಿಸಲಾದ ಜೌಹರ್ ಸನ್ನಿವೇಶವನ್ನು ಉಲ್ಲೇಖಿಸಿ ನೀಡಿದ್ದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದವು.
ಈ ಕುರಿತು ಸುಪ್ರೀಂ ಕೋರ್ಟ್ ವಕೀಲೆ ಅಮಿತಾ ಸಚದೇವ್ ಅವರು ಸಾಕೆತ್ ಸೈಬರ್ ಪೊಲೀಸ್ ಠಾಣೆಯ ಎಸ್ಎಚ್ಒ ಅವರಿಗೆ ದೂರು ಸಲ್ಲಿಸಿದ್ದು, ಸ್ವರಾ ಭಾಸ್ಕರ್ ವಿರುದ್ಧ ಎಫ್ಐಆರ್ (FIR) ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಮಿತಾ ಸಚದೇವ್, “ಕ್ಷಮೆಯಾಚಿಸಲು ನೀಡಿದ್ದ ಅವಕಾಶವನ್ನು ನಿರಾಕರಿಸಿದಾಗ, ಕಾನೂನು ಕ್ರಮ ಅನಿವಾರ್ಯವಾಯಿತು. ರಾಣಿ ಪದ್ಮಾವತಿ ಮತ್ತು ಚಿತ್ತೋರ್ನ ಮಹಿಳೆಯರ ಕುರಿತ ಹೇಳಿಕೆಗಳಿಗೆ ಕ್ಷಮೆ ಕೇಳಲು ಸ್ವರಾ ಭಾಸ್ಕರ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರು ಕ್ಷಮೆ ಕೇಳುವ ಬದಲು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ನೆಪಗಳನ್ನು ಹೇಳುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರಿನಲ್ಲಿ ವಕೀಲೆ ಅಮಿತಾ ಸಚದೇವ್ ಹೇಳಿರುವ ಪ್ರಮುಖ ಅಂಶಗಳು:
ಸ್ವರಾ ಭಾಸ್ಕರ್ ಅವರು ತಿಳುವಳಿಕೆಯ ಕೊರತೆಯಿಂದ ಈ ರೀತಿ ಮಾತನಾಡಿಲ್ಲ. ಅವರು 2018ರಲ್ಲೂ ಈ ಸಿನಿಮಾದ ಕುರಿತು ಮುಕ್ತ ಪತ್ರ ಬರೆದಿದ್ದರು. ಹೀಗಾಗಿ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಅರಿವಿದ್ದೂ ಅವರು ಸನಾತನ ಧರ್ಮ ಹಾಗೂ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ರೀತಿ ಹೇಳಿಕೆ ನೀಡಿದ್ದಾರೆ.
ಇದು ಕೇವಲ ಚಿತ್ರದ ವಿಮರ್ಶೆ ಅಥವಾ ಅತ್ಯಾಚಾರ ಸಂತ್ರಸ್ತರ ಕುರಿತಾದ ಅಭಿಪ್ರಾಯದ ವಿಷಯವಲ್ಲ; ಬದಲಾಗಿ ರಾಣಿ ಪದ್ಮಾವತಿ ಮತ್ತು ಚಿತ್ತೋರ್ ಮಹಿಳೆಯರ ಮಹಾನ್ ತ್ಯಾಗವನ್ನು ಅವಮಾನಿಸಿದ ರೀತಿಯಾಗಿದೆ.
ಈ ವಿಚಾರದಲ್ಲಿ ‘ಅನುವಾದದ ಲೋಪ’ (translation error) ಎಂದು ಸ್ವರಾ ನೆಪ ಹೇಳುತ್ತಿದ್ದಾರೆ. ಆದರೆ ಸಾರ್ವಜನಿಕವಾಗಿ ಆಡಿದ ಮಾತುಗಳ ವಿಡಿಯೋ ಲಭ್ಯವಿದ್ದು, ಜನರು ಅದನ್ನು ಸ್ಪಷ್ಟವಾಗಿ ಕೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕ ಚರ್ಚೆ ಮುಂದುವರಿಸುವ ಅಗತ್ಯವಿಲ್ಲವೆಂದಿರುವ ವಕೀಲರು, ಭಗವಾನ್ ಶ್ರೀಕೃಷ್ಣನ ಆಶೀರ್ವಾದದೊಂದಿಗೆ ಈ ಕಾನೂನು ಹೋರಾಟವನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
